ಭಾಗ – 550
ಭರತೇಶ ಶೆಟ್ಟಿ, ಎಕ್ಕಾರು

ಹಿಂದೆ ಅರ್ಜುನ ತೀರ್ಥಯಾತ್ರೆ ಗೆಂದು ಈ ಪ್ರದೇಶಕ್ಕೆ ಬಂದಿದ್ದ ಸಮಯ ಮಣಿಪುರದ ಸಮೀಪದಲ್ಲಿ ಹರಿಯುತ್ತಿದ್ದ ಗಂಗಾ ನದಿಯ ತಡಿಯ ವಿಹಂಗಮ ಪ್ರದೇಶದಲ್ಲಿ ಹಾದು ಹೋಗುತ್ತಿದ್ದನು. ಅವನ ಜತೆಯಲ್ಲಿ ಬಂದಿದ್ದ ಬ್ರಾಹ್ಮಣರ ಮನಸ್ಸಿಗೆ ಆ ಪ್ರದೇಶದ ದಿವ್ಯತೆಯೂ ಭವ್ಯತೆಯೂ ಆಹ್ಲಾದಕರವಾಗಿ ಪರಿಣಮಿಸಿದವು. ಅಲ್ಲಿ ಕೆಲವು ದಿನ ಉಳಿದುಕೊಳ್ಳೋಣ ಎಂದು ಅವರು ಬಯಸಿದರು. ಒಪ್ಪಿಗೆ ನೀಡಿ, ಹಾಗೆ ಅಲ್ಲಿಯೆ ವಿಶ್ರಾಂತರಾಗಿ ಬಳಿಕ ಕೆಲ ದಿನ ಯಾಗ ಯಜ್ಞಾದಿ ಕಾರ್ಯಗಳಲ್ಲಿ ನಿರತರಾಗಿದ್ದರು.
ಹೀಗಿರಲು ಒಂದು ದಿನ ನದಿಯ ದಡದಿಂದ ಸ್ವಲ್ಪ ಕೆಳಗೆ ಇಳಿದು ಆಳವಿರುವೆಡೆಗೆ ನಡೆದು ಅರ್ಜುನನು ಸ್ನಾನ ಮಾಡಿ, ಪಿತೃತರ್ಪಣವನ್ನು ಕೊಟ್ಟು ಅಗ್ನಿ ಕಾರ್ಯಕ್ಕಾಗಿ ಮೇಲೇಳುವಷ್ಟರಲ್ಲಿ ನದಿ ನೀರಿನ ಅಂತರಾಳದಿಂದ ಮೇಲೆ ಬಂದ ನಾಗಕನ್ನಿಕೆ ಉಲೂಪಿ ಅರ್ಜುನನ ಅಸದೃಶವಾದ ರೂಪ ಸೌಂದರ್ಯಗಳಿಂದ ಮೋಹಿತಳಾಗಿ ಕಾಲನ್ನು ಸುತ್ತುವರಿದು ಬಿಗಿದಳು. ನೀರಿನೊಳಕ್ಕೆ ಸೆಳೆದುಕೊಂಡು ತನ್ನ ನಿವಾಸಕ್ಕೆ ಕೊಂಡೊಯ್ದಳು. ಅದು ನಾಗರಾಜನ ಭವ್ಯ ಅರಮನೆ. ಅಲ್ಲಿಗೆ ಆಕಸ್ಮಿಕವಾಗಿ ಸೆಳೆದೊಯ್ಯಲಾಗಿದ್ದರೂ ಆತಂಕಕ್ಕೊಳಗಾಗದ ಅರ್ಜುನ ತನ್ನ ಧರ್ಮಬುದ್ಧಿ, ಕರ್ತವ್ಯ ಪ್ರಜ್ಞೆ ಮರೆತಿರಲಿಲ್ಲ. ನಾಗಲೋಕದಲ್ಲಿ ತನ್ನ ಕಣ್ಣೆದುರು ಪ್ರಜ್ವಲಿಸುತ್ತಿರುವ ಅಗ್ನಿಯಲ್ಲಿ ಅರ್ಜುನನು ಮೊದಲಾಗಿ ತನ್ನ ನಿತ್ಯಪದ್ಧತಿಯ ಅಗ್ನಿ ಕಾರ್ಯವನ್ನು ಪೂರೈಸಿದನು. ಏನಾದರೂ, ಎಂತಹ ಸಂದರ್ಭದಲ್ಲಿಯೂ ನಿಯಮನಿಷ್ಠೆಗಳನ್ನು ತಪ್ಪದ ಅರ್ಜುನನ ಕುರಿತು ಅಗ್ನಿದೇವನು ಆ ದಿನ ಅಧಿಕ ಸಂತುಷ್ಟನಾಗಿದ್ದನು. ನೈಮಿತ್ತಿಕ ಹೋಮ ಕಾರ್ಯವು ಮುಗಿಸಿದೊಡನೆ, ಉಲೂಪಿ ಅರ್ಜುನನ ಬಳಿ ಬಂದು ನಿಂತುಕೊಂಡಳು. ಅರ್ಜುನನು ಅವಳನ್ನು ಕಂಡು ಯಾಕೆ ಹೀಗೆ ಮಾಡಿದೆ? ಎಂದು ಕೇಳಿದಾಗ, ಆಕೆಯು “ಓ ಮಹಾನುಭಾವನೆ, ಐರಾವತವೆಂಬ ಸರ್ಪ ಕುಲದಲ್ಲಿ ಜನಿಸಿರುವ ಕೌರವ್ಯನೆಂಬ ನಾಗರಾಜನ ಮಗಳು ನಾನು. ಉಲೂಪಿಯೆಂದು ನನ್ನ ಹೆಸರು, ನೀನು ಗಂಗೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನಿನ್ನನ್ನು
ನೋಡಿದೆ. ನಿನ್ನ ರೂಪ ಲಾವಣ್ಯಕ್ಕೂ, ತೇಜಸ್ಸಿಗೂ ನಾನು ಮನಸೋತೆನು. ನನ್ನ ಮನಸ್ಸು ಅಂಕೆಯಲ್ಲಿ ನಿಲ್ಲದೆ, ನಿನ್ನ ಮೇಲೆ ನೆಟ್ಟು ಹೋಯಿತು. ನಿನ್ನ ಬಳಿ ಏನನ್ನು ಕೇಳದೆ, ಹೇಳದೆ, ಅತಿಕ್ರಮಣಗೈದು ಯಾವುದನ್ನೂ ವಿವೇಚಿಸದೆ ಸೆಳೆದು ಇಲ್ಲಿವರೆಗೆ ಕರೆದು ತಂದಿರುವೆನು. ನಿನ್ನಲ್ಲಿ ಅನುರಕ್ತಳಾಗಿರುವ ನನ್ನನ್ನು ವರಿಸಿ ಪ್ರಾಣದಾನವನ್ನು ನೀಡಬೇಕು. ಇದೇ ನನ್ನ ಪ್ರಾರ್ಥನೆ” ಎಂದು ನಿವೇದಿಸಿಕೊಂಡಳು. ಅವಳ ಅಪೇಕ್ಷೆಯನ್ನು ಕೇಳಿ ಅರ್ಜುನ “ನಾನು ತೀರ್ಥಯಾತ್ರೆಯ ವೃತಸ್ಥನಾಗಿರುವೆ. ಹಾಗಾಗಿ”…. ಎನ್ನುತ್ತಿರುವಾಗಲೇ ತಡೆದು ಅರ್ಜುನನ ವಾದವರಿತ ಉಲೂಪಿ ತನ್ನ ಬಯಕೆ, ಯಾತ್ರೆಗೆ ಪೂರಕವಾಗಿದೆ. ಧರ್ಮ ಸಹಮತವೂ ಇದೆ” ಎಂದು ವಿವರಿಸತೊಡಗಿದಳು. “ಅಯ್ಯಾ ಮಹಾನುಭಾವ! ನೀನು