ಭಾಗ -49
ಭರತೇಶ್ ಶೆಟ್ಟಿ, ಎಕ್ಕಾರ್

ಶತಶೃಂಗ ಪರ್ವತವು ರಮಣೀಯ ಪರ್ವತ ಪಂಕ್ತಿ. ನೀರವತೆ ಸುಜ್ಞಾನಿ ಬಹುಮಂದಿ ಋಷಿ ಮುನಿಗಳನ್ನು ಈ ಕ್ಷೇತ್ರವಾಸಿಗಳನ್ನಾಗಿ ಮಾಡಿತ್ತು. ಇಂತಹ ಸುಂದರ ಶತಶೃಂಗದಲ್ಲಿ ಪರ್ಣಕುಟೀರ ನಿರ್ಮಿಸಿ ಪಾಂಡು ಸತಿಯರಾದ ಕುಂತಿ ಮತ್ತು ಮಾದ್ರಿಯ ಜೊತೆ ನಿವಾಸಿಯಾದನು. ಆಶ್ರಮವಾಸಿಗಳಾದ ಋಷಿ, ಮುನಿಗಳಿಂದ ಉಪದೇಶ ಪಡೆದು ಧ್ಯಾನ ಮಾರ್ಗಕ್ಕೆ ಸಜ್ಜಾಗುವ ಯತ್ನ ಅವರದ್ದಾಗಿತ್ತು. ವಯೋ ಸಹಜ ಕಾಮನೆಗಳು, ಭೌತಿಕವಾದ ದೇಹಧರ್ಮ ಅವರಿಗೆ ತೊಡಕನ್ನು ನೀಡಿ ಮನೋ ನಿಗ್ರಹಕ್ಕೆ ಬಾಧಿಸುತ್ತಿತ್ತು. ಸತ್ಯವನ್ನರಿತು ಪಕ್ವತೆಯ ಪ್ರಾಪ್ತಿಗೆ ಚಿತ್ತ ಚಾಂಚಲ್ಯದ ಪ್ರವೃತ್ತಿಯನ್ನು ತೊರೆದು ವಿರಕ್ತಿಯನ್ನು ತಳೆದರೆ ಮಾತ್ರ ತಪಸ್ಸು ಸಾಧ್ಯ. ಶತಶೃಂಗಾದ್ರಿಯ ಸೊಬಗು, ಸುಮಗಳ ಪರಿಮಳ, ಶುಕ ಪಿಕಗಳ ಇಂಚರ, ಮಂದ ಮಾರುತನ ಹಿತ ಸ್ಪರ್ಶ, ನೀರವ ಏಕಾಂತ, ಸುಕೋಮಲೆ ಸತಿಯರ ಸಾಮಿಪ್ಯ, ಅಂತರ್ಗತ ಭಾವದಲೆಗಳನ್ನು ಬಡಿದೆಬ್ಬಿಸಿದರೂ, ಕನ್ನಡಿಯೊಳಗಿನ ಗಂಟಾಗಿ, ಬದುಕಿಗೆ ಕಗ್ಗಂಟಾಗಿ ಪಾಂಡು ಅತೀವ ವೇದನೆಯನ್ನೇ ದಿನಚರಿಯಾಗಿಸಬೇಕಾಯ್ತು. ಕಾರಣ ಕಿಂದಮ ಮಹರ್ಷಿಯ ಶಾಪ ವಾಕ್ಯ.
ಅತ್ತ ಹಸ್ತಿನಾವತಿಗೆ ಸತ್ಯವತಿಯ ಅಂತರಂಗದ ಕರೆಯಿಂದ ನಿಮಂತ್ರಿತರಾಗಿ ಭಗವಾನ್ ವ್ಯಾಸರು ಪಾದ ಬೆಳೆಸಿ ಬಂದರು. ಮಾತೆ ಸತ್ಯವತಿಯ ಅಪೇಕ್ಷೆಯಂತೆ ಗಾಂಧಾರಿಗೆ ಒಂದು ಮಂತ್ರ ಪಿಂಡವನ್ನು ಕರುಣಿಸಿದರು. ತತ್ಫಲರೂಪವಾಗಿ ಗಾಂಧಾರಿ ಗರ್ಭಧಾರಣೆ ಮಾಡಿದಳು. ಹಸ್ತಿನೆಯಲ್ಲಿ ಹಬ್ಬದ ಸಂಭ್ರಮ. ಖಾಲಿಯಾಗಿ ಉಳಿದಿರುವ ರಾಜ ಸಿಂಹವಿಷ್ಟಿರದಲ್ಲಿ ಉಪವಿಶ್ಟನಾಗುವ ಯುವರಾಜ ಹುಟ್ಟಿ ಬರಲಿದ್ದಾನೆ ಎಂಬ ನಿರೀಕ್ಷೆ ಗಾಂಧಾರಿಗೂ, ಸತ್ಯವತಿಗೂ, ಧೃತರಾಷ್ಟ್ರನಿಗೂ ಸಮಸ್ತ ಹಸ್ತಿನೆಗೂ ವಿಶೇಷವಾಗಿ ಶಕುನಿಗೆ ಅತೀವ ಸಂತೋಷ ಉಂಟು ಮಾಡಿತ್ತು.
