ಭಾಗ – 82
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೮೨ ಮಹಾಭಾರತ
ಕೃಷ್ಣ ಬಲರಾಮರು ನೇರವಾಗಿ ಪ್ರಭಾಸ ತೀರ್ಥಕ್ಕೆ ಬಂದು ನಿಂತರು. ವರುಣನು ಶ್ರೀಹರಿಯೇ ಕೃಷ್ಣ ರೂಪದಲ್ಲಿ ಅವತರಿಸಿ ಬಂದು ತನ್ನ ಬಳಿ ನಿಂತದ್ದನ್ನು ಅರಿತನು. ದೇವನಾದರೂ ಪುರುಷಾಕೃತಿ ತಳೆದು ಪ್ರಕಟನಾಗಿ, ಕೃಷ್ಣ ಬಲರಾಮರಿಗೆ ವಂದಿಸಿ, ಉಪಚರಿಸಿದನು. ಬಂದಂತಹ ಕಾರಣವೇನೆಂದು ವಿನಯದಿಂದ ಕೇಳಿದನು. ಕೃಷ್ಣ ಪರಮಾತ್ಮ ಜಲಾಧಿಪ ವರುಣನ ಸೇವೆಗೆ ಸಂತುಷ್ಟನಾಗಿ ಕೃತಜ್ಞತೆ ಸಲ್ಲಿಸಿ, ಕಾರ್ಯ ಕಾರಣದಿಂದ ಬಂದ ವಿಚಾರ ಹೇಳತೊಡಗಿದ. “ವಿದ್ಯಾ ದಾನ ಮಾಡಿದ ಗುರು ಸಾಂದೀಪನಿ ಆಚಾರ್ಯರಿಗೆ ದಕ್ಷಿಣೆಯಾಗಿ ಅವರ ಪುತ್ರನನ್ನು ಹುಡುಕಿ ತರುವ ಹೊಣೆ ಹೊತ್ತು ಬಂದಿದ್ದೇವೆ. ಈ ಪ್ರಭಾಸ ತೀರ್ಥ ಕ್ಷೇತ್ರದಲ್ಲಿ ನೀರಿನಲ್ಲಿ ಮುಳುಗಿ ಅವರ ಮಗ ಕಣ್ಮರೆಯಾಗಿದ್ದಾನಂತೆ. ಹೇ ವರುಣ ದೇವ! ನಮ್ಮ ಗುರು ಪುತ್ರನನ್ನು ನಮಗೆ ಒಪ್ಪಿಸಿ ಸಹಕರಿಸಬೇಕಾಗಿ ನಿನ್ನಲ್ಲಿ ವಿಜ್ಞಾಪಿಸುತ್ತಿದ್ದೇವೆ” ಎಂದು ಕೇಳಿಕೊಂಡನು. ಇದಕ್ಕೆ ಪ್ರತಿಕ್ರಿಯಿಸಿದ ವರುಣ – “ದೇವಾ, ನಿಮ್ಮ ಗುರು ಪುತ್ರ ನನ್ನ ವಶದಲ್ಲಿಲ್ಲ. ಈ ವಾರಿಧಿಯಲ್ಲಿ ವಾಸಮಾಡುತ್ತಿರುವ “ಪಂಚಜನ” ಎಂಬ ರಾಕ್ಷಸ ಮಹಾ ಪ್ರತಾಪಿ, ಬಲಶಾಲಿ. ಗುರುಸುತನನ್ನು ಆತನೇ ನುಂಗಿರುವನು. ಶಂಖ ರೂಪಿಯಾದ ಆತನನ್ನು ನಾನೂ ಶಿಕ್ಷಿಲಾಗದಿರುವೆನು. ಹೇ! ಪರಮಾತ್ಮ ಆ ದುರುಳನು ಸಮುದ್ರದೊಳಗೆ ಶಂಖಗಳ ಮಧ್ಯೆ ಇದ್ದಾನೆ. ಆತನನ್ನು ಪತ್ತೆ ಹಚ್ಚುವುದೇ ಸಾಹಸದ ಕೆಲಸ. ಮನ ಬಂದಂತೆ ಸಮುದ್ರದಲ್ಲಿ ಸಂಚರಿಸಿ ಜಲಚರಗಳಿಗೂ, ಸ್ನಾನಕ್ಕೆ ಬಂದವರಿಗೂ ಆಪತ್ತು ತಂದಿಡುತ್ತಿದ್ದಾನೆ. ಸರ್ವಶಕ್ತನಾದ ನೀನೇ ಅವನನ್ನು ಕೊಂದು ಲೋಕಕ್ಕೆ ಕ್ಷೇಮವನ್ನೊದಗಿಸಬೇಕು” ಎಂದು ಬೇಡಿದನು.
