ಭಾಗ 601
ಭರತೇಶ ಶೆಟ್ಟಿ ,ಎಕ್ಕಾರು

ಒಂದೆಡೆ ವ್ರತಾಚರಣೆಯ ರಾತ್ರಿ ಜಾಗರಣೆ ಮಾಡಿದ ನಿದ್ದೆ, ಬೆಳಿಗ್ಗೆ ದ್ವಾದಶಿ ಭೋಜನದ ಬಳಿಕ ಈ ವರೆಗೆ ಆಹಾರ ಸೇವಿಸದೆ ಪ್ರಯಾಣಿಸಿದ ದಣಿವು, ಮರದಡಿ ತಂಪಾದ ನೆರಳು, ಕೆರೆಯ ದಡದಲ್ಲಿ ಹಾದು ಬರುವ ತಂಪುಗಾಳಿ, ಪ್ರಶಾಂತ ವಾತಾವರಣದಲ್ಲಿ ಉದ್ಯಾನವನದ ಸುಮ ಸೌರಭ ಮಿಳಿತಾಗಿ ಉದ್ಯಾನವನದಿಂದ ಬೀಸಿ ಬರುತ್ತಿರುವ ಮಂದ ಮಾರುತ ಎಲ್ಲ ಸೇರಿ ಚಂದ್ರಹಾಸನಿಗೆ ನಿದ್ದೆ ಬರುವುದಕ್ಕೆ ಪೂರಕವಾಗಿಯೇ ಇತ್ತು. ಸರ್ವಾನುಕೂಲ ಪರಿಸ್ಥಿತಿಯಲ್ಲಿ ಭೂಮಿಗೊರಗಿದ ಚಂದ್ರಹಾಸನನ್ನು ಬಿಗಿದಪ್ಪಿದ ನಿದ್ರಾದೇವಿಯ ಅಪ್ಪುಗೆಯ ಸುಖದಲ್ಲಿ ಮಹತ್ವದ ಜವಾಬ್ದಾರಿಯನ್ನೂ ಮರೆತು ಹಿತವಾಗಿ ವಿಶ್ರಾಂತನಾಗಿದ್ದಾನೆ. ಗಾಢವಾದ ನಿದ್ರೆಯಲ್ಲಿ ಯಾವ ಪರಿವೆಯೂ ಇಲ್ಲದೆ ಕೈಕಾಲುಗಳನ್ನು ನೀಳವಾಗಿ ಚಾಚಿ, ಗಗನ ಮುಖಿಯಾಗಿ ಮಲಗಿದ್ದಾನೆ. ಅರಮನೆಯ ಮೆತ್ತನೆಯ ಹಾಸುಗೆಯಲ್ಲೂ ಚಂದ್ರಹಾಸನಿಗೆ ಇಂತಹ ನಿದ್ದೆ ಬಂದಿರಲಿಕ್ಕಿಲ್ಲ. ತನ್ನ ಒಡೆಯ ಸುಖ ನಿದ್ರೆಯಲ್ಲಿರುವುದನ್ನು ಕಂಡ ಕುದುರೆಯೂ ಆತನನ್ನೇ ಅನುಕರಿಸಿ ಕೈಕಾಲುಗಳನ್ನು ತಾನೂ ಮಲಗಿ ಕಾಲುಗಳನ್ನು ಚಾಚಿ ನಿದ್ರಿಸಿದೆ. ದೇವರ ಇಚ್ಚೆ ಬಲ್ಲವರಾರು! ಇಲ್ಲದಿದ್ದರೆ ಚಂದ್ರಹಾಸನಂತಹ ಜವಾಬ್ದಾರಿಯುತ ಯುವರಾಜ ಉದ್ಯಾನವನದ ಮರದಡಿಯಲ್ಲಿ ಅವಸರದ, ಮಹತ್ವದ ಕಾರ್ಯ ವಹಿಸಿಕೊಂಡು ಬಂದು ಮಲಗುವುದಕ್ಕುಂಟೇ?
ಇದೇ ಸಮಯಕ್ಕೆ ಮಂತ್ರಿಯ ಮಗಳು ವಿಷಯೆ ಗೆ ಮನೆಯಲ್ಲಿ ಕುಳಿತು ಯಾಕೋ ಮನಸ್ಸು ಜಡವಾದಂತೆ ಭಾಸವಾಯಿತು. ಎದ್ದು ಹೊರಬಂದು ತಿರುಗಾಡುತ್ತಾ ಇದೇ ಉದ್ಯಾನವನದತ್ತ ಬಂದಳು. ತಿಳಿಗೊಳದ ಬದಿಯಲ್ಲಿ ಕುಳಿತು ಕಾಲುಗಳನ್ನು ನೀರಲ್ಲಿ ಇಳಿ ಬಿಟ್ಟು ಬೀಸುತ್ತಾ ಆಡತೊಡಗಿದಳು. ಕೆರೆಯಲ್ಲಿದ್ದ ಜೋಡಿ ಹಂಸಗಳು ಒಂದನ್ನೊಂದು ಮುದ್ದಿಸುತ್ತಾ ಮತ್ತೊಂದು ಮೂಲೆಗೆ ಸಾಗಿದವು. ತಮ್ಮ ಕೊಕ್ಕುಗಳಿಂದ ಒಂದಕ್ಕೊಂದು ಮುತ್ತಿಕ್ಕುವಂತೆ ಆಡುತ್ತಾ, ಹೆಣ್ಣು ಹಂಸ ಗಂಡು ಹಂಸದ ರೆಕ್ಕೆಯಡಿ ಮುಖ ತೂರುತ್ತಾ ಕಚಗುಳಿ ಹಾಕಿದಂತೆ, ತಪ್ಪಿಸಿ ಗಂಡು ಹಂಸ ತಾನೂ ತಿರುಗಿ ಹೆಣ್ಣು ಹಂಸದ ರೆಕ್ಕೆಯಡಿ ತನ್ನ ಕೊಕ್ಕು ತೂರಿ ಪ್ರತಿಯಾಗಿ ಕಚಗುಳಿಯಿಟ್ಟು ಸರಸದಾಟವಾಡುವಂತೆ ಮೋಹಕವಾಗಿ ಚೆಲ್ಲಾಟವಾಡುತ್ತಿವೆ. ನೋಡುತ್ತಾ ಮೈಮರೆತು ತಲ್ಲೀನಳಾದ ವಿಷಯೆಗೆ ತನಗೂ ಒಬ್ಬ ಗೆಳೆಯನಿದ್ದರೆ, ನನ್ನೊಡನೆ ಹೀಗೆಯೇ ಸರಸ ಸಲ್ಲಾಪ ನಿರತನಾಗಿರುತ್ತಿದ್ದರೆ ಎಷ್ಟು ಸೊಗಸಾಗಿರುತ್ತಿತ್ತು ಎಂಬ ವಯೋ ಸಹಜ ಕಾಮನೆ ಮನ ಮಾಡಿತು. ಹಂಸಗಳನ್ನು ನೋಡುತ್ತಾ “ಏನೋ! ನೀವಿಬ್ಬರು ಜೋಡಿಯಾಗಿ, ನಾನು ಒಂಟಿಯಾಗಿದ್ದೇನೆ ಎಂದು ನನ್ನನ್ನು ಅಣಕಿಸುತ್ತಿದ್ದೀರಾ?” ಎಂದು ಬೈದು ಕೆರೆಯ ದಡದಿಂದ ಎದ್ದು ಹೊರಟಳು. ಉದ್ಯಾನವನದಲ್ಲಿ ನಿಧಾನವಾಗಿ ಹೆಜ್ಜೆಯಿಡುತ್ತಾ ಬರುತ್ತಾ… ತಟ್ಟನೆ ನಿನ್ನೆ ಮದುವೆ ಮಾಡಿಸಿದ ಮಾವು – ಮಲ್ಲಿಗೆಯ ನೆನಪಾಗಿ ಅತ್ತ ಸಾಗಿದಳು. ಮಲ್ಲಿಗೆಯ ಬಳ್ಳಿಯನ್ನು ಮರಕ್ಕೆ ಹಬ್ಬುವಂತೆ ತಾಗಿಸಿ ಬಿಟ್ಟು ಶಾಸ್ತ್ರ ಮಾಡಲಾಗಿತ್ತು. ಇಂದು ನೋಡಿದರೆ, ಆಹಾ ಏನು ಅನ್ಯೋನ್ಯತೆ! ಮಲ್ಲಿಗೆಯ ಬಳ್ಳಿ ಅತಿ ಪ್ರೀತಿಯಿಂದ ತನ್ನ ಇನಿಯನನ್ನು ಬಿಗಿದಪ್ಪಿ ನಾಚಿ ನೀರಾಗಿ ಭುಜದ ಮೇಲೆ ಶಿರವಿಟ್ಟು ಮಲಗಿದಂತೆ ಮರದ ಗೆಲ್ಲಿನೆಡೆಯಲ್ಲಿ ವಿರಮಿಸಿದೆ. ವಿಷಯೆಗೆ ಆ ದೃಶ್ಯವನ್ನು ಕಂಡಾಗಲೂ ಏನೋ ಒಂದು ತರಹ ಬಾಧೆ ಮನ ಮಾಡಿತು. “ನಾನೇ ನೆಟ್ಟು ಸಲಹಿದ ಬಳ್ಳಿ ನೀನು. ನಿನ್ನೆ ನಾನೇ ಮುತುವರ್ಜಿವಹಿಸಿ ನಿನಗೆ ಆಸರೆಯಾಗಲೆಂದು ಮಾವಿನ ಮರದ ಜೊತೆ ವಿವಾಹ ಮಾಡಿದರೆ ಇಂದು ನನ್ನ ಪರಿಚಯವೇ ಇಲ್ಲವಾಗಿ ಹೋಯಿತೇನೇ ನಿನಗೆ?” ಆ ಬಳ್ಳಿಗೂ ಬೈಯ್ಯತೊಡಗಿದಳು. ಅಲ್ಲೂ ನಿಲ್ಲದೆ ನಡೆಯುತ್ತಾ ಮುಂದೆ ಬಂದು ನೋಡಿದರೆ ಅತಿ ಸುಂದರವೂ, ರಮಣೀಯವೂ ಆದ ಕುದುರೆಯೊಂದು ಏಕಾಂತವಾಗಿ ಮಲಗಿದೆ. “ಅರೆ! ಈ ಕುದುರೆ ಪಾಪ, ನನ್ನಂತೆಯೇ ಏಕಾಂಗಿಯಾಗಿ ಬೇಸರಿಸುತ್ತಿದೆ. ಒಂಟಿತನದ ಕಷ್ಟ ನನಗೆ ಚೆನ್ನಾಗಿ ಅನುಭವವಾಗುತ್ತಿದೆ. ಕೊನೆಗೂ ನನಗೊಬ್ಬ ಸಮಾನ ಮನಸ್ಕ ಸಿಕ್ಕಿದನಲ್ಲ ಎಂದು ಕುದುರೆಯ ಬಳಿ ಬಂದಳು. ಕೂಡಲೆ ಮನದಲ್ಲಿ ಸಂಶಯ ಮೂಡಿತು, ಈ ಕುದುರೆ ಉದ್ಯಾನವನದೊಳಗೆ ಹೇಗೆ ಬಂತು?” ಎಂದು ಯೋಚಿಸುತ್ತಾ. ಕುದುರೆಯನ್ನೇ ದಿಟ್ಟಿಸಿದಳು. ತಿರುಗಿ ನೋಡಿ ಒಮ್ಮೆಲೆ ಹೆದರಿ ಹೌಹಾರಿದಳು. ಯಾರೋ ಒಬ್ಬಾತ ಮರದ ನೆರಳಿನಲ್ಲಿ ಹಾಯಾಗಿ ಮಲಗಿದ್ದಾನೆ. ಭಯದಿಂದ ಒಂದೆರಡು ಹೆಜ್ಜೆ ಹಿಂದೆ ಸರಿದು ನಿಂತು ನೋಡಿದರೆ ಮಲಗಿದಾತ ಗಾಢ ನಿದ್ರೆಯಲ್ಲಿದ್ದಾನೆ. ಪೂರ್ಣಮೆಯ ಚಂದ್ರನೇ ಧರೆಗಿಳಿದು ಬಂದು ಈತನ ಮುಖದಲ್ಲಿ ಸ್ಥಿತನಾಗಿದ್ದಾನೋ ಎಂಬಷ್ಟು