27.5 C
Udupi
Saturday, August 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 600

ಭರತೇಶ ಶೆಟ್ಟಿ, ಎಕ್ಕಾರು

ಮಂತ್ರಿವರೇಣ್ಯ ದುಷ್ಟಬುದ್ದಿ ಚಂದನಾವತಿಗೆ ಬಂದುದು ಅತಿಥೇಯರಿಗೆ ಬಹಳಷ್ಟು ಸಂತೋಷದ ಸಂಭ್ರಮವಾಗಿದೆ. ಏಕಾದಶಿ ವ್ರತಾಚರಣೆಯನ್ನು ಪೂರೈಸಿ ಸಡಗರದಲ್ಲಿದ್ದವರಿಗೆ ಮಂತ್ರಿಗಳೂ ಬಂದು ಜೊತೆಯಾದದ್ದು ಇಮ್ಮಡಿ ಖುಷಿಯನ್ನು ನೀಡಿದೆ. ಆದರೆ ದುಷ್ಟಬುದ್ದಿಗೆ ಏನೇ ಸತ್ಕಾರ, ಸ್ವಾಗತ ಮಾಡಿದರೂ ಯಾವುದೂ ಗಣನೆಗೆ ಸಿಗುತ್ತಿಲ್ಲ. ಕಾರಣ ಅಂತರಂಗದಲ್ಲಿ ಆಗುತ್ತಿರುವ ತಳಮಳ ಯಾವುದನ್ನೂ ಗಮನಿಸಿ ಸ್ವೀಕರಿಸಲು ಬಿಡುತ್ತಿಲ್ಲ. ಚಂದ್ರಹಾಸನ ರೂಪ, ಗುಣ, ಮಾತು, ನಡತೆಗಳನ್ನೇ ಅವಲೋಕಿಸುತ್ತಾ ವ್ಯಸ್ಥನಾಗಿದ್ದಾನೆ. ಚಂದ್ರಹಾಸನನ್ನು ಪಾದದಿಂದ ಶಿರದವರೆಗೆ ಇಂಚಿಂಚೂ ಬಿಡದೆ ಸೂಕ್ಷ್ಮವಾಗಿ ನೋಡತೊಡಗಿದ್ದಾನೆ. ಹೇಗೋ ಎಡಗಾಲಿನ ಪಾದ ಕಾಣಸಿಕ್ಕಿತು. ಪಾದದ ಕಿರು ಬೆರಳಿನ ಮೇಲೆ ಹಿಂದೆ ಆಗಿ ಈಗ ಗುಣವಾಗಿರುವ ಗಾಯದ ಆಳವಾದ ಕಲೆ ಕಾಣಿಸುತ್ತಿದೆ. ನೋಡುತ್ತಿದ್ದಂತೆ, ಇದು ಹೆಚ್ಚಿಗಿದ್ದ ಆರನೆಯ ಬೆರಳನ್ನು ಕೊಯ್ದುದರಿಂದ ಆಗಿರುವುದೇ ಹೌದು. ಸಾಕ್ಷಿ ಎಂಬಂತೆ ಕೊಂಚ ಬೆರಳಿನ ತುಂಡು ಉಳಿದುಕೊಂಡಿದೆ. ದುಷ್ಟಬುದ್ಧಿಯ ಮನದಲ್ಲಿ ಏಳುತ್ತಿದ್ದ ಸಂಶಯದ ಅಲೆಗಳು ಬೋರ್ಗರೆದು ಅಪ್ಪಳಿಸಿದಂತೆ ಒಮ್ಮೆಲೆ ದಂಗಾಗಿ ಬಿಟ್ಟನು. ನನ್ನ ನಿಷ್ಠಾವಂತ ಸೇವಕರಾಗಿದ್ದ ಕರುಣೆಯೇ ಇಲ್ಲದ ಕ್ರೂರ ಮನಸ್ಸಿನ ಆ ಕಟುಕರೂ ಈ ಮಗುವಿಗೆ ದಯೆ ತೋರಿದರೇ? ಕೇವಲ ಒಂದು ಬೆರಳನ್ನಷ್ಟೇ ಕತ್ತರಿಸಿ ಕೊಂದು ಬಂದೆವು ಎಂದು