26.2 C
Udupi
Friday, June 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 543

ಭರತೇಶ್ ಶೆಟ್ಟಿ , ಎಕ್ಕಾರು

ಪ್ರಮೀಳಾರ್ಜುನ ಕಾಳಗಕ್ಕೆ ಮುಹೂರ್ತ ಕಾಲ ಕೂಡಿ ಬಂದಿದೆ. ಇಬ್ಬರೂ ದಿವ್ಯ ಧನುಸ್ಸುಗಳಿಗೆ ಶರ ಸಂಧಾನ ಮಾಡಿ ಕಿವಿಯವರೆಗೆ ಎಳೆದು ಇನ್ನೇನು ಪ್ರಯೋಗಿಸಿ ಬಿಟ್ಟರು ಎಂಬಷ್ಟರಲ್ಲಿ ಅಶರೀರವಾಣಿಯಾಯಿತು. ಅಂಬರಪಥದಿಂದ ಕೇಳಿಸಿಕೊಂಡ ಮಾತು “ಅರ್ಜುನಾ! ಸ್ತ್ರೀಹತ್ಯೆ ಮಹಾಪಾಪ. ಸಲ್ಲದ ಕಾರ್ಯವನ್ನು ಮಾಡದಿರು. ಈ ಕನ್ಯೆ ನಿನಗೆ ಸೇರತಕ್ಕವಳು, ನೀನು ಸ್ವೀಕರಿಸು” ಅರ್ಜುನ ಸೆಳೆದ ಶಿಂಜಿನಿಯನ್ನು ಸಡಿಲಗೊಳಿಸಿದನು. ಏನಿದು? ಯಾರದು? ಎಂಬಂತೆ ಕಣ್ಣಾಡಿಸಿದರೂ ಯಾರೂ ಕಾಣಿಸುತ್ತಿಲ್ಲ. ಹಾಗಿದ್ದರೆ ಇದು ಗಗನವಾಕ್ಯವೆ? ಎಂಬಂತೆ ಗೊಂದಲಕ್ಕೊಳಗಾಗಿ ಸೇನೆಯಲ್ಲಿದ್ದ ನೀಲಧ್ವಜಾದಿ ಹಿರಿಯರಲ್ಲಿ ಪ್ರಶ್ನಿಸಿದನು. ಅವರು, ಇದು ದೇವವಾಣಿ, ಮನ್ನಿಸಿ ಪಾಲಿಸಬೇಕಾದುದು ನಿನಗೆ ಕರ್ತವ್ಯ. ಹಾಗಾಗಿ ಯುದ್ಧವನ್ನು ನಿಲ್ಲಿಸು ಎಂಬಂತೆ ಸೂಚನೆ ನೀಡಿದರು.

ಅರ್ಜುನನು ಪ್ರಮೀಳೆಯನ್ನು ಕರೆದು “ಪ್ರಮೀಳಾ, ಅಶರೀರವಾಣಿ ಆದುದನ್ನು ನೀನು ಕೇಳಿಸಿಕೊಂಡಿರುವೆಯಲ್ಲವೆ? ದೇವವಾಣಿಯನ್ನು ಪರಿಗ್ರಹಿಸಿ ಅಂತೆಯೆ ನಡೆದುಕೊಳ್ಳ ಬೇಕಾಗಿದೆ.” ಎಂದನು.

ಆಗ ಪ್ರಮೀಳೆ “ಹೇ ಮಹಾನುಭಾವ! ನನ್ನ ಬದುಕು ಸಾರ್ಥಕವಾಯಿತು. ನಾನೆಷ್ಟು ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ದೇವರು ಕೈಗೂಡಿಸಿ ಕೊಟ್ಟರು. ಧನ್ಯನಾದೆನು” ಎಂದಳು.

