ಭಾಗ – 47
ಭರತೇಶ್ ಶೆಟ್ಟಿ ,ಎಕ್ಕಾರ್

ಶರಪ್ರಯೋಗ ಪ್ರಾವಿಣ್ಯತೆಯ ನಿಪುಣ ಪಾಂಡುವಿನ ಗುರಿ ತಪ್ಪೀತೇ? ಬಾಣದ ಹತಿಯಿಂದ ಮೃಗಯುಗ್ಮದ ರಕ್ತವು ಜಿರ್ರೆಂದು ಹಾರಿತು – ಪಾಂಡು ಚಕ್ರವರ್ತಿಯ ಪುಣ್ಯ ಸಂಚಯ ಬಸಿದು ಹರಿಯಿತೇ!! ಶರಾಘಾತದಿಂದ ಮಾರಾಣಾಂತಿಕ ವೇದನೆ ಅನುಭವಿಸುತ್ತಾ ಹರಿಣ ರೂಪಿನಲ್ಲಿದ್ದ ಋಷಿ ದಂಪತಿಗಳು ನಿಜರೂಪವನ್ನಾಂತು ಹತ ಪ್ರಾಣರಾಗುವ ಅಂತಿಮ ಹೋರಾಟದೊಂದಿಗೆ ಹೊರಳಾಡುತ್ತಿದ್ದರು. ಪತ್ನಿಯರೊಡಗೂಡಿ ಓಡೋಡಿ ಅವರ ಬಳಿ ಹೋಗಿ ತನ್ನಿಂದ ಅರಿಯದೇ ಆಗಿ ಹೋದ ಪ್ರಮಾದಕ್ಕೆ ಕ್ಷಮೆ ಕೋರಿ ಅವರನ್ನು ಉಪಚರಿಸತೊಡಗಿದರು. ಪರಿ ಪರಿಯಾಗಿ ಬೇಡಿ ಮೃಗವೆಂದು ಶರ ಪ್ರಯೋಗಿಸಿದೆ, ಮಾಯಾರೂಪವನ್ನು ಅರಿಯದಾದೆ ಎಂದು ಅಳುತ್ತಾ ಮರುಗಿದ ಪಾಂಡುಚಕ್ರವರ್ತಿ. ಆಗ ಪ್ರಾಣ ಹಾರಿ ಹೋಗುವ ಸ್ಥಿತಿಯಲ್ಲಿದ್ದ ಕಿಂದಮ ಮಹರ್ಷಿ ” ಎಲಾ ಪಾಪಿಯೇ ನಿನಗೇನೂ ಅಪಕಾರ ಮಾಡದ ನಮ್ಮನ್ನು ಕೊಲೆ ಮಾಡಿದೆಯಲ್ಲಾ… ! ನೀನು ನಿನ್ನ ಪತ್ನಿಯರನ್ನು ಸೇರಿದಾಕ್ಷಣ ಸತ್ತು ಹೋಗು” ಎಂದು ಶಪಿಸಿಯೇ ಬಿಟ್ಟರು. ಪಾಂಡು ಚಕ್ರವರ್ತಿ ಅವರನ್ನು ಬದುಕಿಸುವ ಯತ್ನ ನಿರತನಾಗಿದ್ದರೂ ಫಲಿಸದೆ ಮುನಿದಂಪತಿಗಳು ಅಸುನೀಗಿದರು. ಅಯ್ಯೋ ವಿಧಿಯೇ ಅರಸನಾಗಿ ಮೃಗ ಬೇಟೆ ಧರ್ಮ. ಕೃಷಿಕರಿಗೋ, ಗೋ ಪಾಲಕರಿಗೋ, ಪ್ರಜೆಗಳಿಗೋ ತೊಂದರೆಯಾಗುವ ಕಾರಣ ಮೃಗ ಬೇಟೆ ಅನಿವಾರ್ಯ. ಹಾಗಾಗಿ ಮುನಿದಂಪತಿಗಳು ತಪ್ಪೆಸಗಿದರೇ! ಮಾಯಾ ರೂಪಿನಲ್ಲಿ ಈ ತೆರನಾಗಿ ವರ್ತಿಸಿ ಪ್ರಮಾದಕ್ಕೆ ಕಾರಣ ಕಲ್ಪಿಸಿ ಶಪಿಸಿದರೇ? ನಿಯತಿಯ ಮುಂದಣ ನಿರ್ಣಯವೇನಿದೆಯೋ? ಏನಪಚಾರವಾಗಿದೆ ನನ್ನಿಂದ?. ಧರ್ಮ ಸಂರಕ್ಷಣಾರ್ಥ ಯಾಗ ಯಜನಾದಿಗಳು, ಪ್ರಜೆಗಳ ಸಮೃದ್ಧಿಗಾಗಿ ರಾಜ ಧನ ಕನಕ ದಾನಾದಿ ಕರ್ಮ ನಿರತನಾಗಿ ಪ್ರಜಾಪಾಲಕನಾಗಿ ನಡೆದರೂ ನನಗೆ ಈ ತೆರನಾದ ದುರ್ವಿಧಿ ಯಾಕಾಗಿ ಬಂದೊದಗಿತು? ಎಂದು ವೇದನಾಮಯ ರೋದನೆಗೆ ಪರಿಮಾರ್ಜನೆ ಇಲ್ಲದಾಗಿ ಹೋಯಿತು. ಕುಂತಿ – ಮಾದ್ರಿಯರ ಜೊತೆ ದಾಂಪತ್ಯವೇ ಇರದೆ.. ಸ್ತ್ರೀ ಸಖ್ಯವೇ ಮೃತ್ಯುಕಾರಕವಾಯಿತೇ… ಯಾವ ದೈಹಿಕ ಸುಖವನ್ನು ರೂಪವತಿ ಪತ್ನಿಯರಿಂದ ಅಪರಿಮಿತವಾಗಿ ಬಯಸಿದ್ದೆನೋ ಅದೇ ಎನಗೆ ದುರ್ಗತಿ ಪಥವಾಯಿತೇ! ಈ ರೀತಿ ನಿರಂತರ ಯೋಚಿಸುತ್ತಿದ್ದಂತೆ ಜಿಗುಪ್ಸೆ ಮೂಡಿತು. ಪರಿಣಾಮ ವಿರಕ್ತಿ ಆವರಿಸಿತು. ತಪೋ ನಿರತನಾಗಿ ಮುಕ್ತಿ ಪಥವನ್ನು ಆಶ್ರಯಿಸುವ ಆಶಯ ತಾಳಿದನು. ಪತ್ನಿಯರನ್ನು ಬಳಿ ಕರೆದು ಹಿಂದಕ್ಕೆ ಹೊರಟು ಅರಮನೆ ಸೇರಲು ಆದೇಶ ನೀಡಿದನು. ಆದರೆ ಸತಿ ಶಿರೋಮಣಿಗಳಾದ ಕುಂತಿ ಮಾದ್ರಿಯರು ಈ ಸೂಚನೆಗೆ ಒಡಂಬಡದೆ ತಪೋವನಕ್ಕೆ ತಾವೂ ಅನುವರ್ತಿಗಳಾಗಿ ಬಂದು ಸಹಕರಿಸುವೆವು ಎಂದು ಹಠ ಹಿಡಿದರು. ನಿರ್ವಾಹವಿಲ್ಲದೆ ಒಪ್ಪಿಕೊಳ್ಳಲೇ ಬೇಕಾದ ಪ್ರಮೇಯ ಒದಗಿ ಬಂತು.
ಇಷ್ಟಾಗುವಾಗ ರಾಜನನ್ನು ಅನುಸರಿಸಿ ಬಂದಿದ್ದ ಸಹಚರ ಪಡೆ, ಸೈನ್ಯ ಸುತ್ತುವರಿದು ವಾಸ್ತವ ಅರಿತು ಕಂಗಾಲಾದರು. ಚಕ್ರವರ್ತಿ ಪಾಂಡು ವಿರಕ್ತಿಯ ನಡೆಯಲ್ಲೇ ನಡೆದು ತನ್ನ ರಾಜ ಲಾಂಛನಗಳೆಲ್ಲವನ್ನೂ ಕಳಚಿ ಅವರಿಗೆ ನೀಡಿ ಆಸ್ಥಾನಕ್ಕೆ ಒಯ್ದು ಭೀಷ್ಮಾಚಾರ್ಯರಿಗೆ ಒಪ್ಪಿಸುವ ಆಜ್ಞೆ ಮಾಡಿದ. ತಾನಿನ್ನು ಸಪತ್ನೀಕನಾಗಿ ತಪೋ ನಿರತನಾಗುವೆ. ಹುಡುಕಿ ಮರಳಿ ಕರೆಯುವ ವ್ಯರ್ಥ ಪ್ರಯತ್ನ ಮಾಡಬಾರದೆಂಬುದಾಗಿ ಹೇಳಿ ನಾವು ಮೂವರನ್ನು ಮರೆತು ಸಾಮ್ರಾಜ್ಯದ ಪರಿಪಾಲನೆ ಮಾಡಬೇಕೆಂದು ಅವರಿಗೆ ವಿನಂತಿ ಮಾಡಿದ್ದೇನೆ ಎಂದು ಹೇಳಿ ಕಳುಹಿಸಿದ. ಕುಂತಿ ಮಾದ್ರಿಯರೂ ದಿವ್ಯಾಭರಣಗಳನ್ನು ತೆಗೆದು ಪರಿವಾರಕ್ಕೆ ಹಂಚಿ ತ್ರಿಕರಣ ಪೂರ್ವಕ ಋಷಿ ಪತ್ನಿಯರೇ ಆದರು. ಸೈನ್ಯವನ್ನು ಅರಮನೆಯತ್ತ ಕಳುಹಿಸಿ ತದ್ವಿರುದ್ಧ ದಿಕ್ಕಿನಲ್ಲಿ ಗೊಂಡಾರಣ್ಯದತ್ತ ಸಾಗಿದರು.
ಭೀಷ್ಮಾಚಾರ್ಯರು ವೃತ್ತಾಂತವನ್ನೆಲ್ಲ ಕೇಳಿ ತಿಳಿದರು. ಆಸ್ಥಾನ – ಸಾಮ್ರಾಜ್ಯ ಶೋಕ ಸಾಗರದಲ್ಲಿ ಮುಳುಗಿತು. ಚಿಂತಿಸಿ ಫಲವಿಲ್ಲವೆಂದು ಅರಿತ ಭೀಷ್ಮರು ಸಮಾಲೋಚಿಸಿ ಕುರುಡ ಧೃತರಾಷ್ಟ್ರನನ್ನು ಕಾರ್ಯ ಕಾರಣ ರಾಜ ಅಥವಾ ರಾಜ ಪ್ರತಿನಿಧಿಯಾಗಿ ನೇಮಿಸಿದರು. ಧರ್ಮಿಷ್ಟ ಜ್ಞಾನಿ ವಿದುರನ್ನು ಆತನಿಗೆ ಆಸ್ಥಾನ ಮಂತ್ರಿಯಾಗಿ ನಿಯೋಜಿಸಿದರು. ಇತ್ತ ಹಸ್ತಿನಾವತಿಗೆ ಎಂತಹ ದುರಂತ ಸಂಭವಿಸಿತು ಎಂದು ಪರಿತಪಿಸಿದರೆ, ಅನಭಿಷಿಕ್ತ ಕಾರ್ಯಕಾರಿಣಿ ರಾಜ ಧೃತರಾಷ್ಟ್ರನೂ ತನ್ನ ಸೋದರನ ದುರ್ವಿಧಿಗೆ ಮರುಗಿದ. ಒಬ್ಬಾತ ಮಾತ್ರ ಒಳಗೊಳಗೇ ಆನಂದ ಪಡುತ್ತಿದ್ದ. ತನ್ನ ಸೋದರಿಯ ಪತಿ ಕನಿಷ್ಟ ಪಕ್ಷ ಪ್ರತಿನಿಧಿಯಾದರೂ ಆದನಲ್ಲ ಎಂದು ಖುಷಿ ಪಡುತ್ತಿದ್ದನು – ಆತನೇ ಶಕುನಿ.
ಇತ್ತ ಪಾಂಡು ಋಷಿಯಾಗಿ, ಕಾಂತಾರ (ಕಾಡು) ಹಿತವೆಣಿಸಿ ಕಾಂತ (ಪತ್ನಿಯರು) ರಹಿತನಾಗಿ ಇರಲಾಗದೆ ಜೊತೆಯಲ್ಲೇ ಋಷಿ ಮುನಿಗಳ ಆಶ್ರಮವಾಸಿಯಾಗಿರುತ್ತಾ, ಸಂಚರಿಸುತ್ತಾ.. ಸಾಗುತ್ತಾ ಇಂದ್ರದ್ಯುಮ್ನ ಎಂಬ ಸರೋವರದ ಬಳಿ ಬಂದು ಸೇರಿದ. ಅಲ್ಲೇ ಸನಿಹದಲ್ಲಿದ್ದ ಋಷ್ಯಾಶ್ರಮ ಸೇರಿದ. ಅವರಿಂದ ಸ್ಥಳ ವಿಶೇಷ ಕಥನ ಕೇಳಲಾರಂಭಿಸಿದ. ಹಿಂದೆ ಗಜೇಂದ್ರನೆಂಬವನಿಗೆ ಮೋಕ್ಷವಾದ ಸ್ಥಳವೆಂದು ತಿಳಿಯಲ್ಪಟ್ಟ. ಸವಿವರವಾಗಿ ಮೋಕ್ಷ ವೃತ್ತಾಂತ ತಿಳಿಯುವ ಕುತೂಹಲ ಉಂಟಾಗಿ ಮುನಿಗಳಲ್ಲಿ ಕೇಳಿದ. ಅವರೂ ಹೇಳಲು ಉತ್ಸುಕರಾದರು.
ಮುಂದುವರಿಯುವುದು…