
ಮಂಗಳೂರು: ಇನ್ನೇನು ಸಾಲು ಸಾಲು ಹಬ್ಬಗಳು ಬರುತ್ತಿದ್ದು ಈ ವೇಳೆ ನಗರದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳ ಜೊತೆಗೆ ಮೆರವಣಿಗೆಗಳು ಕೂಡ ನಡೆಯಲಿರುವುದರಿಂದ ಸಾರ್ವಜನಿಕ ಶಾಂತಿ, ಸುರಕ್ಷತೆ ಹಾಗೂ ಕಾನೂನು ಪಾಲನೆಯ ಹಿತದೃಷ್ಟಿಯಿಂದ ಮಂಗಳೂರು ನಗರ ಪೊಲೀಸ್ ಸಾರ್ವಜನಿಕ ಕಾರ್ಯಕ್ರಮ ಮತ್ತು ಮೆರವಣಿಗಳ ಆಚರಣೆಗಳಿಗೆ ಕೆಲವೊಂದು ಷರತ್ತುಗಳನ್ನು ವಿಧಿಸಿ ಇದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಇದನ್ನು ನೀಡದಿರುವ ಆಯೋಜಕರಿಗೆ ಕಾರ್ಯಕ್ರಮ ಮಾಡಲು ಅನುಮತಿ ನೀಡಲಾಗುವುದಿಲ್ಲ. ಯಾವುದೇ ಶರತ್ತುಗಳು ಉಲ್ಲಂಘನೆಯಾದಲ್ಲಿ ಘಟನೆಯ ಹೊಣೆಗಾರಿಕೆ ಈ ನಿಯೋಜಿತ ವ್ಯಕ್ತಿಗಳದ್ದೇ ಆಗಿರಲಿದೆ ಎಂದು ತಿಳಿಸಲಾಗಿದೆ.
- ಅನುಮತಿ ಪಡೆದ ನಂತರ ಯಾವುದೇ ಕಾರಣಕ್ಕೂ ರಾತ್ರಿ 11:30 ಗಂಟೆಗೆ ಬಳಿಕ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡಲಾಗುವುದಿಲ್ಲ.
- ಖಾಸಗಿ ಸ್ಥಳಗಳಲ್ಲಿಯೇ ಕಾರ್ಯಕ್ರಮ ನಡೆಸುವುದಕ್ಕೆ ಆ ಸ್ಥಳದ ಮಾಲೀಕರಿಂದ ನಿರಾಪೇಕ್ಷಣ ಪತ್ರ ಪಡೆದು ಕಡ್ಡಾಯವಾಗಿ ಹಾಜರುಪಡಿಸಬೇಕು.
- ಡಿ.ಜೆ, ಜೋರಾದ ಸ್ಪೀಕರ್ ಅಥವಾ ಈ ರೀತಿಯ ಯಾವುದೇ ಧ್ವನಿವರ್ಧಕ ಉಪಕರಣಗಳ ಬಳಕೆ ಸಂಪೂರ್ಣ ನಿಷೇಧವಾಗಿದೆ.
- ಶಬ್ದಮಟ್ಟಗಳ ಮಿತಿಯ ಒಳಗೆ ಧ್ವನಿವರ್ಧಕ ಬಳಕೆಗೆ ಮುಂಚಿತವಾಗಿ ಅನುಮತಿಯನ್ನು ಪಡೆಯಬೇಕು ಮತ್ತು ರಾತ್ರಿ ಹತ್ತು ಗಂಟೆಗೆ ಅವುಗಳನ್ನ ಸ್ಥಗಿತಗೊಳಿಸಬೇಕು.
- ಆಯೋಜಕರು ಸ್ಥಳದಲ್ಲಿ 24*7 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಬೇಕು.
- ಯಾವುದೇ ಘೋಷಣೆಗಳು, ಭಿತ್ತಿ ಪತ್ರಗಳು ಅಥವಾ ಧರ್ಮ ವಿರೋಧ ದ್ವೇಷವನ್ನುಂಟು ಮಾಡುವ ಪೋಸ್ಟುಗಳನ್ನು ಹಂಚಿಕೊಳ್ಳಬಾರದು.
- ಸಾಮರ್ಥ್ಯ ಮೀರದಂತೆ ಜನ ಸಮೂಹ ನಿಯಂತ್ರಿಸಲು ಸಮರ್ಪಕ ಸ್ವಯಂಸೇವಕರ ನೇಮಕಾತಿ ಮಾಡಬೇಕು.
