28.5 C
Udupi
Thursday, July 23, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 588

ಭರತೇಶ ಶೆಟ್ಟಿ, ಎಕ್ಕಾರು

ಅರ್ಜುನನು ಆಲೋಚನೆಯಲ್ಲಿ ಮುಳುಗಿ ದಾರಿಯೇ ಕಾಣದೆ ವ್ಯಥೆಗೊಳಗಾಗಿ ಹೋಗಿದ್ದಾನೆ. ತಕ್ಷಣ ಆತನಿಗೆ ಏನೋ ಹೊಳೆದಂತಾಯಿತು. ಅಶ್ವ ಪಾಲಕರನ್ನು ಕರೆದು “ಅಯ್ಯಾ! ನೀವೆಲ್ಲರೂ ಪ್ರಾಮಾಣಿಕತೆಯಿಂದ ನಿಮ್ಮ ಕರ್ತವ್ಯ ಪಾಲಿಸಿದ್ದೀರಿ. ಚಿಂತೆಗೊಳಗಾಗಿ ಭಯಗೊಳ್ಳದಿರಿ. ಈ ಚಳಿಯಲ್ಲಿ ಈಗ ನಿಮ್ಮಿಂದೇನೂ ಮಾಡಲಾಗದು. ವಿಶ್ರಾಂತರಾಗಿ ದಣಿವು ಆರಿಸಿಕೊಳ್ಳಿ. ಮುಂದಿನ ಕಾರ್ಯ ಯೋಜನೆಯ ಬಗ್ಗೆ ವ್ಯವಸ್ಥೆ ಮಾಡೋಣ” ಎಂದು ಧೈರ್ಯ ಹೇಳಿ ಅವರೆಲ್ಲರನ್ನು ಕಳುಹಿಸಿದನು. ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಸಂಭವನೀಯ ಶಿಕ್ಷೆಯಿಂದ ಪಾರು ಮಾಡಿದ್ದಕ್ಕಾಗಿ ವಂದಿಸುತ್ತಾ, ಕಳೆದು ಹೋಗಿರುವ ಕುದುರೆ ಎತ್ತ ಹೋಗಿರಬಹುದು? ಏನಾಗಿರಬಹುದು ಎಂಬ ಚಿಂತೆಯಲ್ಲೇ ಬಿಡಾರ ಸೇರಿದರು.

ಅರ್ಜುನನು ಏನೋ ಒಂದು ರೀತಿಯ ಶಾಂತ ಮನಸ್ಥಿತಿ ತಳೆದಿದ್ದಾನೆ. ಮೊಸರು ಇಟ್ಟುಕೊಂಡು ಬೆಣ್ಣೆಗೆ ಅತ್ತ ಮೂರ್ಕನಂತಾಗಿ ಹೋದೆನಲ್ಲಾ? ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಶ್ರೀಕೃಷ್ಣನಿರುತ್ತಾ ಮೂಢನಂತೆ ನಾನೇ ಯಾಕಾಗಿ ವ್ಯಥಿತನಾಗಿ ಮಂಕಾಗಿ ಕುಳಿತು ಕೊಳ್ಳಬೇಕು? ಆತನಲ್ಲೇ ಕೇಳಿದರೆ ಸಮಸ್ಯೆಗೆ ಖಂಡಿತಾ ಪರಿಹಾರೋಪಾಯ ಸಿಕ್ಕೇ ಸಿಗುತ್ತದೆ. ಹೀಗೆಂದು ತರ್ಕಿಸಿ ಶ್ರೀಕೃಷ್ಣನನ್ನರಸುತ್ತಾ ಹೊರಟನು.