“ಪ್ರಮೀಳಾ! ಒಂದು ವಿಚಾರವಿದೆ. ನನ್ನ ಅಣ್ಣ ಯಾಗ ದೀಕ್ಷೆ ಕೈಗೊಂಡವನಿದ್ದಾನೆ. ಆತನ ತಮ್ಮನೂ, ಸಹಚರನೂ ಆಗಿ ನನಗೂ ಅದು ಪಾಲಿಸ ಬೇಕಾದ ಧರ್ಮವಾಗಿದೆ. ಯಾಗ ಸಂಪನ್ನಗೊಳ್ಳುವವರೆಗೆ ವ್ರತಸ್ಥನಾಗಿ ಇದ್ದು ಆ ಬಳಿಕ ನಾನು ನಿನ್ನ ಬಗ್ಗೆ ಯೋಚಿಸಲು ಸ್ವತಂತ್ರನಾಗಬಹುದು. ಹೀಗಿರಲು ನಿನಗೆ ಒಂದು ಮಾರ್ಗೋಪಾಯವನ್ನು ಸೂಚಿಸುತ್ತೇನೆ. ಕುದುರೆಯನ್ನು ಬಂಧ ಮುಕ್ತಗೊಳಿಸಿ ನಮಗೊಪ್ಪಿಸು. ಆನಂತರ ನೀನು ಕಪ್ಪ ಕಾಣಿಕೆಗಳ ಸಹಿತ ಹಸ್ತಿನಾವತಿಗೆ ತೆರಳು. ಅಲ್ಲಿ ನನ್ನ ಅಣ್ಣ ಧರ್ಮರಾಯನಿದ್ದಾನೆ. ಆತನನ್ನು ಕಂಡು ಇಲ್ಲಿ ನಡೆದಂತಹ ಸಂಪೂರ್ಣ ವಿಷಯಗಳನ್ನು ವಿವರಿಸಿ ಹೇಳು. ಅಣ್ಣ ಧರ್ಮಜನಿಗೆ ಮಾರ್ಗದರ್ಶಕನಾಗಿ ಹಸ್ತಿನೆಯಲ್ಲಿ ಶ್ರೀಕೃಷ್ಣ ಪರಮಾತ್ಮನಿದ್ದಾನೆ. ಆತನ ಅನುಗ್ರಹ ಪಡೆಯುತ್ತಾ ನಿತ್ಯ ಪುಣ್ಯ ಸಂಚಯ ಮಾಡುತ್ತಿರುವವಳಾಗು. ಒಮ್ಮೆ ಯಾಗ ಸಂಪನ್ನವಾದ ಬಳಿಕ ಅಣ್ಣಂದಿರ ಹಾಗು ಹಿರಿಯರ ಅಪ್ಪಣೆ ಪಡೆದು ನಿನ್ನನ್ನು ಇಷ್ಟ ಪತ್ನಿಯಾಗಿ ಸ್ವೀಕರಿಸುತ್ತೇನೆ” ಎಂದು ಅರ್ಜುನ ವಿವರಿಸಿ ಹೇಳಿದನು.

ಅರ್ಜುನ ಹೇಳಿದಂತೆ ಗೌರವಪೂರ್ವಕವಾಗಿ ಯಜ್ಞಾಶ್ವವನ್ನು ಒಪ್ಪಿಸಿದಳು. ಕಪ್ಪಕಾಣಿಕೆಗಳನ್ನು ಹೊರಿಸಿಕೊಂಡು ಪ್ರಮೀಳೆ ಹಸ್ತಿನಾವತಿಯತ್ತ ತೆರಳಿದಳು. ಅರ್ಜು‌ನ ಸೇನಾಸಹಿತನಾಗಿ ಕುದುರೆಯನ್ನು ಅನುಸರಿಸಿ ಹೊರಟನು. ಕುದುರೆ ಮುಂದೆ ಮುಂದೆ ಸಾಗುತ್ತಾ ಒಂದು ರಾಕ್ಷಸ ರಾಜ್ಯವನ್ನು ಪ್ರವೇಶ ಮಾಡಿತು. ಆ ರಾಜ್ಯದಲ್ಲಿ ಘೋರ ರಾಕ್ಷಸರು, ಮಾಯಾವಿಗಳು ಬಹುಸಂಖ್ಯೆಯಲ್ಲಿದ್ದರು. ಆ ರಾಕ್ಷಸರ ರಾಜ “ಭೀಷಣ” ಎಂಬವನು. ಆ ರಕ್ಕಸ ರಾಜ್ಯದ ರಾಜ ಪುರೋಹಿತನ ಹೆಸರು “ಮೇಧೋಹೋತ” ಎಂಬುವುದಾಗಿ. ಪಾಂಡವರ ಸೇನೆ ರಕ್ಕಸ ರಾಜ್ಯ ಪ್ರವೇಶಿಸಿದ ವಿಚಾರ ತಿಳಿದ ಮೇಧೋಹೋತನು ತನ್ನ ಒಡೆಯನಾದ ಭೀಷಣನಿಗೆ ತಿಳಿಸಿದನು. ಭೀಷಣ ಬಕಾಸುರನ ಮಗ. ತನ್ನ ತಂದೆಯನ್ನು ಕೊಂದ ಪಾಂಡವರು, ಅದರಲ್ಲೂ ಭೀಮಸೇನನ ಬಗ್ಗೆ ಅತ್ಯುಗ್ರ ದ್ವೇಷವನ್ನು ಹೊಂದಿದ್ದನು. ಈಗ ಎದುರಾಗಿರುವುದು ವೈರಿಗಳಾದ ಪಾಂಡವರ ಸೇನೆ. ಪ್ರತಿಕಾರ ಪೂರೈಸಲು ಇದು ಸೂಕ್ತ ಸಮಯವೆಂದು ನಿರ್ಧರಿಸಿದನು‌.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page