ತೀರ್ಥಯಾತ್ರೆ ಕೈಗೊಂಡಿರುವುದು ನಿಮ್ಮೊಳಗಿನ ಸಂಪ್ರದಾಯವನ್ನು ನೀನು ಮೀರಿದ ತಪ್ಪಿಗಾಗಿ. ಈ ಒಪ್ಪಂದದ ವ್ಯಾಪ್ತಿ ನಿಮ್ಮ ಹಾಗು ದ್ರೌಪದಿಯ ಸಂಬಂಧದವರೆಗೆ ಮಾತ್ರ ಇರುತ್ತದೆ. ನನ್ನ ಹಾಗೂ ನಿನ್ನ, ಅಥವಾ ದ್ರೌಪದಿ ಹಾಗು ಪಾಂಡವರನ್ನು ಹೊರತು ಅನ್ಯರ್ಯಾರು ಈ ನಿರ್ಬಂಧದಿಂದ ಬಂಧಿಸಲ್ಪಡಲಾರರು. ಈ ಪ್ರಕರಣ ನಿರ್ದೇಶಿತ ತೀರ್ಥಯಾತ್ರೆಯ ಕಾಲಾವಧಿಯ ತನಕ ಕ್ಷೇತ್ರ ಪರ್ಯಟನೆ ಮಾಡಿ ಪುಣ್ಯ ಸಂಪಾದನೆಗೆ ಬಳಸಿಕೊಳ್ಳುತ್ತಿರುವುದು ಅತೀ ಉತ್ತಮ. ಹಾಗೆಂದು ಒಲಿದು ಬಂದವರನ್ನು ತಿರಸ್ಕರಿಸ ಬೇಕು ಎಂಬ ಹಾಗೇನು ಇಲ್ಲವಲ್ಲ. ನಾನು ನಿನ್ನನ್ನು ಬಯಸಿದ್ದೇನೆ. ನಿನ್ನ ಹೊರತು ನನ್ನನ್ನು ಸಂತೈಸಲಾರಿಂದಲೂ ಸಾಧ್ಯವಿಲ್ಲ. ಒಂದೊಮ್ಮೆಗೆ ನೀನು ನನ್ನನ್ನು ಅಲಕ್ಷಿಸಿದರೆ ಮತ್ತೆ ನನಗೆ ಬದುಕು ಬೇಡವಾಗಿದ್ದು ನನ್ನ ಅಂತ್ಯವಾಗುತ್ತದೆ. ಆದ ಕಾರಣ ನನ್ನನ್ನು ರಕ್ಷಣೆ ಮಾಡಿ ಉದ್ದರಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ.” ಎಂದಳು.
ಅರ್ಜುನನು ಧರ್ಮ ಹಾಗು ಶಕ್ತಿಯ ಸಮ್ಮಿಳಿತ ಸ್ವರೂಪವಲ್ಲವೆ?. ಸ್ವಯಂ ಧರ್ಮ ಜಿಜ್ಞಾಸೆ ಮಾಡಿ ಉಲೂಪಿಯ ಒತ್ತಾಯ ಧರ್ಮಸಮ್ಮತವಾಗಿರುವುದನ್ನು ಮನಗಂಡನು. ಒಪ್ಪದೆ ಉಳಿದೆ ಎಂದಾದರೆ ಆಕೆಯ ಪಾಲಿಗೆ ಘೋರ ದುರಂತವಾಗಬಹುದು ಎಂದು ತರ್ಕಿಸಿದನು. ರಕ್ಷಕನಾಗಿ ವ್ಯವಹರಿಸಬೇಕೆಂದು ತೀರ್ಮಾನಿಸಿ, ಆಕೆಯ ಅಪೇಕ್ಷೆಯಂತೆ ನಾಗಲೋಕದಲ್ಲೊಂದು ದಿನ ಉಳಿಯಲು ಒಪ್ಪಿದನು.