ಕೂಡಲೇ ವರುಣನಿಗೆ ನಮಸ್ಕರಿಸಿ ಸಹಾಯಿಯಾಗಲು ವಿನಂತಿಸಿ, ಸಮುದ್ರದ ಆಳಕ್ಕೆ ಬಲರಾಮ ಕೃಷ್ಣರು ಜಿಗಿದು ಸಾಗಿದರು. ರಾಶಿ ರಾಶಿ ಶಂಖಗಳು… ಪ್ರತಿಯೊಂದು ಶಂಖಗಳನ್ನೂ ತದಕಿ ಹುಡುಕತೊಡಗಿದರು. ಆಗ ಒಂದು ಶಂಖ ಅಸುರಾಕೃತಿ ತಳೆದು ಪಂಚಜನ ಕಾಣಿಸಿ – ಕಾದಾಟ ಆರಂಭಿಸಿದ. ಪರಿಣಾಮದಲ್ಲಿ ಕೃಷ್ಣನಿಂದ ಹತನಾದ. ಆತನ ಹೊಟ್ಟೆ ಸೀಳಿ ಗುರುಪುತ್ರನಿಗಾಗಿ ಹುಡುಕಿದರೆ ದಿವ್ಯ ಶಂಖವೊಂದು ಸಿಕ್ಕಿತೇ ಹೊರತು ಗುರುಪುತ್ರ ಸಿಗಲಿಲ್ಲ. ಸಿಕ್ಕಿದ ದಿವ್ಯ ಶಂಖದೊಂದಿಗೆ ಸಮುದ್ರದಿಂದ ಹೊರಬಂದರು ಕೃಷ್ಣ ಬಲರಾಮರು.
ಪಂಚಜನನಿಂದ ಗುರುಪುತ್ರ ಸಂಹರಿಸಲ್ಪಟ್ಟಿದ್ದಾನೆ. ಮರಣ ಹೊಂದಿದವರು ಯಮಲೋಕ ಸೇರುತ್ತಾರೆ ಎಂದು ತರ್ಕಿಸಿದರು. ಯೋಗಶಕ್ತಿಯಿಂದ ಯಮಪುರಿ ಸೇರಿ, ದ್ವಾರದಲ್ಲಿ ನಿಂತು – ತಾನು ಪಂಚಜನನ ಸಂಹಾರ ಮಾಡಿ ಪಡೆದ ದಿವ್ಯ ಶಂಖಕ್ಕೆ ಪಾಂಚಜನ್ಯ ಎಂದು ಹೆಸರಿಟ್ಟು ಶ್ರೀ ಕೃಷ್ಣ ಪರಮಾತ್ಮ ಮೊಳಗಿಸಿದ. ಶಂಖಧ್ವನಿ ಕೇಳಿ ಯಮ ಧರ್ಮರಾಜ ಕಾಣಿಸಿಕೊಂಡನು. ಕೃಷ್ಣ ಬಲರಾಮರು ಸರ್ವ ವೃತ್ತಾಂತವನ್ನೂ, ಪಂಚಜನ ವಧೆ, ಶಂಖದ ವಿಚಾರವನ್ನೂ ಅರುಹಿ, ಗುರುಪುತ್ರನನ್ನು ಕೊಡಬೇಕೆಂದು ಬೇಡಿದರು. ಯಮಧರ್ಮರಾಯ ಕೃಷ್ಣ ಬಲರಾಮರಿಗೆ ವಂದಿಸಿ, ಉತ್ತರಿಸಿದ. “ದೇವಾ! ನಾನು ಧರ್ಮಪಾಲಕ. ಹುಟ್ಟು ಸಾವು, ಪಾಪ ಪುಣ್ಯದ ಲೆಕ್ಕಾನುಸಾರ ಧರ್ಮಪ್ರಕಾರ ಸಾವಿನಾಚೆ ಪ್ರಾಪ್ತವಾಗಬೇಕಾದದ್ದನ್ನು ಒದಗಿಸುವ ದಂಡಾಧಿಕಾರಿ. ಈಗ ನೀವು ಕೇಳುತ್ತಿರುವ ಗುರು ಪುತ್ರ ಆಯುಷ್ಯ ಕಳೆದು ವಿಧಿಯನುಸಾರ ಮೃತನಾಗಿದ್ದಾನೆ. ಶರೀರ ನಷ್ಟವಾಗಿರುವ ಇಂತಹ ಸ್ಥಿತಿಯಲ್ಲಿ ಮರಳಿ ಕಳುಹಿಸುವುದು ನನ್ನ ಕರ್ತವ್ಯ ವ್ಯಾಪ್ತಿಯನ್ನು ಮೀರಿದ, ಧರ್ಮ ಸಮ್ಮತವಲ್ಲದ ವಿಚಾರ. ಹಾಗಾಗಿ ನಿಮ್ಮ ಅಪೇಕ್ಷೆ ಪೂರೈಸಲಾಗದು ಕ್ಷಮಿಸಬೇಕು” ಎಂದನು ಯಮಧರ್ಮರಾಯ.
