ಭಾಗ – 551
ಭರತೇಶ್ ಶೆಟ್ಟಿ,ಎಕ್ಕಾರು

ಮಣಿಪುರದ ಪ್ರಚಂಡವಾದ ಸೇನೆ ರಣಾಂಗಣದಲ್ಲಿ ಸಮಾಹಿತಗೊಂಡಿತು. ವ್ಯೂಹ ರಚನೆಯೂ ಸೇನಾಪತಿಯ ನಿರ್ದೇಶನದಂತೆ ಸಾಗಿ ರಣಕಹಳೆಯೂ ಮೊಳಗಿತು. ಯುದ್ಧಾಹ್ವಾನವೂ ನೀಡಲ್ಪಟ್ಟು ನೋಡುತ್ತಿದ್ದಂತೆ ಪಾಂಡವ ಸೇನೆಗೂ ಮಣಿಪುರದ ಸೈನ್ಯಕ್ಕೂ ಬಿರುಸಾದ ಯುದ್ಧವೇ ಆರಂಭವಾಗಿ ಬಿಟ್ಟಿತು.
ಕತ್ತಿ ಕಾಳಗ ಪ್ರವೀಣರು ಬೀಸು ಹೊಡೆತಗಳಿಂದ, ಕುದುರೆ ಸವಾರರೂ ಖಡ್ಗ, ಈಟಿ, ಭರ್ಚಿ, ಶೂಲಗಳಿಂದ ಕಡಿದು ತಿವಿಯುತ್ತಾ, ಗಜಾರೋಹಿಗಳೂ, ರಥಿಕರೂ ಹೀಗೆ ನಾನಾ ವಿಧಗಳಿಂದ ಚತುರಂಗ ಸೇನೆ ಉಗ್ರ ಹೋರಾಟ ನೀಡತೊಡಗಿದೆ.
ಪಾಂಡವ ಸೇನೆಯ ಮುಂಚೂಣಿಯಲ್ಲಿ ಕರ್ಣ ಪುತ್ರ ವೀರ ವೃಷಕೇತುವಿನ ರಥ ಮುಂದೊತ್ತಿ ಬಂದಿತು. ಪ್ರಳಯ ಕಾಲದ ರುದ್ರನಂತೆ ಮರ್ದನ ನಿರತನಾಗಿದ್ದ ಬಬ್ರುವಾಹನನಿಗೆ ಎದುರಾಯಿತು. ಇಬ್ಬರೂ ತರುಣರು, ಹಾಗೆಂದು ಅತಿಬಲ ಸಾಹಸಿಗಳೂ ಹೌದು. ಮಹಾಭಾರತದ ಯುದ್ಧ ನೋಡಿ ನೆನಪಿರುವವರಿಗೆ ವೃಷಕೇತು – ಬಬ್ರುವಾಹನರ ಯುದ್ಧ ನೋಡುವಾಗ ಕರ್ಣಾರ್ಜುನರೇ ಮತ್ತೆ ಎದುರಾಗಿ ಕಾದಾಡುತ್ತಿದ್ದಾರೋ ಎಂಬಂತಹ ಭ್ರಮೆ ಉಂಟು ಮಾಡುತ್ತಿದೆ. ಅಸಾಮಾನ್ಯ ಶೂರರು ಬಹು ಹೊತ್ತು ಸಮ ಬಲದ ಸಂಗ್ರಾಮ ನಿರತರಾಗಿದ್ದಾರೆ. ಅಸ್ತ್ರ, ಶಸ್ತ್ರ, ಪ್ರಯೋಗ ನೈಪುಣ್ಯ ಯಾವುದರಲ್ಲೂ ಈರ್ವರೂ ಸಮಬಲ ತೋರುತ್ತಾ ಮಹಾಯುದ್ಧವೇ ಸಾಗುತ್ತಿದೆ. ಆದರೂ ಯುದ್ದ ಸಾಗುತ್ತಿದ್ದಂತೆ ವೃಷಕೇತು ಮಂಕಾಗಿ ಬಬ್ರುವಾಹನ ಕೈ ಮೇಲಾಗ ತೊಡಗಿತು. ಸೋತು ಹಿಂದೆ ಸರಿದ ಕರ್ಣ ಪುತ್ರನ ಸ್ಥಾನದಲ್ಲಿ ಕೃಷ್ಣ ಪುತ್ರ ಅನಿರುದ್ಧನೇ ಆಕ್ರಮಣ ಮಾಡಿ ಪಾರ್ಥ ಪುತ್ರನಿಗೆದುರಾದನು. ಅನಿರುದ್ಧನೇನು ಸಾಮಾನ್ಯನೇ? ಪ್ರತಿಕೃಷ್ಣನಂತೆಯೇ ಕಂಗೊಳಿಸುತ್ತಾ ಅತುಲ ವಿಕ್ರಮಿಯಾಗಿ ಬಬ್ರುವಾಹನನೇ ಬಸವಳಿದು ದಣಿದು ದುಡಿದು ಕಾದುವಂತೆ ಪೌರುಷ ಮೆರೆಯತೊಡಗಿದನು. ಇವರೀರ್ವರ ಕದನ ತೀವ್ರತೆ ಎಷ್ಟಿತ್ತೆಂದರೆ ಬಂಡಿ ಬಂಡಿ ಶರಗಳು ಖಾಲಿಯಾದವೇ ಹೊರತು ಜಯಾಪಜಯ ನಿರ್ಣಯವಾಗಲಿಲ್ಲ. ಮಣಿಪುರದರಸ ಬಬ್ರುವಾಹನೇನು ಸಾಧಾರಣನೇ? ಅನಿರುದ್ಧನ ಮೇಲೆ ಹಂತ ಹಂತವಾಗಿ ಹಿಡಿತ ಸಾಧಿಸಿ ಸೋಲಿಸಿಯೇ ಬಿಟ್ಟನು.
