ಭಾಗ – 603
ಭರತೇಶ ಶೆಟ್ಟಿ,ಎಕ್ಕಾರು

ವಿಷಯೆ ನಿಂತು ನೋಡುತ್ತಾ ಇದ್ದಾಳೆ. ನೋಡುತ್ತಿರುವಂತೆಯೇ ಮಲಗಿದ್ದ ಚಂದ್ರಹಾಸ ಹೊರಳಿದ. ಈ ಚಲನೆಯನ್ನು ಕಂಡ ಕೂಡಲೆ ಇನ್ನೇನು ಎಚ್ಚೆತ್ತು ನನ್ನನ್ನು ನೋಡಿದರೆ! ಎಂದು ಭಯಗೊಂಡ ವಿಷಯೆ ಅಲ್ಲಿಂದಲೇ ನೇರವಾಗಿ ಮನೆಯೊಳಗಿನ ತನ್ನ ಕೋಣೆ ಸೇರಿದಳು. ಕಣ್ತುಂಬಿಸಿಕೊಂಡು ಬಂದಿದ್ದ ಚಂದ್ರಹಾಸನ ರೂಪ ಲಾವಣ್ಯದ ಜೊತೆ ಕಲ್ಪನೆಯ ಬೆನ್ನೇರಿ ಸರಸ ಸಲ್ಲಾಪದಲ್ಲಿ ಮೈ ಮರೆತು ಕುಳಿತಿದ್ದಾಳೆ.
ಗಾಢ ನಿದ್ರೆಯಿಂದ ಎಚ್ಚರವಾಗಿ ಮಲಗಿದ್ದಲ್ಲೇ ಕಣ್ತೆರೆದ ಚಂದ್ರಹಾಸನಿಗೆ ಒಮ್ಮೆಗೆ ತಾನು ಎಲ್ಲಿದ್ದೇನೆ ಎಂದೇ ಅರಿಯದಾಯಿತು. ತಟ್ಟನೆ ಎದ್ದು ಕುಳಿತು ಅತ್ತಿತ್ತ ನೋಡಿದರೆ ಪಕ್ಕದಲ್ಲಿ ತನ್ನ ಕುದುರೆಯಿದೆ, ಅದೇ ಸಮಯದಲ್ಲಿ ಸೊಂಟದಲ್ಲಿದ್ದ ಓಲೆಯೂ ಕೈಗೆ ತಾಗಿತು. ಎಲ್ಲವೂ ನೆನಪಾಗಿ “ಅಯ್ಯೋ ಕೆಲಸ ಕೆಟ್ಟಿತಲ್ಲ! ಶ್ರೀಹರಿಯೇ… ಯಾಕೆ ಹೀಗಾಯಿತು. ಅವಸರದ ತುರ್ತು ಸಂದೇಶವೆಂದು ನನ್ನ ಮೇಲೆ ವಿಶ್ವಾಸವಿರಿಸಿ ನಮ್ಮ ಮಂತ್ರಿಗಳು ಕಳುಹಿಸಿದರೆ, ನಾನು ಹೀಗೆ ಮಲಗಬಹುದಿತ್ತೇ. ಭಗವಂತಾ… ಏನೂ ತೊಂದರೆಯಾಗದಂತೆ ಸರ್ವರಕ್ಷಕನಾದ ನೀನೇ ಕಾಪಾಡಬೇಕು” ಎಂದು ವಂದಿಸಿ ಸ್ತುತಿಸುತ್ತಾ ಎದ್ದು ಕುದುರೆಯೇರಿ ಮಂತ್ರಿಗಳ ಮನೆಯ ಮುಂಭಾಗಕ್ಕೆ ವೇಗವಾಗಿ ಬಂದು ಸೇರಿದನು. ಮಂತ್ರಿಸೌಧದ ಎದುರಲ್ಲೇ ಮಂತ್ರಿಕುಮಾರ ಮದನನೇ ಕಾಣ ಸಿಕ್ಕನು. ಔಪಚಾರಿಕ ಮಾತು, ಪರಿಚಯ ಆದ ಬಳಿಕ, ಈತನೇ ಮದನಕುಮಾರ ಹೌದೆಂಬುದನ್ನು ಪರ್ಯಾಯ ವಿಧಾನದಿಂದ ಖಚಿತ ಪಡಿಸಿಕೊಂಡನು. ನಂತರ ರಾಜಕೀಯ ಮಾತುಕತೆಯಿದೆಯೆಂದು ತಿಳಿಸಿ, ಮಂತ್ರಿಗಳು ಕಳುಹಿಸಿರುವ ಓಲೆಯ ವಿಚಾರ ತಿಳಿಸಿ, ಓಲೆಯನ್ನು ಮದನನ ಕೈಗಿತ್ತನು. “ಮಂತ್ರಿ ಕುಮಾರರೇ! ಕುಂತಳ ದೇಶದ ಮಂತ್ರಿಗಳಾಗಿರುವ ನಿಮ್ಮ ಪಿತಾಶ್ರೀಯವರು ಈ ಓಲೆಯನ್ನು ನನ್ನ ಮೂಲಕ ಕಳುಹಿಸಿದ್ದಾರೆ. ಏನೋ ಬಹುಮುಖ್ಯ ಮತ್ತು ಅವಸರದ ಕೆಲಸವಿದೆಯಂತೆ. ನೀವು ಒಬ್ಬರೇ ಗುಪ್ತವಾಗಿ ಈ ಓಲೆಯನ್ನು ಓದಿ ಅದರಂತೆ ನಡೆದುಕೊಳ್ಳಲು ತಿಳಿಸಿದ್ದಾರೆ” ಎಂದನು.
