28 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 71

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೭೧ ಮಹಾಭಾರತ

ಘೋರ ಕನಸಿನಂತೆ ಕಣ್ಣ ಮುಂಭಾಗದಲ್ಲಿ ನಡೆದು ಹೋದ ಅತಿಮಾನುಷ ಶಕ್ತಿಯ ಲೀಲೆಯನ್ನು ಕಂಡು ದಂಗಾದ ಕಂಸಾಖ್ಯ. ಕೈ ಕೊಡವಿ ಖಡ್ಗವನ್ನೇ ಬಿಸುಟ. ಮಸ್ತಕವೇ ಬರಿದಾಗಿ, ಯೋಚನೆ ಮಾಡಲೂ ದಾರಿ ಯಾವುದೆಂದು ತಿಳಿಯದಾಗಿ ವಿಗ್ರಹದಂತೆ ನಿಂತು ಬಿಟ್ಟ. ಕ್ಷಣ ಕಳೆದು ವಾಸ್ತವವರಿತು ತನ್ನ ಸುತ್ತ ಕಣ್ಣಾಡಿಸಿದ. ತನ್ನ ತಂಗಿ – ಭಾವನ ಬಳಿ ನಿಂತಿದ್ದಾಳೆ. ಅರೆ! ಇವರು ಸಂಬಂಧಿಗಳೆಂಬ ಭಾವ ಮನದಲ್ಲಿ ಮೂಡಿತೇ ಕಂಸನಿಗೆ? ಕಣ್ಣಾರೆ ನೋಡಿ ದಿಟ್ಟಿಸಿ ಅಲ್ಲಿಂದ ಹೊರಟು ಅರಮನೆ ಸೇರಿದನು. ಕೆಲಹೊತ್ತು ಕಳೆದು ಮರಳಿ ಮತ್ತೆ ಬಂದು ತಂಗಿಯಲ್ಲಿ ಅಣ್ಣನಾಗಿ ಮಾತನಾಡಿದ. “ದೇವಕಿ, ನಿನ್ನ ಮೇಲೆ ನನಗೆಷ್ಟು ಪ್ರೀತಿಯಿದೆ! ಗೊತ್ತಲ್ಲ ನಿನಗೆ? ನಿನ್ನ ಮಗನಿಂದಲೇ ನಿನ್ನಣ್ಣನ ಮರಣ ಎಂಬ ಒಂದು ಕಾರಣ ನಿನ್ನ ಆರು ಮಕ್ಕಳ ಮಾರಣ ಹೋಮಕ್ಕೆ ಹೂರಣವಾಯಿತು. ಕಡೆಗೂ ನನ್ನ ನಿಗ್ರಹ ಮಾಡಲೆಂದೇ ಬಂದ ಜಗದ ಸುಜನರ ಅನುಗ್ರಹ ಪಾಣಿ ಉಳಿದೇ ಬಿಟ್ಟನಲ್ಲ. ಅನರ್ಥಕಾರಿಯಾದ ನನ್ನ ವ್ಯವಹಾರ ವ್ಯರ್ಥವಾಗಿ ಶಿಶುಹತ್ಯಾ ದೋಷಕಾರಕವಾಯಿತಲ್ಲಾ!. ಏನು ಮಾಡಲಿ ನಾನೀಗ…? ಆಗಲಿ ಏನು ಆಗಬೇಕಾಗಿತ್ತೋ ಆಗಿ ಹೋಯಿತು. ಇನ್ನು ಆಗಬೇಕಾದದ್ದನ್ನು ಮಾಡುತ್ತೇನೆ. ವೈರಿ ಯಾರೆಂದು ತಿಳಿದಿದೆ. ನಿಮ್ಮಲ್ಲಿ ವೈರವಿಲ್ಲ. ನೀವಿನ್ನು ಸುಖವಾಗಿ ಬಾಳಿ” ಎಂದು ಹೇಳಿ ವಸುದೇವ ದೇವಕಿಯರನ್ನು ಬಂಧ ಮುಕ್ತಗೊಳಿಸಿ ಕಳುಹಿಸಿದ.