ಹೇಳಿ ಬಹುಮಾನ ಪಡೆದರೇ? ಎಂದೂ ಮೋಸ ವಂಚನೆ ಮಾಡದೇ ಇದ್ದ ಆ ನಿಷ್ಕಾರುಣ್ಯ ಮನದ ನಿಷ್ಠಾವಂತ ಕೊಲೆಗಡುಕರನ್ನೂ ಈತ ಮೋಡಿ ಮಾಡಿದನೇ? ಅಲ್ಲಾ ಈತನ ಯೋಗಬಲ ಹಾಗೆ ಮಾಡಿಸಿತೇ? ಎಂದು ಬಹುವಿಧದಿಂದ ಯೋಚನೆ ಮಾಡತೊಡಗಿದ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಒಂದೋ ಶತ್ರುವನ್ನು ನೇರವಾಗಿ ಸೋಲಿಸಿ ಕೊಂದು ಬಿಡಬೇಕು. ಇಲ್ಲಾ ಆತನೇ ಸಾಯುವಂತೆ ಮಾಡಬೇಕು. ಶಕ್ತಿಯಿಂದ ಕಾರ್ಯ ಸಾಧನೆ ಮಾಡಬೇಕು. ಅದಕ್ಕೆ ಅವಕಾಶ ಇಲ್ಲದಿದ್ದಲ್ಲಿ ಯುಕ್ತಿಯೇ ಉಳಿದ ಮಾರ್ಗೋಪಾಯ. ತನ್ನ ಶತ್ರು ಎಂಬ ಸ್ಪಷ್ಟತೆ ಸಿಕ್ಕ ಮೇಲೂ ಉಳಿಸಿ ಬೆಳೆಸಿದರೆ ಸೆರಗಿನಲ್ಲಿ ಬೆಂಕಿಯನ್ನು ಕಟ್ಟಿಕೊಂಡಂತೆ. ಅದು ಮೊದಲು ಸುಡುವುದು ಸೆರಗು ಮತ್ತು ಆ ವಸ್ತ್ರ ಉಟ್ಟು ಕೊಂಡವರನ್ನು. ತಂತ್ರಗಾರಿಕೆ ಹೇಳುವುದೇ ಇದನ್ನಲ್ಲವೇ? ಯಾವ ಮಾರ್ಗ ಅನುಸರಿಸಿಯಾದರೂ ಪ್ರತಿಸ್ಪರ್ಧಿಯನ್ನು ನಾಶ ಮಾಡಿಬಿಡು. ಒಂದೋ ಅತಿ ಆತ್ಮೀಯನಾಗಿದ್ದುಕೊಂಡೇ ಯುಕ್ತಿ ಬಲದಿಂದ ಅವಕಾಶವಾದಿಯಾಗಿ ಸಾಧಿಸು. ಇಲ್ಲಾ ನೇರ ಸ್ಪರ್ಧಿಯಾಗಿ ಶಕ್ತಿಯಿಂದ ದಮನಿಸಿ ಬಿಡು. ಅಂತೂ ಶತ್ರುವಿನ ನಿವಾರಣೆ ಆಗದೆ ವಿರಮಿಸದಿರು ಹಾಗಾಗಿ ಈಗ ನನ್ನ ಸಾಮಂತನೇ ಆಗಿರುವ ಕುಳಿಂದಕ, ಚಂದ್ರಹಾಸನ ಮೇಲೆ ಯುದ್ಧ ಸಾರಿ ಗೆದ್ದು ಕೊಲ್ಲುವಂತಿಲ್ಲ. ಕಾರಣ ಅವರು ವೈರಿಗಳಲ್ಲ, ಯುದ್ಧ ಮಾಡಲಾಗದು. ಅಂದರೆ ಉಳಿದಿರುವುದು ತಂತ್ರಗಾರಿಕೆಯ ಮಾರ್ಗ ಮಾತ್ರ. ಯೋಚಿಸುತ್ತಾ ಇದ್ದು ಒಂದು ಯೋಜನೆಯನ್ನು ರೂಪಿಸಿಯೇ ಬಿಟ್ಟ. ದುಷ್ಟಬುದ್ಧಿಯವನೇ ಆದ ಮಂತ್ರಿಗೆ ದುರ್ಮಾರ್ಗದ ಯೋಚನೆ ಕಷ್ಟದ ವಿಚಾರವೇ?