- ಪೆಂಡಾಲು, ಕಾರ್ಯಕ್ರಮದಲ್ಲಿ ಬಳಸುವ ವಾಹನಗಳು ಇತ್ಯಾದಿಗಳ ಎತ್ತರಗಳ ಕಾನೂನು ಅಥವಾ ಮೆಸ್ಕಾಂ ಮಾನದಂಡಗಳನ್ನು ಮೀರುವಂತಿರಬಾರದು.
- ಅಗ್ನಿ ನಂದಕಗಳು, ಆಂಬುಲೆನ್ಸ್ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಇಟ್ಟುಕೊಳ್ಳುವುದು ಕಡ್ಡಾಯ.
- ವಿಷಕಾರಿ ಬಣ್ಣಗಳು, ನಿಷೇಧಿತ ರಾಸಾಯನಿಕಗಳು ಏಕ ಬಳಕೆ ಪ್ಲಾಸ್ಟಿಕ್ ನಿಷೇಧ.
- ವಾಹನ ಮತ್ತು ಪಾದಾಚಾರಿ ಸಂಚಾರಕ್ಕೆ ಯಾವುದೇ ತಡೆಯಿಲ್ಲದಂತೆ ನಿಗದಿತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು.
- ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿ ಉಂಟು ಮಾಡಬಾರದು.
- ಕಾರ್ಯಕ್ರಮದ ಪೂರ್ಣ ವಿವರಗಳನ್ನು ಮುಂಚಿತವಾಗಿ ಸಲ್ಲಿಸಿ ಅನುಮತಿ ಪತ್ರದಲ್ಲಿ ನೀಡಿದ ಸಮಯವನ್ನು ಕಡ್ಡಾಯವಾಗಿ ಪಾಲಿಸಬೇಕು.
- ಕಾರ್ಯಕ್ರಮದ ವೇಳೆ ಮಹಿಳೆಯರ ಚುಡಾವಣೆ, ಹಿಂಬಾಲಿಸುವಿಕೆ, ಲೈಂಗಿಕ ಕಿರುಕುಳ ಮುಂತಾದ ಅಪರಾಧ ನಡೆದುಕೊಳ್ಳದಂತೆ ನೋಡಿಕೊಳ್ಳಬೇಕು.
- ಯಾವುದೇ ಬ್ಯಾನರ್ ಅಥವಾ ಫ್ಲೆಕ್ಸ್ ಅನ್ನು ಸಂಬಂಧಿತ ಪ್ರಾಧಿಕಾರದಿಂದ ಮುಂಚಿತವಾಗಿ ಅನುಮತಿ ಇಲ್ಲದೆ ಹಾಕಬಾರದು.
- ಕಾರ್ಯಕ್ರಮದ ಸ್ಥಳದಲ್ಲಿ ಯಾವುದೇ ಶಸ್ತ್ರಾಸ್ತ್ರ, ಹರಿತವಾದ ಆಯುಧಗಳ ಪ್ರದರ್ಶನ ಮತ್ತು ಸಾಗಾಟ ಮಾಡಬಾರದು.
- ಮುಂಚಿತ ಅನುಮತಿ ಇಲ್ಲದೆ ಯಾವುದೇ ಡ್ರೋನ್ ಅಥವಾ UAV ಬಳಸುವುದು ನಿಷಿದ್ಧ.
- ಮೆರವಣಿಗೆ ಅಥವಾ ಪ್ರದರ್ಶನಗಳಲ್ಲಿ ಪ್ರಾಣಿಗಳನ್ನು ಬಳಸಲು ಮುಂಚಿತ ಅನುಮತಿ ಪಡೆಯಬೇಕು.
- ಪೊಲೀಸರು ಅಥವಾ ಅಧಿಕೃತ ಅಧಿಕಾರಿಗಳು ಯಾವುದೇ ಸಮಯದಲ್ಲಿ ಸ್ಥಳ ತಪಾಸಣೆ ಮಾಡುವಾಗ ಅಡ್ಡಿ ಮಾಡಬಾರದು.
- ಕಾರ್ಯಕ್ರಮದ ಸುತ್ತಮುತ್ತ ಯಾವುದೇ ಅನುಮಾನಸ್ಪದ ಚಟುವಟಿಕೆಗಳು ನಡೆದರೆ ತಕ್ಷಣ ಪೊಲೀಸ್ ಠಾಣೆಗೆ ವರದಿ ನೀಡುವುದು ಕಡ್ಡಾಯ.
ವಿಧಿಸಲಾದ ಯಾವುದೇ ಷರತ್ತುಗಳ ಉಲ್ಲಂಘನೆ ಆದರೆ ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.













