28.1 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ…91

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೯೧ ಮಹಾಭಾರತ

ಕೋಸಲ ದೇಶದಲ್ಲಿ ನಗ್ನಜಿತ ಎಂಬ ಅರಸನಿದ್ದನು. ಅವನ ರಾಜ್ಯದಲ್ಲಿ ಕೊಬ್ಬಿದ ಏಳು ಗೂಳಿಗಳಿದ್ದವು. ಯಾರಿಗೂ ಅವುಗಳನ್ನು ನಿಗ್ರಹಿಸಲು ಸಾಧ್ಯವಾಗುತ್ತಿರಲಿಲ್ಲ. ಸುದ್ದಿ ತಿಳಿದ ಶ್ರೀ ಕೃಷ್ಣನು ಅಲ್ಲಿಗೆ ಹೋಗಿ ಆ ಗೂಳಿಗಳನ್ನು ಚಮತ್ಕಾರದಿಂದ ಪರಸ್ಪರ ಕಾದಾಡುವಂತೆ ಮಾಡಿ ಲೀಲಾಜಾಲವಾಗಿ ಮಣಿಸಿದನು. ಸುಪ್ರೀತನಾದ ರಾಜನು ತನ್ನ ಮನದ ಆಶಯದಂತೆ ಶ್ರೀಕೃಷ್ಣನನ್ನು ಗೌರವಿಸಿ ತನ್ನ ಮಗಳಾದ ನೀಲೆಯನ್ನು ಮದುವೆ ಮಾಡಿಸಿಕೊಟ್ಟನು.

ಕೇಕಯ ದೇಶದ ದೃಷ್ಟಕೇತು ಎಂಬವನು ವಸುದೇವನ ತಂಗಿ ಶೃತಕೀರ್ತಿಯ ಗಂಡ. ಅವಳ ಮಗಳು ಭದ್ರೆ ಎಂಬವಳು. ಹಿರಿಯರ ಅಪೇಕ್ಷೆಯಂತೆ ಅತ್ತೆಯ ಮಗಳು ಭದ್ರೆಯನ್ನು ಕೃಷ್ಣ ವರಿಸಿದನು. ವಸುದೇವನ ಇನ್ನೋರ್ವ ತಂಗಿ ರಾಜಾದಿದೇವಿಯನ್ನು ಆವಂತೀದೇಶದ ಜಯತ್ಸೇನನಿಗೆ ಮದುವೆಯಾಗಿತ್ತು. ಅವರಿಗೆ ಮಿತ್ರವಿಂದೆ ಎನ್ನುವ ಮಗಳಿದ್ದಳು. ಅವಳನ್ನು ಕೃಷ್ಣನಿಗೇ ಮದುವೆ ಮಾಡಿಸಬೇಕೆಂಬುದು ಹೆತ್ತವರ ಆಸೆ. ಆದರೆ ಅವಳ ಅಣ್ಣಂದಿರಾದ ವಿಂದ ಮತ್ತು ಅನುವಿಂದರು ಕೃಷ್ಣ ವಿರೋಧಿಗಳು. ಸಮಯ ಒದಗಿ ಬಂದಾಗ ಸಾಧಿಸಿ ಅತ್ತೆ ಮಾವನ ಆಸೆಯಂತೆ ಅವರ ಮಗಳು ಮಿತ್ರವಿಂದೆಯನ್ನೂ ಶ್ರೀ ಕೃಷ್ಣ ವರಿಸಿದ. ಆದರೆ ಇಲ್ಲಿ ಮಿತ್ರವಿಂದೆಯ ಸೋದರರಾದ ವಿಂದಾನುವಿಂದರ ವಿರೋಧ ಕಟ್ಟಿಕೊಳ್ಳಬೇಕಾಯಿತು.

ಸೂರ್ಯನ ಮಗಳಾದ ಕಾಳಿಂದಿಯು ಮಹಾವಿಷ್ಣುವನ್ನೇ ವರಿಸಬೇಕೆಂದು ತಪಸ್ಸು ಮಾಡುತ್ತಿದ್ದಳು. ಒಂದು ದಿನ ಬೇಟೆಗಾಗಿ ಹೋಗಿದ್ದ ಶ್ರೀ ಕೃಷ್ಣನನ್ನು ಕಾನನದಲ್ಲಿ ಕಂಡಾಗ ಆರ್ತೆಯಾಗಿ ಅನುಗ್ರಹಿಸಬೇಕೆಂದು ಪ್ರಾರ್ಥಿಸಿಕೊಂಡಳು. ಶ್ರೀಕೃಷ್ಣನು ಒಪ್ಪಿ ಮದುವೆಯಾದನು. ‘ಲಕ್ಷಣೆ’ ಎಂಬ ರಾಜಕುಮಾರಿಗೆ ಸ್ವಯಂವರ ನಿಗದಿಯಾಗಿತ್ತು. ಶ್ರೀ ಕೃಷ್ಣ ಭಾಗವಹಿಸಿ ಪಣಗೆದ್ದು ಅವಳನ್ನು ವರಿಸಿದನು.

ಶ್ರೀ ಕೃಷ್ಣನು ಹೀಗೆ ದೇವಕಿದೇವಿಯ ಅಷ್ಟಮ ಗರ್ಭ ಸಂಭೂತನಾಗಿ “ರುಕ್ಮಿಣಿ, ಜಾಂಬವತಿ, ಸತ್ಯಭಾಮ, ನೀಲೆ, ಭದ್ರೆ, ಮಿತ್ರವಿಂದೆ, ಕಾಳಿಂದಿ, ಲಕ್ಷಣೆ” ಎಂಬ ಅಷ್ಟಮಾಂಗನೆಯರ ಅರಸನಾಗಿ ಯದುಕುಲೋದ್ದಾರಕನಾಗಿ ಮೆರೆದನು.

ಪ್ರಾಗ್ಜೋತಿಷಪುರವೆಂಬ ನಗರವನ್ನು ನರಕಾಸುರನೆಂಬ ಅಸುರ ಆಳುತ್ತಿದ್ದನು. ಈತನ ಹುಟ್ಟೇ ಒಂದು ವಿಶೇಷ. ಹಿರಣ್ಯಾಕ್ಷ ನೆಂಬ ದಾನವ ಬಲಾನ್ವಿತನಾಗಿ ಅಧರ್ಮ ಪಾತಕಗಳೆನ್ನೆಸಗುತ್ತಿದ್ದ. ವರಬಲದಿಂದ ಕೊಬ್ಬಿದ ದುರುಳ ಭೂದೇವಿಯನ್ನೇ ಬೆನ್ನಟ್ಟಿ ಹೋಗಲು ತೊಡಗಿ, ಪೀಡಿಸಲು ಆರಂಭಿಸಿದ್ದನು. ಹಿರಣ್ಯಾಕ್ಷನ ಜನನವೇ ಒಂದು ವಿಶೇಷ ಜನಿಸಿದಾಕ್ಷಣ ಬೆಳೆಯಲು ತೊಡಗಿದ್ದ. ಆಕಾಶವನ್ನು ವ್ಯಾಪಿಸುತ್ತಾ ಬಲಯುತ ಕಾಯದಿಂದ ದೀರ್ಘದೇಹಿಯಾಗಿ ಬೆಳೆದಿದ್ದನು. ಹೀಗಿರಲು ಪಾತಕಗಳನ್ನು ಎಸಗುತ್ತಾ ರಾಕ್ಷಸೀಯ ಪ್ರವೃತ್ತಿಯಿಂದ ದೇವತೆಗಳನ್ನು ಸದೆ ಬಡಿದು ಸ್ವರ್ಗ ಸ್ವಾಧೀನಗೈದಿದ್ದನು. ಅಣ್ಣ ಹಿರಣ್ಯ ಕಶ್ಯಪನೂ ತತ್ಸಮಾನ ರೂಪ, ವಿಕ್ರಮಗಳಿಂದ ಜೊತೆಗಿದ್ದನು. ಸ್ವರ್ಗ ಸ್ವಾಧೀನವಾದ ಬಳಿಕ ಯುದ್ಧಾಕಾಂಕ್ಷೆಯಿಂದ ಸಮುದ್ರ ಮಧ್ಯಕ್ಕೆ ಹಾರಿ ಅಲ್ಲೋಲ ಕಲ್ಲೋಲಗೊಳಿಸುತ್ತಾ ವರುಣನ ರಾಜಧಾನಿ ವಿಭಾವರಿ ಯನ್ನು ಹೊಕ್ಕು ಯುದ್ಧಕ್ಕೆ ಆಹ್ವಾನಿಸಿದನು. ಹಿರಣ್ಯಾಕ್ಷನ ವರ್ತನೆಯಿಂದ ಕೋಪ ಬಂದರೂ ವಿವೇಚನಾ ಶೀಲನಾದ ವರುಣ “ನಾನೀಗ ವೃದ್ಧನಾಗಿದ್ದೇನೆ. ಮಹಾಬಲಶಾಲಿಯಾದ ನಿನ್ನ ಜೊತೆ ಹೋರಾಡುವಷ್ಟು ಶಕ್ತನಲ್ಲ. ನಿನಗೆ ಯುದ್ಧಾಪೇಕ್ಷೆಯಿದ್ದರೆ ವಿಷ್ಣು ಸಮರ್ಥ ಪ್ರತಿಸ್ಪರ್ಧಿ” ಎಂದು ಸೂಚಿಸುತ್ತಾನೆ. ಹೀಗೆ ವಿಷ್ಣುವಿನ ಜೊತೆ ದ್ವಂದ್ವದ ಅಪೇಕ್ಷೆ ಹಿರಣ್ಯಾಕ್ಷ ಹೊಂದಿದ್ದ. ಭೂದೇವಿಯನ್ನು, ದೇವತೆಗಳೆಲ್ಲರಿಗೂ, ಗೋ, ಬ್ರಾಹ್ಮಣ ಮುನಿಜನರೆಲ್ಲರಿಗೂ ಪೀಡಕನಾಗಿದ್ದ ಹಿರಣ್ಯಾಕ್ಷನ ವಧೆಗಾಗಿ ಶ್ರೀಹರಿ ಶ್ವೇತವರಾಹನಾಗಿ ಅವತರಿಸಿ ಬಂದನು. ದುಷ್ಟ ದಾನವನನ್ನು ಸಂಹರಿಸಿ ಭೂದೇವಿಯನ್ನು ರಕ್ಷಿಸಿದನು.

