28.2 C
Udupi
Friday, June 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 562

ಭರತೇಶ ಶೆಟ್ಟಿ,ಎಕ್ಕಾರು

ಮಂತ್ರಿ ಪುಂಡರೀಕನು ಯೋಚಿಸಿ “ಯುವರಾಣಿ, ನನ್ನಲ್ಲಿರುವ ವಿಷ ವಿಶೇಷ ಧಾತುವನ್ನು ಹೊಂದಿದೆ. ಜೀವ ಇರುವವರಿಗೆ ಕಚ್ಚಿದರೆ ಪ್ರಾಣ ಹೀರಬಲ್ಲುದು. ಅಂತೆಯೇ ನಿರ್ಜೀವ ಅವಯವವನ್ನು ಕಚ್ಚಿ ವಿಷ ಪೂರಣವಾದರೆ ಅನ್ಯ ಜೈವಿಕ ಪ್ರಕ್ರಿಯೆ ನಡೆದು ಕೊಳೆಯುವಂತೆ ಮಾಡಬಲ್ಲ ಯಾವ ಕ್ರಿಮಿಗಳೂ ಮುತ್ತಲಾರವು. ಆ ಕಾರಣದಿಂದ ನನ್ನ ವಿಷ ಈ ರುಂಡ ಮುಂಡಗಳಿಗೆ ಹಬ್ಬಿದರೆ ನಂತರ ಕೊಳೆಯಲಾರದು. ಹಾಗಾಗಿ ಮೊದಲಾಗಿ ಛೇದಿಸಲ್ಪಟ್ಟಿರುವ ಪಾರ್ಥ ಮಹಾಶಯನ ರುಂಡ ಮುಂಡಗಳನ್ನು ಕಚ್ಚಿ ನನ್ನ ವಿಷವನ್ನು ಹರಿಸಿ ಮುಂದೆ ಆಗಬೇಕಾಗಿರುವ ಕೆಲಸದತ್ತ ತೆರಳುತ್ತೇನೆ” ಎಂದನು.

ಆಗ ಬಬ್ರುವಾಹನನು “ಹೇ ಮಂತ್ರಿವರೇಣ್ಯ! ನನ್ನ ತಂದೆಯವರು ಈ ರಣಾಂಗಣ ಪ್ರವೇಶ ಕಾಣುವಾಗ ವೃಷಕೇತು ನನ್ನೊಂದಿಗೆ ಕಾದಾಡಿ ಹತಪ್ರಾಣನಾಗಿದ್ದ. ಆತನ ಸಾವು ಯುದ್ಧದ ಸೋಲಿಗಿಂತಲೂ ಅಧಿಕತರವಾದ ನೋವನ್ನು ನೀಡಿತ್ತು. ಆ ಹೊತ್ತು ಅವರು ಮರುಗಿ, ವೃಷಕೇತುವಿನ ರುಂಡವನ್ನೆತ್ತಿ ತೊಡೆಯಲ್ಲಿಟ್ಟು ‘ಅಯ್ಯಾ ಕುಮಾರಾ! ನೀನೂ ಮಡಿದೆಯಾ… ನಿನ್ನ ಅಪ್ಪ ಕರ್ಣ ನನಗೆ ಅಣ್ಣನಾಗಿದ್ದರೂ ಅರಿಯದೆ ಕೊಂದು ಕಳೆದೆವು. ಆ ಬಳಿಕ ನಿನ್ನಲ್ಲಿ ನನ್ನ ಅಣ್ಣನನ್ನು ಕಾಣುತ್ತಿದ್ದೆ. ಮಾತ್ರವಲ್ಲ ಅತುಲ ವಿಕ್ರಮಿಯಾದ ಸಾಹಸ ಕಾಣುವಾಗ ನನ್ನ ಮಗ ವೀರ ಅಭಿಮನ್ಯುವನ್ನೇ ನೋಡಿದಂತೆ ಭಾಸವಾಗುತ್ತಿತ್ತು. ಅಣ್ಣ ಮತ್ತು ಮಗನ ಸ್ಥಾನದ ಗೈರು ನಿನ್ನ ಉಪಸ್ಥಿತಿಯಲ್ಲಿ ನನ್ನನ್ನು ಸಮಾಧಾನಿಸುತ್ತಿತ್ತು. ನಾನು ಬದುಕಿರುವಾಗಲೇ ನಿನಗೆ ಈ ದುರ್ಗತಿ ಬಂತಲ್ಲಾ ಮಗನೇ! ಈ ವೇದನೆ ನನ್ನಿಂದ ಸಹಿಸಲಸಾಧ್ಯವಾಗಿದೆ ಕಂದಾ ಇಂದಿನ ಈ ದುರ್ದಿನ ನಿನ್ನನ್ನೂ ಕಳಕೊಂಡು ಯಾವ ಪುರುಷಾರ್ಥಕ್ಕಾಗಿ ಇನ್ನು ಹೋರಾಡಬೇಕು ಹೇಳು ಮಗನೇ?’ ಎಂಬಂತೆ ಅತಿ ದೀನನಾಗಿ ರೋದಿಸುವುದನ್ನು ಕಣ್ಣಾರೆ ಕಂಡಿದ್ದೇನೆ. ಹಾಗಾಗಿ ನನ್ನ ಪಿತಾಶ್ರೀಯವರ ಪಾಲಿಗೆ ಅತಿ ಪ್ರೀತನಾದ ವೃಷಕೇತು ಕೂಡ ಪುನರ್ಜೀವ ಪಡೆಯಬೇಕು. ಹೇ ಪುಂಡರೀಕಾ! ಕೃಪೆದೋರಿ ಅತಿ ಚೆಲುವನೂ, ಅತಿಬಲನೂ, ಸದ್ಗುಣಶೀಲನೂ, ಪ್ರಾಮಾಣಿಕನೂ ಆದ ಈತನ ಕಾಯವೂ ಉಳಿಯುವಂತಾಗಲು ಮೊದಲು ವೃಷಕೇತುವಿನ ರುಂಡ ಮುಂಡಗಳನ್ನು ಕಚ್ಚಿಬಿಡಬೇಕು. ಜೊತೆಗೆ ನನ್ನಪ್ಪ ಅರ್ಜುನನ ಕಾಯವನ್ನೂ ವಿಷಮಯಗೊಳಿಸಬೇಕಾಗಿ ನನ್ನ ಪ್ರಾರ್ಥನೆ” ಎಂದು ಕರಜೋಡಿಸಿ ಬೇಡಿದನು. ಉಲೂಪಿಯು ಮಗನ ಬೇಡಿಕೆಗೆ ಸಮ್ಮತಿ ಸೂಚಿಸಿದಾಗ ಪುಂಡರೀಕ ಹಾಗೆಯೇ ಮಾಡಿದನು. ಉಲೂಪಿಯ ಅಪ್ಪಣೆ ಪಡೆದನು. ಆಗ ಉಲೂಪಿ ಇದೋ ನಾನೇ ನಿನ್ನಲ್ಲಿ ಹೇಳಿ ಕಳುಹಿಸಿರುವೆ ಎಂಬ ಸತ್ಯಪ್ರಮಾಣಕ್ಕಾಗಿ ಈ ಭೂಷಣಗಳನ್ನು ನಿನ್ನ ಜೊತೆ ಕೊಂಡು ಹೋಗು ಎಂದು ಹೇಳಿ ತನ್ನ ಲಾಂಛನಗಳಿರುವ ಆಭರಣಗಳನ್ನು ನೀಡಿದಳು. ಪುಂಡರೀಕ ಎಲ್ಲರಿಗೂ ನಮಸ್ಕರಿಸಿ ನಾಗಲೋಕಕ್ಕೆ ತೆರಳಿದನು.