ಪ್ರಮುಖರು ಈರ್ವರು ಸೋತು ಹಿಂದೆ ಸರಿದಾಗ ಮಾಹಿಷ್ಮತಿಯ ರಾಜ ನೀಲಧ್ವಜ, ಭದ್ರಾವತಿಯ ಸುವೇಗ, ಪ್ರವೀರ, ಚಂಪಕಾವತಿಯ ಹಂಸಧ್ವಜ, ರಾಕ್ಷಸ ವೀರ ಅನುಸಾಲ್ವಾದಿಗಳೂ ಒಬ್ಬರಾದ ನಂತರ ಒಬ್ಬರು ನಿರಂತರ ಯುದ್ದ ಮಾಡತೊಡಗಿದರು. ಪಾಂಡವ ಪಕ್ಷೀಯರಾದ ಇವರೆಲ್ಲರೂ ಅತಿ ಬಲಾಢ್ಯರೆಂದೇ ಹೇಳಬಹುದು. ಆದರೂ ಬಬ್ಬರುವಾಹನನೆದುರು ನಿಲ್ಲಲಾಗಲಿಲ್ಲ. ಎಲ್ಲರೂ ತುಸು ಹೊತ್ತು ಪ್ರಬಲ ಹೋರಾಟ ನೀಡಿದರಾದರೂ ಕೊನೆಗೆ ಸೋತು ಹಿಂಜರಿಯಲೇ ಬೇಕಾಯಿತು.
ಈಗ ತನ್ನ ಸೇನೆಯ ಪ್ರಮುಖರು ಸೋತು ಹಿಂದಿರುಗಿರುವ ವಿಚಾರ ತಿಳಿದು, ಸ್ವಯಂ ಪಾರ್ಥ ಮಹಾಶಯನೇ ಮುಂದೊತ್ತಿ ಬಂದನು. ಶ್ರೀಕೃಷ್ಣನನ್ನು ಸಂಪ್ರಾರ್ಥಿಸಿ ರಣಕಣಕ್ಕೆ ಮುಖ ಮಾಡಿದ್ದಾನೆ. ಸಾಗುತ್ತಿರುವ ಸಂಗ್ರಾಮದಲ್ಲಿ ತನ್ನ ಪಕ್ಷದ ವೀರಾಧಿವೀರರು ವೀರ ಬಬ್ರುವಾಹನನೆದುರು ಸೋತಿದ್ದಾರೆ ಎಂಬ ಸತ್ಯ ಸವಾಲಾಗಿ ದುಃಖವನ್ನುಂಟು ಮಾಡಿದರೂ, ಅರ್ಜುನ ನಿರಾಳನಾಗಿದ್ದಾನೆ. ಯುದ್ಧ ಎಂದ ಮೇಲೆ ಜಯಾಪಜಯ ಇರುವಂತಹುದೇ… ನನ್ನ ಪುತ್ರನೇ ಹೌದು ಈತ. ಇಲ್ಲದೇ ಹೋಗಿದ್ದರೆ ಈ ತೆರನಾದ ಅಸಾಮಾನ್ಯ ಸಾಹಸ ಸಾಧ್ಯವಾಗುತ್ತಿರಲಿಲ್ಲ. ಏನೇ ಇರಲಿ ರಣಾಂಗಣದಲ್ಲಿ ಮುಂಚೂಣಿಗೆ ಸಾಗಿ ಬಬ್ರುವಾಹನನನ್ನು ನಾನೇ ಎದುರಿಸುತ್ತೇನೆಂದು ತೀರ್ಮಾನಿಸಿದನು. ರಥ ಹಾರಿ ಬಂದಿದೆ, ಬಬ್ರುವಾಹನಿಗೆ ಎದುರಾಗಿದ್ದಾನೆ. ಇನ್ನೇನು ಅಪ್ಪಮಗನ ರಣ ಭಯಂಕರ ಕಾಳಗ ಪ್ರಾರಂಭವಾಗಲಿದೆ.
ಮುಂದುವರಿಯುವುದು…

