ದುರುಳನ ಪೀಡನೆಯಿಂದ ಭೀತಳಾಗಿದ್ದ ಭೂದೇವಿ ತನ್ನ ಮಾನ ಪ್ರಾಣ ರಕ್ಷಣೆ ಮಾಡಿದ ವರಾಹ ಅವತಾರಿ ಶ್ರೀ ಹರಿಯನ್ನು ಕಂಡು ಭಕ್ತಿ, ಮೋಹ ಪರವಶಳಾಗಿ ಬಯಸಿದಳು. ಆದರೆ “ರಾಕ್ಷಸನೊಡನೆ ಕಾದಾಡಿ ಉಗ್ರತೆಯಿಂದ ಇರುವ ಈ ಸಮಯ ಸೂಕ್ತವಲ್ಲ, ಈಗ ಬಯುಸುವುದು ಕ್ಷೇಮವಲ್ಲ. ಹಾಗಾಗಿ ನಿನ್ನ ಅಪೇಕ್ಷೆ ಸಲ್ಲದು” ಎಂದು ಪರಮಾತ್ಮ ಅಚ್ಯುತ ಹೇಳಿದರೂ ಭೂದೇವಿ ಕೇಳಲಿಲ್ಲ. ಮುಂದುವರಿದು ಪ್ರಣಯ ಭಿಕ್ಷೆ ಪ್ರಾರ್ಥಿಸಿದ ಪರಿಣಾಮ ಒಂದು ಮಗುವಿನ ಜನನವಾಯಿತು. ತಂದೆ ತಾಯಿಯರು ಸುಕೋಮಲ, ಸುಮನಸ್ಸಿನಿಂದ ಸಂತುಷ್ಟ, ಸಾತ್ವಿಕ ಮನಸ್ಥಿತಿಯ ಸಂಸರ್ಗದಲ್ಲಿ ಗರ್ಭಧಾರಣೆಯಾದರೆ ಆ ಸದ್ಭಾವ ಮಕ್ಕಳಲ್ಲೂ ಪ್ರತಿಫಲಿಸುತ್ತದೆಯಂತೆ. ಅದಕ್ಕಾಗಿ ದೇವರ ಪೂಜೆ, ಕ್ಷೇತ್ರ ದರ್ಶನ, ಗುರು ಹಿರಿಯರ ಆಶೀರ್ವಾದದಿಂದ ಮನಸ್ಸು ಪ್ರಫುಲ್ಲಿತವಾದ ಬಳಿಕ ವಧು ವರರ ದಾಂಪತ್ಯ ಆರಂಭವಾಗುವುದು. ದೇವರ ಮಗನಾಗಿ ಈ ಮಗು ಹುಟ್ಟಿದರೂ, ಹುಟ್ಟಿಗೆ ಕಾರಣನಾಗುವ ಹೊತ್ತಿಗೆ ಕ್ರೋಧ, ರೋಷ ತುಂಬಿ, ವಧೆ ಮಾಡಿದ ಕ್ರೌರ್ಯ ಭಾವವಿದ್ದು, ತಾಯಿ ಭೂದೇವಿಯ ಮನಸ್ಥಿತಿಯೂ ಹಿರಣ್ಯಾಕ್ಷನ ಭಯದಿಂದ ನಡುಗಿ, ನಲುಗಿ, ಆ ದುಷ್ಟನಿಗೆ ಶಿಕ್ಷೆಯಾಗಬೇಕೆಂದು ಪ್ರತಿಕಾರ ತೀರಿಸಿದ ಭಾವದಿಂದಿದ್ದ ಕಾರಣವೋ ಏನೋ! ಹೆತ್ತವರ ಆ ಕ್ಷಣದ ತಾಮಸ ಗುಣ ಲಕ್ಷಣಗಳು ಮಗನಲ್ಲಿ ಬಿಂಬಿತವಾಗಿದ್ದವೋ ಏನೋ!

ಹೀಗೆ ಹುಟ್ಟಿದ ಮಗು ಭೂಮಿ ತಾಯಿಯ ಮಡಿಲಲ್ಲಿ ತೆವಳುತ್ತಾ ಹೋಗಿ ಬಿದ್ದದ್ದು ಒಂದು ಸ್ಮಶಾನದ ಹೊಂಡ ನರಕಪಾಲಕ್ಕೆ. ಹಾಗೆ ಬೀಳುವ ರಭಸಕ್ಕೆ ಅವಶೇಷವಾಗಿದ್ದ ಬುರುಡೆಯೊಂದು ಮಗುವಿನ ತಲೆಗೆ ಕಿರೀಟದಂತೆ ಅವುಚಿಕೊಂಡಿತು. ನರಕಪಾಲದಲ್ಲಿ ಹೀಗೆ ಬಿದ್ದು ಅಳುತ್ತಿದ್ದನು. ಮಹರ್ಷಿಗಳೋರ್ವರು ಕಂಡು ಮಗುವನ್ನೆತ್ತಿಕೊಂಡರು. ನರಕಪಾಲ ಅಂದರೆ ಸ್ಮಶಾನದ ಹೊಂಡದಲ್ಲಿ ತಲೆ ಬುರುಡೆ ಕಿರೀಟದಂತೆ ಧರಿಸಿರುವ ಮಗುವಿಗೆ “ನರಕ” ಎಂದು ಹೆಸರಿಟ್ಟು ಬೆಳೆಸಿದರು. ತನ್ನ ಆಶ್ರಮದಲ್ಲಿ ಬೆಳೆಯುತ್ತಾ ರಾಕ್ಷಸ ಪ್ರವೃತ್ತಿ ತೋರುತ್ತಿದ್ದ ಈತ ನರಕಾಸುರ ಎಂದೇ ಕರೆಯಲ್ಪಟ್ಟ. ಈತನ ಉಪಟಳ ತಾಳಲಾಗದೆ ಆಶ್ರಮದಿಂದ ಹೊರ ಹಾಕಲ್ಪಟ್ಟ.