ಏನೋ ಮಾತನಾಡುತ್ತಿದ್ದರೂ ಯೋಚನೆಯೊಳಗೆ ಮುಳುಗಿದ್ದ ದುಷ್ಟಬುದ್ದಿ, ಸಾಮಂತ ಕುಳಿಂದಕನಲ್ಲಿ “ಅಯ್ಯೋ! ಕೆಟ್ಟು ಹೋಯಿತಲ್ಲಾ! ಪ್ರಾಯವಾಗುತ್ತಾ ಹೋದಂತೆ ನನಗೆ ಮರೆವು ಹೆಚ್ಚಾಗುತ್ತಿದೆ. ಅಗತ್ಯ ರಾಜಕೀಯ ಕಾರ್ಯ, ದೇಶದ ರಹಸ್ಯ ವಿಚಾರವೊಂದನ್ನು ಮಾಡಿ ಪೂರೈಸಬೇಕಿತ್ತು. ಕಾಲ ಅಕಾಲವಾದರೆ ತೊಂದರೆ ಆದೀತು. ಏನು ಮಾಡೋಣ ಈಗ?” ಎಂದು ತುಂಬಾ ತೊಂದರೆಗೆ ಒಳಗಾದವನಂತೆ ವರ್ತಿಸತೊಡಗಿದ. ಕುಳಿಂದಕನಿಗೆ ಮಂತ್ರೀಶನ ಆತಂಕ ನೋಡಿ ಭಯವಾಯಿತು. “ಸ್ವಾಮಿ! ಏನಾದರು ಸಮಸ್ಯೆ ಆಗಿದೆಯೇ?” ಎಂದು ಕೇಳಿದನು.

“ಹೌದು! ಅಗತ್ಯ ರಾಜಕೀಯ ವಿಚಾರವೊಂದನ್ನು ಮಗ ಮದನನಿಗೆ ಹೇಳಿ ಬರಲು ಮರೆತು ಬಿಟ್ಟೆ. ನಾನು ಈಗಲೆ ಕುಂತಳ ದೇಶಕ್ಕೆ ಹೊರಡಲೇ ಬೇಕು. ಆ ಒಂದು ಕಾರ್ಯ ಅಲ್ಲದಿದ್ದರೆ ನಿಮ್ಮ ಜೊತೆ ಕೆಲದಿನ ಇಲ್ಲೇ ಇದ್ದು ವಿಶ್ರಾಂತನಾಗಿ ತೆರಳಬೇಕು ಎಂದು ಕೊಂಡಿದ್ದೆ. ಆದರೆ ಅಂದುಕೊಂಡದ್ದು ಒಂದು, ಆಗಿ ಹೋದದ್ದು ಒಂದು” ಎಂದು ವ್ಯಥೆಗೊಳಗಾದವನಂತೆ ಆಡಿದನು.

ಆಗ ಕುಳಿಂದಕ ಸ್ವಲ್ಪ ನಿರಾಳನಾದವನಂತೆ “ಸ್ವಾಮೀ, ನೀವು ಅನುಮತಿ ಕೊಟ್ಟರೆ ನಮ್ಮಲ್ಲಿ ನಿಷ್ಠಾವಂತ ಚಾರಕರಿದ್ದಾರೆ. ನಿಮ್ಮ ಸಂದೇಶವನ್ನು ಅತಿ ಶೀಘ್ರವಾಗಿ ಕುಂತಳದೇಶಕ್ಕೆ ತಲುಪಿಸಿ ಬರಬಲ್ಲರು. ನಿಮ್ಮ ಅಪ್ಪಣೆಯಾಗ ಬೇಕು” ಎಂದು ಕೇಳಿಕೊಂಡನು.