ಕೃಷ್ಣ ಮುಗುಳ್ನಕ್ಕು.. ಧರ್ಮಪಾಲಕನೇ, ನಮ್ಮ ಗುರುಗಳು ಶಾಸ್ತ್ರ ಪಾರಂಗತರು. ಧರ್ಮದ ವ್ಯಾಪ್ತಿ ಅರಿತುಕೊಂಡು ಗುರುದಕ್ಷಿಣೆಯಾಗಿ ಮಗನನ್ನು ಕೇಳಿದ್ದಾರೆ ಎಂದರೆ ಜಿಜ್ಞಾಸೆ ಇದೆ. ಇಲ್ಲಿ ಜೀವನ ಮರಣದ ವ್ಯಾಪ್ತಿಯ ಆಚೆ ಆತ್ಮನ ವ್ಯವಹಾರ ಹೇಗೆ ಎಂಬ ವಿಚಾರ ನಿನ್ನ ಕೃಪೆಯಿಂದ ಲೋಕಕ್ಕೆ ಪ್ರಕಟವಾಗಲಿ ಎಂದು ಬೇಡಿದರು. ಶ್ರೀ ಹರಿಯೇ ಕೃಷ್ಣನಾಗಿ ಬೇಡಿದಾಗ ಒಪ್ಪಿದ ಯಮಧರ್ಮ. ಭೌತಿಕ ಶರೀರವಿಲ್ಲದ ಗುರುಪುತ್ರನ ಆತ್ಮವನ್ನು ವಿಶೇಷ ಅನುಗ್ರಹ ಬಲದಿಂದ ಉದ್ದೇಶ ಪೂರ್ತಿಗಾಗಿ ಕೃಷ್ಣ ಬಲರಾಮರ ಜೊತೆ ಕಳುಹಿಸಿದ.
ಸಾಂದೀಪನಿ ಆಚಾರ್ಯರ ಆಶ್ರಮಕ್ಕೆ ಗುರುಪುತ್ರನ ಅವ್ಯಕ್ತ ಆತ್ಮದ ಜೊತೆ ಬಂದರು ಕೃಷ್ಣ ಬಲರಾಮರು. ಗುರು ಸಾಂದೀಪನಿ ಆಚಾರ್ಯ ಹಾಗು ಗುರುಪತ್ನಿಗೆ ನಮಿಸಿ ನಿಂತರು. ವೃತ್ತಾಂತ ವಿವರಿಸಿ ದಿವ್ಯಾನುಗ್ರಹದಿಂದ ಜೊತೆ ಬಂದಿದ್ದ ಗುರು ಪುತ್ರನ ಆತ್ಮದ ಜೊತೆ ಕೃಷ್ಣ ಮಾತನ್ನಾಡಿ, ಇವರು ನಿನ್ನ ಈ ಹಿಂದಣ ಜನ್ಮದ ಮಾತಾ ಪಿತರು ಎಂದು ಗುರುತಿಸಿದ. ಗುರು ಸಾಂದೀಪನಿ ಆಚಾರ್ಯರಿಗೆ ತಮ್ಮ ಪುತ್ರ ಕಾಣುತ್ತಿಲ್ಲ. ಕೃಷ್ಣ ಯಾರ ಜೊತೆ ಮಾತನಾಡುತ್ತಿದ್ದಾನೆ ಎಂದು ಕುತೂಹಲಿಗರಾಗಿ ನೋಡುತ್ತಿದ್ದಾರೆ. ಆಗ ಗುರು ಪುತ್ರನ ದಿವ್ಯಾತ್ಮ ಅವ್ಯಕ್ತವಾಗಿ ಮಾತಾ ಪಿತರೆಂದವರನ್ನು