ಭಾಗ – 546
ಭರತೇಶ ಶೆಟ್ಟಿ,ಎಕ್ಕಾರು

“ನಾನು ನಮ್ಮೊಳಗಿನ ನಿಯಮ ಮೀರಿದೆ ಎಂದಾದರೆ ನನಗೊಬ್ಬನಿಗೆ ಮಾತ್ರ ಪರಿಣಾಮವಾದೀತು. ಅದೂ ತೀರ್ಥಯಾತ್ರೆಯಾದ ಕಾರಣ ಪುಣ್ಯಪ್ರದ ಹೊರತು ದೋಷವಾಗದು. ಒಂದೊಮ್ಮೆಗೆ ಶಿಕ್ಷೆಗೆ ಅಂಜಿ ಗೋವುಗಳ ರಕ್ಷಣೆ ಮಾಡದೆ ಉಳಿದೆನಾದರೆ ಕ್ಷಾತ್ರ ಧರ್ಮವನ್ನು ತೊರೆದ ದೋಷಕ್ಕೊಳಗಾಗುವೆ. ಮಾತ್ರವಲ್ಲ ಗೋಪಾಲಕರ ಜೀವನಾಧಾರವಾಗಿರುವ ಗೋವುಗಳಿಲ್ಲದೆ ಅವರ ಬದುಕು ದುಸ್ತರವಾದೀತು. ಹಾಗಾಗಿ ನನಗೆ ಗೋವುಗಳ ರಕ್ಷಣೆ ಆದ್ಯ ಕರ್ತವ್ಯವಾಗುತ್ತದೆ. ಏನೇ ಆಗುವುದಿದ್ದರೂ ದೈವಸಂಕಲ್ಪದಂತೆ ಆಗುತ್ತಿದೆ ಎಂದು ಪೂರ್ಣ ವಿಶ್ವಾಸದಿಂದ ನಂಬಿ ಅಂತೆಯೆ ನಡೆದು ಕೊಳ್ಳುತ್ತೇನೆ.” ಎಂದು ತನ್ನ ನಿರ್ಧಾರ ಪ್ರಕಟಿಸಿದನು.
ಮುನ್ನಡೆದು ಧರ್ಮರಾಯ ದ್ರೌಪದಿಯರಿದ್ದ ಅಂತಃಪುರವನ್ನು ಉಪಕ್ರಮಿಸಿ ಆಯುಧಾಗಾರವಿದ್ದಲ್ಲಿಗೆ ಸಾಗಿ ಅಕ್ಷಯ ತೂಣಿರವನ್ನು ಭುಜಕ್ಕೆ ಬಿಗಿದು ಕಟ್ಟಿಸಿದನು. ಗಾಂಡೀವ ಧನುರ್ಧಾರಿಯಾಗಿ ರಥಾರೂಢನಾಗಿ ಶೀಘ್ರಗಮನನಾಗಿ ಗೋವುಗಳ ರಕ್ಷಣೆಗಾಗಿ ಧಾವಿಸಿದನು.
ತಕ್ಷಕ ಮಾಯಾವಿ, ನಿಶಾಚರಿ, ರಾತ್ರಿಯ ಹೊತ್ತು ಎದುರಾಳಿ ಕಣ್ಣು ಕಾಣಿಸದೆ ದೌರ್ಬಲ್ಯಕ್ಕೊಳಗಾದರೆ ಅನಾಯಾಸವಾಗಿ ಗೆಲ್ಲಬಲ್ಲೆ ಎಂದು ಭಾವಿಸಿದ್ದನು. ಆದರೆ ಆತನ ಯೋಚನೆ ಯೋಜನೆ ಎರಡೂ ಕೈಗೂಡಲಿಲ್ಲ. ಕಾರಣ ಅರ್ಜುನ ಗುಢಾಕೇಶಿ. ತಕ್ಷಣನನ್ನು ಸೋಲಿಸಿ ಗೋವುಗಳನ್ನು ಬಂಧಮುಕ್ತಗೊಳಿಸಿ ಗೋಪಾಲಕರ ವಶಕ್ಕೊಪ್ಪಿಸಿದನು.
