ಪೋಷಕ ಶಿಕ್ಷಕ ಮಹಾಸಭೆ, ಕಲಿಕೋಪಕರಣಗಳ ವಿತರಣೆ, ಸಾಧಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಹೆಬ್ರಿ :ಏಕಾಗ್ರತೆಯೊಂದಿಗೆ ಸತತ ಪ್ರಯತ್ನ ಹಾಗೂ ಪರಿಶ್ರಮವು ಉತ್ತಮ ಫಲಿತಾಂಶ ತಂದುಕೊಡುತ್ತದೆ. ನಿರಂತರತೆಯು ಎಲ್ಲವನ್ನು ಹವ್ಯಾಸ ಅಥವಾ ಅಭ್ಯಾಸವನ್ನಾಗಿಸುತ್ತದೆ. ವಿದ್ಯಾರ್ಥಿಗಳು ಶಾಲಾರಂಭದ ದಿನದಿಂದಲೇ ಕಲಿಕೆಯಲ್ಲಿ ಕಾರ್ಯ ತತ್ಪರರಾದರೆ ಕೊನೆ ಕ್ಷಣದಲ್ಲಿ ಅಧೀರರಾಗುವುದು ತಪ್ಪುತ್ತದೆ. ಮುಂದಿನ ಜೀವನದ ಗುರಿಯನ್ನು ಇಂದೇ ನಿರ್ಧರಿಸಿ ಮುನ್ನಡೆಯಿರಿ ಎಂದು ಮುದ್ರಾಡಿಯ ಹಿರಿಯ ಖ್ಯಾತ ವೈದ್ಯರಾದ ಎಂ. ಎಸ್. ರಾವ್ ಹೇಳಿದರು. ಅವರು ಮುದ್ರಾಡಿಯ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ (ರಿ.) ವತಿಯಿಂದ ನಡೆಯುತ್ತಿರುವ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾರಂಭದ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ, ಎಸ್. ಎಸ್. ಎಲ್. ಸಿ. ಸಾಧಕ ವಿದ್ಯಾರ್ಥಿಗಳಿಗೆ ಶಾಲೆಯ ವತಿಯಿಂದ ಹಾಗೂ ದಾನಿಗಳು, ಹಿರಿಯ ವಿದ್ಯಾರ್ಥಿಗಳು ಕೊಡಮಾಡಿದ ನಗದು ಪುರಸ್ಕಾರವನ್ನು ವಿತರಿಸಿ, ಅಭಿನಂದಿಸಿ ಮಾತನಾಡಿದರು.
ಶಾಲಾ ಪ್ರಾರಂಭೋತ್ಸವದಲ್ಲಿ ಸರಕಾರ ನೀಡಿದ ಉಚಿತ ಪಠ್ಯಪುಸ್ತಕಗಳನ್ನು, ಉದ್ಯಮಿ ಹಾಗೂ ದಾನಿಗಳು ಆಗಿರುವ ಕೋಟ ಆನಂದ ಸಿ. ಕುಂದರ್ ನೀಡಿದ ನೋಟ್ ಪುಸ್ತಕಗಳನ್ನು ಬೆಂಗಳೂರಿನ ಶಿಕ್ಷಣ ಪ್ರೇಮಿ ರಾಜಶೇಖರ್ ನೀಡಿದ ಗಣಿತ ಸೂತ್ರ ಪುಸ್ತಕಗಳನ್ನು , ಶಾಲೆಯ ಹಳೆ ವಿದ್ಯಾರ್ಥಿ ಮುದ್ರಾಡಿ ಭಕ್ರೆ ವಸಂತ ಪೂಜಾರಿ ನೀಡಿದ ಕ್ರೀಡಾ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿ, ದಾನಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಲೆಗೆ ದಾಖಲಾದ ವಿದ್ಯಾರ್ಥಿಗಳನ್ನು ಮೆರವಣಿಗೆಯಲ್ಲಿ ಬರಮಾಡಿಕೊಂಡು ಗುಲಾಬಿ ಹೂವು ಮತ್ತು ಪೆನ್ನು ನೀಡಿ ಸ್ವಾಗತಿಸಲಾಯಿತು.
