27.8 C
Udupi
Thursday, July 16, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 582

ಭರತೇಶ ಶೆಟ್ಟಿ, ಎಕ್ಕಾರು

ತಾಮ್ರಧ್ವಜನೊಡನೆ ವೃದ್ಧ ಬ್ರಾಹ್ಮಣನೂ, ಶಿಷ್ಯನೂ ಬಂದು ಯಾಗಶಾಲೆ ಸೇರಿದರು. ಬ್ರಾಹ್ಮಣೋತ್ತಮರನ್ನು ಕಂಡೊಡನೆ ಮಯೂರಧ್ವಜನ ಮನಸ್ಸು ಪ್ರಸನ್ನವಾಗಿ ಚೈತನ್ಯ ಹೊಂದಿ ಉಲ್ಲಾಸಗೊಂಡಿತು. ಯಾರಿಗೇ ಆಗಲಿ ರೋಗ, ಬಾಧೆ, ನೋವು ಇದ್ದಾಗ ಶರೀರ ವೇದನೆ ಅನುಭವಿಸುತ್ತಿರುತ್ತದೆ. ಅದೇ ಸಮಯ ಮನಸ್ಸೂ ಖಿನ್ನತೆಗೊಳಗಾಗಿ ಸ್ಥೈರ್ಯ ಕಳಕೊಂಡರೆ ಬಾಧಿಸುತ್ತಿರುವ ರೋಗ ಅಥವಾ ನೋವು ಉಲ್ಬಣಗೊಂಡು ದ್ವಿಗುಣಗೊಳ್ಳುತ್ತದೆ. ಅದರ ಬದಲಾಗಿ, ಅದೇ ಸಮಯ ಮನಸ್ಥಿತಿ ಧೈರ್ಯ ತಳೆದು, ಸಂತೋಷಗೊಂಡರೆ ಅರ್ಧ ರೋಗ, ಬಾಧೆಯೇ ಮಾಯವಾಗಿ ಬಿಡುತ್ತದೆ. ಅನುಭವಿಸುತ್ತಿರುವ ನೋವು ಅಥವಾ ರೋಗದ ಬಹ್ವಂಶ ಗುಣಮುಖವಾದಂತೆ ಅನುಭವವಾಗಿ ಉಲ್ಲಸಿತವಾಗುತ್ತದೆ. ಇಲ್ಲೂ ಹಾಗೆಯೇ ಆಗಿ ಮಯೂರಧ್ವಜನ ಶಿರಸ್ಸು ಸೀಳಲ್ಪಟ್ಟು ಆಗುತ್ತಿದ್ದ ಪ್ರಾಣ ಹೋಗುವ ತೆರನಾದ ನೋವು ಮರೆತು ಹೋದಂತಾಯಿತು. ಸ್ಮೃತಿ ಹೀನನಾಗುವ ಸ್ಥಿತಿಯಲ್ಲಿದ್ದಾತ ಒಮ್ಮೆಲೇ ಪುನಶ್ಚೇತನಗೊಂಡನು. ಇಲ್ಲಿ ಶ್ರೀಕೃಷ್ಣನ ಕೃಪಾದೃಷ್ಟಿಯೂ ಪರೋಕ್ಷ ಕಾರಣವಾಗಿತ್ತು ಎನ್ನುವುದೂ ಸತ್ಯವೇ ಆಗಿರಬಹುದು. ವೃದ್ಧ ಬ್ರಾಹ್ಮಣನ ರೂಪದಲ್ಲಿರುವುದು ಆ ಪರಮಾತ್ಮನೇ ಅಲ್ಲವೇ? ಈ ವರೆಗೆ ಒಂದಕ್ಷರ ಮಾತೆತ್ತಲೂ ಆಗದ ಸ್ಥಿತಿಯಲ್ಲಿದ್ದ ಮಯೂರಧ್ವಜ ಬ್ರಾಹ್ಮಣರನ್ನು ಕಂಡೊಡನೆ ಕೈ ಮುಗಿದನು. “ಸ್ವಾಮೀ, ನೀವು ಬ್ರಾಹ್ಮಣರು. ಬ್ರಾಹ್ಮಣ್ಯ ಸರ್ವತ್ರ ಪೂಜನೀಯವಾದುದು. ನಿಮ್ಮಂತಹ ಬ್ರಾಹ್ಮಣರು ನಿಸ್ವಾರ್ಥಿಗಳೂ, ಲೋಕಕಲ್ಯಾಣದ ಹಿತೈಷಿಗಳಾಗಿ, ದೇವತಾ ಸಂಪ್ರೀತಿಯ ಕಾರ್ಯದಲ್ಲಿ ತೊಡಗಿರುವವರು. ಅರಸನಾದವನಿಗೆ ತನ್ನ ಪ್ರಜಾಪರಿವಾರದಲ್ಲಿ ಎಲ್ಲಾ ವರ್ಣದವರೂ ಇರುತ್ತಾರೆ. ಕೆಲವರು ಆಹಾರ ಧಾನ್ಯಾದಿಗಳನ್ನು ಬೆಳೆದು ಅರಮನೆಗೆ ಸಮರ್ಪಿಸಿದರೆ, ಇನ್ನು ಕೆಲವರು ಸಂಪತ್ತು ಸಮೃದ್ಧಿಯನ್ನು ಒದಗಿಸುತ್ತಾರೆ. ಮತ್ತೆ ಕೆಲವರು ವಿದ್ಯೆಯನ್ನು ಸಾಮ್ರಾಜ್ಯಕ್ಕಾಗಿ ಧಾರೆಯೆರೆದು ಕಲೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುತ್ತಾರೆ. ಇನ್ನು ಕ್ಷತ್ರಿಯರಾದವರು ರಕ್ಷಣೆಯ ಹೊಣೆಹೊತ್ತು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಬದುಕುತ್ತಾರೆ. ಇವರೆಲ್ಲರೂ ಒಂದು ದೇಶದ ಅಮೂಲ್ಯ ಆಸ್ತಿಯೇ ಹೌದು. ಇವೆಲ್ಲದರ ಜೊತೆಗೆ ನಿಮ್ಮಂತಹ ಬ್ರಾಹ್ಮಣರ ಕೊಡುಗೆಯೂ ಅಪಾರವಾದುದು. ರಾಜ್ಯದ ಕ್ಷೇಮ, ಮನಶಾಂತಿ, ಕಾಲ ಕಾಲಕ್ಕೆ ಮಳೆ ಬೆಳೆಯಾಗಿ ಬರಗಾಲ ಬಾರದಂತೆ ದೇವಾನು ದೇವತೆಗಳನ್ನು ಸಂಪ್ರೀತಿಗೊಳಿಸುವ ನಿಮ್ಮ ಕೊಡುಗೆಯೂ ಮಹತ್ವದ್ದು. ಮಾತ್ರವಲ್ಲ ಸದಾ ಸತ್ಕರ್ಮ ನಿರತರಾಗಿದ್ದು, ದಾನ ಧರ್ಮಾದಿ ಕಾರ್ಯಗಳಿಂದ ಪುಣ್ಯ ಸಂಚಯ ಗೊಳಿಸುವ ನೀವು ಪುಣ್ಯಾತ್ಮರು. ಆ ಪುಣ್ಯ ವಿಶೇಷ ಬಲದಿಂದಲೇ ಆಶೀರ್ವದಿಸಲು ಯೋಗ್ಯರಾಗಿ ವಂದನಾರ್ಹರಾಗಿದ್ದೀರಿ. ರಾಜ್ಯದ ಬ್ರಾಹ್ಮಣರು ಸದಾ ಅರಸನನ್ನು ಹರಸಿ ಆಶೀರ್ವದಿಸಿ ತಮ್ಮದ್ದಾದಂತಹ ಪುಣ್ಯವನ್ನು ರಾಜನಲ್ಲಿ ನಿಕ್ಷೇಪಗೊಳಿಸಿ ಬಲಪಡಿಸುವುದರಿಂದಾಗಿ ಅದೇ ಆತನಿಗೆ ನ್ಯಾಯ, ಧರ್ಮದ ಆಡಳಿತ ನಡೆಸಲು ಪೂರಕ ಶಕ್ತಿಯಾಗುತ್ತದೆ. ಮಾತ್ರವಲ್ಲ ವ್ಯಾವಹಾರಿಕವಾಗಿ ಅರಸನೂ ತನ್ನಲ್ಲಿರುವ ಧನ, ಧಾನ್ಯಾದಿಗಳನ್ನು, ಗೋವು, ವಸ್ತ್ರ ಕನಕಾದಿಗಳನ್ನು