
ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸುವ ಸಲುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಗುರುವಾರದಿಂದ ಮೂರು ದಿನಗಳ ಕಾಲ ಮಹತ್ವದ ಸರಣಿ ಸಭೆ ನಡೆಯಲಿದೆ.
ಪ್ರಮುಖವಾಗಿ ಲೋಕಸಭೆ ಚುನಾವಣೆ ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳೊಂದಿಗೆ ನಡೆಯಲಿರುವ ಪ್ರಥಮ ಸಭೆಯಲ್ಲಿ ಈ ಪರಾಜಿತ ಅಭ್ಯರ್ಥಿಗಳು ಈಗಿನಿಂದಲೇ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಬಲಗೊಳಿಸುವ ಕಾರ್ಯದಲ್ಲಿ ತೊಡಗುವಂತೆ ಮಾಡಲು ಅವರಿಗೆ ಪಕ್ಷ ಹಾಗೂ ಸರ್ಕಾರದ ಮೂಲಕ ನೀಡಬೇಕಾದ ನೆರವಿನ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳ ಪ್ರಕಾರ ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷರಾದ ಶಿವಕುಮಾರ್ ಅವರು ಗುರುವಾರದಿಂದ ನಾಯಕರು, ಮುಂಚೂಣಿ ಘಟಕಗಳ ಮುಖ್ಯಸ್ಥರು, ವಿವಿಧ ಹಂತದ ಪದಾಧಿಕಾರಿಗಳ ಜತೆ ಸರಣಿ ಸಭೆಗಳನ್ನು ನಡೆಸಲಿದ್ದು ಮುಂದಿನ ವಿಧಾನಸಭೆ ಚುನಾವಣೆಗೆ ನಾಲ್ಕು ವರ್ಷಗಳ ಮೊದಲೇ ಕಾರ್ಯತಂತ್ರ ಆರಂಭಿಸುವ ಉದ್ದೇಶದಿಂದ ಪ್ರಥಮ ಸಭೆ ನಡೆಯಲಿದ್ದು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ 90 ಮಂದಿ ಪರಾಜಿತ ಅಭ್ಯರ್ಥಿಗಳು ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋತಿರುವ 19 ಮಂದಿ ಅಭ್ಯರ್ಥಿಗಳನ್ನು ಕರೆಸಿ ಪ್ರತ್ಯೇಕ ಸಭೆ ನಡೆಸಲಾಗುತ್ತದೆ. ಈ ಪೈಕಿ 10 ಸಾವಿರ ಮತಗಳಿಂದ ಸೋತಿರುವ 20 ಮಂದಿಗೆ ಮತ್ತೊಂದು ಸುತ್ತಿನ ಪ್ರತ್ಯೇಕ ಸಭೆ ಏರ್ಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಾಂಗ್ರೆಸ್‌ನ ಯೋಜನೆಗಳನ್ನು ಮನೆ-ಮನೆಗೆ ತಲುಪಿಸಲು ‘ಕಾಂಗ್ರೆಸ್ ಕುಟುಂಬ’ ಕಾರ್ಯಕ್ರಮ ಮಾಡುವುದಾಗಿ ಈಗಾಗಲೇ ಘೋಷಿಸಲಾಗಿದ್ದು ಇದರಂತೆ ಪ್ರತಿ ಬೂತ್‌ನಲ್ಲಿ 50 ಮಂದಿಯ ತಂಡವನ್ನು ರಚಿಸಲಾಗುವುದು. ಇವರ ಮೂಲಕ ಸರ್ಕಾರದ ಕಾರ್ಯಕ್ರಮಗಳನ್ನು ತಲುಪಿಸುವ ಜತೆಗೆ ಸರ್ಕಾರದ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಲಾಗುವುದು. ಈ ಕುರಿತೂ ಸಹ ಪ್ರತ್ಯೇಕ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.