ಉಲೂಪಿಯು ವಿಶೇಷ ಶಕ್ತಿ ಸಂಪನ್ನೆಯಾಗಿದ್ದು ಸದ್ಯೋಗರ್ಭಧಾರಣದ ಯೋಗಬಲ ಹೊಂದಿರುವವಳು. ಅರ್ಜುನನ್ನು ಕೂಡಿದ ತಕ್ಷಣ ಗರ್ಭಧರಿಸಿ ಸದ್ಯೋಜಾತತ್ವದ ಮೂಲಕ ಒಬ್ಬ ಮಗನನ್ನು ಪಡೆದಳು. ಮಹಿಮಾನ್ವಿತ ಮಾತಾಪಿತರಾದ ಅರ್ಜುನ – ಉಲೂಪಿ ಜೊತೆಯಾಗಿ ಶಿಶುವಿನ ರೂಪ, ಬಲ, ತೇಜಸ್ಸುಗಳನ್ನು ಗುರುತಿಸಿ ಇರಾವಂತ ಎಂದು ನಾಮಕರಣವನ್ನೂ ಮಾಡಿದರು. ಉಲೂಪಿಯು ಒಪ್ಪಿರುವಂತೆ ಮರುದಿನ ನಾಗಲೋಕದಿಂದ ಅರ್ಜುನನ್ನು ಮರಳಿ ಗಂಗಾತೀರಕ್ಕೆ ಕರೆದುಕೊಂಡು ಬಂದಳು. ನಮಿಸಿ ನಿಂತು “ಪ್ರಿಯವರ, ನನ್ನಿಂದ ಅತಿಕ್ರಮಣ, ಅಪಚಾರವಾಗಿದ್ದರೆ ಮನ್ನಿಸಬೇಕು. ನಾನು ನಿನ್ನಿಂದ ಅನುಗ್ರಹಿಸಲ್ಪಟ್ಟು ಪುನೀತಳಾಗಿದ್ದೇನೆ. ಸಂತೃಪ್ತಿಯೂ, ಜನ್ಮ ಸಾರ್ಥಕತೆಯೂ ನನಗಾಗಿದೆ. ಪ್ರತಿಯಾಗಿ ನನ್ನಲ್ಲಿ ಸಂಚಯವಾಗಿರುವ ದಿವ್ಯಶಕ್ತಿಗಳನ್ನು ವಿನಿಯೋಗಿಸಿ ನಿನಗೆ ವಿಶಿಷ್ಟವಾದ ಶಕ್ತಿಯಾಗಿ- ಇನ್ನು ಮುಂದೆ ನಿನಗೆ ಎಂತಹ ಜಲರಾಶಿಯಲ್ಲಿಯೂ, ಎಷ್ಟು ಬಲಿಷ್ಟ ಜಲಚರವೇ ಆಗಿರಲಿ, ಅವುಗಳಿಂದ ಅಪಾಯ ಮಾಡಲಾಗದಿರಲಿ. ಮಾತ್ರವಲ್ಲ ಅವುಗಳು ನಿನ್ನ ವಶವಾಗಿ ಹೋಗಲಿ. ಇದು ಒಂದು ರೀತಿಯಲ್ಲಿ ರಕ್ಷೆಯಾಗಿ ಪರಿಣಮಿಸಲಿ ಎಂದು ಹಾರೈಸುತ್ತೇನೆ ಎಂಬುದಾಗಿ ಹರಸಿ ನಮಸ್ಕರಿಸಿದಳು. ಅರ್ಜುನನಿಗೆ ಬಯಸದೆ ದೊರೆತ ಅನುಗ್ರಹಬಲ ವರವಾಗಿ ಪರಿಣಮಿಸಿದೆ. ಅರ್ಜುನನೂ ಸುಪ್ರೀತನಾಗಿ ಅವಳನ್ನು ಬೀಳ್ಕೊಟ್ಟನು. ಉಲೂಪಿ ಮರಳಿ ತನ್ನ ಲೋಕ ಸೇರಿದರೆ, ಅರ್ಜುನ ತನ್ನೊಡನಿದ್ದ ಬ್ರಾಹ್ಮಣರತ್ತ ಬಂದು ಸೇರಿದನು. ಕಳೆದ ಒಂದು ದಿನ ಪರ್ಯಂತ ಅರ್ಜುನನ್ನು ಕಾಣದೆ ಆತಂಕಿತರಾಗಿದ್ದ ಬ್ರಾಹ್ಮಣರು, ಆತನ ಕ್ಷೇಮಕ್ಕಾಗಿ ನಿರಂತರ ದೇವತಾ ಪ್ರಾರ್ಥನೆ ನಿರತರಾಗಿದ್ದರು. ಈಗ ಪ್ರತ್ಯಕ್ಷವಾಗಿ ಆತನನ್ನು ಕಂಡು ಅವರಿಗೆಲ್ಲ ಸಂತೋಷವಾಗಿದೆ. ಅರ್ಜುನ ತನ್ನೊಡನೆ ನಡೆದು ಹೋದ ವೃತ್ತಾಂತವನ್ನು, ಕಡೆಗೆ ಉಲೂಪಿಯ ಹಾರೈಕೆಯನ್ನು ತಿಳಿಸಿದ. ಬ್ರಾಹ್ಮಣೋತ್ತಮರು ಮಹದಾನಂದಭರಿತರಾಗಿ ಆಗುವುದೆಲ್ಲಾ ಒಳ್ಳೆಯದಕ್ಕೆ ಎಂದು ಸಂಭ್ರಮಿಸಿದರು.