ಹೇಮಂತ ಶಿಶಿರ ಋತುವಿನ ಕೊರೆಯುವ ಚಳಿಗಾಳಿ ಬೀಸುತ್ತಿದೆ. ಮರಗಳಲ್ಲಿ ಗೂಡುಗಟ್ಟಿ, ಪೊಟರೆಯೊಳಗೆ ಕುಳಿತ ಮರಿ ಹಕ್ಕಿಗಳನ್ನು ತಾಯಿ ಹಕ್ಕಿ ತನ್ನ ತೆಕ್ಕೆಯೊಳಗಿರಿಸಿ ಕಾಪಾಡುತ್ತಿವೆ. ಹೇಮಂತ ಋತುವಿನ ಚಳಿಯನ್ನು ತಾಳಲಾರದೆ ನಡುಗುತ್ತಾ ಹೊರ ಬಂದಾಗ ಪಾರ್ಥನಿಗೆ ಶಿವನ ಕುರಿತಾಗಿ ಕೇಳಿದ್ದ ಒಂದು ಕಥೆಯೂ ನೆನಪಾಯಿತು. ಹೇಮಂತ ಋತುವಿನಲ್ಲಾಗುವ ಹಿಮಪಾತದ ಚಳಿಯನ್ನು ತಾಳಲಾಗದೆ ಶಿವನು ಶೀತಲ ಚಂದ್ರಮನನ್ನೇ ತುಸುಕಾಲ ಆಗಸಕ್ಕೆ ಕಳುಹಿಸಿದ್ದನಂತೆ, ಜಟೆಯ ಮೇಲಿದ್ದ ಗಂಗೆಯನ್ನೂ ಸಾಗರಕ್ಕೆ ಕಳುಹಿಸಿದರೂ ಏನೂ ವ್ಯತ್ಯಾಸ ಆಗಲಿಲ್ಲ. ನೆತ್ತಿಯಲ್ಲಿ ಉರಿಗಣ್ಣಿನ ಅಗ್ನಿಯೇ ತನ್ನಲ್ಲಿದ್ದರೂ ಚಳಿ ಹೋಗದೆ ಅರ್ಧಾಂಗಿನಿ ಶಿವೆಯನ್ನೇ ಆಲಂಗಿಸಿಕೊಂಡಿದ್ದನಂತೆ. ಪತ್ನಿಯ ಆಲಿಂಗನದ ಬಿಸಿಯಿಂದ ಚಳಿಯನ್ನು ಉಪಶಮನಗೊಳಿಸಿಕೊಂಡಿದ್ದ ಶಿವನಂತೆ ನಾನೀಗ ಮಾಡಲಾಗದು. ಪತ್ನಿಯರೂ ಸನಿಹದಲ್ಲಿಲ್ಲ. ಮಾತ್ರವಲ್ಲ ನಾನು ವೃತಸ್ಥನಾಗಿದ್ದು ನಿಯಮವನ್ನು ಪಾಲಿಸಲೇ ಬೇಕಾಗಿದೆ. ಸದ್ಯ ನನಗೊದಗಿರುವ ಸಮಸ್ಯೆ ಕುದುರೆಗಳು ಕಾಣೆಯಾಗಿರುವುದು. ಯಾಗಾಶ್ವದ ಬೆಂಗಾವಲಿಗನಾದ ನಾನು ಕುದುರೆಯನ್ನು ಒಂದು ಸಂವತ್ಸರ ಕಾಲ ಸಂರಕ್ಷಿಸುವ ಹೊಣೆ ಹೊತ್ತವನಾಗಿದ್ದೇನೆ. ಅನ್ಯ ಯೋಚನೆಗಳಿಗೆ ಈಗ ಇದು ಸಕಾಲವಲ್ಲ. ಮೊದಲು ಶ್ರೀಕೃಷ್ಣನನ್ನು ಕಂಡು ಪರಿಹಾರ ದಾರಿ ಕಾಣಬೇಕು ಎಂದು ಅತ್ತ ಸಾಗಿದನು.

ಮಾಧವನು ಇದ್ದಲ್ಲಿಗೆ ಅರ್ಜುನನು ಬಂದು ತಮಗೊದಗಿರುವ ಸಮಸ್ಯೆಯ ಪೂರ್ಣ ವಿಚಾರ ವಿವರಿಸಿ ಹೇಳಿಯಾಗುವ ಹೊತ್ತಿಗೆ ಅಲ್ಲಿಗೆ ಯಾರೋ ಬಂದಂತಾಯಿತು. ಯಾರೆಂದು ನೋಡಲು ತಿರುಗಿದರೆ, ಮುಗುಳ್ನಗುತ್ತಾ, ಶುಭ್ರ ದಂತ ಪಂಕ್ತಿಗಳನ್ನು ತೋರುತ್ತಾ, ನಾರು ಮಡಿ, ಕೃಷ್ಣಾಜಿನವನ್ನುಟ್ಟು, ತುಳಸಿ ಮಾಲೆ ಧರಿಸಿ, ಪದ್ಮ ಮಣಿ ಮಾಲೆಗಳಿಂದ ಶೋಭಿಸುತ್ತಾ, ಯಜ್ಞೋಪವೀತಧಾರಿ, ವೀಣಾಧರನಾಗಿ ವಿನಿಕೆ ಮಾಡುತ್ತಾ, ಗಾನ ಸುಖ ಮಗ್ನನಾಗಿ ನಾರಾಯಣ ಧ್ಯಾನ ನಿರತರಾದ ನಾರದ ಮಹರ್ಷಿಗಳು ಬಳಿ ಬರುತ್ತಿದ್ದಾರೆ.

ತ್ರಿಲೋಕ ಸಂಚಾರಿಯಾದ ಬ್ರಹ್ಮ ಮಾನಸ ಪುತ್ರ ನಾರದ ಮಹರ್ಷಿಗಳನ್ನು ಕಂಡೊಡನೆ ಭಕ್ತವತ್ಸಲ ಕೃಷ್ಣನೇ ಮೊದಲಾಗಿ ಅವರ ಬಳಿ ಹೋಗಿ ಆದರದಿಂದ ಸ್ವಾಗತಿಸಿ ಕರೆ ತಂದನು. ರಾಜಾದಿ ರಾಜರುಗಳೂ ನಮಸ್ಕರಿಸಿ ಗೌರವ ಸೂಚಿಸಿದರು. ಅರ್ಜುನನೂ ವಂದಿಸಿ ಉಪಚಾರ ಮಾಡಿ ವಂದಿಸಿ ನಿಂತನು.

ಶ್ರೀಕೃಷ್ಣನು ನಾರದರ ಕುಶಲೋಪಚರಿ ವಿಚಾರಿಸಿ, ಕ್ಷೇಮವಾರ್ತೆ ತಿಳಿದು ಕೊಂಡನು. ಪರಸ್ಪರ ಮಾತನಾಡುತ್ತಾ “ಮಹರ್ಷಿಗಳೇ ನಿಮ್ಮ ಆಗಮನ ಸಮಯೋಚಿತವಾಗಿ ಆಗಿದೆ. ಕಾಕತಾಳಿಯವೋ ಎಂಬಂತೆ ನಮ್ಮ ಸಮಸ್ಯೆಯ ಕಾಲಕ್ಕೇ ಬಂದೊದಗಿದ್ದೀರಿ. ಮಹರ್ಷಿ ಶ್ರೇಷ್ಠರೇ, ನಾವು ಅಶ್ವಮೇಧ ಯಾಗ ನಿಮಿತ್ತವಾಗಿ ಯಾಗಾಶ್ವವನ್ನು ಅನುಸರಿಸಿ ದಿಗ್ವಿಜಯಗೈಯುತ್ತಾ ಕಪ್ಪ ಕಾಣಿಕೆ ಸಂಗ್ರಹಿಸುತ್ತಾ ಇತ್ತೀಚೆಗೆ ಸಾರಸ್ವತ ನಗರವನ್ನು ದಾಟಿ ಇತ್ತ ಬಂದೆವು. ಇಲ್ಲಿಗೆ ತಲುಪುತ್ತಿದ್ದಂತೆ ಚಳಿ, ಹಿಮಪಾತದಿಂದಾಗಿ ಮುಂದುವರಿಯಲಾಗದೆ ನಿಂತೆವು. ಅದಾಗಿ ಈಗ ಬಂದ ಸುದ್ದಿ ಅಶ್ವ ಪಾಲಕರ ಕಣ್ತಪ್ಪಿಸಿ ಕುದುರೆಗಳು ಎತ್ತಲೋ ಹೋಗಿವೆ. ಏನಾಗಿದೆ ಎಂಬ ಸತ್ಯ ತಿಳಿಯದಾಗಿದೆ. ಹಾಗಾಗಿ ಅರ್ಜುನ ಚಿಂತೆಗೊಳಗಾಗಿದ್ದಾನೆ” ಎಂದು ಶ್ರೀಕೃಷ್ಣ ಘಟಿತ ವೃತ್ತಾಂತವನ್ನು ವಿವರಿಸಿ ಹೇಳಿದ.

ಆಗ ಅರ್ಜುನನೂ ತ್ರಿಲೋಕ ಸಂಚಾರಿಯೂ, ಇಚ್ಚಾಗಮನನೂ ಆದ ನಾರದರಿಗೆ ವಂದಿಸಿ “ಸ್ವಾಮಿ ನಮಗೆದುರಾಗಿರುವ ಈ ಸಮಸ್ಯೆಯಿಂದ ಪಾರು ಮಾಡಬೇಕು. ತ್ರಿಕಾಲ ಜ್ಞಾನಿಗಳು ನೀವು, ಹಾಗಾಗಿ ನಮ್ಮ ಸಮಸ್ಯೆಗೆ ಪರಿಹಾರೋಪಾಯ ಸೂಚಿಸುವಲ್ಲಿ ಸಮರ್ಥರೇ ಆಗಿದ್ದೀರಿ. ಕೃಪೆದೋರಿ ಉದ್ಧರಿಸಬೇಕು” ಎಂದು ಬೇಡಿಕೊಂಡನು”

