ಭಾಗ – 578
ಭರತೇಶ ಶೆಟ್ಟಿ,ಎಕ್ಕಾರು

ಮಹಾರಾಣಿ ಕುಮುದ್ವತಿಯ ಮಾತು ಕೇಳುತ್ತಿದ್ದಂತೆಯೇ ವೃದ್ಧ ಬ್ರಾಹ್ಮಣ ಮುಂದೊತ್ತಿ ಬಂದು “ಮಾತೆ! ಹೆಣ್ಣು ತ್ಯಾಗದ ಪ್ರತೀಕ. ನೀವೂ ಈಗ ಮಹತ್ತರವಾದ ತ್ಯಾಗ ಸಮರ್ಪಣಾ ಭಾವ ಪ್ರಕಟಿಸಿದ್ದೀರಿ. ನನ್ನ ಪುತ್ರನ ಪ್ರಾಣ ಉಳಿಸಲೋಸುಗ ನಿಮ್ಮ ಪ್ರಾಣವನ್ನೇ ದಾನ ಮಾಡಲು ಸಿದ್ಧರಾದ ನಿಮ್ಮ ಋಣವನ್ನು ನಾನು ಯಾವ ವಿಧಾನದಲ್ಲಿ ತೀರಿಸಲಿ? ಆದರೆ ನೀವು ಸಮರ್ಪಣೆಗೆ ಸಿದ್ಧರಾದರೂ ಸಿಂಹ ಕೇಳಿರುವುದು ಅರಸನ ಶರೀರದ ಬಲ ಭಾಗವನ್ನು. ಕೇವಲ ಅರಸನ ಶರೀರ ಮಾತ್ರ ಸ್ವೀಕೃತ ಎಂದು ಬಹಳ ಸ್ಪಷ್ಟವಾಗಿ ಹೇಳಿದೆ. ಇನ್ನು ಧರ್ಮ ಸೂಕ್ಷ್ಮದ ಬಗ್ಗೆ ಯೋಚಿಸಿ ಸಿಂಹವನ್ನು ಒಪ್ಪಿಸುವಲ್ಲೂ ನಮಗೊಂದು ತೊಡಕಿದೆ. ಪತ್ನಿ ಪತಿಯ ಅರ್ಧಾಂಗಿನಿ ಏನೋ ಸರಿ. ಆದರೆ ಪತ್ನಿಯನ್ನು ಶಾಸ್ತ್ರ ವಾಮಾಂಗಿ ಎಂದು ಹೇಳಿದೆ. ಅಂದರೆ ಪತ್ನಿ ಗಂಡನ ಎಡಭಾಗವಾಗುತ್ತಾಳೆ. ಸಿಂಹ ಕೇಳಿರುವುದು ಬಲಭಾಗವನ್ನು. ಹಾಗಾಗಿ ನಿಮ್ಮ ಆಶಯದಂತೆ ದಾನ ನೀಡುವಲ್ಲಿ ತೊಡಕಾದೀತು ಅಮ್ಮ. ಮಹಾರಾಜನ ಬಲಭಾಗದ ಅರ್ಧ ಶರೀರ ಹೊರತು ಅನ್ಯ ಮಾರ್ಗವೇ ಕಾಣಿಸುತ್ತಿಲ್ಲ” ಎಂದು ಹೇಳಿ ದುಃಖಿಸಿದ.