ಮದನ ಕುಮಾರ ಓಲೆಯನ್ನು ಪಡೆದು ಒಳಕೋಣೆಗೆ ಹೋಗಿ ಓಲೆಯನ್ನು ನಿಧಾನವಾಗಿ ಓದಿ ನೋಡಿದನು. ಎಲ್ಲಾ ಓದಿ ಮುಗಿಸಿ ಸಂತೋಷದ ನಗು ಬೀರಿದನು. “ಇಂದಿನ ದಿನದವರೆಗೆ ನನ್ನ ಜೀವನದಲ್ಲಿ ಯಾವುದೇ ಮಹತ್ವದ ಕೆಲಸ ನಿಭಾಯಿಸುವ ಅವಕಾಶವನ್ನೇ ನೀಡಿದವರಲ್ಲ ನನ್ನ ತಂದೆ. ನನ್ನ ಗ್ರಹಗತಿಗಳಲ್ಲಿ ಏನೋ ಬದಲಾವಣೆ ಆಗಿರಬೇಕು. ಇಲ್ಲದೆ ಹೋಗಿದ್ದರೆ ಕುಂತಳದೇಶದ ಆಡಳಿತ ಹೊಣೆಗಾರಿಕೆಯನ್ನು ಕೆಲವು ದಿನದ ಮಟ್ಟಿಗೂ ನೀಡುತ್ತಿರಲಿಲ್ಲ. ಈಗ ನನ್ನ ಮುದ್ದಿನ ತಂಗಿ ವಿಷಯೆಗೆ ಮದುವೆ ಮಾಡಿಸುವ ಜವಾಬ್ದಾರಿಯನ್ನೂ ನನಗೇ ವಹಿಸಿ ಕೊಟ್ಟಿದ್ದಾರೆ. ಇಲ್ಲಿಂದ ಹೋಗುವಾಗಲೂ ಹೇಳಿ ಹೋಗಿದ್ದರು ನಿನ್ನ ತಂಗಿಯ ಮದುವೆ ಕಾರ್ಯಕ್ರಮವಿದೆ. ನಾನು ದೇಶ ಸಂಚಾರಕ್ಕೆ ಹೊರಟಿದ್ದೇನೆ. ನೀನೇ ಮುಂದೆ ನಿಂತು ಶಾಸ್ತ್ರ ಬದ್ದವಾಗಿ ಮಾಡಿ ಪೂರೈಸು ಎಂದಿದ್ದರು. ಆಗ ನಾನು ಉದ್ಯಾನವನದ ಮಲ್ಲಿಗೆ ಮಾವಿನ ಮರದ ವಿವಾಹ ಶಾಸ್ತ್ರದ ಬಗ್ಗೆಯೇ ಹೇಳಿದ್ದಾರೆ ಅಂದು ಕೊಂಡಿದ್ದೆ. ಏನೇ ಇರಲಿ ಅಣ್ಣನಾಗಿ ನನಗೆ ಇದಕ್ಕಿಂತ ಮಿಗಿಲಾದ ಮಹಾಯೋಗ ಮತ್ತೊಂದು ಬರಲಿಕ್ಕಿದೆಯೇ? ತಡ ಮಾಡುವುದಿಲ್ಲ. ಓಲೆಯಲ್ಲಿ ತಿಳಿಸಿದಂತೆ ನನ್ನ ಭಾವ, ಭಾವಿ ಮಹಾರಾಜ ಚಂದ್ರಹಾಸನನ್ನು ಆದರದಿಂದ ಸತ್ಕರಿಸಿ ಗೌರವಿಸಬೇಕು. ಹಾಗೆಯೇ ಈ ಕಲ್ಯಾಣದ ವ್ಯವಸ್ಥೆಯ ಸಿದ್ಧತೆಯಾಗಬೇಕು.” ಎಂದು ತರಾತುರಿಯಲ್ಲಿ ಕೋಣೆಯಿಂದ ಹೊರಬಂದು ಚಂದ್ರಹಾಸನ ಮುಂದೆ ನಿಂತು ಕೈ ಮುಗಿದನು. ಉಚಿತಾಸನವನ್ನಿತ್ತು ಸತ್ಕರಿಸಿದನು. ಬಳಿಕ ಕುಶಲೋಪಚರಿ ವಿಚಾರಿಸುತ್ತಾ ಮಾತು ಮುಂದುವರಿಸಿ ಓಲೆಯ ವಿಚಾರ ಪ್ರಸ್ತಾಪ ಮಾಡಿದನು. “ಯುವರಾಜರೇ, ನಾನು ಓಲೆಯನ್ನು ಓದಿ ನೋಡಿದೆ. ಮಂತ್ರಿಗಳು ನನ್ನ ತಂಗಿಯ ಮದುವೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಓಲೆ ತಂದಿರುವ ಚಂದನಾವತಿಯ ಯುವರಾಜರಾದ ನಿಮಗೆ ನನ್ನ ತಂಗಿ ವಿಷಯೆಯನ್ನಿತ್ತು ವಿವಾಹ ಶಾಸ್ತ್ರ ಮುಗಿಸಬೇಕೆಂದು ನನಗೆ ಆದೇಶ ಮಾಡಿದ್ದಾರೆ. ಅತಿ ಶೀಘ್ರವಾಗಿ ಸೂಕ್ತ ಮುಹೂರ್ತವನ್ನು ಗೊತ್ತು ಪಡಿಸಿ ಸಿದ್ದತೆಗಳನ್ನು ಮಾಡಬೇಕಾಗಿದೆ. ಅದಕ್ಕೂ ಮೊದಲು ನಿಮಗೆ ವಿಷಯ ತಿಳಿಸಬೇಕಾದುದು ನನ್ನ ಧರ್ಮ. ನಿಮ್ಮ ಅಭಿಪ್ರಾಯ ಏನೆಂದು ತಿಳಿಯಬಯಸಿದ್ದೇನೆ” ಎಂದನು.
ಚಂದ್ರಹಾಸನಿಗೆ ವಿಚಿತ್ರವಾಯಿತು. ವಿಚಾರ ತಿಳಿದು ಯೋಚನೆಯಲ್ಲಿ ಮುಳುಗಿದ. ಬಹುಮುಖ್ಯ ರಾಜಕೀಯ ವಿಚಾರ, ತಡವಾದರೆ ಕೆಲಸ ಕೆಡುತ್ತದೆ. ನಾನೀಗಲೆ ಹೊರಡಬೇಕೆಂದು ಮಂತ್ರಿಗಳು ಆತುರ ಪಡುತ್ತಿದ್ದರು. ಅವರೇ ಬರುವವರಾದರೆ ಓಲೆಯ ಸಂದೇಶದಂತೆ ಮದುವೆಯ ಪ್ರಸ್ತಾಪ ಹೇಗೆ ಸಾಧ್ಯವಾಗುತ್ತಿತ್ತು? ಅವರ ಬದಲಿಗೆ ಪ್ರತಿನಿಧಿಯಾಗಿ ಓಲೆ ತಂದೊಪ್ಪಿಸಲು ಬಂದ ನನ್ನ ಜೊತೆ ವಿವಾಹವೇ! ನನಗೊಂದೂ ಅರ್ಥವಾಗುತ್ತಿಲ್ಲ. ಒಂದಕ್ಕೊಂದು ಸಂಬಂಧವೇ ಇಲ್ಲದೆ ತೀರಾ ವಿಭಿನ್ನವಾಗಿದೆ. ಇದು ಸಾಂಸಾರಿಕ ವಿಚಾರ, ಮಂತ್ರಿಗಳು ಬಹುಮುಖ್ಯ ರಾಜಕಾರ್ಯ ಎಂದು ಹೇಳಿದ್ದರು. ಹೇ ಭಗವಂತಾ! ಶ್ರೀಹರಿ ಏನಿದು ನಿನ್ನ ಲೀಲೆ? ನಾನು ಆಯಿತು ಎಂದು ಮದುವೆಗೆ ಒಪ್ಪಬೇಕೋ? ಬೇಡ ಎಂದು ನಿರಾಕರಿಸಬೇಕೋ! ನನಗೊಂದೂ ಅರ್ಥವಾಗುತ್ತಿಲ್ಲ. ನೀನೇ ನನಗೆ ದಾರಿ ತೋರಿಸು ದೇವಾ.. ಎಂದು ಮನಸಾ ಸ್ಮರಿಸಿ ನಿಂತಿದ್ದಾನೆ.
ಮುಂದುವರಿಯುವುದು..

























