ಹೀಗೆ ಈತ ಸಂಚರಿಸುತ್ತಿರುವಾಗ ಹೆತ್ತ ತಾಯಿ ಭೂದೇವಿಯಿಂದ ಅನುಗ್ರಹ ರೂಪದಲ್ಲಿ ವೈಷ್ಣವಾಸ್ತ್ರ ಪಡೆದನು. ಭೂಮಿಯ ಮಗನಾದ ಕಾರಣ ಭೌಮಾಸುರನಾಗಿಯೂ ಪ್ರಸಿದ್ದನಾದನು. ಮತ್ತಷ್ಟು ಬಲಾಢ್ಯನಾಗುವ ಅಪೇಕ್ಷೆಯಿಂದ ಬ್ರಹ್ಮದೇವನನ್ನು ತಪಸ್ಸಿನ ಮೂಲಕ ಪ್ರಸನ್ನೀಕರಿಸಿ ಅವಧ್ಯತ್ವದ ವರ ಬೇಡಿದ. ಅದಾಗದು ಎಂದಾಗ ಯೋಚಿಸಿ ತನಗೆ ತಂದೆ ತಾಯಿಗಳೇ ಇಲ್ಲ ಎಂದು ತಿಳಿದಿದ್ದ ಆತ “ದೇವರೇ ನನ್ನ ತಂದೆ ತಾಯಿಗಳೇ ನಿಂತು ಹೋರಾಡಿದರೆ ಮಾತ್ರ ನನಗೆ ಮರಣ ಬರುವಂತಾಗಲಿ” ಎಂದು ಬೇಡಿ ವರವನ್ನು ಪಡೆದನು. ಒಂದು ವೇಳೆ ಹಾಗೆನಾದರು ಹೆತ್ತ ತಾಯಿ ತಂದೆ ಇದ್ದರೂ ಮಗನನ್ನು ವಧೆಮಾಡಲಾರರು ಎಂಬ ಜಾಣ ವಿಶ್ವಾಸವೇ ವರವಾಗಿ ಬೇಡಲ್ಪಟ್ಟಿತ್ತು. ಪರಿಣಾಮ ಅನ್ಯ ಯಾರಿಂದಲೂ ಸೋಲು ಬಾರದೆ ಅಜೇಯನಾದ. ಈತನ ಸಹಚರನಾಗಿ ಸಮಾನ ಮನಸ್ಕ ಮುರಾಸುರ ಎಂಬ ಅತಿ ಬಲಾಢ್ಯ ರಾಕ್ಷಸ ಮಂತ್ರಿಯಾದನು. ಮುರಪಾಶವೆಂಬ ದಿವ್ಯಾಯುಧ ಪಡೆದಿದ್ದ ಆತನೂ ಸರ್ವತ್ರ ವಿಜಯಿಯಾಗಿದ್ದ. ನರಕಾಸುರ ದಿಗ್ವಿಜಯಗೈದು ಸುಂದರಿಯರಾಗಿ ಕಂಡ ಹೆಣ್ಮಕ್ಕಳನ್ನು, ರಾಜಕುಮಾರಿಯರನ್ನು ತಂದು ತಂದು ವರಿಸಲೆಂದು ಅರಮನೆಯೊಳಗೆ ಸೆರೆಯಲ್ಲಿಡುತ್ತಿದ್ದನು. ಆದರೆ ಅವರಾಗಿ ಒಪ್ಪದೆ ಮದುವೆಯಾಗಲಾರೆ ಎಂದು ಕಾದು ಕುಳಿತರೂ ಯಾವ ಹೆಣ್ಣೂ ಒಪ್ಪಲಿಲ್ಲ. ಅಲ್ಲಿಗೆ ಬಂದ ನಾರದರು ಹೆಣ್ಮಕ್ಕಳಿಗೆ ಧೈರ್ಯ ತುಂಬಿ, ರಾಕ್ಷಸನ ಬಂಧನದಲ್ಲಿದ್ದರೂ ಹರಿಧ್ಯಾನ ನಿರತರಾಗಿರಿ ಎಂದು ಬೋಧಿಸಿದ್ದರು. ಹೀಗಿರಲು ನರಕಾಸುರನ ಕಾತರ ಮಿತಿ ತಪ್ಪಿ ಬಲಾತ್ಕಾರ ಮಾಡಲು ಮುಂದಾಗುವ ಮನ ಮಾಡಲು ಪ್ರೇರೇಪಿಸುತ್ತಿತ್ತು. ಆ ಸಮಯ ಮತ್ತೆ ಅಲ್ಲಿಗೆ ಆಗಮಿಸಿದ ನಾರದರ ಸೂಚನೆಯಂತೆ ಹುಡುಗಿಯರೆಲ್ಲಾ ಮದುವೆಯಾಗಲು ಒಪ್ಪಿದರು. ನಾರದರ ಸೂಚನೆಯಂತೆ ಅವರು ಒಂದು ನಿರ್ಬಂಧ ವಿಧಿಸಿದರು. ಏನೆಂದರೆ “ನಾವೆಲ್ಲರೂ ನಿನ್ನನ್ನು ಒಂದೇ ಗಳಿಗೆಯಲ್ಲಿ ವರಿಸುತ್ತೇವೆ ಅದಕ್ಕಾಗಿ ನಮಗೆಲ್ಲರಿಗೂ ಹಿತಕಾರಿಯಾಗುವ ಮುಹೂರ್ತ ನಿಗದಿಪಡಿಸಬೇಕು.” ನರಕಾಸುರು ಸಂತಸಗೊಂಡು ವಿವೇಚಿಸದೆ ಸರಿ ಎಂದು ಒಪ್ಪಿದ. ಬಹುದಿನಗಳನ್ನು ಅಳೆದರೂ ಹಲವರಿಗೆ ಒಪ್ಪುವ ದಿನ ಕೆಲವರಿಗೆ ಪ್ರತಿಕೂಲವಾಗಿದೆ. ಹೀಗೆ ಕೆಲವರಿಗಾದರೆ ಹಲವರಿಗಾಗುತ್ತಿರಲಿಲ್ಲ. ಗೊಂದಲ ಪರಿಹಾರಕ್ಕೆ ದಾರಿ ಹುಡುಕುತ್ತಿದ್ದ ನರಕಾಸುರ ಮತ್ತೂ ಮತ್ತೂ ಹೆಣ್ಮಕ್ಕಳನ್ನು ತಂದು ತಂದು ಗೃಹ ಬಂಧನದಲ್ಲಿಡುತ್ತಾ ಹೆಣ್ಮಕ್ಕಳ ಸಂಖ್ಯೆ ಹದಿನಾರು ಸಾವಿರ ದಾಟಿತು. ಏಕ ಮುಹೂರ್ತ ಅಸಾಧ್ಯವಾಗುತ್ತಾ ಹೋಯಿತು.