ನಾರದರು “ನಾರಾಯಣ, ನಾರಾಯಣ…ಎಂದು ನಾಮಸ್ಮರಣೆ ಮಾಡುತ್ತಾ.. ಹೇ ಪರಮಾತ್ಮಾ! ಏನಿದು ನಿನ್ನ ಲೀಲೆ? ನಿನಗರಿಯದ್ದು ಈ ಲೋಕಗಳೊಳಗೆ ಏನಿದೆ? ಲೋಕ ಪಾಲಕನಾದ ನಿನ್ನ ತಿಳಿವನ್ನು ಮೀರಿದ ವಿಚಾರಗಳು ಇರಲು ಸಾಧ್ಯವೇ? ಪ್ರತ್ಯಕ್ಷ ನೀನೇ ಜೊತೆಯಲ್ಲಿರುತ್ತಾ ನಿನ್ನ ನಾಮಸ್ಮರಣೆ ಮಾಡುತ್ತಾ ನಿನ್ನ ಸೇವಕನಂತೆ ಅಲೆದಾಡುವ ನನ್ನಿಂದ ನೀವು ಕೇಳಿ ತಿಳಿಯಬೇಕೇ? ಹೇ ಕೃಷ್ಣಾ ನೀನೂ ನನ್ನಲ್ಲಿ ವಿಚಾರಿಸುತ್ತಿರುವೆ. ನಾನೇ ಅರ್ಜುನನಿಗೆ ತಿಳಿಸಬೇಕೇ? ಸರಿ, ನಿನ್ನ ಸಂಕಲ್ಪವೇ ಹಾಗಿದೆ ಎಂದಾದರೆ ಅದನ್ನು ನಾನು ಮೀರಲಾದೀತೇ?” ಎಂದು ಕೈಮುಗಿದು ವಂದಿಸಿದನು.

ಅಲ್ಲಿ ನೆರೆದಿದ್ದ ಎಲ್ಲ ರಾಜರನ್ನೂ ಕುಳಿತುಕೊಳ್ಳುವಂತೆ ನಾರದ ಮಹರ್ಷಿಗಳು ವಿಜ್ಞಾಪಿಸಿದರು. “ಅರ್ಜುನಾ ನೀನು ಸಾಮಾನ್ಯನಲ್ಲ. ಶ್ರೀಹರಿಯ ಜೊತೆಯಲ್ಲೇ ಸಖನಾಗಿ ಇದ್ದು ಅವನನ್ನು ನಿತ್ಯ ಸೇವಿಸುವ ಮಹಾಯೋಗಿ. ನಿನ್ನ ಬದುಕಿನ ರಥ, ಸಂಚಾರದ ರಥ ಎರಡರ ಸಾರಥ್ಯವನ್ನೂ ಪರಮಾತ್ಮನೇ ನಿಭಾಯಿಸುತ್ತಿರುವಾಗ ನಿನ್ನಷ್ಟು ನಿಶ್ಚಿಂತ ಜೀವರು ಈ ಲೋಕದೊಳಗೆ ಇನ್ಯಾರೂ ಸಿಗಲಿಕ್ಕಿಲ್ಲ. ಇಲ್ಲಿ ಸೇರಿರುವ ರಾಜರೂ ಒಬ್ಬರಿಗಿಂತ ಒಬ್ಬರು ಸರಿ ಮಿಗಿಲಾದ ಹರಿ ಭಕ್ತರೇ ಆಗಿದ್ದಾರೆ. ತಮ್ಮ ಆರಾಧ್ಯ ಮೂರ್ತಿಯನ್ನು ಸಾಕ್ಷಾತ್ಕರಿಸಿಕೊಂಡ ಪುಣ್ಯಾತ್ಮರೇ ಸೇರಿಕೊಂಡಿದ್ದಾರೆ. ಇಷ್ಟು ಮಹಾತ್ಮ ಭಕ್ತ ಸಾಗರವನ್ನೇ ಹೊಂದಿರುವ ಈ ಸೇನೆಯಲ್ಲಿರುವ ಸದ್ಭಕ್ತರ ಸಮ್ಮುಖದಲ್ಲಿ ಇನ್ನೋರ್ವ ಹರಿಭಕ್ತನ ಕುರಿತಾಗಿ ವಿಶ್ರುತ ಪಡಿಸುವ ಮಹಾ ಸೌಭಾಗ್ಯ ಶ್ರೀಹರಿಯ ಕೃಪೆಯಿಂದ ನನಗೊದಗಿದೆ. ಅದಕ್ಕಾಗಿ ಬಹಳ ಸಂತೋಷ ಪಡುತ್ತಿದ್ದೇನೆ. ಈಗ ನಾನು ಹೇಳ ಹೊರಟಿರುವುದು ಮಹತ್ತರವಾದ ಯೋಗ ವಿಶೇಷದ ವಿಚಾರ. ಎಲ್ಲರೂ ಗಮನವಿಟ್ಟು ಕೇಳಿಸಿಕೊಳ್ಳಿರಿ” ಎಂದು ಹೇಳಿ ಕಥೆ ಹೇಳ ತೊಡಗಿದರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page