ಮರಳಿ ಬಂದ ಅರ್ಜುನ “ಸೋದರರಾದ ನಮ್ಮೊಳಗಿನ ಆಂತರಿಕ ವೈವಾಹಿಕ – ಸಾಂಸಾರಿಕ ಒಪ್ಪಂದದ ನಿಯಮ ಉಲ್ಲಂಘಿಸಿದ ಕಾರಣ ಶಿಕ್ಷಾರ್ಹನಾಗಿದ್ದೇನೆ ನಾನು” ಎಂದು ಅಣ್ಣನಲ್ಲಿ ತಪ್ಪೊಪ್ಪಿಕೊಂಡನು. ಸ್ವಯಂ ಧರ್ಮಮೂರ್ತಿಯೇ ಆದ ಧರ್ಮರಾಯ “ಅರ್ಜುನಾ! ನೀನು ಯಾವ ತಪ್ಪನ್ನೂ ಎಸಗಿಲ್ಲ. ಯಾವುದೇ ಕೃತ್ಯದ ಕೃತಿಯನ್ನು ಅಪರಾಧ ಎಂದು ಪರಿಗಣಿಸುವ ಮೊದಲು ಉದ್ದೇಶ ಏನೆಂದು ವಿವೇಚಿಸುವುದು ಬಹುಮುಖ್ಯ. ಉದ್ದೇಶ ನಿಸ್ವಾರ್ಥವಾಗಿದ್ದು ಧರ್ಮ ಪಾಲನೆಯಾಗಿದ್ದರೆ, ಪರಿಣಾಮ ಲೋಕಕ್ಕೆ ಕ್ಷೇಮವನ್ನು ಒದಗಿಸಿದ್ದು, ಯಾರಿಗೂ ಅಪಕಾರವಾಗಿರದಿದ್ದರೆ, ಅಂತಹ ಕಾರ್ಯ ಮಾಡುವಲ್ಲಿ ವಿಧಿತ ನಿಯಮ ಉಲ್ಲಂಘನೆ ಆಗಿದ್ದರೂ ಅದು ಅಪರಾಧವಲ್ಲ. ಬದಲಾಗಿ ನಿಸ್ವಾರ್ಥ ಬುದ್ದಿಯಿಂದ ಪಾಲಿಸಿದ ಪರಧರ್ಮ ಅಥವಾ ಆಪದ್ಧರ್ಮ ಎಂದು ಪರಿಗಣಿತವಾಗುತ್ತದೆ. ಶಾಸ್ತ್ರವೇ ಈ ರೀತಿ ಹೇಳಿರುವಾಗ ಇಂದು ನೀನು ನಿಸ್ವಾರ್ಥಿಯಾಗಿ ಗೋವುಗಳ ರಕ್ಷಣೆ ಮಾಡಿ, ಗೋಪಾಲಕರಿಗೆ ಕ್ಷೇಮ ಒದಗಿಸಿ ಕ್ಷಾತ್ರ ಧರ್ಮವಾದ ಪ್ರಜಾ ಪರಿಪಾಲನೆ, ಸಂರಕ್ಷಣೆಯ ಮಹತ್ಕಾರ್ಯ ಮಾಡಿರುವೆ. ಹಾಗೆ ತೊಡಗುವಲ್ಲಿ ತನಗೆ ಶಿಕ್ಷೆಯಾದರೂ ಸರಿ, ರಾಜ ಧರ್ಮ ಪಾಲಿಸುವೆ ಎಂದು ಸ್ವಹಿತ ಮರೆತು ಧರ್ಮಬುದ್ಧಿ ತೋರಿರುವೆ. ಒಂದು ವೇಳೆ ನನಗೂ ದ್ರೌಪದಿಗೂ ಏಕಾಂತ ಸಮಯ ಭಂಗ ಉಂಟು ಮಾಡಬೇಕೆಂದು, ಅಥವಾ ಇನ್ಯಾವುದೊ ಕ್ಷುಲ್ಲಕ/ಅನಗತ್ಯ ಕಾರಣಕ್ಕಾಗಿ ನೀನು ಅಂತಃಪುರ ಪ್ರವೇಶಿಸಿದ್ದರೆ ಆಗ ಅಪರಾಧ ಆಗುತ್ತಿತ್ತು. ವಿಚಾರ ಸುಸ್ಪಷ್ಟವಾಗಿರುವಾಗ ಅಧರ್ಮ ಎಸಗದಿರುವ ನೀನು ಶಿಕ್ಷೆಗೆ ಅನರ್ಹನಾಗುವೆ. ಒಂದು ವೇಳೆ ಈ ಕಾರಣಕ್ಕೆ ನಿನ್ನನ್ನು ಶಿಕ್ಷೆ ಅನುಭವಿಸಗೊಟ್ಟರೆ ಧರ್ಮಾಧರ್ಮ ವಿವೇಚಿಸದೆ ಸುಜನರಿಗೆ ದಂಡನೆಯಿತ್ತದ್ದು ನನ್ನ ಪಾಲಿಗೆ ರಾಜಧರ್ಮದ ಅಕ್ಷಮ್ಯ ಅಪರಾಧ ಆಗಿಹೋಗುತ್ತದೆ” ಎಂದು ವಿವರಿಸಿದನು.