ಉದ್ದೇಶಿಸಿ ಹೇಳತೊಡಗಿತು. ” ಈ ತನಕ ನಾನು ಎಷ್ಟು ಬಾರಿ ಶರೀರವಾಸಿಯಾಗಿ ಬದುಕಿ ಮರಳಿದೆನೋ ನನಗೇ ಪೂರ್ತಿ ಸ್ಮರಣೆಯಿಲ್ಲ. ನೀವು ನನ್ನ ಇತ್ತೀಚಿನ ಜನ್ಮದ ಮಾತಾ ಪಿತರಾಗಿದ್ದೀರಿ. ನಿಮಗೆ ನನ್ನ ಪ್ರಣಾಮಗಳು. ನಶ್ವರವಾದ ಶರೀರ ಮಾಧ್ಯಮದಿಂದ ನಿಮಗೆ ನಾನು ಮಗನಾಗಿದ್ದೆ. ಆ ಶರೀರವನ್ನು ಓರ್ವ ರಾಕ್ಷಸ ನುಂಗಿ ಜೀರ್ಣಿಸಿದ ಕಾರಣ ನಷ್ಟವಾಯಿತು. ನಾನು ಮುಕ್ತನಾದೆ. ಜೀವ ಸಂಬಂಧ ಮುಕ್ತಾಯಗೊಳಿಸಲ್ಪಟ್ಟಿತು. ” ಎಂದು ಹೇಳಿತು. ಮಗನ ಸ್ವರದ ಗುರುತು ಹಿಡಿದ ಹೆತ್ತವರಿಗೆ ಜೀವನ ಚಕ್ರದ ಸತ್ಯ ಅರಿವಾಯಿತು. ಶರೀರಾಂತರ್ಗತ ಆತ್ಮದಿಂದ ಜೀವ. ಸಜೀವ ಶರೀರ ಇರುವಲ್ಲಿವರೆಗೆ ಸಂಬಂಧ. ಮತ್ತೇನಿದ್ದರೂ ಆ ಶರೀರ ಮಾಧ್ಯಮದಲ್ಲಿ ಸಂಪಾದಿಸಿದ ಪಾಪ ಪುಣ್ಯದ ಆಧಾರದಲ್ಲಿ ಪಾಪಾತ್ಮ, ಪುಣ್ಯಾತ್ಮನೆಂಬ ಸ್ಥಾನ ಪ್ರಾಪ್ತವಾಗುತ್ತದೆ.
ಇಂತಹ ವಿಶೇಷ ಜ್ಞಾನವನ್ನು ಕರುಣಿಸಲು ಶಿಷ್ಯರೂಪದಲ್ಲಿ ಬಂದಿರುವ ಭಗವಂತನಿಗೆ ನಮಿಸಿದರು. ಸಂತುಷ್ಟರಾಗಿ ವಾಸ್ತವ ಗುರು – ಗುರುಪತ್ನಿಯರಾಗಿ, ತಮ್ಮ ಶಿಷ್ಯರಲ್ಲಿ ನಿಮ್ಮ ಗುರುದಕ್ಷಿಣೆ ಸಲ್ಲಿಕೆಯಾಗಿದೆ. ನೀವು ಋಣಮುಕ್ತರಾಗಿದ್ದೀರಿ ಎಂದು ಹರಸಿ, ಆಶೀರ್ವದಿಸಿದರು. ಮಗನ ಶರೀರವಾಸಿಯಾಗಿದ್ದ ದಿವ್ಯಾತ್ಮ ಮರಳಿ ತನ್ನ ಸ್ಥಾನ ಪರಂಧಾಮ ಸೇರಿಕೊಂಡಿತು.
