ಭಾಗ – 561
ಭರತೇಶ ಶೆಟ್ಟಿ, ಎಕ್ಕಾರು

ದಾಸಿಯಾದರೂ ಸ್ವಂತ ಮಗಳ ಮಗುವಿನ ರಕ್ಷಣೆ ಪಾಲನೆಗಿಂತಲೂ ಅಧಿಕತರವಾದ ಸ್ವಾಮಿನಿಷ್ಠೆಯಿಂದ ಮಗುವಿಗೆ ಅಜ್ಜಿಯೇ ಆಗಿದ್ದ ಧಾತ್ರಿಯೂ ಕಣ್ಮುಚ್ಚಿರುವ ಈ ಕ್ಷಣ ಚಂದ್ರಹಾಸ ನಿಜಾರ್ಥದಲ್ಲೂ ಅನಾಥನೇ ಆಗಿದ್ದಾನೆ. ನಾಥ ಅಂದರೆ ಒಡೆಯ, ಒಡೆಯನ ಮಗನೂ ಭವಿಷ್ಯದಲ್ಲಿ ರಾಜ್ಯದ ಪ್ರಜಾಪರಿವಾರಕ್ಕೆ ನಾಥನೇ ಆಗಬೇಕಾದವನು ಇಂದಿನ ಈ ಕ್ಷಣ ಅನಾಥನಾಗಿದ್ದಾನೆ. ಪರಿಸರದ ಜನರ ಸಹಕಾರದಿಂದ ಅಜ್ಜಿ ಧಾತ್ರಿಯ ಕಾಯ ಪಂಚ ಭೂತಗಳಲ್ಲಿ ಲೀನವಾಯಿತು. ಅಂದಿನ ರಾತ್ರಿ ಮಗುವನ್ನು ಓರ್ವನನ್ನೇ ಬಿಡುವುದು ಹೇಗೆಂದು ಪಕ್ಕದ ಮನೆಯ ಯಾರೋ ಕರೆದೊಯ್ದು ತಮ್ಮ ಮನೆಯಲ್ಲಿರಿಸಿದರು. ಮುಗ್ದ ಮಗು ಚಂದ್ರಹಾಸನಿಗೆ ಸರ್ವಸ್ವವೇ ಆಗಿದ್ದ ಮುದ್ದಿನ ಅಜ್ಜಿ ಈಗಿಲ್ಲ. ಅಜ್ಜಿ ಎಲ್ಲಿ ಎಂದರೆ ಹೇಳಲು ನೆರೆಮನೆಯವರಲ್ಲಿ ಉತ್ತರವಿಲ್ಲ. ವಾಡಿಕೆಯ ಉತ್ತರವಾಗಿ ಮಕ್ಕಳಿಗೆ ಹೇಳುವಂತೆ “ಮಗಾ! ಅಜ್ಜಿ ದೇವರ ಬಳಿ ಹೋಗಿದ್ದಾರೆ” ಎಂದು ಸಂತೈಸುವ ಪ್ರಯತ್ನ ಮಾಡುತ್ತಿದ್ದಾರೆ. ತೊದಲು ನುಡಿಗಳಲ್ಲಿ ಮಾತನಾಡುವ ಚಂದ್ರಹಾಸ ತಾನೂ ದೇವರ ಬಳಿ ಹೋಗುತ್ತೇನೆ. ನನಗೆ ಅಜ್ಜಿ ಬೇಕು ಎಂದು ಛಲ ಮಾಡಿದಾಗ ಹೇಗೋ ಸಮಾಧಾನಿಸಿ ಮಲಗಿಸಿದರು. ಹೇಗೋ ದಿನಗಳು ಉರುಳುತ್ತಿವೆ. ನೆರೆಮನೆಗಳ ಎಲ್ಲರಿಗೂ ಚಂದ್ರಹಾಸ ಅಚ್ಚುಮೆಚ್ಚು. ಅನಾಥನೇ ಆಗಿದ್ದರೂ ದೀನನಾಥ ಭಗವಂತ ಒಂದಿಲ್ಲೊಂದು ವ್ಯವಸ್ಥೆಯನ್ನು ಬಾಲ ಚಂದ್ರಹಾಸನಿಗೆ ಒದಗಿಸುತ್ತಾ ಅವ್ಯಕ್ತನಾಗಿಯೇ ಇದ್ದು ಪೋಷಕನಾಗಿದ್ದ ಎಂದರೆ ತಪ್ಪಾಗದು. ಬಾಲ ಚಂದ್ರಹಾಸ ಮೊಳೆತ ಹಲ್ಲುಗಳನ್ನು ಕಿಸಿದು ನಗುತ್ತಾ ಜೊಲ್ಲು ಸುರಿಸುತ್ತಾ ಒಂದು ಮನೆಯಿಂದ ಇನ್ನೊಂದು ಮನೆಗೆ ಅಂಬೆಗಾಲಿಕ್ಕುತ್ತಾ ಓಡಾಡುತ್ತಿದ್ದ. ಯಾರ ಮನೆ ಬಾಗಿಲಿಗೆ ಹೋದರೂ ತಮ್ಮದೆ ಮಗು ಎಂಬಂತೆ ಎತ್ತಿ ಮುದ್ದಾಡುತ್ತಾ, ಸುರಿಸಿದ ಜೊಲ್ಲನ್ನು ಒರೆಸಿ ಶುಚಿಗೊಳಿಸುತ್ತಾ, ಸ್ನಾನ, ಊಟ ಮಾಡಿಸಿ, ತಮ್ಮ ಮನೆಯ ಮಕ್ಕಳ ವಸ್ತ್ರಗಳನ್ನೇ ತೊಡಿಸಿ ಸಲಹುತ್ತಿದ್ದರು. ಅರಸನ ಮಗನೇ ಆದರೂ ಯಾರ್ಯಾರ ವಸ್ತ್ರ, ಕಂಡವರ ಮನೆ ಊಟ, ಯಾರ ಮನೆಯಲ್ಲೋ ನಿದ್ದೆ ಹೀಗೆ ದಿನಗಳು ಸಾಗುತ್ತಾ ಬೆಳೆಯುತ್ತಿದ್ದಾನೆ. ಹೆತ್ತಾಕೆ ತಾಯಿ ತನ್ನ ಪತಿಯೇ ಪರದೈವವೆಂದು ಅನುಸರಿಸಿ ಮಗುವನ್ನು ತೊರೆದು ಸಹಗಮನ ಮಾಡಿದ್ದಳಾದರೂ, ಆ ಹಳ್ಳಿಯಲ್ಲಿ ಅದೆಷ್ಟೋ ಮಾತೆಯಂದಿರು ಇದ್ದಾರೆ. ಅವರೇ ಈಗ ಚಂದ್ರಹಾಸನಿಗೆ ಅಮ್ಮಂದಿರು. ಅಂತಹ ಮಾತೃಹೃದಯಗಳಿಗೆ ಚಂದ್ರಹಾಸ ತಾವೇ ಹೆತ್ತ ಮಗುವಿನಂತೆ ಪ್ರೀತಿಯ ಕೂಸಾಗಿದ್ದ. ಎಲ್ಲರಿಗೂ ಒಂದು ಮನೆ ಮತ್ತು ಮನೆಯವರಾದರೆ, ಚಂದ್ರಹಾಸನಿಗೆ ಹಾಗಲ್ಲ ಆತನ ಪ್ರಾಯದ ಮಕ್ಕಳ ತಾಯಂದಿರೂ ಆತನಿಗೆ ಅಮ್ಮಂದಿರು. ಎಲ್ಲ ಮನೆಗಳೂ ಚಂದ್ರಹಾಸನದ್ದೇ. ವಸುಧೇವ ಕುಟುಂಬಕಂ ಎಂಬಂತೆ ಜಾತಿ, ನೀತಿ, ಭೇದ, ಭಾವಗಳೇನೆಂದೆ ತಿಳಿಯದ ಮಗು ಚಂದ್ರಹಾಸನಿಗೆ ಪಕ್ಕದ ಮನೆಗಳ ಮಕ್ಕಳು ಅಣ್ಣ – ತಮ್ಮಂದಿರು, ಅಕ್ಕ – ತಂಗಿಯರಾದರು. ಆ ಮಕ್ಕಳ ಅತ್ತೆ – ಮಾವ, ಚಿಕ್ಕಮ್ಮ – ಚಿಕ್ಕಪ್ಪ, ದೊಡ್ಡಪ್ಪ – ದೊಡ್ಡಮ್ಮ, ಅಜ್ಜ ಅಜ್ಜಿಯರೂ ಈತನಿಗೂ ಅದೇ ಆದರು. ಅನಾಥ ಪ್ರಜ್ಞೆ ಬಾಧಿಸದಷ್ಟು ಬಹುದೊಡ್ಡ ಸಂಸಾರದಲ್ಲಿ ಚಂದ್ರಹಾಸನ ಬಾಲ್ಯದ ದಿನಗಳು ಕಳೆಯುತ್ತಿವೆ. ತನ್ನವರಾರೂ ಇಲ್ಲ, ಆದರೆ ಎಲ್ಲರೂ ತನ್ನವರೇ! ಬೆಟ್ಟದ ಮೇಲನ ಮರಕ್ಕೆ ಕಟ್ಟೆ ಕಟ್ಟಿ ನೀರೆರೆದವರಾರು? ಬೇಲಿ ಹಾಕಿ ಪೋಷಿಸಿದವರಾರು? ಆದರೂ ಹುಲುಸಾಗಿ ಬೆಳೆದು ಕೊಂಬೆ ರೆಂಬೆ ತುಂಬಿ ನಳನಳಿಸುತ್ತಿದ್ದೆಯಲ್ಲಾ! ಎಂಬ ಸೋಜಿಗದ ಪ್ರಶ್ನೆಯಂತೆ ಮಗು ಚಂದ್ರಹಾಸನೂ ಗುಂಡು ಗುಂಡಾಗಿ, ತೇಜಃಪೂರ್ಣನಾಗಿ, ನೋಡಿದರೆ ಮತ್ತೂ ನೋಡಬೇಕೆನ್ನುವಷ್ಟು ಆಕರ್ಷಣೀಯನಾಗಿ, ಮಾತನಾಡಿದರೆ ಮತ್ತೂ ಕೇಳಬೇಕೆಂಬಷ್ಟು ಕರ್ಣಾನಂದಕರ ನುಡಿಯ ಮಗುವಾಗಿ ಎಲ್ಲರ ಪ್ರೀತಿ ಅಕ್ಕರೆಯ ಮಗುವಾಗಿ ಬೆಳೆಯುತ್ತಿದ್ದಾನೆ.
ಹೀಗಿರಲು ಒಂದು ದಿನ ಮಗು ಚಂದ್ರಹಾಸ ಆಡುತ್ತಿರುವಾಗ ಒಂದು ಕೌತುಕ ವಿಶೇಷ ನಡೆದು ಹೋಯಿತು. ಒಂದು ಗೋಲಿಯಂತಹ ನುಣುಪಾದ ಉರುಟು ಕಲ್ಲೊಂದು ಕಾಣ ಸಿಕ್ಕಿತು. ಚಿಕ್ಕ ಮಕ್ಕಳಿಗೆ ಕಲ್ಲು, ಕಡ್ಡಿ, ಕಸ ಎಂಬ ತಾರತಮ್ಯವಿದೆಯೇ? ಏನು ಸಿಕ್ಕರೂ ಹೆಕ್ಕುವುದು ಬಾಯಿಗೆ ಹಾಕಿಕೊಳ್ಳುವುದು ಸಹಜ ಪ್ರಕ್ರಿಯೆಯಲ್ಲವೇ? ಹಾಗೆಯೇ ಚಂದ್ರಹಾಸನೂ ಮಾಡಿದ. ಆದರೆ ಆ ಕಲ್ಲು ಸಾಮಾನ್ಯ ಶಿಲೆಯ ತುಂಡಾಗಿರಲಿಲ್ಲ. ಶ್ರೀವಿಷ್ಣುವಿನ ಸಾನಿಧ್ಯವಿರುವ ಸಾಲಿಗ್ರಾಮವಾಗಿತ್ತು. ಮಗುವಿಗೇನು ಗೊತ್ತು ಅದು ಸಾಲಿಗ್ರಾಮವೋ? ಸೋಮನಾಥ ಶಿಲೆಯೋ? ಎಂಬುದಾಗಿ! ಕಾಣ ಸಿಕ್ಕಿತು, ಕೈ ಹೆಕ್ಕಿತು, ಬಾಯಿಗೆ ಹಾಕಿತು. ಅಷ್ಟೇ ಆದರೆ ಪರವಾಗಿಲ್ಲ. ಬಾಯಿಗೆ ಹಾಕಿದ ಸಾಲಿಗ್ರಾಮವನ್ನು ಹೊರ ತೆಗೆಯಬೇಕೆನ್ನುವ ಮನಸ್ಸಾಗಲಿಲ್ಲ. ಬಾಯಿಯಲ್ಲೇ ನಾಲಗೆಯಡಿಯಲ್ಲಿ ಇಟ್ಟು ರಕ್ಷಿಸಿಕೊಳ್ಳ ತೊಡಗಿದ. ಇದಾವ ಸುದೈವ ಸಂಕಲ್ಪವೋ! ಸುಯೋಗವೋ ಯಾರಿಗೂ ತಿಳಿಯಲಾಗದ ವಿಶೇಷ. ಬಾಯಿಯೊಳಗೆ ಸಾಲಿಗ್ರಾಮ ಸೇರಿದ ಬಳಿಕ ತನ್ನಷ್ಟಕ್ಕೆ ತಾನೇ “ನಾರಾಯಣ” “ನಾರಾಯಣ” ಎಂದು ನಾಮಸ್ಮರಣೆ ಮಾಡ ತೊಡಗಿದ. ಇದಾದ ನಂತರ ಮಗು ಚಂದ್ರಹಾಸನ ಬಾಯಲ್ಲಿ “ನಾರಾಯಣ” ಎಂಬ ನಾಮಸ್ಮರಣೆಯೇ ಸ್ಥಿರವಾಯಿತು. ಯಾರಾದರು ಕಂಡವರು “ನಿನ್ನ ಹೆಸರೇನು ಕಂದಾ?” ಎಂದು ಕೇಳಿದರೆ ಉತ್ತರ “ನಾರಾಯಣ”. ಮಗೂ ನಿನ್ನ ತಂದೆ ಯಾರಪ್ಪಾ ಎಂದು ಪ್ರಶ್ನಿಸಿದರೆ, ಅದಕ್ಕೂ ” ನಾರಾಯಣ”. ನಿನ್ನ ತಾಯಿ ಯಾರು? ಎಂದರೆ, ಅನ್ಯ ಉತ್ತರವೇ ಇಲ್ಲ ಅದೂ “ನಾರಾಯಣ”. ಹೀಗೆ ಎಲ್ಲ ಪ್ರಶ್ನೆಗೂ ಉತ್ತರವೊಂದೇ “ನಾರಾಯಣ”. ಹೀಗೆ ಚಂದ್ರಹಾಸ ಸದಾ ” ನಾರಾಯಣ” ನಾಮಸ್ಮರಣೆಯನ್ನೇ ನಿರಂತರವಾಗಿಸತೊಡಗಿದ. ಯಾವ ಗುರುವೂ ಬೋಧಿಸಲಿಲ್ಲ. ದೀಕ್ಷೆ ನೀಡಲಿಲ್ಲ. ಅಗೋಚರವೂ, ನಿಗೂಢವೂ ಆದ ರೀತಿಯಲ್ಲಿ ನಾರಾಯಣ ನಾಮಸ್ಮರಣೆ ಒಲಿದು ಬಂದಿದೆ. ಬಾಲ ಚಂದ್ರಹಾಸನ ವರ್ಚಸ್ಸು ದಿನಗಳೆದಂತೆ ಹೆಚ್ಚುತ್ತಿದೆ. ಶರೀರದ ಸರ್ವ ಅಂಗಾಂಗಗಳೂ ಸುಲಕ್ಷಣ ಭರಿತವಾಗಿ ಶೋಭಾಯಮಾನವಾಗುತ್ತಿವೆ. ಮೊದಲೇ ಮುದ್ದು ಮುದ್ದಾದ, ಕೋಮಲ ಕಾಯದ, ಸ್ಪುರದ್ರೂಪಿ ಮಗು. ಈಗಲಂತೂ ಅಪ್ಯಾಯಮಾನವಾದ ಸ್ನಿಗ್ಧ ಸೌಂದರ್ಯ ತುಂಬಿ ತುಳುಕಾಡುತ್ತಿದೆ. ತಪಸ್ವಿಗಳಂತಹ ಪ್ರಭೆ, ವಿದ್ವಾಂಸರಂತಹ ತೇಜಸ್ಸು, ದೇವತೆಗಳಂತೆ ಕಾಂತಿ ಮೈದಳೆದು ಸೆಳೆಯತೊಡಗಿದೆ. ನೋಡಿದವರೆಲ್ಲರಿಗೂ ಏನೋ ಒಂದು ರೀತಿಯ ಪುಳಕ. ಮಗುವಿನೆಡೆಗೆ ಸೆಳೆತ. ಹೀಗೆ ವೈಶಿಷ್ಟ್ಯತೆಗಳೊಂದಿಗೆ, ಸಾತ್ವಿಕ ಗುಣ ಸಂಪನ್ನನಾಗಿ ಚಂದ್ರಹಾಸ ಬೆಳೆಯುತ್ತಾ ಐದಾರು ವರ್ಷಗಳ ಪ್ರಾಯ ತುಂಬಿದೆ. ನೋಡಿದರೆ ಕೈ ಮುಗಿಯಬೇಕೆನ್ನುವಷ್ಟು ಭಕ್ತಿ ಭಾವ ಮೂಡಿಸುತ್ತಿತ್ತು ಚಂದ್ರಹಾಸನ ವರ್ಚಸ್ಸು.


