ಆಗ ಅರ್ಜುನ “ಅಣ್ಣಾ! ನಾವು ಲೋಕಕ್ಕೆ ನಿಯಮ ಪಾಲನೆ, ಧರ್ಮ ಅನುಸರಣೆಯನ್ನು ಬೋಧಿಸುವ, ಹಾಗೆ ಪಾಲಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಉಳ್ಳವರು. ಈಗ ನಾವು ನಿಯಮ ಮೀರಿದರೆ ಸ್ವಜನ ಪಕ್ಷಪಾತ ಮಾಡಿದವರು, ಆಳಿಗೊಂದು ನ್ಯಾಯ – ಅರಸನಿಗೊಂದು ನ್ಯಾಯ ಎಂಬ ಅಪವಾದಕ್ಕೆ ತುತ್ತಾಗುವ ಸಾಧ್ಯತೆಯಿದೆ. ಮರ್ಯಾದಸ್ಥನಾದವ ಸಾವಿಗಾದರೂ ಅಳುಕಬೇಕಾಗಿಲ್ಲ. ಬದಲಾಗಿ ಅಪವಾದಕ್ಕೆ ಅಂಜಲೇ ಬೇಕು. ಯಾಕೆಂದರೆ ಮರ್ಯಾದಸ್ಥನಿಗೆ ಪ್ರಾಣಕ್ಕಿಂತ ಮಾನ ಪ್ರಧಾನವಾಗಿರುತ್ತದೆ. ಈ ಪ್ರಕರಣದಲ್ಲಿ ಸರ್ವಾನುಮತದಿಂದ ನಾವೈವರು ಒಪ್ಪಿ ಅನುಸರಿಸುತ್ತಿರುವ ನಿಯಮ ಪಾಲಿಸ ಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ನಮಗೆ ಬೇಕಾದಂತೆ ನಿಯಮ ತಿದ್ದಬಲ್ಲವರು ಎಂಬ ಲಾಂಛನ ನಮಗಂಟಿಕೊಂಡೀತು” ಎಂದು ತನ್ನ ಮನದಭಿಪ್ರಾಯ ತಿಳಿಸಿ ತೀರ್ಥಯಾತ್ರೆಗೆ ಹೊರಡಲು ಅನುಮತಿ ಕೇಳಿದನು.
ಧರ್ಮಜನಿಂದ, ಆಸ್ಥಾನ ಪ್ರಮುಖರಾದ ಹಿರಿಯರಿಂದ ಆಶೀರ್ವಾದ ಪಡೆದು ತೀರ್ಥ ಕ್ಷೇತ್ರ ಪರ್ಯಟನೆಗೆ ಹೊರಟನು.