ಪ್ರಭೆ, ತಾರುಣ್ಯದ ಮೋಹಕ ಮೈಮಾಟ, ಅಜಾನುಬಾಹು, ವಿಶಾಲ ಎದೆ, ಬಲಯುತ ಕಾಲುಗಳು, ಕೋಮಲವಾಗಿ ಹೊಳೆಯುವ ಶ್ವೇತ ವರ್ಣದಿಂದ ಕಂಗೊಳಿಸುವ ಕೈ ಬೆರಳುಗಳು, ಗಿಣಿಯ ಕೊಕ್ಕಿನಂತಹ ಮೂಗು, ಮುಚ್ಚಿದ್ದರೂ ಮನಮೋಹಿಸುವ ಕಣ್ಣು, ರೆಪ್ಪೆಗಳು ಆಹಾ ಎಷ್ಟು ಮನೋಹರ! ಬ್ರಹ್ಮ ದೇವ ಜಗದ ಪುರುಷ ಜಾತಿಗಿರುವ ಸೊಬಗು ಸೌಂದರ್ಯಗಳನ್ನೆಲ್ಲಾ ಈತನಲ್ಲೇ ಪ್ರತಿಷ್ಟಾಪಿಸಿದ್ದಾನೋ ಎಂಬಂತೆ ಭಾಸವಾಗುತ್ತಿದೆ. ಇವನೇನಾದರು ದೇವಲೋಕದಿಂದ ಇಳಿದು ಬಂದ ದೇವನಿರಬಹುದೇ? ಯಾರೀತ? ಅಪರಿಚಿತನೇ ಹೌದು! ಯಾರಲ್ಲಿ ಕೇಳುವುದು? ಎಲ್ಲಿ ಉದ್ಯಾನ ಪಾಲಕರು…ಎಂದು ಕತ್ತೆತ್ತಿ ನೋಡಿದರೆ ದೂರದಲ್ಲಿದ್ದಾರೆ. ಕೂಗಿ ಕರೆಯೋಣವೆಂದು ಮನ ಮಾಡಿ,ಕೂಗಲು ಸ್ವರ ಗಂಟಲು ದಾಟುವ ಮೊದಲೇ ತಡೆದು ಹಿಡಿದಳು. ಕೂಗಿದರೆ ಎಲ್ಲಾದರು ಈತನಿಗೆ ಎಚ್ಚರವಾದರೆ! ಎದ್ದು ನಂತರ ಹೋದರೆ… ಬೇಡ ಸುಖ ನಿದ್ರೆಯಲ್ಲಿದ್ದಾನೆ. ಮಲಗಿ ನಿದ್ರಿಸಲಿ ಎಂದು ಆತನನ್ನೇ ಕಣ್ತುಂಬಾ ನೋಡುತ್ತಾ ಕಾಲ ಬೆರಳಿಂದ ತಲೆಯ ಕೂದಲವರೆಗೂ ನೋಡುತ್ತಾ ಇದ್ದಾಳೆ.
ಹೀಗೆ ಇರುವಾಗ ಸೊಂಟದಲ್ಲಿ ಏನೋ ಓಲೆಯಂತಹ ಕರಡಿಗೆ ಸುತ್ತಿ ಬಿಗಿದು ಕಟ್ಟಿರುವುದು ಕಾಣಿಸಿತು. ಕುತೂಹಲ ಕೆರಳ ತೊಡಗಿತು. ಈತ ಯಾರು? ಯಾವ ಲೋಕ? ಯಾವ ದೇಶ? ಏನಾದರು ವಿಷಯ ಅದರಲ್ಲಿರಬಹುದೇ? ತಿಳಿಯುವ ಕೌತುಕ ಹೆಚ್ಚಾಗುತ್ತಿದೆ. ಒಂದು ಹೆಜ್ಜೆ ಮುಂದೆ ಬರುವುದು, ಹೆದರಿಕೆಯಾಗಿ ಕೂಡಲೆ ಹಿಂದೆ ಹೋಗುವುದು ಪದೇ ಪದೇ ಹೀಗೆ ಮಾಡುತ್ತಿದ್ದಾಳೆ. ಆದದ್ದಾಗಲಿ ಎಂದು ಇರುವ ಧೈರ್ಯವನ್ನೆಲ್ಲಾ ಒಗ್ಗೂಡಿಸಿದಳು. ಸದ್ದಾಗಬಾರದೆಂದು ಎರಡೂ ಕೈಗಳ ಬಳೆಗಳನ್ನು ಮೇಲಕ್ಕೆ ಸರಿಸಿ ಒತ್ತಿ ಬಿಗಿಗೊಳಿಸಿದಳು. ಕಾಲ್ಗೆಜ್ಜೆಯ ಕಿಂಕಿಣಿ ನಾದಕ್ಕೆ ಎಚ್ಚರವಾದರೆ ಎಂದು ಅವುಗಳನ್ನು ಕಳಚಿ ಕೆಳಗಿರಿಸಿದಳು. ತನ್ನ ಸೆರಗನ್ನು ಬಿಗಿದು ಕಟ್ಟಿದಳು. ಬೆಕ್ಕು ತನ್ನ ಬೇಟೆಗೆ ಅರಿವಾಗದಂತೆ ಮೆತ್ತನೆ ಬಲು ಮೆತ್ತನೆಯ ಹೆಜ್ಜೆಗಳನ್ನಿಟ್ಟು ಹೋಗುವಂತೆ ಮೆಲ್ಲ ತರಗೆಲೆಯೂ ಅಲಗದಂತೆ ಹೆಜ್ಜೆಗಳನ್ನಿಡುತ್ತಾ ಚಂದ್ರಹಾಸನ ಅತಿ ಸಮೀಪಕ್ಕೆ ಬಂದು ನಿಂತಳು. ಅಲ್ಲೇ ನಿಧಾನಕ್ಕೆ ಬಗ್ಗಿ, ಚಂದ್ರಹಾಸನ ಸೊಂಟದ ಸನಿಹದಲ್ಲಿ ಬಾಗುತ್ತಾ ಮೆಲ್ಲ ಮೆಲ್ಲನೆ ದೇಹವನ್ನು ಕೆಳಗಿಳಿಸುತ್ತಾ, ಕುಕ್ಕುಟಾಸನದಲ್ಲಿ ಕುಳಿತಳು. ನಿಕಟಾತಿನಿಕಟದಲ್ಲಿ ನೇರ ನೋಟ – ಆಹಾ ಈ ಸುಂದರಾಂಗನ ಅಂದ ಚಂದ, ಸೊಬಗು ಸೌಂದರ್ಯ, ಮೋಹಕ ಮಾದಕ, ಏನೆಲ್ಲ ಚೆಲುವಾದುದು ಇದೆಯೋ ಅದೆಲ್ಲಾ ಈತನಲ್ಲೇ ತುಂಬಿ ತುಳುಕುತ್ತಿದೆ. ಕಟ್ಟು ಮಸ್ತಾದ ಕಾಯ, ಹರೆಯದ ಸೂಚಕವಾಗಿ ಚಿಗುರು ಮೀಸೆ ಆಹಾ! ಇವನೇ ಮನ್ಮಥನೇ.. ಎಂಬಷ್ಟು ಮನಮೋಹಕನಾಗಿ ಕಂಗೊಳಿಸುತ್ತಿದ್ದಾನೆ. ಮೆಲ್ಲನೆ ಕೈ ಚಾಚಿ ಸೊಂಟದಿಂದ ಓಲೆಯ ಕರಡಿಗೆಯನ್ನು ಮೆಲ್ಲ ಸೆಳೆದು ಎಳೆಯಲು ನೋಡಿದರೆ ಉತ್ತರೀಯದಿಂದ ಬಿಗಿದು ಕಟ್ಟಿದ್ದಾನಲ್ಲ!!. ಆತನ ಸೊಂಟಕ್ಕೆ ಸೋಕುವಷ್ಟು ಸನಿಹದಲ್ಲಿ ಕುಳಿತು ದೇಹ ಬಾಗಿಸಿ, ಕೈಯನ್ನು ಚಾಚಿ ಸೊಂಟಕ್ಕೆ ಬಿಗಿದ ಉತ್ತರೀಯದ ಗಂಟು ಬಿಚ್ಚುತ್ತಿದ್ದಾಳೆ….
ಮುಂದುವರಿಯುವುದು..























