ಪುಂಡರೀಕನಿಗೆ ನಾಗಲೋಕವೇನೂ ಹೊಸತಲ್ಲ. ಪ್ರತಿಯೊಂದು ವಿಭಾಗ, ಪ್ರದೇಶವೂ ಚಿರಪರಿಚಿತ. ಆದರೂ ಇಂದೇಕೋ ಆತನಿಗೆ ನಾಗಲೋಕದೊಳಗೆ ಸಂಚರಿಸುವಾಗ ಅತಳದ ಆಶ್ಚರ್ಯ, ವಿತಳದ ವಿಸ್ಮಯ, ಸುತಳದ ಒಪ್ಪವನ್ನೂ, ಮಹಾತಳದ ರತ್ನ ಖಚಿತ ಮಹೋನ್ನತಿಯನ್ನೂ, ತಳಾತಳದ ಅತಿಶಯವನ್ನೂ, ರಸಾತಳದ ರಂಜನೆಯನ್ನೂ ನೋಡುತ್ತಾ ವಿಸ್ಮಿತನಾಗುತ್ತಾ ಪಾತಾಳ ಲೋಕದ ಆದಿಶೇಷನಲ್ಲಿಗೆ ಹೋದನು.

ಪಾತಾಳದ ದಿವ್ಯಮಣಿಮಯವಾದ ಅರಮನೆಯಲ್ಲಿ ಅಗಣಿತ ದೇವ ದೈತ್ಯ ಸರ್ಪಗಳಿಂದ ಆವೃತನಾಗಿ ಸಹಸ್ರ ಹೆಡೆಗಳ ಪ್ರಭೆ, ದೇಹದ ಕಾಂತಿಗಳಿಂದ, ಸದಾ ವಿಷ್ಣು ಧ್ಯಾನ ನಿರತನಾದ, ಅನರ್ಘ್ಯ ಸಂಪತ್ತಿಗೆ ಒಡೆಯನಾದ ಆದಿಶೇಷನ ಓಲಗಕ್ಕೆ ಪುಂಡರೀಕ ಬಂದನು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page