ಚಿಲ್ಲರೆ ಇಲ್ಲವೆಂದು ಸಚಿವರನ್ನೇ ಬಸ್‌ನಿಂದ ಇಳಿಯಲು ಹೇಳಿದ ಕಂಡಕ್ಟರ್!

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ಖುದ್ದಾಗಿ ಅರಿಯಲು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಶುಕ್ರವಾರ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಸ್‌ನಲ್ಲಿ ಪ್ರಯಾಣಿಸಿದರು. ಭೂಪಸಂದ್ರದಿಂದ ಹೆಬ್ಬಾಳ ಮಾರ್ಗದ ಬಸ್‌ಗೆ ಹತ್ತಿದ ಅವರು ಎರಡು ಟಿಕೆಟ್‌ಗಳಿಗೆ ₹100 ನೀಡಿದಾಗ, ಚಿಲ್ಲರೆ ಇಲ್ಲ ಎಂದು ಹೇಳಿದ ಕಂಡಕ್ಟರ್ ಮೊದಲು ₹12 ಚಿಲ್ಲರೆ ನೀಡುವಂತೆ ಸೂಚಿಸಿದ್ದಾನೆ.
ಸಚಿವರು ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಹೇಳುತ್ತಿದ್ದಂತೆಯೇ, ಅವರ ಗುರುತು ತಿಳಿಯದ ಕಂಡಕ್ಟರ್ “ಚಿಲ್ಲರೆ ಇಲ್ಲದಿದ್ದರೆ ಬಸ್‌ನಿಂದ ಇಳಿಯಿರಿ” ಎಂದು ಹೇಳಿದ್ದಾನೆ. ಬಳಿಕ ಸಚಿವರು ಮಾಸ್ಕ್ ತೆಗೆದು ತಮ್ಮ ಪರಿಚಯ ನೀಡುತ್ತಿದ್ದಂತೆಯೇ ಕಂಡಕ್ಟರ್ ಹಾಗೂ ಸಿಬ್ಬಂದಿ ಬೆಚ್ಚಿಬಿದ್ದರು. ಈ ಮೂಲಕ ಚಿಲ್ಲರೆ ಹಣದ ವಿಚಾರದಲ್ಲಿ ಸಾಮಾನ್ಯ ಪ್ರಯಾಣಿಕರು ಎದುರಿಸುವ ಸಮಸ್ಯೆಯನ್ನು ಸಚಿವರು ನೇರವಾಗಿ ಅನುಭವಿಸಿ ಪರಿಶೀಲಿಸಿದ್ದಾರೆ.











