ಈ ಬಾರಿಯ ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಬ್ರಿ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ಕಾರ್ಕಳ ಶಿಕ್ಷಣ ವಲಯದಲ್ಲಿ ಕನ್ನಡ ಮಾಧ್ಯಮದಲ್ಲಿ ತೃತೀಯ ಸ್ಥಾನ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಬಲ್ಲಾಡಿ ಪ್ರತೀಕ್ಷಾ ಕುಲಾಲ್, ಶಾಲೆಗೆ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ವರಂಗದ ಸ್ನೇಹ ಮೂಲ್ಯ ಮತ್ತು ಬಲ್ಲಾಡಿ ಕರಾದಿಬೈಲು ಲಾವಣ್ಯ ಇವರನ್ನು ಸನ್ಮಾನಿಸಲಾಯಿತು. ತರಂಗ ವಾರ ಪತ್ರಿಕೆಯ ಸಂಪಾದಕಿ ಸಂಧ್ಯಾ ಎಸ್. ಪೈ ಕೊಡಮಾಡಿದ ದತ್ತಿನಿಧಿ ಬಹುಮಾನ, ಮುದ್ರಾಡಿಯ ನಿವೃತ್ತ ಗ್ರಾಮ ಕರಣಿಕರಾದ ಎಂ. ವಾದಿರಾಜ ರಾವ್ ಕನ್ನಡ ಭಾಷಾ ವಿಷಯಕ್ಕಾಗಿ ಕೊಡಮಾಡಿದ ಎಂ. ಶೇಷಗಿರಿರಾವ್ ದತ್ತಿನಿಧಿ ಬಹುಮಾನ.ಜಗದಂಬಾ ಆರ್. ಶೆಟ್ಟಿ ಎಂ. ಮರಿಯಪ್ಪ ಕಲ್ಕೂರ್ ಹಾಗೂ ಕೃಷ್ಣಯ್ಯ ಶೆಟ್ಟಿ ಸ್ಮರಣಾರ್ಥ ಕೊಡಮಾಡಿದ ದತ್ತಿ ನಿಧಿ ಬಹುಮಾನ,ವರಂಗ ಅರ್ಬಿ ಕಮಲ ಪೂಜಾರಿ ಸ್ಮರಣಾರ್ಥ ವಿಠಲ ಪೂಜಾರಿ ಮತ್ತು ಮಕ್ಕಳು ಅರ್ಬಿ ದತ್ತಿ ನಿಧಿಯಿಂದ ಸಮಾಜ ವಿಜ್ಞಾನ ವಿಷಯಕ್ಕಾಗಿ ಕೊಡಮಾಡಿದ ಬಹುಮಾನ, ಕನ್ನಡ ಸಾಹಿತ್ಯ ಪೋಷಕರಾದ, ಹಿರಿಯರಾದ ಹೆಬ್ರಿ ಗಂಗಾಧರ್ ರಾವ್ ನೀಡಿದ ಕಲಿಕಾ ಬಹುಮಾನ,ಸಂಸ್ಥೆಯ ಹಳೆ ವಿದ್ಯಾರ್ಥಿ ಮುದ್ರಾಡಿ ಭಕ್ರೇ ಮಂಜುನಾಥ್ ಕಲಿಕೆಗಾಗಿ ಕೊಡಮಾಡಿದ ನಗದು ಬಹುಮಾನ,
ಶೇಕಡ 100 ಫಲಿತಾಂಶ ದಾಖಲಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಶಾಲಾ ಹಳೆ ವಿದ್ಯಾರ್ಥಿ ಭಕ್ರೆ ವಸಂತ ಪೂಜಾರಿ ಮತ್ತು ಶಿಕ್ಷಕ ವೃಂದ ನೀಡಿದ ಧನ ಸಹಾಯವನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಉಪ್ಪಳದ ರಮ್ಯಾ ಉಡುಪಿ ತೆಂಕನಡಿಯೂರು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಲೇಜಿನಲ್ಲಿ ಎಂ. ಎ. ಇತಿಹಾಸದಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಪಡೆದ ಸಲುವಾಗಿ ಸಂಸ್ಥೆಯ ವತಿಯಿಂದ ವಿಶೇಷ ಗೌರವ ಸಮರ್ಪಿಸಲಾಯಿತು. ಸಾಧಕರಾದ ರಮ್ಯಾ ಉಪ್ಪಳ ಹಾಗೂ ಪ್ರತೀಕ್ಷಾ ಕುಲಾಲ್ ಕೃತಜ್ಞತೆ ಸಲ್ಲಿಸಿ, ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ವಹಿಸಿ, ಶಾಲೆಯ ಏಳಿಗೆಯಲ್ಲಿ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಪ್ರತಿಮಾ ದೇವಾಡಿಗ ಉಪ್ಪಳ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಾಂತ್ರಪಲ್ಕೆ ಅಶೋಕ್ ಪೂಜಾರಿ,ಸಾಮಾಜಿಕ ಮುಂದಾಳು ವರಂಗ ಅರ್ಬಿ ವಿಠಲ ಪೂಜಾರಿ, ಶಾಲಾ ಹಿತೈಷಿ ಹೆಬ್ರಿ ಶಂಕರ್ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಹಿರಿಯ ಶಿಕ್ಷಕ ಮಹೇಶ ನಾಯ್ಕ. ಕೆ. ಕಾರ್ಯಕ್ರಮ ನಿರೂಪಿಸಿ, ಪಿ. ವಿ. ಆನಂದ ಸಾಲಿಗ್ರಾಮ ವಂದಿಸಿದರು. ಶಿಕ್ಷಕರಾದ ರಘುಪತಿ ಹೆಬ್ಬಾರ್, ಶ್ಯಾಮಲಾ ಕೊಠಾರಿ, ಶಿಕ್ಷಕೇತರ ಸಿಬ್ಬಂದಿ ಮಹೇಶ್ ಎಂ. ಸಹಕರಿಸಿದರು. ರಕ್ಷಕ ಶಿಕ್ಷಕ ಸಮಿತಿಯ ಸರ್ವಸದಸ್ಯರು,ವಿದ್ಯಾರ್ಥಿಗಳು, ಪೋಷಕರು, ಉಪಸ್ಥಿತರಿದ್ದರು.ಬಿಸಿಯೂಟದೊಂದಿಗೆ ಸಿಹಿತಿಂಡಿ ನೀಡಲಾಯಿತು.




