ವಸುದೇವ ದೇವಕಿಯರು ಬಂಧನ ಮುಕ್ತರಾದ ವಿಚಾರ ನಂದ ಗೋಕುಲಕ್ಕೂ ತಲುಪಿತು. ನಂದಗೋಪ ರಾಜಕಾರ್ಯ ನಿಮಿತ್ತ ಮಥುರೇಂದ್ರನ ಕಾಣುವ ನೆಪದಲ್ಲಿ ಮಥುರೆಗೆ ಬಂದ. ಅರಸನನ್ನು ಕಂಡು ನೆವನದ ಕಾರ್ಯ ಮುಗಿಸಿ, ನೈಜ ಉದ್ದೇಶ ವಿಷಯವಾಗಿದ್ದ ಕಾರ್ಯದಂತೆ ವಸುದೇವ ದೇವಕಿಯರನ್ನು ಸಂಧಿಸಿ ಕುಶಲೋಪರಿ ವಿಚಾರಿಸಿ ಮರಳಿ ಹೋದನು.

ಕೆಲ ದಿನಗಳು ಕಳೆಯುತ್ತಿರಲು ಒಂದು ದಿನ ಗಾರ್ಗ್ಯ ಮಹರ್ಷಿಗಳು ನಂದಗೋಕುಲದತ್ತ ಬಂದಿರುವ ಸುದ್ದಿ ತಿಳಿದ ನಂದಗೋಪ. ಮಹಾ ಮಹಿಮಾನ್ವಿತರೂ, ಜ್ಞಾನಿಗಳೂ ಆದ ಮಹರ್ಷಿಗಳನ್ನು ಕಂಡು ನಂದಗೋಕುಲಕ್ಕೆ ನಿಮಂತ್ರಿಸಿ ಸತ್ಕರಿಸಿ, ಉಪಚರಿಸುತ್ತಾನೆ.

ಹೀಗೆ ಆದರಾತಿಥ್ಯಗಳನ್ನು ಪೂರೈಸಿದ ಮಹರ್ಷಿಗಳನ್ನು ಮನೆಯಲ್ಲಿ ಪಾಲಿಸಲ್ಪಡುತ್ತಿದ್ದ ತನ್ನ ಇಬ್ಬರು ಮಕ್ಕಳ ಜಾತ ಕರ್ಮಾದಿ ವಿಧಿ ಪೂರೈಸಲು ವಿನಮ್ರನಾಗಿ ನಿವೇದಿಸಿಕೊಳ್ಳುತ್ತಾನೆ. ಹಾಗೆಯೇ ಮಕ್ಕಳನ್ನು ಕಂಡು ವಿಶೇಷ ಲಕ್ಷಣ ಮಹಿಮಾ ಗುಣಗಳನ್ನೂ, ಲೋಕ ನಿಯಾಮಕನ ಲೀಲೆಯನ್ನೂ ದಿವ್ಯಜ್ಞಾನದಿಂದ ತಿಳಿದು ಮಕ್ಕಳಿಗೆ ನಮಿಸಿ ಪ್ರಣಾಮಗಳನ್ನು ಸಲ್ಲಿಸುತ್ತಾರೆ ಮುನಿವರ್ಯ. ಹಿರಿಯ ಮಗು ಹೊಂಬಣ್ಣದಿಂದ ಕಂಗೊಳಿಸುತ್ತಿದ್ದನು. ಅತಿಬಲಯುತನಾಗುವ ಸರ್ವ ಲಕ್ಷಣಗಳನ್ನು ಗುರುತಿಸಿ ಬಲಭದ್ರ ಎಂಬ ಹೆಸರನ್ನು ಇಟ್ಟರು. ಬಲಭದ್ರನು ಬಲರಾಮನೆಂದೂ ಕರೆಯಲ್ಪಟ್ಟನು. ಮೇಘವರ್ಣದಿಂದ ಲೋಕ ಪರಿಪಾಲಕ ಸಿರಿ ಲಕುಮಿಯರಸ ಹರಿಗೆ ಶ್ರೀ ಕೃಷ್ಣ ಎಂದು ನಾಮಕರಣ ಮಾಡಿದರು. ಪುತ್ರೋತ್ಸವ ಸಂಭ್ರಮದಿಂದ ಆಚರಿಸಿದ ಯಶೋದ – ನಂದಗೋಪರ ಸಂಭ್ರಮಿಸಿದರು. ಮಕ್ಕಳು ಯಶೋದಾಕಂದ, ಗೋಪನಂದನ ಎಂದು ಪ್ರಸಿದ್ದರಾದರು. ಕೆಲ ದಿನ ಗಾರ್ಗ್ಯ ಮುನಿವರ ನಂದಗೋಕುಲದಲ್ಲೇ ಇದ್ದು ದೇವರೇ ಮಕ್ಕಳಾಗಿ ಬಂದಿರುವಾಗ ಅವರ ಸೇವೆ ಪೂಜೆ ಮಾಡುತ್ತಾ, ತಾನು ಸತ್ಕೃತನಾಗುತ್ತಾ ಕಾಲ ಕಳೆದರು. ಬಳಿಕ ತನ್ನ ಕಾರ್ಯ ನಿಮಿತ್ತ ಹೊರಟರು.