“ರಾಜಕೀಯದಲ್ಲಿ ಸೇವಕರು, ಪರಿಚಾರಕರು, ಆಳುಗಳು ಎಲ್ಲಾ ಇದ್ದಾರೆ. ಆದರೆ ಅವರಿಂದ ಏನು ಮಾಡಿಸಬೇಕೋ ಅದನ್ನಷ್ಟೇ ಮಾಡಿಸಿದರೆ ಕ್ಷೇಮ. ಇದು ಕೆಲಸದವರಿಂದ ಮಾಡಿಸಬಹುದಾದ ಕಾರ್ಯವಲ್ಲ. ರಾಜಕೀಯದ ರಹಸ್ಯ ವಿಚಾರ. ಹಾಗಾಗಿ ನಾನೇ ಹೊರಡಬೇಕು. ಇಲ್ಲದೇ ಹೋದರೆ ಕೆಲವು ದಿನ ನಾನು ಈ ಮಲೆನಾಡು ಪ್ರದೇಶ ಚಂದನಾವತಿಯಲ್ಲಿ ಉಳಿಯಬೇಕೆಂದು ಬಯಸಿದ್ದೆ” ಎಂದು ಮಂತ್ರಿ ದುಷ್ಟಬುದ್ದಿ ಹೇಳಿದನು.

ಕೇಳಿಸಿಕೊಂಡ ಕುಳಿಂದಕನಿಗೂ ಛೇ ಹೀಗಾಯಿತಲ್ಲ. ಇಲ್ಲದೇ ಹೋಗಿದ್ದರೆ ನಮ್ಮ ಒಡೆಯನಾದ ಮಂತ್ರಿವರ್ಯ, ಅವರ ಕೃಪೆಯಿಂದ ಕಪ್ಪ ನೀಡದಿದ್ದರೂ ಏನೂ ತೊಂದರೆ ನೀಡದೆ ಇಷ್ಟು ಕಾಲ ಸಲಹಿದ್ದಕ್ಕೆ ಅವರ ಸೇವೆಯನ್ನಾದರೂ ಮಾಡಬಹುದಿತ್ತು ಎಂದು ಯೋಚಿಸತೊಡಗಿದ. ತಕ್ಷಣ ಏನೋ ಆಲೋಚಿಸಿ “ಸ್ವಾಮೀ! ನೀವು ಅನುಮತಿ ನೀಡಿದರೆ ನಿಮ್ಮ ಪ್ರತಿನಿಧಿಯಾಗಿ ನಮ್ಮ ಚಂದ್ರಹಾಸನೇ ಕುಂತಳದೇಶಕ್ಕೆ ಹೋಗಿ ನೀವು ನೀಡಬಯಸಿರುವ ಸಂದೇಶ ತಲುಪಿಸಿ ಬರಬಲ್ಲ. ಸಮರ್ಥನೂ, ರಾಜಕಾರಣ ಶಾಸ್ತ್ರ ನಿಪುಣನೂ, ನಿಷ್ಠಾವಂತನೂ ಆದ ನನ್ನ ಮಗ ನಿಮ್ಮ ಪ್ರತಿನಿಧಿಯಾಗಿ ಯಾವುದೇ ಲೋಪದೋಷಗಳಿಲ್ಲದೆ ನಿಮ್ಮ ಸೇವೆ ಮಾಡಿ ಬರುವಷ್ಟು ದಕ್ಷತೆ ಹೊಂದಿದ್ದಾನೆ. ಈ ವಿಚಾರದಲ್ಲಿ ನೀವು ಯಾವುದೇ ಸಂದೇಹ ಪಡಬೇಕಾಗಿಲ್ಲ. ನಮಗೂ ನೀವು ಇಲ್ಲಿ ಕೆಲ ದಿನ ಉಳಿದರೆ ನಿಮ್ಮ ಸೇವೆ ಮಾಡುವ ಮಹದಾಸೆಯಿದೆ. ಒಪ್ಪಿ ಅನುಮತಿ ನೀಡಿದರೆ ನಿಮ್ಮ ಕಿಂಚಿತ್ ಋಣ ಸಂದಾಯಕ್ಕೂ ಅವಕಾಶ ಸಿಕ್ಕಂತಾಗುತ್ತದೆ. ನೀವೇನೇ ತೀರ್ಮಾನ ಕೈಗೊಂಡರೂ ನಮಗದು ಶಿರೋಧಾರ್ಯ” ಎಂದು ವಿನಯದಿಂದ ನಿವೇದಿಸಿಕೊಂಡನು.