ದಾನವಾಗಿತ್ತು ಪ್ರತಿಯಾಗಿ ಪೂಜನೀಯ ಬ್ರಾಹ್ಮಣರಿಂದ ಪುಣ್ಯ ಬಲವನ್ನು ಆಶೀರ್ವಾದ ರೂಪದಲ್ಲಿ ಪಡೆಯುವುದೂ ವಾಡಿಕೆಯ ಸಂಪ್ರದಾಯವಾಗಿದೆ. ಬೆಳೆಬಾಳುವ ವಸ್ತು ವೈಢೂರ್ಯಗಳು ದೊರೆತರೂ ನಿಜ ಬ್ರಾಹ್ಮಣನಾದವ ಸಂಪತ್ತಿನ ಆಸೆ ಹೊಂದಲಾರ, ಕೂಡಿಡಲಾರ. ಅದನ್ನು ವಿನಿಯೋಗಿಸಿ ಮತ್ತಷ್ಟು ಯಾಗ ಯಜ್ಞಾದಿ ನಿತ್ಯಕರ್ಮಗಳಲ್ಲಿ ತೊಡಗಿಯೋ, ಇಲ್ಲ ದೀನಾರ್ಥಿಗಳಿಗೆ ದಾನರೂಪದಲ್ಲಿ ಮರಳಿ ನೀಡಿಯೋ ಕರಗಿಸಿ ಬಿಟ್ಟು ಸದಾ ಆರ್ಥಿಕ ಬಡತನದಲ್ಲಿ ಬದುಕುತ್ತಾರೆ. ಆದರೂ ಪುಣ್ಯದ ಸಿರಿವಂತಿಕೆಯಲ್ಲಿ ಶೋಭಿಸುವುದೇ ವೈಶಿಷ್ಟ್ಯವಲ್ಲವೇ?. ಇಹಲೋಕದ ಜೀವನದ ಜೊತೆಗೆ ಮರಣೋತ್ತರ ಸದ್ಗತಿಯೋ, ಮೋಕ್ಷವೋ ಗುರಿಯಾಗಿದ್ದು ಸದಾ ಅದೇ ಅಪೇಕ್ಷೆಯಿಂದ ನಿಸ್ವಾರ್ಥಿಗಳಾಗಿರುವವರಲ್ಲವೇ ನಿಜ ಬ್ರಾಹ್ಮಣರು? ವರ್ಣೋತ್ತಮರಾದ ನೀವು ನಮ್ಮ ಬಳಿ ಬಂದು ಬೇಡಿಕೊಂಡ ಕಾಲಕ್ಕೆ ನನಗೂ ಪುಣ್ಯ ಸಂಪಾದನೆಯ ದಾರಿಯೇ ಇದಾಗಿತ್ತು. ಇದೇ ನನ್ನ ಮರಣೋತ್ತರ ಕಾಲದಲ್ಲಿ ಸದ್ಗತಿ ಪ್ರಾಪ್ತಿಗೆ ಹೆದ್ದಾರಿಯೇ ಆಗಲಿದೆ ಎಂಬಂತೆ ಪೂರ್ಣ ಮನಸ್ಸಿನಿಂದ ನಮ್ಮ ಆರಾಧ್ಯ ಶ್ರೀ ಕೃಷ್ಣ ಪರಮಾತ್ಮನಿಗೆ ಶರಣಾಗತನಾಗಿ ಆತನಲ್ಲೇ ಏಕಾಗ್ರ ಮನಸ್ಕನಾಗಿ ಭಕ್ತವತ್ಸಲ ಗೋವಿಂದನನ್ನೇ ಪ್ರಮಾಣವಾಗಿ ದಾನ ನೀಡುವಲ್ಲಿ ನಿಷ್ಕಲ್ಮಷ ಮನಸ್ಸಿನಿಂದ ದಾನ ಸಮರ್ಪಣೆಗೆ ಮುಂದಾಗಿದ್ದೆ. ದಾನ ಪಡೆಯಬೇಕಾಗಿದ್ದ ನೀವು ಏಕಾಏಕಿಯಾಗಿ ಯಾಗಶಾಲೆ ತೊರೆದು ಹೊರಟು ಬಿಟ್ಟಿರಲ್ಲಾ! ಶಿಷ್ಯನ ಜೊತೆ ಬಂದಿರುವ ನೀವು ಗುರುಗಳೇ ಆಗಿರುವಿರಿ. ಗುರುವರ್ಯಾ! ಯಾಕಾಗಿ ಹಾಗೆ ಮಾಡಿದಿರಿ? ನನ್ನ ತಿಳುವಳಿಕೆಗಾಗಿ ಕೇಳುತ್ತಿದ್ದೇನೆ, ಹೇಳುವಿರಾ…” ಎಂದು ವಿನಮ್ರನಾಗಿ ಬೇಡಿಕೊಂಡ.