ಇತ್ತ ಶತ ಶೃಂಗಾದ್ರಿಯಲ್ಲಿದ್ದ ಪಾಂಡು ತನ್ನ ಪರ್ಣಕುಟೀರವನ್ನು ತೊರೆದು ಮುಂದೆ ಉತ್ತರ ದಿಕ್ಕಿನತ್ತ ಹೊರಡಲು ಸಿದ್ಧನಾದನು. ಈ ವಿಚಾರ ತಿಳಿದ ಋಷಿ ಮುನಿಗಳು ಬಂದು ಪಾಂಡುವನ್ನು ತಡೆದು “ಅಯ್ಯಾ ಎಲ್ಲಿಗೆ ಹೊರಟಿರುವೆ? ಮುಂದೆ ಸಾಗಿದರೆ ಭಯಾನಕ ಕಂದರಗಳೂ, ಗಿರಿದುರ್ಗಗಳೂ ಹಿಮಚ್ಛಾದಿತವಾಗಿವೆ. ಶೀತ ಗಾಳಿಯಿಂದಾಗಿ ಅನ್ಯ ಜೀವಿಗಳು ಬದುಕಲು ಕಷ್ಟ ಸಾಧ್ಯ. ಸಿದ್ಧರು, ಮಹರ್ಷಿಗಳು ಕೆಲವೇ ಕೆಲವರು ಮಾತ್ರ ಅಲ್ಲಿರಬಹುದು. ಆ ದಿಕ್ಕಿಗೆ ಸಾಗಿದರೆ ಕುಬೇರನ ಉದ್ಯಾನವನ, ದೇವತೆಗಳು, ಗಂಧರ್ವರು ಅಪ್ಸರೆಯರೊಂದಿಗೆ ಕ್ರೀಡಿಸುವ ಪ್ರದೇಶಗಳೆಲ್ಲ ಇದ್ದು ನಿಮ್ಮಂತಹ ಮಾನವರಿಗೆ ಕ್ರಮಿಸಲಾಗದ ಪ್ರದೇಶವದು” ಎಂದು ವಿವರಿಸಿ ನಿಲ್ಲಿಸಿದರು.
ಪಾಂಡು ಅಸಹಾಯಕನಾಗಿ ತನ್ನ ವೇದನೆಯನ್ನು ಹೇಳಿಕೊಂಡ, “ಋಷಿವರ್ಯರೆ, ನನ್ನಿಂದಾಗಿ ನನ್ನ ಪತ್ನಿಯರು ಬಂಜೆಯರಾಗಿ ಬದುಕಬೇಕು. ಮುಂದೆ ಪಿತೃ ಸದ್ಗತಿಯೂ ಅಸಾಧ್ಯ. ಹೀಗೆಯೇ ಸ್ವರ್ಗಾರೋಹಣ ಮಾಡಲಾದೀತೇ ಯತ್ನಿಸುವ ಎಂಬ ದುಸ್ಸಾಹಸಕ್ಕೆ ಮನ ಮಾಡಿದೆ. ಬೇರೆ ಇನ್ನೇನು ತಾನೆ ನಮ್ಮಿಂದಾದೀತು?” ಎಂದು ಕೇಳಿದಾಗ ಋಷಿಗಳು ಆತನನ್ನು ಸಮಾಧಾನಿಸಿದರು. ದುಃಖಿಸಬೇಡ, ಅದೃಷ್ಟದಲ್ಲೇನಿದೆ ಎಂದು ಈಗ ತರ್ಕಿಸಲಾಗದು. ಸ್ವತಃ ನೀನೇ ನಿಯೋಗ ಪದ್ದತಿಯಲ್ಲಿ ಹುಟ್ಟಿ ರಾಜನಾದೆ, ಚಕ್ರವರ್ತಿಯಾದೆ. ನೀನೂ ಕ್ಷೇತ್ರಜನಾಗಿಯೇ ಪಿತೃ ಸದ್ಗತಿಗೆ ಕಾರಣನಾದೆ” ಎಂದು ಸೂಚ್ಯವಾಗಿ ವಿವರಿಸಿದರು.
ಈ ಧರ್ಮ ಸೂಕ್ಷ್ಮ ವಿಚಾರ ಅರ್ಥೈಸಿಕೊಂಡ ಪಾಂಡು ತನ್ನ ನಿರ್ಧಾರ ತೊರೆದು ಮತ್ತೆ ಅಲ್ಲಿ ನೆಲೆ ನಿಂತನು. ಕುಂತಿಯನ್ನು ಕರೆದು, ಪ್ರಿಯೇ, ನಾನು ಹೀಗೆ ಸೂಚಿಸುತ್ತಿರುವೆ ಎಂದು ಅನ್ಯಥಾ ಭಾವಿಸಬೇಡ. ಉತ್ತಮನಾದ ಬ್ರಾಹ್ಮಣನಿಂದ ನಿಯೋಗ ನಡೆದು ನನಗೆ ಕ್ಷೇತ್ರಜ ಸಂತಾನವಾದರು ಪ್ರಾಪ್ತಿಯಾಗಿ ಪಿತೃ ಸದ್ಗತಿಗೆ ಅವಕಾಶ ಒದಗಿಸುವೆಯಾ? ಋಷಿ ಮುನಿಗಳೂ ಪರೋಕ್ಷವಾಗಿ ಅದನ್ನೇ ಹೇಳಿದಂತಿದೆ” ಎಂದು ಬೇಡಿದನು. ಕುಂತಿ ಈ ಕೋರಿಕೆಗೆ ಒಪ್ಪದೆ ಮಹಾರಾಜ ಧರ್ಮಿಷ್ಟನಾದ ನೀನು ಎಲ್ಲವನ್ನೂ ತಿಳಿದಿರುವೆ. ಸಂತಾನಕ್ಕಾದರೂ ನಾನು ಪರಪುರುಷನನ್ನು ಬಯಸುವೆನೇ? ಬೇಡ ಪತಿದೇವ ಎಂದು ಆತನ ಬಯಕೆಯನ್ನು ನಿರಾಕರಿಸಿದಳು. ಪ್ರಾಜ್ಞೆಯಾದ ಕುಂತಿ ಪಾಂಡುವಿಗೆ “ವ್ಯುಷಿತಾಶ್ವ” ಎಂಬ ಯೋಗಿಯ ಕಥೆಯನ್ನು ಹೇಳಿದಳು. ರಾಜಾ, ವ್ಯುಷಿತಾಶ್ವ ಎಂಬ ಯೋಗಿ ಮರಣ ಹೊಂದಿದಾಗ ಆತನ ಸತಿ ಭದ್ರೆಗೆ ಸಂತಾನವಿರಲಿಲ್ಲ. ಆತನ ಪಾರ್ಥಿವ ಶರೀರದ ಮೇಲೆ ಬಿದ್ದು ಗೋಳಾಡಿದಾಗ, ಯೋಗಿಯು ಅಶರೀರನಾಗಿ ಆಕೆಯನ್ನು ಕರೆದು ಋತುಸ್ನಾನ ಮಾಡಿ ಎಂಟನೇ ದಿನ ಮತ್ತು ಹದಿನಾಲ್ಕನೇ ದಿನ ನಮ್ಮದಾಗಿದ್ದ ಶಯನಾಗ್ರಹದಲ್ಲಿ ಒಬ್ಬಳೇ ಮಲಗಿರು. ತನ್ನ ಮೂಲಕವೇ ನಿನಗೆ ಸಂತಾನ ಪ್ರಾಪ್ತಿಸುತ್ತದೆ ಎಂದು ಹೇಳಿದನಂತೆ. ಅಂತೆಯೇ ಅವಳು ಏಳು ಮಂದಿ ಮಕ್ಕಳನ್ನು ಪಡೆದಳಂತೆ. ನೀನೂ ಕೂಡ ತಪಸ್ವಿಯಾಗಿರುವೆ, ಯೋಗಶಕ್ತಿಯಿಂದ ನನಗೆ ಸಂತಾನ ಕರುಣಿಸು ಎಂದು ಬೇಡಿದಳು. ಪಾಂಡು ಈ ಬಗ್ಗೆ ಯೋಚಿಸಿ ಉತ್ತರಿಸಿದ, ಹೌದು ಕಾಂತೆ ಅದು ಧರ್ಮ ಸತ್ಯ ಬಲಯುತವಾಗಿದ್ದ ಕಾಲದಲ್ಲಿ ನಡೆದಿದೆ. ನಾನು ಅಂತಹ ಶಕ್ತಿ ಸಂಪನ್ನ ಯೋಗಿಯಲ್ಲ. ಹೇಗೆ ತಾನೇ ನನ್ನಿಂದ ಅಂತಹ ಪವಾಡ ಸಾಧ್ಯ ಎಂದು ಕೇಳಿ, ತನ್ನ ಕೋರಿಕೆಯಂತೆ ನಿಯೋಗ ಮುಖೇನ ಕ್ಷೇತ್ರಜ ಸಂತಾನ ಪ್ರಾಪ್ತಿಯ ಬಯಕೆಗೆ ಒತ್ತಾಯ ಮಾಡಿದ. ಅಸಹಾಯಕಳಾಗಿ ಕುಂತಿ ಏನೂ ಹೇಳಲಾಗದೆ “ನೋಡೋಣ” ಎಂದಷ್ಟೇ ಹೇಳಿ ಸುಮ್ಮನಾದಳು.
ಮುಂದುವರಿಯುವುದು….