ಮಂತ್ರಿಯ ಕುತಂತ್ರಕ್ಕೆ ಬೇಕಾಗಿದ್ದುದೂ ಇದೇ ದಾರಿ. ತಾನು ಕೇಳದೆಯೇ ನನಗೆ ಬೇಕಾದುದು ಪರಿಹಾರವಾಗಿ ಸಿಕ್ಕಾಗ ರೋಗಿ ಬಯಸಿದ್ದೂ ಹಾಲು, ವೈದ್ಯ ನೀಡಿದ್ದೂ ಹಾಲು ಎಂಬಂತಾಯಿತು. ಚಂದ್ರಹಾಸನನ್ನೂ ಕುಳಿಂದಕನನ್ನೂ ಅರಮನೆಯ ಕೋಣೆಯೊಳಗೆ ಕರೆದೊಯ್ದು, “ನಾನು ಓಲೆಯೊಂದನ್ನು ಬರೆದು ನೀಡುತ್ತೇನೆ. ಅತಿ ರಹಸ್ಯ ವಿಚಾರವಿರುವ ರಾಜಕೀಯ ಓಲೆಯದು. ಯಾವುದೇ ಕಾರಣಕ್ಕೂ ಅನ್ಯರು ಯಾರ ಕೈಗೂ ಸಿಗಬಾರದು. ಮಾತ್ರವಲ್ಲ ಸ್ವಯಂ ನೀನೂ ತೆರೆದು ಓದಕೂಡದು. ಹಾಗೆಂದು ಭರವಸೆ ನೀಡಿದರೆ ನಿಮ್ಮ ಆತಿಥ್ಯ ಸ್ವೀಕರಿಸಲು ನಾನಿಲ್ಲಿ ಉಳಿಯಬಲ್ಲೆ. ಈ ಓಲೆ ಕುಂತಳದೇಶದ ಮುಂದಿನ ಭವಿಷ್ಯವನ್ನೇ ಹೊಂದಿದೆ. ಒಂದು ಚೂರು ಆಚೀಚೆ ಆದರೂ ಏನೇನೋ ಆಗಿ ಹೋದೀತು. ಹಾಗಾಗಿ ಈ ಪತ್ರ ನೇರವಾಗಿ ನನ್ನ ಮಗ ಮದನ ಕುಮಾರನ ಕೈಗೇ ಸೇರಬೇಕು. ಮಾತ್ರವಲ್ಲ ಇದನ್ನು ರಹಸ್ಯ ಕೋಣೆಯಲ್ಲಿ ಒಬ್ಬನೇ ಓದಿ ಅದರಲ್ಲಿ ಹೇಳಿದುದನ್ನು ತಕ್ಷಣ ಕಾರ್ಯರೂಪಕ್ಕೆ ತರಬೇಕು. ಯಾವುದೇ ಕಾರ್ಯ ವಿಳಂಬ ಆಗಬಾರದು ಎಂದು ಸ್ಪಷ್ಟವಾಗಿ ತಿಳಿಸಬೇಕು” ಎಂದು ಪೂರ್ಣ ವಿಚಾರಗಳನ್ನೂ, ಅಗತ್ಯತೆಯನ್ನೂ ಚಂದ್ರಹಾಸನಿಗೆ ಷರತ್ತು ಬದ್ದವಾಗಿ ವಿವರಿಸಿ ಹೇಳಿದನು.

ದುಷ್ಟಬುದ್ಧಿ ಉತ್ತಮವಾದ ಓಲೆಯೊಂದನ್ನು ಕುಳಿಂದಕನಿಂದ ಪಡೆದು ಅರಮನೆಯ ಕೋಣೆಯೊಳಗೆ ಹೊಕ್ಕು ಬಾಗಿಲನ್ನು ಭದ್ರವಾಗಿ ಮುಚ್ಚಿದನು. ಓಲೆಯಲ್ಲಿ ತನ್ನ ತಂತ್ರಗಾರಿಕೆಯ ಯೋಜನೆಯನ್ನು ಬರೆದು, ಮುದ್ರೆಯೊತ್ತಿ ರುಜು ಮಾಡಿ ಸುತ್ತಿ ಕಟ್ಟಿದನು. ಉರುಟಾದ ಕರಡಿಗೆಯೊಳಗೆ ಓಲೆಯನ್ನು ಸುತ್ತಿ ಇಳಿಸಿ ಮುಚ್ಚಳವನ್ನು ಭದ್ರವಾಗಿ ಮುಚ್ಚಿದನು. ಹೊರಬಂದು ಕುಳಿಂದಕನ ಕೈಗಿತ್ತನು. “ಈ ಓಲೆ ಯಾವ ಎಡರು ತೊಡರುಗಳಿಲ್ಲದೆ ತಕ್ಷಣ ನನ್ನ ಮಗ ಮದನ ಕುಮಾರನ ಕೈಗೇ ತಲುಪುವಂತೆ ನಿನ್ನ ಚಂದ್ರಹಾಸನ ಮೂಲಕ ಕಳುಹಿಸು” ಎಂದು ಆಜ್ಞೆ ಮಾಡಿದನು. ಓಲೆಯನ್ನಿಟ್ಟು ಮುಚ್ಚಿದ್ದ ಕರಡಿಗೆಯ ಮುಚ್ಚಳವನ್ನು ಭದ್ರಪಡಿಸಿ ಮುದ್ರೆಯೊತ್ತಿ ನೀಡಿದನು.

ಕುಳಿಂದಕ ಹೇಳಬೇಕಾದ ಎಲ್ಲಾ ವಿಚಾರ, ಜಾಗ್ರತೆ ಎಚ್ಚರಿಕೆಗಳೆಲ್ಲವನ್ನೂ ಮತ್ತೊಮ್ಮೆ ಪುನರಾವರ್ತನೆ ಮಾಡಿ ಮಗ ಚಂದ್ರಹಾಸನ ಕೈಗಿತ್ತು ಆಶೀರ್ವದಿಸಿ ಕಳುಹಿಸಿದನು. ಬೆಳಿಗ್ಗೆ ಹೊರಟವನು ಮಧ್ಯಾಹ್ನದ ಸುಡು ಬಿಸಿಲನ್ನೂ ಲೆಕ್ಕಿಸದೆ ಉತ್ತಮ ಅಶ್ವವನ್ನೇರಿದ ಚಂದ್ರಹಾಸ ಎಲ್ಲೂ ನಿಲ್ಲದೆ ಶರವೇಗದಿಂದ ಕುದುರೆಯೋಡಿಸುತ್ತಾ ಕುಂತಳದೇಶ ತಲುಪಿದನು. ಬಿಸಿಲ ಝಳ, ದಣಿದ ದೇಹ ಬಳಲಿ ಬಸವಳಿದು ಹೋಗಿದೆ.

ಇನ್ನೇನು ಅರಮನೆ ಹತ್ತಿರವಾಯಿತು, ರಾಜ ಬೀದಿ ಕಾಣಿಸುತ್ತಿದೆ. ತನಗೆ ವಹಿಸಿದ ಕಾರ್ಯ ಮಾಡಿದಂತಾಗಲಿದೆ ಎಂದು ಚಂದ್ರಹಾಸ ಲೆಕ್ಕಹಾಕುತ್ತಾ ಕುದುರೆ ಓಡಿಸುತ್ತಾ ಪುರ ಪ್ರವೇಶ ಮಾಡಿದ್ದಾನೆ. ರಾಜನ ಉದ್ಯಾನವನದ ಬದಿಯಲ್ಲಿ ಸಾಗುತ್ತಿದ್ದಾನೆ ಬಳಲಿ ಬೆಂಡಾಗಿರುವ ಚಂದ್ರಹಾಸ. ಒಂದು ತೊಟ್ಟು ನೀರು ಕುಡಿಯದೆ ಒಂದೇ ಸವನೆ ಕುದುರೆ ಸವಾರನಾಗಿ ಇಲ್ಲಿವರೆಗೆ ಬಂದಾಗ ಅಸಹನೀಯ ಆಯಾಸ ಬಾಯಾರಿಕೆ ಆಗುತ್ತಿದೆ. ನನಗೇ ಹೀಗಾಗುತ್ತಿರುವಾಗ ಪಾಪ ಮೂಕ ಪ್ರಾಣಿ ನನ್ನ ಕುದುರೆ, ಅದೂ ಒಂದು ಜೀವವಲ್ಲವೇ? ಹೇಗಾಗಿರಬಹುದು? ನನ್ನನ್ನು ಹೊತ್ತುಕೊಂಡು ನಿಲ್ಲದೆ ಓಡುತ್ತಾ ಬಿಸಿಯುಸಿರು ಸೆಳೆಯುತ್ತಾ, ಬಾಯಲ್ಲಿ ನೊರೆ ಕಾರುತ್ತಿದೆ. ಕಂಡು ಮನ ಕರಗಿ ಉದ್ಯಾನವನದ ಬಳಿ ಕುದುರೆಯನ್ನು ನಿಲ್ಲಿಸಿ ಕೆಳಗಿಳಿದು ಎಲ್ಲಾದರು ನೀರು ಸಿಕ್ಕಿತೇ ಎಂದು ನೋಡಿದರೆ ಸುಂದರ ಕೆರೆಯೊಂದಿದೆ. ಕುದುರೆಯನ್ನು