
ಹೆಬ್ರಿ :ರಾಜ್ಯ ವಿಭೂಷಣ ಶಿಕ್ಷಕ, ಜಿಲ್ಲಾ ಆದರ್ಶ ಶಿಕ್ಷಕ ಮತ್ತು ಚಾಣಕ್ಯ ಶಿಕ್ಷಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ 1990-91 ನೆ ಸಾಲಿನ ಮುನಿಯಾಲು ಸರಕಾರಿ ಪ್ರೌಢಶಾಲೆಯ ಹಳೆ ವಿದ್ಯಾರ್ಥಿ, ಮುದ್ರಾಡಿ ಪ್ರೌಢಶಾಲೆಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಅವರನ್ನು ಅವರ ಸ್ವಗೃಹಕ್ಕೆ ತೆರಳಿ ಅವರ ಸಹಪಾಠಿಗಳು ಸನ್ಮಾನಿಸಿ ಸಂಭ್ರಮಿಸಿದರು. ಸಮಾರಂಭದಲ್ಲಿ ಭಾಗವಹಿಸಿ ಅಭಿನಂದನಾ ನುಡಿಗಳನ್ನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಬಾಲ್ಯದಿಂದಲೂ ಪ್ರತಿಭಾನ್ವಿತರಾಗಿದ್ದ ಗೆಳೆಯ ಚಂದ್ರಶೇಖರ ಭಟ್ಟರ ಸಾಧನೆಯನ್ನು ಕಂಡು ಖುಷಿಯಾಗುತ್ತಿದೆ. ಸದಾ ಸಮಾಜಮುಖಿ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರು ಕೇವಲ ಶೈಕ್ಷಣಿಕ ಕ್ಷೇತ್ರ ಮಾತ್ರವಲ್ಲದೆ ಎಲ್ಲ ರಂಗಗಳಲ್ಲೂ ತೊಡಗಿಸಿಕೊಂಡಿರುವ ಮೂಲಕ ಅರ್ಹವಾಗಿಯೇ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿಯಾಗಿದೆ. ಇನ್ನಷ್ಟು ಪ್ರಶಸ್ತಿ, ಸಮ್ಮಾನಗಳು ಅವರನ್ನು ಅರಸಿಕೊಂಡು ಬರಲಿ ಎಂದು ತಿಳಿಸಿ, ಶುಭಹಾರೈಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ ರಾಮದಾಸ್ ನಾಯಕ್ ಕಾಡುಹೊಳೆ ಚಂದ್ರಶೇಖರ ಭಟ್ಟರು ಗುರುಹಿರಿಯರಿಗೆ ಸದಾ ಗೌರವವನ್ನು ನೀಡುತ್ತಾ ಅವರ ಮಾರ್ಗದರ್ಶನದಂತೆ ಬೆಳೆದವರು. ಎಲ್ಲರೊಂದಿಗೆ ಬೆರೆಯುವ ಮೂಲಕ ಸ್ನೇಹಿತರ ಪ್ರೀತಿಗೆ ಪಾತ್ರರಾಗಿದ್ದರು. ಶಿಕ್ಷಕರಾಗಿ ಮಕ್ಕಳಿಗೆ ಮೌಲ್ಯಭರಿತ ಶಿಕ್ಷಣವನ್ನು ನೀಡುತ್ತಾ ಅವರ ಏಳಿಗೆಯನ್ನು ಕಂಡು ಖುಷಿಪಡುತ್ತಾ ಜೀವನವನ್ನು ನಡೆಸುವ ಸರಳ, ಪ್ರಾಮಾಣಿಕ, ನಿಷ್ಕಲ್ಮಶ ವ್ಯಕ್ತಿತ್ವ ಅವರದ್ದು. ಉತ್ತಮ ಕಾರ್ಯಕ್ರಮ ನಿರೂಪಕರು, ಸಂಘಟನಾ ಚತುರರು ಆಗಿರುವ ಅವರ ಸಾಧನೆ ನಮಗೆಲ್ಲರಿಗೂ ಹೆಮ್ಮೆಯನ್ನು ತಂದಿದೆ ಎಂದರು.ರೇವತಿ ನಾಯಕ್ ಕಡ್ತಲ ಮತ್ತು ಸುನೀತಾ ಕುಲಾಲ್ ಶೃಂಗೇರಿ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಚಂದ್ರಶೇಖರ ಭಟ್ ಅವರ ಸಹೋದರ ನಾರಾಯಣ ಭಟ್, ಕಾರ್ಯಕ್ರಮದ ಮುಖ್ಯ ರೂವಾರಿ ಅಶೋಕ್ ಪೂಜಾರಿ ಮುದ್ರಾಡಿ ಉಪಸ್ಥಿತರಿದ್ದರು.ಪ್ರಗತಿಪರ ಕೃಷಿಕ ಉದಯ ನಾಯಕ್ ಎಳ್ಳಾರೆ ಅಧ್ಯಕ್ಷತೆ ವಹಿಸಿದ್ದರು.ಸಹಪಾಠಿಗಳಾದ ಲತಾ ಶೆಟ್ಟಿ ಮುದ್ರಾಡಿ, ಶಶಿಕಲಾ ಶೆಟ್ಟಿ ಪಡುಕುಡೂರು ಮಣಿಪಾಲ, ಸುಕನ್ಯಾ ಶೆಟ್ಟಿ ಮುಟ್ಲುಪಾಡಿ, ಶ್ಯಾಮಲಾ ಪ್ರಭು ಆತ್ರಾಡಿ, ಅನಘಾ ಆತ್ರಾಡಿ, ಚಂದ್ರಶೇಖರ ಭಟ್ಟರ ಪತ್ನಿ ರಮ್ಯಾ ಭಟ್ ಸೇರಿದಂತೆ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು. ದಿನೇಶ್ ಶೆಟ್ಟಿ ಮುಟ್ಲುಪಾಡಿ ಸನ್ಮಾನ ಪತ್ರ ವಾಚಿಸಿದರು. ರವಿ ಶೆಟ್ಟಿ ಮುಟ್ಲುಪಾಡಿ ಸ್ವಾಗತಿಸಿದರು.ಸರಕಾರಿ ಪ್ರೌಢಶಾಲೆ ಕೊಯಿಲ ಬಂಟ್ವಾಳ ದ ಶಿಕ್ಷಕ ಜನಾರ್ದನ ಆಚಾರ್ಯ ಪಡುಕುಡೂರು ಕಾರ್ಯಕ್ರಮ ನಿರೂಪಿಸಿ,ನಾಗರಾಜ್ ವಂದಿಸಿದರು.