ಕೃಷ್ಣ ಬಲರಾಮರು ಬೆಳೆಯುತ್ತಿದ್ದಂತೆ ನಂದಗೋಕುಲದಲ್ಲೇನೋ ವಿಶೇಷ ಸಂಚಲನ. ಜನರಿಗೆ ಅದೇನೋ ಹುಮ್ಮಸ್ಸು – ಸಂಭ್ರಮ. ಅಲಂಕಾರ – ವೈಭವ. ಗೋ ಸಂಪತ್ತೂ ಸಮೃದ್ಧವಾಯಿತು. ಸಕಾಲದಲ್ಲಿ ಮಳೆ ಬೆಳೆ, ಹುಲುಸಾದ ಹುಲ್ಲು, ಗೋವುಗಳಿಗೆ ಮೇವು. ಪರಿಣಾಮ ಸುಪುಷ್ಟವಾದ ಗೋ ಸಂಪತ್ತಿನಿಂದ ನಿಜಾರ್ಥದಲ್ಲೂ ಗೋಕುಲವೇ ಆಯಿತು. ಗೊಡ್ಡು ದನಗಳೂ ಕರು ಹಾಕಿದವು. ಹಾಲು, ಬೆಣ್ಣೆ, ಮೊಸರು, ತುಪ್ಪ ಉಕ್ಕೇರಿತು. ಯಶೋದೆಯಂತೂ ಇಬ್ಬರು ಮುದ್ದು ಮಕ್ಕಳ ಮಹಾ ಮಾತೆಯಾದಳು. ಕೃಷ್ಣ ಬಲರಾಮರ ಸೊಬಗಿನ ಸೆಳೆತದ ಬಂಧಿಯಾದಳು. ಮಲಗಿದರೆ ಒಮ್ಮೆ ಯಾವಾಗ ಏಳುತ್ತಾರೆ ಎಂದು ಕಾಯುವ ಗೋಪಿಕೆಯರು. ಹೀಗೆ ನಂದ ಗೋಕುಲ ಸ್ವರ್ಗದ ಅಮರಾವತಿಯಂತೆ ಕಂಗೊಳಿಸತೊಡಗಿತು.

ಇತ್ತ ಮಥುರಾ ಪಟ್ಟಣದಲ್ಲಿ ಕಂಸನಿಗೆ ಮಹಾಮಾಯೆ ಚಂಡಿಕೆಯಂತೆ ಕಾಣಿಸಿ ಉಲಿದ ವಚನ ಕಿವಿಯೊಳಗೆ ಪ್ರತಿಧ್ವನಿಸತೊಡಗಿತ್ತು. ತನ್ನ ಶತ್ರುವನ್ನು ಹೇಗಾದರು ಹುಡುಕಿ ತಾನೇ ಕೊಲ್ಲಬೇಕು ಇಲ್ಲಾ ಕೊಲ್ಲಿಸಬೇಕೆಂದು ಯೋಚಿಸಿ ಯೋಜನೆ ರೂಪಿಸುತ್ತಿದ್ದ. ರಾಕ್ಷಸರೂ ಆಪ್ತರಾದ ಕಾರಣ ಈತನ ವ್ಯಥೆಗೆ ಕಾರಣನಾದವನ ಹುಡುಕಲು ತೊಡಗಿದ್ದರು.