ಒಂದೆಡೆ ನರಕಾಸುರನ ಬಂಧನದಲ್ಲಿದ್ದ ಮಕ್ಕಳನ್ನು ಕಳೆದುಕೊಂಡ ಹೆತ್ತವರ ರೋದನೆ, ಭಗವಂತನಲ್ಲಿ ರಕ್ಷಿಸು ದೇವಾ ಎಂಬ ಮೊರೆಯಾಗಿ ಬದಲಾಗಿತ್ತು. ಇತ್ತ ಅರಮನೆಯ ಗೃಹ ಬಂಧನದಲ್ಲಿದ್ದ ಹೆಣ್ಮಕ್ಕಳ ಹರಿಧ್ಯಾನವೂ ಭಗವಂತನನ್ನು ಸೆಳೆಯತೊಡಗಿತ್ತು.

ದೇವೇಂದ್ರನೂ ಪರಾಜಿತನಾಗಿದ್ದ. ನರಕಾಸುರನಿಂದಾಗಿ ಪೀಠ ಭ್ರಷ್ಟನಾಗಿದ್ದನು. ಹರಿಯ ನೆನೆದು ಪೊರೆಯಬೇಕೆಂದು ಆರ್ತನಾಗಿ ಆತನೂ ಪ್ರಾರ್ಥಿಸಲು ತೊಡಗಿದ್ದಾನೆ. ಹೀಗೆ ರಕ್ಷಣೆಗಾಗಿ ಎಲ್ಲೆಡೆಯಿಂದಲೂ ಭಗವಂತನಿಗೆ ಪ್ರಾರ್ಥನೆ ಸಮರ್ಪಣೆಯಾಗುತ್ತಿದೆ.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page