ಭಾಗ – 597
ಭರತೇಶ ಶೆಟ್ಟಿ,ಎಕ್ಕಾರು

ಚಂದ್ರಹಾಸನು ಚಂದನಾವತಿಯ ಅರಸ ತನ್ನ ತಂದೆ ಕುಳಿಂದಕನ ಅಪ್ಪಣೆ ಪಡೆದು ತನ್ನ ಆಸೆಯನ್ನು ವಿವರಿಸಿ ಹೇಳತೊಡಗಿದನು.
“ಅಪ್ಪಾ, ಮನುಷ್ಯರಾಗಿ ನಾವು ಜನ್ಮ ಪಡೆಯುವುದೆ ನಮ್ಮ ಹಿಂದಿನ ಜನ್ಮ ಜನ್ಮಾಂತರಗಳ ಪುಣ್ಯ ವಿಶೇಷ ಬಲದಿಂದ. ಪುಣ್ಯ ಬಲದ ಸಮೃದ್ಧಿಯಿದ್ದರೆ ಮಾತ್ರ ಆ ವಿಶೇಷ ಸಂಚಯದಿಂದ ನಮ್ಮ ಆತ್ಮವು ಮಾತು, ಬುದ್ಧಿ, ಜ್ಞಾನಪೂರ್ಣವಾದ ಈ ಮನುಷ್ಯ ದೇಹವನ್ನು ಹೊಂದುತ್ತದೆ. ಇಲ್ಲದೇ ಹೋದರೆ ಮೃಗ, ಪಕ್ಷಿ, ಕ್ರಿಮಿ, ಕೀಟ, ಸರಿಸೃಪ, ಮರ ಬಳ್ಳಿ, ಜಲಚರವೋ ಆಗಿ ಜನಿಸಬೇಕಾಗುತ್ತದೆ. ಈ ಹಿಂದಿನ ಜನ್ಮಗಳಲ್ಲಿ ಏನಾಗಿದ್ದೆವು? ಏನು ಮಾಡಿದ್ದೇವೆ? ಎಂಬ ನಿಗೂಢ ಸತ್ಯ ನಮಗಾರಿಗೂ ತಿಳಿದಿಲ್ಲ. ಆದರೆ ಈಗ ನಾವು ಬದುಕುತ್ತಿರುವ ವರ್ತಮಾನ ಕಾಲದಲ್ಲಿ ನಮ್ಮದ್ದಾದ ಈ ದೇಹವನ್ನು ಬಳಸಿ ಸತ್ಕರ್ಮಗಳನ್ನು ಮಾಡಬೇಕು. ಜೊತೆಗೆ ಸರ್ವರಕ್ಷಕನಾದ ದೇವರನ್ನು ಆರಾಧಿಸಿ ಸ್ಮರಿಸಬೇಕು. ಹಲವಾರು ವಿಧಾನಗಳಿಂದ ದೇವರನ್ನು ಪೂಜಿಸಿ, ಅರ್ಚಿಸಿ ಪ್ರೀತಗೊಳಿಸಬಹುದು. ಅಂತಹ ಕ್ರಮಗಳಲ್ಲಿ ವ್ರತ ಒಂದು ಸರಳ ವಿಧಾನ. ಹಲವಾರು ದೇವರುಗಳ ವ್ರತಗಳಿವೆ. ಅವುಗಳಲ್ಲೂ ಏಕಾದಶಿ ವ್ರತ ಬಹಳಷ್ಟು ಮಹತ್ವ ಪಡೆದಿದೆ. ಏಕಾದಶಿ ವ್ರತವನ್ನು ಋಷಿ ಮನೀಷಿಗಳೇ “ವ್ರತಗಳ ರಾಜ” ಎಂದು ಬಣ್ಣಿಸಿದ್ದಾರೆ.