ಪೂತನಿಯೆಂಬವಳು ಮಾಯಾವಿ. ವಿಷ ಸ್ತನ್ಯ ಹೊಂದಿದ್ದಳು. ಆಕೆ ಮಾಯಾ ಮೋಡಿಯಿಂದ ಮಥುರೆ, ಸುತ್ತ ಮುತ್ತಲ ಹಳ್ಳಿ ಪಟ್ಟಣಗಳನ್ನೆಲ್ಲಾ ಸುತ್ತುತ್ತಾ ತನ್ನ ಮೊಲೆಯುಣಿಸಿ ಎಳೆ ಶಿಶುಗಳನ್ನು ಕೊಲ್ಲುತ್ತಾ ಸಾಗುತ್ತಿದ್ದಳು. ಜನರೆಲ್ಲಾ ಮಕ್ಕಳಿಗೇನೋ ಪಿಡುಗು ಬಂದಿದೆಯೆಂದು ಮಂತ್ರ ತಂತ್ರದ ಮೊರೆ ಹೋದರೂ ಅದು ನಿಶ್ಫಲವಾಯಿತು.

ಮುಂದುವರಿದು ನಂದಗೋಕುಲಕ್ಕೂ ಬಂದ ಪೂತನಿ ಅಲ್ಲೂ ಮಕ್ಕಳನ್ನು ಹಾಲಹಲ (ವಿಷ)ವುಣಿಸಿ ಹತ್ಯೆಗೈಯುತ್ತಾ ನಂದಗೋಪನ ಮನೆಗೂ ಬಂದು ಮುಟ್ಟಿದಳು. ತೊಟ್ಟಿಲಲ್ಲಿ ಮಲಗಿದ್ದ ಕೃಷ್ಣನನ್ನು ಕಂಡು ಅಮಿತ ಸೌಂದರ್ಯಕ್ಕೆ ಮಾರು ಹೋದಳು ಮಾರಿ. ಮನುಷ್ಯರಿಗೆ ಇಂತಹ ದೇವರೂಪಿನ ಮಗುವೇ ಎಂದು ಸೋಜಿಗಪಟ್ಟಳು. ಕೃಷ್ಣನೂ ಮುಗಳು ನಗೆಯನ್ನು ತುಟಿಯಂಚಿನಲ್ಲಿ ಬೀರುತ್ತಿದ್ದಂತೆ ಎತ್ತಿ ಮಡಿಲೇರಿಸಿದಳು ಪೂತನಿ. ಎದೆಯುಡುಪು ತೆರೆದು ಹಾಲುಣಿಸತೊಡಗಿದರೆ ಮುದ್ದು ಕೃಷ್ಣ ಹೀರಿದ ಹಾಲನ್ನು ಕಡೆವಾಯಿಯಲ್ಲಿ ಕೆಳ ಹರಿಸುತ್ತಾ ಹೀರ ತೊಡಗಿದ. ಮುದ್ದು ಕಂದನ ಮೃದು ತುಟಿಯ ಕೋಮಲ ಚೀಪಾಟಿಕೆಯಲ್ಲಿ ಸ್ತನ್ಯಪಾನ ಆರಂಭದಲ್ಲಿ ಮುದ ನೀಡಿ ಉನ್ಮಾದವಾದರೆ, ಅರೆಕ್ಷಣದಲ್ಲೇ ಉದ್ವಿಗ್ನವಾಗಿ ಅಸಹನೀಯ ನೋವು ನೀಡುತ್ತಾ ರಕ್ತ ಹೀರುವಂತಾಯಿತು. ಮಗುವಿನ ಬಾಯಿಯಲ್ಲಿ ರಕ್ತ ಜರಿಯಂತೆ ಹರಿದಿಳಿದು ಮೊದಲಿಳಿದಿದ್ದ ಬಿಳಿ ಹಾಲಿಗೆ ಈಗಿನ ಕೆಂಪು ರಕ್ತ ಮಿಶ್ರವಾಗಿ ನೆಲವನ್ನು ತೋಯಿಸುತ್ತಿದೆ. ಕಿರುಚಿದಳು ನೋವಲ್ಲಿ. ನಿಜ ಘೋರ ರೂಪ ತಳೆದಳು ರಾಕ್ಷಸಿ. ಅಬ್ಬರಿಸಿ ಬೊಬ್ಬಿರಿದಳು. ಎರಡೂ ಕೈಗಳಿಂದ ಕೂಡಿದಷ್ಟು ತಳ್ಳಿದಳು… ಕತ್ತನ್ನೊತ್ತಿ ಉಸುರುಗಟ್ಟಿಸಲು ನೋಡಿದಳು. ಗುದ್ದಿದಳು, ಒತ್ತಿದಳು, ನೂಕಿದಳು, ದೂಡಿದಳು, ಒದ್ದಾಡಿದಳು, ಭೀಕರವಾಗಿ ಘರ್ಜಿಸಿದಳು… ಬಿಸಿಯುಸಿರು ಹೊಗೆಯಂತೆ ಕಾರತೊಡಗಿದಳು… ಅಸುರಾರಿಯ ಮುಂದೆ ನಡೆದೀತೆ ಬಲಪ್ರದರ್ಶನ! ಕಣ್ಗತ್ತಲೆ, ತಲೆಸುತ್ತು, ಬಲಹೀನ ದೇಹ, ಕೈ – ಕಾಲು… ಹಿಂಡಿ ಹಿಪ್ಪೆಯಾಗಿ ಯುಗ್ಮ ರಸ ಹೀನ ಮಾಂಸ ಎಲುಬಿನ ಹಂದರವಾಗಿ ಬಿದ್ದಳು ಪೂತನಿ. ಬಾಲಲೀಲೆ ತೋರುತ್ತಾ ಇನ್ನೂ ಅಳಿದುಳಿದ ಪಸೆ ಹೀರುತ್ತಲೇ ಇದ್ದಾನೆ ಮುದ್ದು ಕೃಷ್ಣ. ಕೃಶವಾಗಿ ಶವವಾಗಿ ಬಿಟ್ಟಿದ್ದಾಳೆ ದೈತ್ಯೆ ಪೂತನಿ.