ಅತ್ತ ಒಯ್ದು ಹರಿದು ಹೊರ ಹೋಗುತ್ತಿದ್ದ ತಿಳಿ ನೀರು ಕುಡಿಯಲು ಅವಕಾಶವಿತ್ತನು. ತಾನು ಕೈಕಾಲು ಮುಖ ತೊಳೆದುಕೊಂಡು, ಶ್ರೀ ಹರಿ ಎಂದು ನಾಮ ಸ್ಮರಣೆ ಮಾಡಿ ಒಂದೆರಡು ಬೊಗಸೆ ನೀರನ್ನು ಕೆರೆಯಿಂದೆತ್ತಿ ಕುಡಿದನು. ಬಳಿಕ ಕುದುರೆಗೂ ತುಸು ವಿಶ್ರಾಂತಿ ಸಿಗಲಿ ಎಂದು ಮರದಡಿ ಕಟ್ಟಿ, ತಾನೂ ಅದೇ ಮರದ ನೆರಳಿನಲ್ಲಿ ತುಸು ಕುಳಿತನು. ಮಧ್ಯಾಹ್ನ ಕಳೆದು ಸಂಜೆಯಾಗುತ್ತಿದೆಯಷ್ಟೇ. ಗಾಳಿ ಬೀಸುತ್ತಿದೆ, ಕುಳಿತಲ್ಲೇ ನಿದ್ರೆಯ ಮಂಪರು ತಲೆಗೆ ಹತ್ತಿತ್ತು. ಯಾಕೋ ಏನೋ ದಣಿದ ಆಯಾಸವೋ ಏನೋ ತುಸು ವಿರಮಿಸಲೇ ಬೇಕೆಂದು ತನ್ನ ಉತ್ತರೀಯವನ್ನು ಮರದಡಿ ಹಾಸಿ ಓಲೆಯನ್ನು ಸೊಂಟಕ್ಕೆ ಬಿಗಿದು ಕಟ್ಟಿ ಅಲ್ಲೇ ಮಲಗಿದನು. ಜವಾಬ್ದಾರಿಯ ಪ್ರತಿರೂಪ ಹಿಡಿದ ಕಾರ್ಯ ಸಾಧಿಸದೆ ವಿರಮಿಸದ ಚಂದ್ರಹಾಸ ಇಂತಹ ಮಹತ್ವದ ಓಲೆ ತಲುಪಿಸದೆ ಅರಮನೆಯ ಸನಿಹಕ್ಕೆ ಬಂದು ಉದ್ಯಾನವನದಲ್ಲಿ ಯಾವ ರಕ್ಷಣೆಯೂ ಇಲ್ಲದೆ ಮಲಗಿದ್ದಾನೆ. ಗಾಢವಾದ ನಿದ್ರೆ ಆತನಿಗೆ ಹತ್ತಿದೆ. ಏಕಾದಶಿ ವ್ರತಾಚರಣೆಗಾಗಿ ಉಪವಾಸವಿದ್ದು ನಿದ್ರೆಗೆಟ್ಟು ದ್ವಾದಶಿ ಯ ಊಟ ಮಾಡಿ ನಿದ್ರೆ ಪೂರೈಸಲು ಅವಕಾಶ ಸಿಗದೆ ಸುದೀರ್ಘ ಪ್ರಯಾಣ ಮಾಡಿದ ಪರಿಣಾಮ ಹೀಗಾಗಿರಲೂ ಬಹುದು. ಅಂತೂ ಓಲೆಯ ಜೊತೆ ಮಲಗಿ ಸುಖ ನಿದ್ರೆಯಲ್ಲಿ ಮರದಡಿಯಲ್ಲಿ ಚಂದ್ರಹಾಸ ಮಲಗಿದ್ದಾನೆ.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page