ಶಾಸ್ತ್ರ ಅಧ್ಯಯನ ಮಾಡುತ್ತಿದ್ದ ಸಮಯ ಈ ಕುರಿತಾಗಿ ಕೆಲವೊಂದು ವಿಚಾರಗಳನ್ನು ಅರಿತುಕೊಂಡಿದ್ದೇನೆ. ಪೌರಾಣಿಕ ಹಿನ್ನೆಲೆಯ ಪ್ರಕಾರ ಸಮುದ್ರ ಮಥನದ ಸಮಯದಲ್ಲಿ ಏಕಾದಶಿ ತಿಥಿಯ ದಿನದಂದೇ ಅಮೃತವು ಉಕ್ಕಿ ಬಂದು ದೇವತೆಗಳಿಗೆ ಹಂಚಲ್ಪಟ್ಟಿತು ಎಂದು ಹೇಳಲಾಗಿದೆ. ಹಾಗಾಗಿ ಈ ದಿನವನ್ನು ಬಹಳ ಶುಭದಿನವೆಂದು ಪರಿಗಣಿಸಿದ್ದಾರೆ. ಅಷ್ಟು ಮಾತ್ರವಲ್ಲ ಈ ದಿನ ಯಾರಾದರು ಮರಣವನ್ನಪ್ಪಿದರೆ, ಸರ್ವ ಪಾಪಗಳಿಂದ ಮುಕ್ತರಾಗಿ ಅವರು ವೈಕುಂಠವನ್ನು ಸೇರುತ್ತಾರೆ ಎಂದೂ ಶಾಸ್ತ್ರಗಳೂ ಸಾರಿವೆ. ಏಕಾದಶಿ ತಿಥಿಯಲ್ಲಿ ವ್ರತ ನಡೆಸಲು ಪೂರಕವಾದ ಕಾರಣವನ್ನೂ ಪುರಾಣಗಳು ವಿವರಿಸಿವೆ” ಎಂದನು.
ಕುಳಿಂದಕನು “ಅದೇನು ಕಾರಣಗಳು? ವಿವರಿಸಿ ಹೇಳುವೆಯಾ ಮಗನೇ?” ಎಂದು ಕೇಳಿದನು. ಆಗ ಚಂದ್ರಹಾಸ ಏಕಾದಶಿ ವ್ರತಾಚರಣೆಯ ಫಲಗಳನ್ನು ಸವಿಸ್ತಾರವಾಗಿ ಹೇಳತೊಡಗಿದ.
ಶ್ರೀಹರಿಯ ಅಭಯ ವಾಗ್ದಾನದಂತೆ ಏಕಾದಶಿಯ ದಿನ ಯಾರು ಉಪವಾಸವಿದ್ದು, ಪೂಜೆಯನ್ನು ಮಾಡುತ್ತಾರೋ ಅವರ ಪಾಪಗಳು ನಿವಾರಿಸಲ್ಪಟ್ಟು ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ದಿನ ಉಪವಾಸವನ್ನು ಮಾಡಿದವರು ಇಹಯಾತ್ರೆಯನ್ನು ಮುಗಿಸಿ ಉತ್ತರ ದ್ವಾರದ ಮೂಲಕ ವೈಕುಂಠವನ್ನು ಪ್ರವೇಶಿಸುತ್ತಾರೆ. ಹಾಗಾಗಿ ಏಕಾದಶಿ ದಿನದಂದು ವಿಷ್ಣು ದೇವಾಲಯಗಳಲ್ಲಿ ಸಾಂಕೇತಿಕವಾಗಿ ಉತ್ತರ ದಿಕ್ಕಿನ ಬಾಗಿಲನ್ನು ತೆರೆದಿಡುತ್ತಾರೆ. ಇದನ್ನೇ ವೈಕುಂಠ ದ್ವಾರವೆಂದು ಕರೆಯುತ್ತಾರೆ.