ಆಗ ಆ ವೃದ್ಧ ಬ್ರಾಹ್ಮಣರು ಮಹಾರಾಜ ಮಯೂರಧ್ವಜನಿಗೆ ಉತ್ತರ ನೀಡ ತೊಡಗಿದರು “ಮಹಾರಾಜಾ! ನಾವು ಸತ್ಯ, ಧರ್ಮವನ್ನು ಮೀರಿ ಸ್ವಾರ್ಥಿಯಾಗಿ ಬದುಕಲಾಗದು. ಯಾಕೆಂದರೆ ದೈವಶಕ್ತಿಗೆ ಇಷ್ಟವಾಗುವುದು ನಿಸ್ವಾರ್ಥ ನಿಷ್ಠೆಯೇ ಹೊರತು ಅನ್ಯ ಯಾವ ವಿಚಾರವೂ ಅಲ್ಲ. ನನ್ನ ಮಗನ ಪ್ರಾಣ ಉಳಿಸುವುದು ನನಗೆ ಅನಿವಾರ್ಯವೇ ಆಗಿತ್ತು. ಆದರೆ ಆ ಸಿಂಹ ಕೇಳಿರುವ ದಾನ ಪಡೆದು ಬರುವಲ್ಲಿನ ನಿರ್ಬಂಧ ಪಾಲಿಸಬೇಕಾಗಿತ್ತು. ನೀವು ಮೂವರು ರಾಣಿ, ಯುವರಾಜ ಮಹಾರಾಜ ಯಾರೂ ಒಂದು ತೊಟ್ಟೂ ಕಣ್ಣೀರು ಸುರಿಸದೇ ದಾನ ನೀಡಿದ್ದನ್ನು ಪಡೆದು ಆ ಸಿಂಹಕ್ಕೆ ನೀಡುವ ಒಪ್ಪಂದವಾಗಿತ್ತು. ಆದರೆ ಕಾಲದ ಮಹಿಮೆಯೋ ಅಥವಾ ನನ್ನ ದೌರ್ಭಾಗ್ಯವೋ ಏನೋ! ಆಕಸ್ಮಿಕವೇ ನಡೆದು ಹೋಯಿತಲ್ಲಾ? ಶರೀರ ಸೀಳುವುದಕ್ಕೆ ಆರಂಭಿಸಿ ಕೊಯ್ಯುತ್ತಾ ಬರುತ್ತಿದ್ದಂತೆ ನೀನೇ ಕಣ್ಣೀರು ಸುರಿಸಿ ಬಿಟ್ಟೆಯಲ್ಲಾ? ನೀನೇನೋ ಅಪರಾಧ ಮಾಡಿದೆ ಎಂದು ದೋಷಾರೋಪಣೆ ಮಾಡುತ್ತಿಲ್ಲ. ಕೊಯ್ಯುತ್ತಿರುವಾಗಿನ ಆ ಭೀಕರ ದೃಶ್ಯ ನೋಡುವುದಕ್ಕೆ, ನೋಡಿ ಸಹಿಸುವುದಕ್ಕೆ ಆಗದೆ ನಿನಗಾಗುವ ನೋವನ್ನು ಪೂರ್ಣವಾಗಿ ನಾನೇ ಅನುಭವಿಸುತ್ತಿದ್ದೆ. ಅಂತಹ ಸಮಯ ಅಸಾಧಾರಣ ನೋವನ್ನು ಸಹಿಸಿಕೊಳ್ಳುತ್ತಿದ್ದ ನಿನ್ನ ಕಣ್ಣಲ್ಲಿ ಹನಿ ಹನಿಯಾಗಿ ನೀರು ಇಳಿದದ್ದು ವಿಶೇಷವೇ ಅಲ್ಲ. ಹೀಗಿದ್ದೂ ನನ್ನ ಮಗನ ಪ್ರಾಣ ಉಳಿಸಬೇಕು ಎಂಬ ಏಕೈಕ ಉದ್ದೇಶದಿಂದ ಪರಮ ಸ್ವಾರ್ಥಿಯಾಗಿ, ವಂಚನೆಯಿಂದ ವಚನಭ್ರಷ್ಟನಾಗಿ, ಸತ್ಯ ಏನೆಂದು ಅರಿತೂ ಮೋಸ ಮಾಡಿ ಮಗನನ್ನು ಉಳಿಸಲು ನಿನ್ನ ಶರೀರಾರ್ಧ ಭಾಗ ಪಡೆದು ಸಿಂಹಕ್ಕೆ ನೀಡಲು ಹೊರಡಲಾದೀತೇ? ಹಾಗೆ ಮಾಡಿದರೆ ದೇವರು ಮೆಚ್ಚುತ್ತಾನೆಯೇ? ಅದರಲ್ಲೂ ಪ್ರಕೃತಿ ನಿಯಮವನ್ನೇ ಮೀರಿ ಅತಿಮಾನುಷ ಶಕ್ತಿಯಂತೆ ಮಾತನಾಡುವ ಸಿಂಹ ಇಂತಹ ದಾನ ಸ್ವೀಕರಿಸೀತೇ? ಹಾಗಾಗಿ ಮಗನ ಪ್ರಾಣ ನಷ್ಟವಾದರೂ ಸರಿ ಅಧರ್ಮದ ಹಾದಿ ಕ್ರಮಿಸಲಾರೆ ಎಂದು ಇಲ್ಲಿಂದ ಹೊರಟು ಹೋಗದೆ ಅನ್ಯ ಮಾರ್ಗವಿರಲಿಲ್ಲ. ಸತ್ಯ ಯಾವತ್ತೂ ಸೋಲದು ಎಂಬ ವಿಶ್ವಾಸದಿಂದ ಕಾಡಿನಲ್ಲಿರುವ ಸಿಂಹದ ಬಳಿ ತೆರಳಿ ಯಥಾವತ್ತಾಗಿ ನಿಜ ಹೇಳಿ ಪ್ರಾರ್ಥಿಸಿ ಬೇಡಿ ಮಗನ ಪ್ರಾಣ ಭಿಕ್ಷೆ ಬೇಡೋಣ ಎಂದು ಇಲ್ಲಿಂದ ಹೊರಟು ಬಿಟ್ಟೆ. ಆದರೆ ಒಂದು ವಿಚಾರ ನಿನ್ನಲ್ಲಿ ಕೇಳಬೇಕು, ಹೇ ರಾಜನೇ! ನಿನ್ನ ಮಡದಿ ಮಕ್ಕಳು ವಿಚಲಿತರಾಗದೆ ತಮ್ಮ ಕರ್ತವ್ಯ ನಿರತರಾಗಿದ್ದರು. ಆದರೆ ಧೃಡ ಸಂಕಲ್ಪಕ್ಕೆ ಪ್ರಸಿದ್ಧನಾದ, ಯಾವ ಕಠಿಣ ಪರಿಸ್ಥಿತಿಯಲ್ಲೂ ಚಂಚಲನಾಗದವ ಕಣ್ಣೀರು ಸುರಿಸಿದ್ದಾದರೂ ಯಾಕೆ? ನನಗೀಗಲೂ ಈ ವಿಚಾರದಲ್ಲಿ ವಿಸ್ಮಯವೇ ಉಳಿದು ಹೋಗಿದೆ” ಎಂದರು.