ರಕ್ಕಸಿಯ ರೌರವ ರೋದನೆ ನಂದಗೋಕುಲದಲ್ಲಿ ಪ್ರತಿಧ್ವನಿಸಿದಾಗ ಓಡೋಡಿ ಬಂದು ಜನಸಾಗರವೇ ಸಮಾಹಿತಗೊಂಡು ನೋಡುತ್ತಿದ್ದಾರೆ. ಯಶೋದೆ ತನ್ನ ಕಂದನನ್ನು ನೋಡುತ್ತ ಹೆದರಿ ರಕ್ತ ಸ್ನಾನಗೈದ ಮಗುವನ್ನು ನಡುಗುವ ಕೈಗಳಿಂದ ಹಿಡಿದೆತ್ತಿದಳು. ನಂದಗೋಪನು ಇದೇನು ವೈಚಿತ್ರ್ಯ ಎಂಬಂತೆ ವಿಸ್ಮಯಗೊಂಡಿದ್ದಾನೆ. ಪೂತನಿ ಹಿಂಡಿ ಹಿಪ್ಪೆಯಾಗಿ ಹತಪ್ರಾಣಳಾಗಿ ಬಿದ್ದಿದ್ದಾಳೆ. ಯಶೋದೆ ಜಳಕೋದಕ (ಸ್ನಾನಯೋಗ್ಯ ಬಿಸಿ ನೀರು) ಸಿದ್ಧಪಡಿಸಲು ಹೇಳಿ, ಕೃಷ್ಣನಿಗೆ ಅಭಿಷೇಚನ ಮಾಡಿಸುತ್ತಿದ್ದಾಳೆ…

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page