ಹೀಗೆ ಯಾತ್ರೆ ಮುಂದುವರಿಸುತ್ತಾ ಮಹೇಂದ್ರ ಪರ್ವತ, ಗೋದಾವರೀ ತೀರ್ಥ ಸ್ನಾನಾದಿ ಪೂರೈಸಿ, ಸಾಗಿದ ಅರ್ಜುನ ಮಣಿಪುರಕ್ಕೆ ಬಂದು ಸೇರಿದ್ದನು. ಮಣಿಪುರ ಪಾಂಡ್ಯದೇಶದ ರಾಜಧಾನಿ – ಅಲ್ಲಿಯ ರಾಜ ಚಿತ್ರವಾಹನ. ತನ್ನ ದೇಶಕ್ಕೆ ಆಗಮಿಸಿದ ಯಾತ್ರಿಕ ಅರ್ಜುನನ್ನು ಸ್ವಾಗತಿಸಿ ಸತ್ಕರಿಸಿದನು. ಕೆಲ ದಿನಗಳ ಕಾಲ ಮಣಿಪುರದಲ್ಲಿ ವಿರಮಿಸುವಂತೆ ವಿನಂತಿಸಿದ. ಒಪ್ಪಿದ ಅರ್ಜುನನಿಗೂ ನಿರಂತರ ಯಾತ್ರೆಯಿಂದ ದಣಿವು ನಿವಾರಣೆಗೆ ವಿಶ್ರಾಂತಿಯ ಅಗತ್ಯವಿತ್ತು. ಹೀಗೆ ಮಣಿಪುರದಲ್ಲಿ ತಂಗಿದ್ದ ಅರ್ಜುನ ಉಪವನದಲ್ಲಿ ತಿರುಗಾಡುತ್ತಿದ್ದ ಮಹಾರಾಜನ ಮಗಳು ಚಿತ್ರಾಂಗದೆಯನ್ನು ನೋಡಿದ. ಆಕೆಯೂ ಅರ್ಜುನನ್ನು ನೋಡಿದಳು. ಹೀಗೆ ನಿರಂತರ ಕಣ್ಣೋಟದಲ್ಲಿ ಬೆರೆತು ಅನುರಾಗ ಬೆಳೆಯಿತು. ಇನ್ನು ತಡ ಮಾಡುವುದು ಸರಿಯಲ್ಲ ಎಂದು ವಿವೇಚಿಸಿ ಅರ್ಜುನ ನೇರವಾಗಿ ಮಹಾರಾಜ ಚಿತ್ರವಾಹನನನ್ನು ಭೇಟಿಯಾಗಿ ಏಕಾಂತದಲ್ಲಿ ವೈಯಕ್ತಿಕ ಸಮಾಲೋಚನೆಗೆ ಅವಕಾಶ ಕೇಳಿದನು. ಸಮ್ಮತಿಸಿದ ರಾಜನ ಜೊತೆ “ನಾನು ಹಸ್ತಿನಾವತಿಯ ಚಂದ್ರವಂಶದ ಪಾಂಡು ಚಕ್ರವರ್ತಿಯ ಪುತ್ರ ಅರ್ಜುನ” ಎಂಬ ಪರಿಚಯ, ತೀರ್ಥಯಾತ್ರೆಯ ವೃತ್ತಾಂತವನ್ನೆಲ್ಲಾ ವಿವರಿಸಿ ತಿಳಿಸಿದನು. ಕೇಳಿ ತಿಳಿದ ಮಹಾರಾಜ ಅರ್ಜುನನನ್ನು ಕೇವಲ ಯಾತ್ರಿಯೆಂದು ಪರಿಗಣಿಸಿದ್ದಕ್ಕಾಗಿ ಪರಿತಪಿಸುತ್ತಾನೆ. ಅರ್ಜುನ, ತಾನು ಏಕಾಂತದಲ್ಲಿ ಕೇಳಲು ಬಂದಿದ್ದ ವಿಷಯ ರಾಜನ ಮಗಳು ಚಿತ್ರಾಂಗದೆಯನ್ನು ಮದುವೆಯಾಗುವುದಾಗಿತ್ತು. ನೇರವಾಗಿ ವಿಷಯ ಪ್ರಸ್ತಾಪಿಸಿ ತನ್ನ ಮನದಿಂಗಿತ ಪ್ರಕಟಿಸಿ ಬಿಟ್ಟನು.
