ನೆನೆದವರ ಮನದಿ ನೆಲೆ ನಿಂತ ಭಗವಂತ
ಪೂಜಿಸಿ ಕೃಷ್ಣಾರ್ಪಣಮಸ್ತು ಎನ್ನುವೇ ನಿತ್ಯ….
ರೇಷ್ಮಾ ಶೆಟ್ಟಿ ಗೊರೂರು

ಎಲ್ಲಿ ಕೇಳುತಿಹುದು ಈ ಮಧುರ ಸ್ವರ
ಕೊಳಲನೂದುತ ಬಂದ ಬೃಂದಾವನ ಪೋರ
ಗೋಪಿಕೆಯರ ಮನ ಗೆದ್ದ ಚೋರ
ಕಂಸನ ಮರ್ಧಿಸಿದ ಅಸುರಸಂಹಾರ//
ತುಂಟಾಟದ ಕೃಷ್ಣನೆಂದರೆ ಬಲು ಪ್ರೀತಿ
ಇವನನ್ನು ನೆನೆದವನ ಬದುಕು ನಿರ್ಭೀತಿ
ಶಿಷ್ಟರಕ್ಷಣೆ, ಭಕ್ತ ಪರಿಪಾಲನೆ ಇವನ ರೀತಿ
ಮಾಡುವರೆಲ್ಲರೂ ನಿತ್ಯ ಕೃಷ್ಣಸ್ತುತಿ//
ಗೋಪಾಲನಿಗೆ ಇಟ್ಟಿಹರು ವಿಧವಿಧ ಹೆಸರು
ಧರ್ಮಮಾರ್ಗದಿ ನಡೆದರೆ ನೀಡುವನುಸಿರು
ರಾಧೆಯ ಬಲು ಪ್ರೀತಿಯ ಮುರಳೀಧರ
ಅತಿರಥ ಜ್ಞಾನಿ ಇವ ಯಶೋಧಯ ಕುವರ//
ಸುಧಾಮನ ಅಂತರಾಳವರಿತ ಆತ್ಮೀಯ ಮಿತ್ರ
ಮುಷ್ಟಿ ಅವಲಕ್ಕಿಗೆ ಬೆಟ್ಟದಷ್ಟು ಸಂಪತ್ತನಿತ್ತ
ನೆನೆದವರ ಮನದಿ ನೆಲೆನಿಂತ ಭಗವಂತ
ಪೂಜಿಸಿ ಕೃಷ್ಣಾರ್ಪಣಮಸ್ತು ಎನ್ನುವೆ ನಿತ್ಯ//