ಗುರುದಕ್ಷಿಣೆ ಅರ್ಪಿಸಿದ ಅತಿಮಾನುಷ ಸಾಧನೆಯ ವಿಚಾರ ತಿಳಿದ ಕುಚೇಲ. ಕೃಷ್ಣನ ಪಾದಗಳಿಗೆ ನಮಿಸಲು ಓಡಿ ಬಂದು, ಕೃಷ್ಣಾ ನಿನ್ನ ಜೊತೆ ಮಿತ್ರನೆಂದು ವ್ಯವಹರಿಸಿದೆ. ನನ್ನಿಂದೇನಾದರು ಅಪಚಾರವಾಗಿದ್ದರೆ ಕ್ಷಮಿಸಬೇಕೆಂದು ಪಾದ ಮೂಲಕ್ಕೆ ವಂದಿಸಲು ಬಗ್ಗಿದ. ಆಗ ಕೃಷ್ಣ, ಮಿತ್ರಾ ನೀನು ನನ್ನ ಹೃದಯ ಸ್ಥಾನಿ ಎಂದು ಸೆಳೆದು ಬಿಗಿದಪ್ಪಿದ. ಅವರದು ಆತ್ಮ – ಪರಮಾತ್ಮರ ಪವಿತ್ರ ನಿಷ್ಕಲ್ಮಷ ಸಂಬಂಧ. ಗುರುಕುಲ ವಿದ್ಯಾಭ್ಯಾಸ ಮುಗಿಸಿದ ಕೃಷ್ಣ ಬಲರಾಮರು ದಕ್ಷಿಣೆ ಅರ್ಪಿಸಿಯಾಗಿದೆ, ಮರಳಿ ಮಥುರೆಗೆ ಹೊರಟರು.
ಮಥುರೆಗೆ ಬಂದಾಗ ಭವ್ಯ ಸ್ವಾಗತವೇ ಏರ್ಪಟ್ಟಿತ್ತು. ಸಕಲ ವಿಚಾರ ವಿದ್ಯಾರ್ಜನೆಗೆ ಹೋದ ಮಕ್ಕಳಿಂದ ತಿಳಿದು ವಸುದೇವ ದೇವಕಿಯರು ಬಹು ಸಂತೋಷಗೊಂಡರು.
ನಂದ ಗೋಕುಲದಿಂದ ಬಂದು ಕಂಸ ವಧೆಯ ಬಳಿಕ ಮಥುರೆಯಲ್ಲಿ ಕಾಲ ಕಳೆಯುತ್ತಿರಬೇಕಾದರೆ ತನ್ನ ಚಿಕ್ಕಪ್ಪ (ವಸುದೇವನ ತಮ್ಮ) “ದೇವಭಾಗ”ರ ಮಗ “ಉದ್ದವ” ಕೃಷ್ಣ ರಾಮರಿಗೆ ಆಪ್ತನಾಗಿದ್ದ. ಪರಮ ಸಾತ್ವಿಕನೂ, ಧರ್ಮಿಷ್ಟನೂ, ಜ್ಞಾನಿಯೂ ಆದ ಈತ ಕೃಷ್ಣ ಬಲರಾಮರ ಜೊತೆಯಲ್ಲೇ ಇರುತ್ತಿದ್ದ.
ಕೃಷ್ಣನಿಗೆ ತಾನು ಬಿಲ್ಲಹಬ್ಬಕ್ಕೆ ಬರುವಾಗ ಶ್ರೀಗಂಧ ನೀಡಿದ್ದ ಕುಬ್ಜೆಯ ಸ್ಮರಣೆಯಾಯಿತು. ಕುಬ್ಜೆಯಾಗಿದ್ದ ತ್ರಿವಕ್ರೆಯ ಶರೀರದ ವಕ್ರತೆಯನ್ನು ನಿವಾರಿಸಿದ್ದ. ಆ ಬಳಿಕ ಕುಬ್ಜೆ ಚೆಲ್ವಿಕೆಯಾಗಿದ್ದಳು. ಬಳಿಕ ಸಂತುಷ್ಟೆಯಾಗಿ, ಆಕೆಯ ಮನೆಗೆ ಬರಬೇಕೆಂಬ ಅಪೇಕ್ಷೆಯಂತೆ ಬೇಡಿಕೊಂಡಿದ್ದನ್ನು ಮನ್ನಿಸಿ, ಬಿಲ್ಲ ಹಬ್ಬ ಮುಗಿದು ಮತ್ತೆ ಒಮ್ಮೆ ನಿನ್ನ ಮನೆಗೆ ಖಂಡಿತ ಬರುವೆನೆಂಬ ವಚನವಿತ್ತಿದ್ದ. ಭಕ್ತರಾಧೀನನಲ್ಲವೇ ಭಗವಂತ?
ಮುಂದುವರಿಯುವುದು…





