ಮಹದಾನಂದಭರಿತನಾದ ರಾಜ ಚಿತ್ರವಾಹನ “ಅಯ್ಯಾ ಮಹಾನುಭಾವ, ನಿಮ್ಮ ವಂಶದ ಘನ ಕೀರ್ತಿ, ನಿನ್ನ ವೈಯಕ್ತಿಕ ಶೌರ್ಯ, ಪರಾಕ್ರಮ, ಸಾಧನೆ, ಯಶೋಗಾಥೆಗಳನ್ನು ಬಲ್ಲವರು ಯಾವ ಹೆಣ್ಣಿನ ತಂದೆಯೆ ಆಗಿರಲಿ ತಕ್ಷಣ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿಸಲು ಸಿದ್ದನಾದಾನು. ನನಗೂ ನಿನ್ನ ಬೇಡಿಕೆ ಮಹಾ ಸೌಭಾಗ್ಯವಾಗಿ ಒದಗಿದೆ. ಆದರೆ ನಮ್ಮಲ್ಲಿ ವಿಶಿಷ್ಟವಾದ ಒಂದು ಪದ್ದತಿಯು ನಡೆದು ಬಂದಿದೆ. ಅದರಂತೆ ಮುಂದುವರಿಯಬೇಕಾದ ವಿವಶತೆಗೆ ನಾನು ಒಳಗಾಗಿದ್ದೇನೆ”. ಎಂದು ವಿವರಿಸತೊಡಗಿದನು.
“ಹಿಂದೆ ನಮ್ಮ ವಂಶದಲ್ಲಿ ಪ್ರಭಂಜನ ನೆಂಬ ಒಬ್ಬ ರಾಜನಿದ್ದನು. ಉತ್ತರಾಧಿಕಾರಕ್ಕಾಗಿ ಸಂತತಿ ಇಲ್ಲದ ಕಾರಣ ಮಹಾದೇವ ಪರಶಿವನನ್ನು ಕುರಿತು ತಪಸ್ಸು ಮಾಡಿದ್ದನು. ಒಲಿದು ಮೈದೋರಿದ ಭಗವಂತ ಅನುಗ್ರಹವನ್ನೂ ಮಾಡಿದ್ದಾನೆ. ಅಲ್ಲಿಂದ ನಮ್ಮ ವಂಶಕ್ಕೆ ಸಂತತಿಯ ಸಮಸ್ಯೆ ಇಲ್ಲ. ಒಂದು ಮಗು ಹುಟ್ಟುವಂತೆ ವರದಾನವಿದೆ. ಗಂಡು ಮಗುವಾದರೆ ರಾಜ್ಯಾಧಿಕಾರಕ್ಕೆ ತೊಂದರೆಯಿಲ್ಲ. ಹೆಣ್ಣು ಮಗುವಾದರೆ ನಮ್ಮಲ್ಲಿ ಪುತ್ರಿಕಾ ಧರ್ಮ ಅನುಸರಣೆಯಾಗುತ್ತದೆ. ಅದರಂತೆ ದೌಹಿತ್ರ ಮೂಲಕ ಸಾಂಸಾರಿಕ ಜೀವನ ಮುಂದುವರೆಯುತ್ತದೆ. ಅಂದರೆ ಹೆಣ್ಣು ಮಗಳಿಗೆ ಪ್ರಾಪ್ತ ವಯಸ್ಸಿನಲ್ಲಿ ಸಂತಾನ ಪಡೆಯುವ ಉದ್ದೇಶವನ್ನು ಪ್ರಧಾನವಾಗಿರಿಸಿ ಸೂಕ್ತ ವರನನ್ನು ತಂದೆ ತಾಯಿಯಾದವರು ಆರಿಸಬೇಕು. ವರ ಯಾರು ಎಂಬುವುದು ಕನ್ಯೆಗಾಗಲಿ, ಉಳಿದವರಿಗಾಗಲಿ ತಿಳಿಸಬೇಕೆಂಬ ಅನಿವಾರ್ಯತೆ ನಮ್ಮಲ್ಲಿಲ್ಲ. ವರನ ಯೋಗ್ಯತೆ, ಕುಲ ಗೋತ್ರ, ವಿದ್ಯೆ, ಸಾಧನೆ ನೋಡಿ ನಿಗದಿ ಪಡಿಸುವ ಹೊಣೆಗಾರಿಕೆ ಮಾತಾಪಿತರದ್ದು. ಮದುವೆಯಾದ ಬಳಿಕ ಕನ್ಯೆ ಗಂಡನ ಮನೆಗೆ ಹೋಗುವಂತಿಲ್ಲ. ಗಂಡನಾದವ ಪತ್ನಿಗೆ ಸಂತಾನ ಪ್ರಾಪ್ತವಾದ ಬಳಿಕ ಇರುವುದಾದರೆ ಇಲ್ಲಿ ಇರಬಹುದು, ಇಲ್ಲಾ ಹೋಗುವುದಾದರೆ ಹೋಗಬಹುದು – ಆಯ್ಕೆ ಮುಕ್ತವಾಗಿರುತ್ತದೆ. ಹಾಗೆಂದು ಹುಟ್ಟಿದ ಮಗುವಿನ ಮೇಲಿನ ಅಧಿಕಾರ ಕನ್ಯಾಶುಲ್ಕ ರೂಪದಲ್ಲಿ ನಮ್ಮದ್ದಾಗಿ ಉಳಿಯುತ್ತದೆ. ಮುಂದಿನ ಅಧಿಕಾರಿಯಾಗಿ ಆ ಶಿಶು ಮಣಿಪುರದಲ್ಲಿ ಬೆಳೆಯುವಂತಾಗುತ್ತದೆ. ಈ ರೀತಿ ಪುತ್ರಿಕಾ ಧರ್ಮ ನಮ್ಮ ವಂಶಕ್ಕೆ ಅನ್ವಯಿಸಲ್ಪಟ್ಟಿದೆ. ಈ ರೀತಿಯ ಧರ್ಮ ಪಾಲನೆಗೆ ಸಹಮತವಿದ್ದರೆ ಮದುವೆಗೆ ಮುಂದುವರಿಯಬಹುದು.” ಎಂಬುವುದಾಗಿ ಮಹಾರಾಜ ಅರ್ಜುನನಿಗೆ ಪದ್ದತಿಯನ್ನು ವಿವರಿಸಿದ.
ಅರ್ಜುನನಿಗೆ ಮಹಾರಾಜನ ಮಾತು ಹಾಗೂ ಮಣಿಪುರ ರಾಜವಂಶದ ಪದ್ದತಿ ವೈವಾಹಿಕ ಸಂಬಂಧಕ್ಕೆ ಬಾಧಕವಾಗಿ ಕಾಣಲಿಲ್ಲ. ಸಂತೋಷದಿಂದ ಒಪ್ಪಿಕೊಂಡ ಬಳಿಕ ಸುಮೂಹೂರ್ತದಲ್ಲಿ ರಾಜನ ಆಸ್ಥಾನ ಅಂತಃಪುರದಲ್ಲಿ ಅತಿ ಸರಳವಾಗಿ, ಅರಮನೆಯಾದರೂ ಪದ್ದತಿಯಂತೆ ಮನೆಯೊಳಗೆ ಮದುವೆ ನೆರವೇರಿತು. ಪ್ರಜೆಗಳಿಗಾಗಲಿ, ಹೊರಪ್ರಪಂಚಕ್ಕಾಗಲಿ ಈ ವಿಚಾರ ತಿಳಿಯದಂತೆ ಗೌಪ್ಯ ವಿವಾಹ ಆಗಿತ್ತು. ಅರ್ಜುನ ಹಾಗು ಚಿತ್ರಾಂಗದೆಯ ದಾಂಪತ್ಯ ಜೀವನದ ಫಲಸ್ವರೂಪವಾಗಿ ಜನಿಸಿದವನು ರಾಜಕುಮಾರ ಬಬ್ರುವಾಹನ. ಪ್ರಸಕ್ತ ಕಾಲದಲ್ಲಿ ಮಹಾ ವಿಕ್ರಮಿಯಾಗಿ ಮಣಿಪುರದಲ್ಲಿ ಮೆರೆಯುತ್ತಿದ್ದಾನೆ.
ಮುಂದುವರಿಯುವುದು..
