ಮಯೂರಧ್ವಜನಿಗೆ ಬಹಳ ಆಶ್ಚರ್ಯವಾಯಿತು. ಕುಮುದ್ವತಿಯ ಚಿಂತನೆಯೂ ನ್ಯಾಯಯುತವಾಗಿತ್ತು. ಹಾಗೆಯೇ ವೃದ್ಧ ಬ್ರಾಹ್ಮಣರು ತರ್ಕಿಸಿದ ನ್ಯಾಯವೂ ಸರಿಯಾಗಿಯೇ ಇದೆ. ಪತ್ನಿಯನ್ನು ಗಂಡನ ಬಲಭಾಗದ ಅರ್ಧ ಶರೀರಕ್ಕೆ ಪ್ರತಿಯಾಗಿ ಸಿಂಹಕ್ಕೆ ದಾನ ಮಾಡಲಾಗದು. ಸಿಂಹ ಕೇಳುವಾಗ ಬಲಭಾಗದ ಶರೀರವನ್ನೇ ಸ್ಪಷ್ಟವಾಗಿ ಕೇಳಿದೆ ಎಂದರೆ ಇದು ಖಂಡಿತವಾಗಿಯೂ ದೈವ ಪರೀಕ್ಷೆಯೇ ಅಲ್ಲದೆ ಬೇರೇನೂ ಆಗಿರಲು ಸಾಧ್ಯವಿಲ್ಲ. ಈ ಸಿಂಹ ಕೇವಲ ಕಾಡಿನ ಪ್ರಾಣಿಯಾಗಿಲ್ಲ ಯಾವುದೋ ಅತಿಮಾನುಷ ಶಕ್ತಿಯೇ ಆಗಿರುವುದನ್ನು ನಾನು ಖಚಿತ ಪಡಿಸಿಕೊಳ್ಳಬಹುದು. ಹೀಗೆ ಯೋಚನಾ ಮಗ್ನನಾಗಿ ಅರಸ ಮೌನವಾಗಿ ತುಸು ಹೊತ್ತು ನಿಂತು ಬಿಟ್ಟನು.
ಈ ಮೌನ ವೇಳೆಯನ್ನು ಮುರಿದು ವೃದ್ಧಬ್ರಾಹ್ಮಣ “ಮಹಾರಾಜಾ! ನಿಮ್ಮಂತಹ ಸಂವೇದನಾಶೀಲ ಅರಸನನ್ನು ಪಡೆದ ಈ ನಾಡು ಧನ್ಯವಾಗಿದೆ. ಕೇವಲ ಒಬ್ಬ ಬ್ರಾಹ್ಮಣ ವಿಪ್ರನಾದ ನನ್ನ ಮಗನ ಅವಶ್ಯಕತೆ ಈ ಸಮಾಜಕ್ಕೆ ಅತ್ಯಲ್ಪವಾದುದು. ಹೆಚ್ಚೆಂದರೆ ಅವನು ನನ್ನ ವೈಯಕ್ತಿಕ ಸಂಸಾರಕ್ಕೆ ಆಧಾರವಾದಾನು ಬಿಟ್ಟರೆ ಯಾರೋ ಕೆಲವರಿಗಷ್ಟೇ ಏನಾದರು ಉಪಕಾರ ಮಾಡಿದರೆ ಮಾಡಬಹುದು. ಆದರೆ ನಾಡಿನ ದೊರೆಯಾದ ನೀವು ಹಾಗಲ್ಲ ಇಡೀ ಸಾಮ್ರಾಜ್ಯವನ್ನೇ ನಿಮ್ಮ ಸ್ವಂತ ಸಂಸಾರದಂತೆ ಪೋಷಿಸಿ ಸಂರಕ್ಷಿಸುತ್ತಿರುವ ಸಂರಕ್ಷಕ ಸ್ಥಾನದಲ್ಲಿದ್ದೀರಿ. ನಿಮ್ಮಂತಹ ಮಹಾತ್ಮನ ಅರ್ಧ ಶರೀರದಷ್ಟು ಯೋಗ್ಯತೆಯಾದರು ನನ್ನ ಮಗನ ಪ್ರಾಣದ ಪ್ರತಿಯಾಗಿ ಆರೋಪವಾಯಿತಲ್ಲ? ಅದಕ್ಕಿಂತ ಹೆಚ್ಚಿನ ಯೋಗ್ಯತೆ ಆತನ ಜೀವಮಾನದಲ್ಲಿ ಸಂಪಾದಿಸಲು ಸಾಧ್ಯವಿಲ್ಲ. ಇದನ್ನೇ ನನ್ನ ಮಗ ಸಾಧಿಸಿದ ಮಹತ್ಸಾಧನೆ ಎಂದು ತಿಳಿದು ನಾನು ತೃಪ್ತನಾಗುತ್ತೇನೆ. ಲೋಕದ ಉಪಕಾರಕ್ಕೆ ಅಗತ್ಯವಿರುವ ನಿಮ್ಮ ಶರೀರ ಉಳಿಯಬೇಕು. ನನ್ನ ಮಗನನ್ನು ಆ ಶರೀರ ಭಕ್ಷಿಸಿ ತಿಂದು ಬಿಡಲಿ. ಆಗ ಆಗಬಹುದಾದ ನಷ್ಟ ಕೇವಲ ನನ್ನ ಒಂದು ಸಂಸಾರಕ್ಕೆ ಮಾತ್ರ. ಆದರೆ ಮಹಾರಾಜರಾದ ನಿಮ್ಮ ಪ್ರಾಣ ನಷ್ಟವಾದರೆ ತೊಂದರೆ ಅನುಭವಿಸುವವರು ಇಡೀ ನಾಡಿನ ಜನತೆ. ಹೀಗಿರುವಾಗ ನನ್ನ ಅವಿವೇಕದಿಂದ ಅವಸರದಲ್ಲಿ, ಆತಂಕದಿಂದಾಗಿ ಆಗಿ ಹೋದ ಪ್ರಮಾದವನ್ನು ಮನ್ನಿಸಬೇಕು. ನಿಮಗೆ ತೊಂದರೆ ಹಾಗು ವೃಥಾ ವ್ಯಥೆಯನ್ನು ನೀಡಿದ ಅಪರಾಧವನ್ನು ಕ್ಷಮಿಸಿ, ಏನೂ ಆಗಿಲ್ಲವೆಂದು ತಿಳಿದುಕೊಳ್ಳಿ. ಲೋಕ ಕಲ್ಯಾಣಾರ್ಥವಾಗಿ ಯಾವುದೋ ಪುಣ್ಯ ಯಾಗ ಕಾರ್ಯ ನಿರತರಾಗಿದ್ದೀರಿ. ನಿಶ್ಚಿಂತೆಯಿಂದ ನೀವು ಅದನ್ನು ಮುಂದುವರಿಸಿ. ನನ್ನದ್ದಾದ ವೈಯಕ್ತಿಕ ಸಮಸ್ಯೆಗೆ ನಿಮ್ಮಂತಹವರ ಬಲಿದಾನವಾಗಬಾರದು. ಈವರೆಗೆ ನಿಮ್ಮನ್ನು ಕಾಡಿಸಿದ ದೋಷಕ್ಕೆ ಏನಾದರು ಪ್ರಾಯಶ್ಚಿತ್ತ ಮಾಡಿಸಿಕೊಳ್ಳುತ್ತೇನೆ. ಇನ್ನು ನಾನು ಇಲ್ಲಿ ನಿಲ್ಲಬಾರದು. ಹೊರಟು ಹೋಗುತ್ತೇನೆ ತಾವು ಅನುಮತಿ ನೀಡಬೇಕು” ಎಂದು ಕೈ ಮುಗಿದು ಬೇಡಿಕೊಂಡನು.
ಕೇಳಿಸಿಕೊಂಡ ಮಯೂರಧ್ವಜನು ಒಮ್ಮೆಲೆ ಎಚ್ಚೆತ್ತವನಂತೆ “ಅಯ್ಯೋ ಕುಲೋತ್ತಮರೇ! ನಿಲ್ಲಿ ನಿಲ್ಲಿ. ನೀವು ಅನ್ಯಥಾ ಏನೂ ಭಾವಿಸಬೇಡಿ. ನಾವು ತುಸು ಹೊತ್ತು ಮೌನವಾಗಿ ಉಳಿದು ಹೋದುದಕ್ಕಾಗಿ ಕ್ಷಮಾ ಪ್ರಾರ್ಥಿಯಾಗಿದ್ದೇನೆ. ನನ್ನ ಶರೀರ ದಾನದ ಕುರಿತಾಗಿ ಯಾವುದೇ ಸಂಶಯವನ್ನು ಹೊಂದದಿರಿ. ಏನೋ ಧರ್ಮ ಸೂಕ್ಷ್ಮ ಮತ್ತು ದೈವ ಸಂಕಲ್ಪ ಹಾಗು ದೇವರ ಲೀಲೆಯ ಬಗ್ಗೆ ಯೋಚಿಸುತ್ತಾ ಮಗ್ನನಾದೆನೇ ಹೊರತು ನನ್ನ ಮಾತಿನಿಂದ ಎಳ್ಳಿನಿತೂ ಹಿಂದೆ ಸರಿಯುವ ಕನಿಷ್ಟ ಯೋಚನೆಯನ್ನೂ ನಾನು ಮಾಡಿದವನಲ್ಲ. ಇನ್ನು ನನ್ನ ಪತ್ನಿ ಪತಿವೃತೆಯಾಗಿ ಏನೋ ಅವಳ ಮನದ ಯೋಚನೆಯನ್ನು ನಮ್ಮ ಮುಂದಿರಿಸಿದಳು. ಅದು ಅವಳ ಯೋಗ್ಯತೆಯನ್ನೇ ಬಿಂಬಿಸಿದೆ. ಹಾಗೆಂದು ನಾನು ಪರ್ಯಾಯ ವ್ಯವಸ್ಥೆಯ ಬಗ್ಗೆ ಚಿಂತಿಸುತ್ತಿಲ್ಲ. ನಾನು ಅಂತಹ ಬದಲಿ ದಾನವನ್ನು ಮನ್ನಿಸುವುದೂ ಇಲ್ಲ, ಒಪ್ಪುವುದೂ ಇಲ್ಲ. ಯಾಕೆಂದರೆ ದಾನ ಯಾವತ್ತೂ ಒಂದಕ್ಕೆ ಪರ್ಯಾಯವಾಗಿ ಉಪಾಯಾಂತರದಿಂದಲೋ ಯುಕ್ತಿಯಿಂದಲೋ ಪೂರೈಸಲ್ಪಡಬಾರದು. ದಾನಕರ್ಮವು ದ್ರವ್ಯ ಶುದ್ಧಿಯಿಂದಲೂ, ಕ್ರಿಯಾ ಶುದ್ಧಿಯಿಂದಲೂ ಮನಸ್ಪೂರ್ವಕವಾಗಿ ಸಂಪೂರ್ಣ ಸಮರ್ಪಣಾ ಭಾವದಿಂದ ನಿಸ್ವಾರ್ಥವಾಗಿ ನೀಡಲ್ಪಡಬೇಕು. ಹಾಗಾಗಿ ನಮ್ಮ ಆರಾಧ್ಯ ವಾಸುದೇವನೇ ಮೆಚ್ಚಿಕೊಳ್ಳುವಂತೆ ನಿಮಗೆ ನಾನಿತ್ತಿರುವ ವಚನವನ್ನು ತ್ರಿಕರಣಪೂರ್ವಕವಾಗಿ ನಡೆಸಿಕೊಡುತ್ತೇನೆ. ಯಾವುದೇ ರೀತಿಯ ಸಂದೇಹವನ್ನಾಗಲಿ, ಭಯವನ್ನಾಗಲಿ ಹೊಂದದಿರಿ” ಎಂದು ಕೈ ಜೋಡಿಸಿ ಪ್ರಾರ್ಥಿಸುತ್ತಾ ವಾಗ್ದಾನ ನೀಡಿದನು.
ದಾನ ನೀಡುವ ಸಿದ್ಧತೆಗಳನ್ನು ವಿಧಿ ಪ್ರಕಾರ ನೆರವೇರಿಸುವಂತೆ ಕುಲ ಪುರೋಹಿತರು ಮತ್ತು ಆಸ್ಥಾನ ಗುರುಗಳಲ್ಲಿ ವಿನಂತಿ ಮಾಡಿಕೊಂಡನು. ಅಂತೆಯೇ ಅವರುಗಳ ನಿರ್ದೇಶನದಲ್ಲಿ ಮಹಾರಾಣಿ ರಾಜ ಮಯೂರಧ್ವಜನಿಗೆ ಶೌಚಕರ್ಮ ಸ್ನಾನದ ವ್ಯವಸ್ಥೆ ಮಾಡಿಸಿ ತನ್ನ ಕೈಯಾರೆ ಗಂಗಾಜಲವನ್ನು ಕೊಡ ಕೊಡಗಳಲ್ಲಿ ಸುರಿದು ಮೀಯಿಸಿದಳು. ಮೈಯನ್ನೆಲ್ಲ ಹೊಸ ಬಟ್ಟೆಯಿಂದ ಒರೆಸಿ ತೇವ ಆರಿಸಿ ಬಳಿಕ ಮೈ ಮೇಲೆಲ್ಲಾ ಶ್ರೀಗಂಧ ಚಂದನಾದಿಗಳನ್ನು ಪೂಸಿ, ರಾಜೋಚಿತ ಪರಿಮಳ ಸುಗಂಧ ದ್ರವ್ಯಗಳನ್ನು