“ಪೂಜ್ಯರೇ! ಅನ್ಯಥಾ ಭಾವಿಸದಿರಿ. ನನಗರಿಯದೇ ನನ್ನ ಎಡಗಣ್ಣಿನಿಂದ ಕೆಲ ಹನಿ ನೀರಿಳಿದದ್ದು ಹೌದು. ಆದರೆ ಒಂದು ಸತ್ಯ ನೀವು ತಿಳಿದುಕೊಳ್ಳಲೇ ಬೇಕು. ಈ ದಾನ ಶ್ರೀಕೃಷ್ಣ ಪರಮಾತ್ಮನ ಸಾಕ್ಷಿಯಾಗಿ, ಆತನ ನಾಮದ ಬಲವನ್ನೇ ಅಂಕಿತವಾಗಿಸಿ ಸಮರ್ಪಿಸುತ್ತಿದ್ದ ದಾನ. ಹಾಗಾಗಿ ನಾನು ದಾನ ನೀಡಲು ಸಿದ್ಧನಾಗುವ ಸಮಯ ನನ್ನ ಆತ್ಮದೇವರಾದ ಶ್ರೀಕೃಷ್ಣ ಪರಮಾತ್ಮ ನಿಮ್ಮ ರೂಪದಲ್ಲಿ ಬಂದು ನನ್ನ ಜೀವನಕ್ಕೆ ಸಾರ್ಥಕ್ಯತೆಯನ್ನು ನೀಡಲು ಕರುಣೆತೋರಿ ಬಂದಿದ್ದಾನೆ. ಹಾಗೆ ಬಂದವನೇ ದಾನ ಪಡೆಯುತ್ತಿದ್ದಾನೆ ಎಂದೇ ಕಲ್ಪನೆ ಮಾಡಿಕೊಂಡು ಸಿದ್ಧನಾಗಿದ್ದೆ. ಮನಸ್ಪೂರ್ವಕವಾಗಿ ಕಾಯಾ, ವಾಚಾ, ಮನಸಾ ತ್ರಿಕರಣ ಬದ್ಧನಾಗಿಯೇ ಇದ್ದೇನೆ. ಕ್ರಿಯಾ, ಕರಣ, ಕರ್ಮಶುದ್ಧಿಯಿಂದಲೇ ತೊಡಗಿದ್ದೇನೆ. ಇಂತಹ ಮನಸ್ಥಿತಿ ಆ ದೇವರೇ ಅನುಗ್ರಹಿಸಿದ ಪ್ರಸಾದ ಎಂದು ತಿಳಿದಿದ್ದೇನೆ. ಯಾವುದು ಸತ್ಕರ್ಮ, ಯಾವುದು ಅನುಸರಣೀಯ, ಯಾವುದು ಧರ್ಮ, ಯಾವುದು ನ್ಯಾಯ ಎಂದು ನನಗನಿಸುತ್ತಿತ್ತೋ ಅದನ್ನಷ್ಟೇ ನನ್ನ ಜೀವನ ಪರ್ಯಂತರ ನಡೆಸುತ್ತಾ ಬಂದಿದ್ದೇನೆ. ಯಾವುದೇ ಕಾರಣಕ್ಕಾದರೂ ಒಂದು ಕಾರ್ಯ ನನಗೆ ಸಲ್ಲದು, ನಿಷಿದ್ಧ ಎಂದು ಭಾವಿಸಲ್ಪಟ್ಟರೆ ಎಷ್ಟೇ ಕಷ್ಟವಾದರೂ, ನನಗಿಷ್ಟವಿದ್ದರೂ ಅಂತಹ ಯಾವುದನ್ನೂ ನಾನು ಈವರೆಗೆ ಮಾಡಿದವನಲ್ಲ. ಪ್ರತಿಯೊಂದು ಕ್ಷಣದಲ್ಲೂ, ಜೀವನದ ಕಣಕಣದಲ್ಲೂ ಕೃಷ್ಣಾರ್ಪಣ ಬುದ್ದಿಯಿಂದಲೇ ಮನಸ್ಪೂರ್ವಕವಾಗಿ ಏನೇ ಮಾಡುವುದಿದ್ದರೂ ನಿಷ್ಠೆಯಿಂದ ಮಾಡಿದ್ದೇನೆ. ಅರಿತು ಅಪರಾಧ ಮಾಡಿದವನಲ್ಲ. ಅರಿಯದೆ ಏನಾದರೂ ಪ್ರಮಾದವಾಗಿದ್ದರೂ ಇರಬಹುದೋ ಏನೋ! ಆದರೆ ಅಂತಹ ಯಾವುದೇ ಘಟನೆ ನನ್ನ ಗಮನಕ್ಕೆ ಬಂದದ್ದಿಲ್ಲ. ಬಂದಿದ್ದರೆ ಪ್ರಾಮಾಣಿಕತೆಯಿಂದ ಪ್ರಾಯಶ್ಚಿತ್ತವೇನಿದೆಯೋ ಅದಕ್ಕೆ ಸಿದ್ಧನೇ ನಾನಾಗಿದ್ದೇನೆ. ಇನ್ನು ನೀವೀಗ ಕೇಳುತ್ತಿರುವ ಪ್ರಶ್ನೆ ನನ್ನ ಎಡಗಣ್ಣಿನಿಂದ ಉದುರಿದ ಕೆಲ ಹನಿ ಕಣ್ಣೀರಿನ ಬಗ್ಗೆಯಲ್ಲವೇ? ಸ್ವಾಮೀ! ನನ್ನ ಬಲಭಾಗದ ಶರೀರ ದಾನ ಕಾರ್ಯಕ್ಕೆ ವಿನಿಯೋಗವಾಗುವ ಕಾರಣಕ್ಕೆ ನನಗೆ ಮಹಾದಾನಂದವೇ ಆಗುತ್ತಿತ್ತು. ಆ ಕುರಿತಾಗಿ ಬಹಳಷ್ಟು ಸಂತೋಷಿಯೇ ನಾನಾಗಿದ್ದೆ. ಆದರೆ ಇನ್ನುಳಿದ ಅರ್ಧ ಶರೀರ ಅಂದರೆ ಎಡ ಭಾಗದ ದೇಹ ನೀರರ್ಥಕವಾಗಿ ವ್ಯರ್ಥವಾಗಿ ಹೋಯಿತಲ್ಲಾ? ಈ ಪೂರ್ಣ ಶರೀರವನ್ನು ಬಳಸಿ ಎಡ ಬಲ ಎಂಬ ಭೇದವಿರದೆ ಸಮಾನತೆಯಿಂದ ಸತ್ಕಾರ್ಯಗಳನ್ನು ಮಾಡಿದ್ದರೂ, ನನ್ನ ಕಾಯದ ವಾಮಭಾಗಕ್ಕೆ ಸದುಪಯೋಗವಾಗುವ ಸುಯೋಗ ಸಿಗದೇ ಹೋಯಿತಲ್ಲಾ! ಯಾಕೆ ಹೀಗಾಯಿತು? ಎಂಬ ಕೊರಗು ನನ್ನನ್ನಾವರಿಸಿತು. ಅದರಿಂದ ಉತ್ಪನ್ನವಾದ ದುಃಖವೇ ಕರಗಿ ವ್ಯರ್ಥವಾಗಲಿದ್ದ ಎಡ ಭಾಗದ ಕಣ್ಣಿನಿಂದ ಹನಿಗಳಾಗಿ ಉದುರಿದ್ದು ಮಾತ್ರ ನನ್ನ ದೇವರು ಕೃಷ್ಣನ ಸಾಕ್ಷಿಯಾಗಿ ಸತ್ಯ ವಿಚಾರ. ಹಾಗೆಂದು ನಿಮಗೆ ದಾನವಾಗಿ ನೀಡಲಿದ್ದ ಬಲ ಭಾಗದ ಶರೀರದ ಬಗ್ಗೆ ಬಹಳಷ್ಟು ಹೆಮ್ಮೆ, ಗೌರವ, ತೃಪ್ತಿ, ಮಹದಾನಂದವನ್ನೇ ಹೊಂದಿದ್ದೇನೆ. ಆ ಕುರಿತಾಗಿ ನೀವು ಯಾವುದೇ ಸಂದೇಹ ತಳೆಯದಿರಿ. ದಾನ ನೀಡುವ ಬಗ್ಗೆ ಗೊಂದಲವಾಗಲಿ, ನಾನು ಹತಪ್ರಾಣನಾಗುತ್ತೇನೆ ಎಂಬ ದುಃಖವಾಗಲಿ ನನ್ನ ಬಳಿ ಸುಳಿದಿರಲೇ ಇಲ್ಲ. ಸದುದ್ದೇಶದಿಂದಲೇ ಉದ್ಭವಿಸಿ ಬಂದ ಕಣ್ಣೀರು ದಾನಕ್ಕೆ ಖಂಡಿತಾ ಲೋಪವಾಗದು. ಹಾಗಾಗಿ ನೀವು ನಿಸ್ಸಂದೇಹವಾಗಿ ದಾನ ಸ್ವೀಕರಿಸಬೇಕು. ಇದೋ ನಿಮ್ಮ ಕಣ್ಮುಂದೆಯೇ ಇನ್ನು ಕೆಲವೇ ಕ್ಷಣಗಳಲ್ಲಿ ನನ್ನ ಶರೀರವನ್ನು ಇಬ್ಬಾಗಗೊಳಿಸಿ ನಿಮಗರ್ಪಿಸುತ್ತೇವೆ. ಯಾವ ಕಾರಣಕ್ಕೂ ಅಪಚಾರವಾಗದು. ಆ ಚಿನ್ಮಯ ಸ್ವರೂಪ ಸಚ್ಚಿದಾನಂದ ಸ್ವರೂಪಿ ಗೋವಿಂದನ ಹೆಸರಿಗೆ ಹೇಗೆ ಚ್ಯುತಿ ಇಲ್ಲದ ಕಾರಣ ಅಚ್ಯುತನೋ, ಚಿಂತೆ ಇಲ್ಲದ ಅಚಿಂತ್ಯನೋ ಹಾಗೆಯೇ ಆ ಮಹಾತ್ಮನ ನಾಮಕ್ಕೆ ಸಮರ್ಪಿತವಾದ ಈ ದಾನವೂ ಲೋಪದೋಷ ಹೊಂದಿರಲಾರದು. ನೀವು ದಾನ ಸ್ವೀಕರಿಸಲೇ ಬೇಕು. ನನ್ನ ಶರೀರ ಇನ್ನು ಕೆಲವೇ ಕೆಲವು ಕ್ಷಣದಲ್ಲಿ ನಿಮಗೆ ದಾನವಾಗಿ ದೊರೆಯಲಿದೆ. ನಿಮ್ಮ ಮಗನ ಪ್ರಾಣ ಉಳಿಯಲಿದೆ. ಹೆದರಿದರಿ, ದಾನ ಸ್ವೀಕರಿಸಿ” ಎಂದು ಸವಿವರವಾಗಿ ಮನದಾಳದ ಸತ್ಯ ವಿಚಾರವನ್ನು ಪ್ರಮಾಣೀಕರಿಸಿ, ಸಂತೈಸಿ ವಿನಂತಿಸಿದ. ವೃದ್ಧ ಬ್ರಾಹ್ಮಣರ ಸಂದೇಹವನ್ನೂ ನಿವಾರಿಸಿ ಮಗ ತಾಮ್ರಧ್ವಜ ಹಾಗು ರಾಣಿ ಕುಮುದ್ವತಿಗೆ ಶರೀರ ಕೊಯ್ಯುವ ಕಾರ್ಯದಲ್ಲಿ ತೊಡಗಿಕೊಳ್ಳಲು ಆಜ್ಞೆ ಮಾಡಿದ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page