ಏಕಾದಶಿಯ ದಿನ ಉಪವಾಸವಿದ್ದು ರಾತ್ರಿಯಿಡೀ ಜಾಗರಣೆ ಮಾಡಬೇಕು. ಧ್ಯಾನ, ಜಪ ಹಾಗೂ ಹರಿಕೀರ್ತನೆಗಳನ್ನೂ ಹಾಡಬಹುದು. ಏಕಾದಶಿಯ ಮರುದಿನ ದ್ವಾದಶಿಯನ್ನು ಆಚರಣೆ ಮಾಡಬೇಕು. ಹೀಗೆ ಉಪವಾಸ ಮಾಡಿ ವಿಷ್ಣುವನ್ನು ಆರಾಧಿಸುವುದರಿಂದ ಸರ್ವಪಾಪಗಳೂ ಕಳೆಯುತ್ತವೆ ಎಂಬ ವಿಶ್ವಾಸಪೂರ್ಣ ನಂಬಿಕೆಯಿದೆ. ಉಪವಾಸ ಎಂದರೆ ದೈನಂದಿನ ವಾಸ ಕ್ರಮಕ್ಕೆ ಭಿನ್ನವಾದ, ಬೇರೆಯೇ ವಿಧಾನದಿಂದ ವಾಸಿಸುವುದು ಎಂದರ್ಥ. ಕೇವಲ ಊಟ ಮಾಡದೆ ಇರುವುದಕ್ಕೆ, ಅಥವಾ ಬದಲಿ ಆಹಾರ ಸೇವಿಸುವುದರೆ ಅದು ಉಪವಾಸವಲ್ಲ. ಏಕಾದಶಿಯ ದಿನ ಬದಲಿ ವಾಸಕ್ರಮದಲ್ಲಿದ್ದು, ದೈನಂದಿನ ಚಟುವಟಿಕೆಗಳನ್ನು ಬದಿಗಿರಿಸಿ, ದೇವರ ಧ್ಯಾನ, ಸಂಕೀರ್ತನೆ, ಮಹಿಮೆಗಳನ್ನು ಪಠಿಸುತ್ತಾ, ಆಲಿಸುತ್ತಾ ನಿರಾಹಾರಿಯಾಗಿದ್ದು ದ್ವಾದಶಿಯಂದು ಮಿಂದು, ತುಳಸಿ ತೀರ್ಥ ಸೇವಿಸಿ ವ್ರತ ಸಮಾಪ್ತಿಗೊಳಿಸಿ ಊಟ ಮಾಡಬೇಕು. ಇದಿಷ್ಟನ್ನೂ ಶ್ರದ್ಧಾಪೂರ್ವಕವಾಗಿ ದೇವತಾನುಗ್ರಹ ಪ್ರಾಪ್ತಿಗಾಗಿ ಆಚರಿಸಬೇಕು” ಎಂದು ಹೇಳಿ, ಚಂದ್ರಹಾಸ ಚಂದನಾವತಿಯಲ್ಲೂ ಏಕಾದಶಿ ವ್ರತಾಚರಣೆಗೆ ಅನುಮತಿ ಬೇಡಿದನು.
ರಾಜ ಕುಳಿಂದಕ ಸರ್ವರಿಗೂ ಶ್ರೇಯಸ್ಸನ್ನು ಒದಗಿಸುವ ಧರ್ಮಕಾರ್ಯಕ್ಕೆ ಸಂತೋಷದಿಂದ ಒಪ್ಪಿಗೆ ನೀಡಿದನು. ಬರುವ ಏಕಾದಶಿಯ ದಿನದಿಂದ ವ್ರತಾಚರಣೆ ಮಾಡುವುದೆಂದು ತೀರ್ಮಾನಿಸಲಾಯಿತು.
ಹೀಗೆ ತೀರ್ಮಾನಿಸಿದ ಕುಳಿಂದಕನಿಗೆ ಒಂದು ವಿಚಾರ ನೆನಪಾಯಿತು. ಏನೆಂದರೆ ಕುಂತಳ ದೇಶಕ್ಕೆ ಸಾಮಂತ ರಾಜ್ಯವಾದ ಚಂದನಾವತಿ ಕಪ್ಪ ನೀಡದೆ ಹಲವು ವರ್ಷಗಳೇ ಆಗಿ ಹೋಗಿದೆ. ಈ ಹಿಂದೆ ಪ್ರಜೆಗಳೂ ಬಡವರಾಗಿದ್ದ ಕಾರಣ, ಇಲ್ಲಿ ಏನೂ ಅಂತಹ ಶ್ರೀಮಂತಿಕೆ ಇರದ ಕಾರಣ ಈ ವರೆಗೆ ಕಪ್ಪ ನೀಡಲಾಗದೆ ಹಿಂದುಳಿಯಬೇಕಾಗಿತ್ತು. ಆದರೆ ಈಗ ಹಾಗಲ್ಲವಲ್ಲ, ಸಮೃದ್ಧವಾಗಿ ಚಂದನಾವತಿ ಕಂಗೊಳಿಸುತ್ತಿದೆ. ಹಾಗಾಗಿ ಕಪ್ಪ ನೀಡುವ ಕುರಿತಾಗಿ ಸಮಾಲೋಚಿಸಲು ಮಗ ಚಂದ್ರಹಾಸನನ್ನು ಬಳಿ ಕರೆದು ವಿಚಾರ ವಿವರಿಸಿ ಅಭಿಪ್ರಾಯ ಕೇಳುತ್ತಿದ್ದಾನೆ..
ಮುಂದುವರಿಯುವುದು…






















































