
ವಿಧಾನ ಪರಿಷತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಪರಿಷತ್‌ನಲ್ಲಿ ‘ಮುಂದಿನ ವರ್ಷವೂ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಹೇಳಿಕೆ ನೀಡಿದ್ದು ಇದೀಗ ಈ ಹೇಳಿಕೆ ತೀವ್ರ ಚರ್ಚೆಗೆ ಕಾರಣವಾಗಿದೆ.
ಕೆಳಮನೆಯಲ್ಲಿ ಇತ್ತೀಚೆಗೆ ಐದು ವರ್ಷಕ್ಕೂ ತಾವೇ ಮುಖ್ಯಮಂತ್ರಿ ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ಇದೀಗ ಪರಿಷತ್ತಿನಲ್ಲಿ ಮುಂದಿನ ವರ್ಷ ಬಜೆಟ್ ಮಂಡಿಸುವ ವಿಚಾರ ಪ್ರಸ್ತಾಪಿಸಿದಾಗ ಬಿಜೆಪಿ ಸದಸ್ಯರು ತೀವ್ರ ಚರ್ಚೆಗಿಳಿದಿದ್ದು ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು., ‘ಅಲ್ಲಿಯವರೆಗೂ ನಿಮ್ಮನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನಿಮ್ಮವರು ಬಿಡ್ತಾರಾ?’ ಎಂದು ಛೇಡಿಸಿದರು.
ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಅವರು, ‘ಛಲವಾದಿ ನಾರಾಯಣಸ್ವಾಮಿಗೆ ನಾನು ಮುಂದಿನ ವರ್ಷವೂ ಬಜೆಟ್ ಮಂಡಿಸಬೇಕೆಂಬ ಆಸೆ ಇದೆಯೋ, ಇಲ್ವೋ?’ ಎಂದು ಪ್ರಶ್ನಿಸಿದಾಗ ಅದಕ್ಕೆ ಉತ್ತರಿಸಿದ ನಾರಾಯಣಸ್ವಾಮಿ, ‘ನನಗೇನೋ ಇದೆ, ಆದರೆ ನಿಮ್ಮವರಿಗೂ ಇರಬೇಕಲ್ವಾ?’ ಎಂದು ತಿರುಗೇಟು ನೀಡಿದರು.
ಬಳಿಕ ಸಿದ್ದರಾಮಯ್ಯ ಅವರು ‘ನನ್ನ ಕಟ್ಟಾ ರಾಜಕೀಯ ವಿರೋಧಿಯಾದ ನಿಮಗೆ ಆಸೆ ಇದ್ದ ಮೇಲೆ ನಮ್ಮವರಿಗೂ ಆಸೆ ಇರುತ್ತದೆ ಬಿಡಿ. ಹಿಂದಿನ ಸರ್ಕಾರದಲ್ಲಿ ಹಳಿ ತಪ್ಪಿರುವ ರಾಜ್ಯದ ಆರ್ಥಿಕ ಶಿಸ್ತನ್ನು ನಮ್ಮ ಸರ್ಕಾರದಲ್ಲಿ ಸರಿಪಡಿಸಲಾಗುತ್ತಿದೆ. ಮುಂದಿನ ವರ್ಷ ರಾಜಸ್ವ ಕೊರತೆ ಆಗುವುದಿಲ್ಲ. ಶೇ.100ರಷ್ಟು ಉಳಿಕೆ ಬಜೆಟ್ ಮಂಡಿಸುತ್ತೇನೆ’ ಎಂದು ಹೇಳಿದ್ದಾರೆ.