ಲೇಪಿಸಿದಳು. ತಾಮ್ರಧ್ವಜನು ಪರಿಚಾರಕರು ಸಿದ್ಧಪಡಿಸಿ ಹಿಡಿದಿದ್ಧ ಪಿತಾಂಬರಾದಿ ವಸ್ತ್ರಗಳನ್ನು ತನ್ನ ಕೈಯಾರೆ ತೊಡಿಸಿದನು. ಪವಿತ್ರ ತುಳಸಿ ಮಾಲೆಯನ್ನೂ ತಂದೆಯ ಕೊರಳಿಗೆ ಧಾರಣೆ ಮಾಡಿಸಿ ಅಲಂಕರಿಸಿದನು. ಇಷ್ಟೆಲ್ಲಾ ಆದ ಬಳಿಕ ಪುರೋಹಿತರು ಮುಂದೆ ಬಂದು ಪವಿತ್ರವಾದ ಸಾಲಿಗ್ರಾಮವನ್ನು ಅರ್ಚನೆ ಮಾಡಿ ತೀರ್ಥೋದಕವನ್ನು ಮಹಾರಾಜ ಮಯೂರಧ್ವಜನಿಗೆ ನೀಡಿದರು. ನಂತರ ಪುರೋಹಿತರು ಸೂಚಿಸಿದಂತೆ ಸಿದ್ಧನಾದ ಮಯೂರಧ್ವಜ ದಾನ ಪಡೆಯುವ ವೃದ್ಧ ಬ್ರಾಹ್ಮಣೋತ್ತಮರಿಗೆ ಉತ್ತಮ ಪೀಠವನ್ನು ನೀಡಿ ಕುಳ್ಳಿರಿಸಿದನು. ರಾಣಿ ಕುಮುದ್ವತಿಯ ಜೊತೆಯಾಗಿ ಸಪತ್ನೀಕನಾಗಿ ಅರ್ಘ್ಯ ಪಾದಾದಿಗಳಿಂದ ಬ್ರಾಹ್ಮಣೋತ್ತಮರನ್ನು ಉಪಚರಿಸಿ ಸೇವೆ ಮಾಡಿದರು. ಬಳಿಕ ಬ್ರಾಹ್ಮಣನನ್ನು ದಾನ ಪಡೆಯುವ ದೇವರೆಂದೇ ಕಲ್ಪಿಸಿ ನರಸಿಂಹ ದೇವರೆಂದೇ ಆವಾಹಿಸಿ ಸರ್ವ ವಿಧ ಪೂಜೆಗಳನ್ನೂ ದೇವತಾ ಸಂಪ್ರೀತಿಗಾಗಿ ನೆರವೇರಿಸಿದರು. ಇದೆಲ್ಲವನ್ನೂ ನೋಡುತ್ತಿದ್ದ ಪ್ರಜಾಜನರು ಸ್ಥಂಭೀಭೂತರಾಗಿ ಅಲುಗಾಡದೆ ಕಣ್ಣೆವೆಯಿಕ್ಕದೆ ನೋಡುತ್ತಿದ್ದಾರೆ. ಮುಂದೇನಾಗಲಿದೆಯೋ! ನಾವು ಎಂತಹ ದುರಂತ ದೃಶ್ಯಗಳನ್ನು ನೋಡಲಿಕ್ಕಿದೆಯೋ? ನಮ್ಮ ದೇವತಾ ಸದೃಶ ಅರಸನ ದೇಹವನ್ನು ಸೀಳಿ ಸಿಗಿದು ಅರ್ಧ ಭಾಗಗಳಾಗಿ ತುಂಡರಿಸುವ ಆ ಭೀಕರತೆಯನ್ನು ನೋಡುವ ಮೊದಲೇ ನಮಗೆ ಸಾವಾದರು ಯಾಕೆ ಬರಬಾರದು ಎಂದು ಕೊರಗತೊಡಗಿ ಕಣ್ಣೀರಧಾರೆ ಹರಿಸುತ್ತಿದ್ದಾರೆ. ಇತ್ತ ಬ್ರಾಹ್ಮಣಾರಾಧನೆ ನಡೆಯುತ್ತಲೇ ಇದೆ, ಒಂದಾದ ಬಳಿಕ ಒಂದೊಂದು ವಿಧಿಗಳು ಸಂಪನ್ನಗೊಳ್ಳುತ್ತಿವೆ.











