ಹೀಗೆ ಉಲೂಪಿಯೂ ಅರ್ಜುನನ ಪತ್ನಿಯಾಗಿದ್ದಾಳೆ. ಆ ಬಳಿಕ ಚಿತ್ರಾಂಗದೆಯನ್ನು ಅರ್ಜುನ ವರಿಸಿ ಪುತ್ರ ಬಬ್ರುವಾಹನ ಜನಿಸಿದ ವಿಚಾರವನ್ನು ಉಲೂಪಿ ತಿಳಿದು ಕೊಂಡಿದ್ದಳು. ತನ್ನ ಪತಿಯ ಪುತ್ರನಾದ ಬಬ್ರುವಾಹನ ತನಗೂ ಮಗ ಎಂದಿ ಪ್ರೀತಿಸುತ್ತಿದ್ದಳು. ಈಗ ಬಬ್ರುವಾಹನನ ಮಲತಾಯಿಯಾಗಿ ಮಗನ ರಕ್ಷಣೆಗೆ ನಿಲ್ಲುವಲ್ಲಿ ಪುತ್ರ ಪ್ರೇಮ ಕಾರಣವಾಗಿದೆ. ಯಾಕೆಂದರೆ ತನ್ನ ಪತಿ ಪಾರ್ಥನನ್ನು ಕೆಣಕಿ ಯಾರೂ ಉಳಿಯಲಾರರು. ಹಾಗೂ ಒಂದೊಮ್ಮೆಗೆ ಕಾಲ ಪ್ರಭಾವದಿಂದ ಅರ್ಜುನನಿಗೆ ಕೈಸೋಲಾದರೂ ರಕ್ಷಣೆಗೆ ಶ್ರೀಕೃಷ್ಣ ಧಾವಿಸಿ ಬರುತ್ತಾನೆ. ಹಾಗಿರುವಾಗ ಈ ಮುಗ್ಧ ಕಂದ ಬಬ್ರುವಾಹನನ ರಕ್ಷಣೆ ಮಾಡುವವರ್ಯಾರು? ಎಂಬಂತೆ ಯೋಚಿಸಿಯೋ ಏನೋ ಉಲೂಪಿ ಅರ್ಜುನನಿಂದ ಅಪಮಾನಿತನಾಗಿ ರೋಷಾವೇಶಕ್ಕೊಳಗಾಗಿರುವ ಬಬ್ರುವಾಹನನನ್ನು ಸಂತೈಸಿ ಯುದ್ಧಕ್ಕೆ ಸಿದ್ಧಗೊಳಿಸುತ್ತಿದ್ದಾಳೆ. “ಮಗನೇ! ನೀನು ಕ್ಷತ್ರಿಯ. ಅವಮಾನವಾಯಿತೆಂದು ನೆನೆದು ಖಿನ್ನ ಮನಸ್ಕನಾಗದಿರು. ಉರಿಯುವ ಕೋಪ ನಿನ್ನನ್ನು ಆವರಿಸಿ ತುಂಬಿತೆಂದು ಬುದ್ಧಿ ವಿವೇಚನೆಯನ್ನು ಕಳಕೊಳ್ಳದಿರು. ವಿವೇಕವನ್ನು ವಿನಿಯೋಗಿಸಿ, ನಿನ್ನ ಕ್ಷಾತ್ರಬಲದ ಶಕ್ತಿಯನ್ನು ಕ್ರೋಢೀಕರಿಸಿ ಅತುಲ ವಿಕ್ರಮಿಯಾಗಿ ಶೌರ್ಯವನ್ನು ಪಾರ್ಥ ಮಹಾಶಯನೆದುರು ಪ್ರದರ್ಶಿಸು. ಆ ಮುಖೇನ ಮಹಾ ಪರಾಕ್ರಮಿಯಾಗಿರುವ ಮಹಾತ್ಮ ಅರ್ಜುನನಿಗೆ ನಿನ್ನ ಬಗ್ಗೆ ಮೆಚ್ಚುಗೆಯ ಅಭಿಮಾನ ಮೂಡುವಂತಾಗಲಿ. ಪಾಂಡವ ಪಕ್ಷವೂ ನಿನ್ನ ಸ್ಥೈರ್ಯಕ್ಕೆ ಮನ ಸೋಲುವಂತಾಗಲಿ. ಯಾವ ವಿಚಾರಕ್ಕೆ ನಿನಗೆ ಅಪಮಾನವಾಯಿತೋ ಅದು ಹಾಗಲ್ಲ, ನೀನು ರಣ ಹೇಡಿಯಲ್ಲ – ಮಹಾನ್ ಪರಾಕ್ರಮಿ ಎಂಬ ಸತ್ಯ ಲೋಕ ಮುಖಕ್ಕೆ ಕಾಣಿಸಬೇಕಾದರೆ ನಿನ್ನೊಳಗಿನ ಪೌರುಷ ಪ್ರಕಟವಾಗಬೇಕು. ಈಗ ಕೊರಗದಿರು, ಎದ್ದು ನಿಲ್ಲು, ರಥವೇರಿ ಧನುರ್ಧಾರಿಯಾಗು” ಎಂದು ಪ್ರೇರೇಪಿಸಿದಳು.
ಇದನ್ನು ನೋಡುತ್ತಿದ್ದ ಮಣಿಪುರದ ಸಚಿವ, ಸೇನಾಪತಿಗಳು ಅದೇ ಸರಿ ಎಂಬಂತೆ ಬೆಂಬಲ ಸೂಚಿಸಿ ಘೋಷಣೆ ಕೂಗಿದರು. ಇಷ್ಟಾಗುವಾಗ ಬಬ್ರುವಾಹನನ ಕೆಚ್ಚು ಸ್ಪುಟಕ್ಕಿಟ್ಟ ಚಿನ್ನದಂತೆ ಅಪರಂಜಿಯಾಗಿದೆ. ಕಂಗಳು ಕಿಡಿ ಕಾರ ತೊಡಗಿವೆ. ವೀರಾವೇಶ ಮೈದಳೆದು ತುಂಬಿದೆ. ಮರಳಿ ಅರಮನೆ ಸೇರಿ ಅಮ್ಮ ಚಿತ್ರಾಂಗದೆಯ ಜೊತೆ ಸಮಾಲೋಚಿಸುವ ಮನಸ್ಸು ಮಾಡಿದ್ದ ಮಗ ನಿರ್ಧಾರ ಬದಲಿಸಿದ್ದಾನೆ. ಸಚಿವರು, ಸೇನಾಪತಿಗಳನ್ನು ಕರೆದು ಸಿದ್ಧ ವಾಗಿದ್ದ ಸೇನೆ ರಣಾಂಗಣಕ್ಕೆ ಬರಲಿ ಎಂಬ ಆಜ್ಞೆಯಿತ್ತನು. ಮಹಾಸಂಗ್ರಾಮಕ್ಕೆ ಮುಹೂರ್ತ ನಿರ್ಧಾರವಾಗಿದೆ.
ಮುಂದುವರಿಯುವುದು…

































