ಭಾಗ – 521
ಭರತೇಶ ಶೆಟ್ಟಿ, ಎಕ್ಕಾರು

ಪ್ರಭಾವತಿ ಚಂಪಕಾವತಿಯ ಯುವರಾಣಿ, ಯುವರಾಜ ಸುಧನ್ವನ ಪತ್ನಿ. ರಾಜ್ಯ ಮತ್ತು ಸಂಸಾರ ಎರಡೂ ಆಕೆಯ ಜವಾಬ್ದಾರಿಯಾಗಿದೆ. ಆ ಕುರಿತಾದ ಹೊಣೆಗಾರಿಕೆಯೂ ಇದೆ. ಅದನ್ನರಿತು ಮನದಲ್ಲಿ ಯೋಚಿಸುತ್ತಿದ್ದಾಳೆ, ‘ನಮ್ಮ ರಾಜ್ಯಕ್ಕೆ ಅಶ್ವಮೇಧದ ಕುದುರೆ ಬಂದಿದೆ, ಎದುರಾಳಿ ಪಾಂಡವರು ಅತುಲ ವಿಕ್ರಮಿಗಳು. ಯುದ್ದವಾದರೆ ಏನಾದೀತು ಎಂಬ ಪರಿಣಾಮದ ಸ್ಪಷ್ಟ ಅರಿವು ಇದೆ. ಮದುವೆಯಾಗಿ ಬಂದ ನವವಧು ನಾನು. ನನ್ನ ಪತಿದೇವನೊಡನೆ ಸಂಸಾರ ಸಾಗಿಸುವ ಬಲು ದೊಡ್ಡ ಸಿಹಿ ಕನಸು ಹೊತ್ತು ಬಂದವಳು, ಆದರೆ ನನಸಲ್ಲಿ ಈಗ ಸಮರ ಹೊತ್ತಿ ಉರಿಯುತ್ತಿದೆ. ಮನದಲ್ಲಿ ತರ್ಕಿಸುತ್ತಾ, ನನ್ನ ಆಸೆಗಳೇನೆ ಇರಲಿ, ಅದು ವೈಯಕ್ತಿಕ. ನಾನು ಆ ಕುರಿತು ಯೋಚಿಸುತ್ತಾ ನಿಲ್ಲುವಂತಿಲ್ಲ ಎಂದು ಭಾವಿಸಿ ಪತಿದೇವ ಸುಧನ್ವನಲ್ಲಿ “ದೇವಾ! ನನಗೂ ನೀವು ಹೇಳುತ್ತಿರುವ ಯುದ್ಧ ವಿಚಾರ ಸಖಿಯರಿಂದ ತಿಳಿದಿದೆ. ಪಾಂಡವರ ಯಾಗದ ಕುದುರೆ ಬಂದಿದೆಯಂತೆ, ನನ್ನ ಮಾವ ಅದನ್ನು ಕಟ್ಟಿ ಧೀರನಾಗಿ ಸಮರಕ್ಕೆ ಮುಂದಡಿ ಇಟ್ಟಿದ್ದಾರೆ. ಅವರು ಮಾಡುತ್ತಿರುವುದು ಕ್ಷಾತ್ರ ನ್ಯಾಯೋಚಿತವಾಗಿದೆ. ಯುದ್ಧ ಯಾವತ್ತಿದ್ದರೂ ವೀರ ಪುರುಷರಿಗೆ ಭೂಷಣವಾದುದು. ಆದರೆ ಈಗ ಎದುರಾಗಿರುವುದು ಮಹಾ ಸಂಗ್ರಾಮ, ಬಹಳಷ್ಟು ಗುರುತರವಾಗಿದೆ. ಅಮಿತ ಪರಾಕ್ರಮಿಯಾದ ಪಾರ್ಥನನ್ನು ಕೆಣಕಿ ಸೆಣಸಲು ಸಮಗ್ರ ಚಂಪಕಾವತಿ ಸನ್ನದ್ಧವಾಗಿದೆ. ಎಲ್ಲಾ ಸಾಧ್ಯಾಸಾಧ್ಯತೆಗಳ ಕಲ್ಪನೆ ನನಗಿದೆ. ನಿಮ್ಮ ಸಾಹಸ ವಿಕ್ರಮದ ಬಗ್ಗೆಯೂ ನನಗೆ ವಿಶ್ವಾಸವಿದೆ. ಜಯಾಪಜಯದ ಗೊಡವೆ ನನಗಿಲ್ಲ, ನನಗದು ಬೇಕಾಗಿಯೂ ಇಲ್ಲ. ಅಂದರೆ ಶ್ರೀಕೃಷ್ಣನ ಪೂರ್ಣಾನುಗ್ರಹ ಮತ್ತು ಸಖನಾಗಿರುವ ಧುರಧೀರ ಪಾರ್ಥನನ್ನು ಸಮರಮುಖದಲ್ಲಿ ಕೆಡ ಹಾಕಿದವರಿದ್ದಾರೆಯೆ? ಸಾಕ್ಷಾತ್ ಭಗವಾನ್ ಪರಮೇಶ್ವರನನ್ನು ಎದುರಿಸಿ ಕಾದಾಡಿದ ಕೆಚ್ಚುಳ್ಳ ಮಹಾಶಯ ಅರ್ಜುನ. ಕೆಲಸಮಯದ ಹಿಂದೆ ಪೂರ್ಣಗೊಂಡ ಮಹಾಭಾರತ ಯುದ್ಧದ ಬಗ್ಗೆ ನಾವೆಲ್ಲರೂ ಕೇಳಿ ತಿಳಿದಿದ್ದೇವೆ. ಅಸಾಮಾನ್ಯ ಶೌರ್ಯವಂತ ಆಚಾರ್ಯ ಭೀಷ್ಮಾಚಾರ್ಯರು, ಅಜೇಯರಾಗಿದ್ದ ಗುರು ದ್ರೋಣಾಚಾರ್ಯರು, ಮಹಾರಥಿ ಕರ್ಣ, ಜಯದ್ರಥಾದಿಗಳನ್ನು ಎದುರಿಸಿ ಗೆದ್ದ ಪಾರ್ಥನಿಗೆ ಪರಮಾತ್ಮ ಶ್ರೀಕೃಷ್ಣ ದೇವರು ಸಾರಥಿಯಾಗಿದ್ದರಂತೆ. ಪಾಂಡವರು ನನ್ನ ಪಂಚ ಪ್ರಾಣಗಳು ಎಂದು ಹೇಳಿರುವ ಶ್ರೀಹರಿ ರಕ್ಷಕನಾಗಿ ಅವರ ಜೊತೆಗಿದ್ದಾನಲ್ಲವೇ? ಭಗವಂತನ ರಕ್ಷಣೆಯ ಕಕ್ಷೆಯೊಳಗಿರುವ ಪಾಂಡವರಲ್ಲೊಬ್ಬನಾದ ಅರ್ಜುನ ಯಾಗಾಶ್ವದ ಬೆಂಗಾವಲಿಗನಾಗಿ ಬಂದಿರುವಾಗ ಯುದ್ಧ ನಡೆದರೆ ಏನಾದೀತು ಎಂಬ ಭವಿಷ್ಯದ ಸತ್ಯವನ್ನು ಅರಮನೆಯ ಅಂತಃಪುರದೊಳಗೆ ಇರುವ ಹೆಣ್ಣು ಮಗಳಾದ ನಾನು ಊಹಿಸಿಕೊಳ್ಳಬಲ್ಲೆ. ಅದೇನೆ ಇರಲಿ ಆ ಕುರಿತು ನನಗೆ ಭಯವಿಲ್ಲ. ಏನಾದರೂ ಅದು ಒಳ್ಳೆಯದಕ್ಕೆ ಆಗಲಿದೆ. ನಮ್ಮ ಕರ್ಮವನ್ನು ಧರ್ಮಯುಕ್ತವಾಗಿ ನಿಷ್ಠೆಯಿಂದ ಮಾಡಿದರೆ ಆ ಭಗವಂತ ಸತ್ಫಲ ನೀಡುತ್ತಾನೆ ಎಂಬ ಪೂರ್ಣ ಭರವಸೆ ನಮಗಿದೆ. ನನಗೆ ನನ್ನ ಗಂಡನೇ ಮಹಾವಿಕ್ರಮಿ, ನಿಮ್ಮ ಧೈರ್ಯ, ಶೌರ್ಯ, ಸ್ಥೈರ್ಯ, ವೀರ್ಯ ಸಾಹಸಗಳ ಪೂರ್ಣ ವಿಶ್ವಾಸವಿದೆ. ಸೋತು ಹಿಮ್ಮೆಟ್ಟಿಸಲ್ಪಟ್ಟು ಹಿಂದಿರುಗುವವರು ನೀವಲ್ಲ ಎಂಬುವುದೂ ನನಗೆ ತಿಳಿದಿದೆ. ನಾನು ನಿಮ್ಮಲ್ಲಿ ಈ ತನಕ ಏನೇನೂ ಕೇಳಿರದಿದ್ದರೂ, ಇಂದು ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅರೆಕ್ಷಣದ ಅವಕಾಶ ಬೇಡುತ್ತಿದ್ದೇನೆ. ನನ್ನ ಮನ ಮಾಡಿರುವ ಬಯಕೆಗಳನ್ನು ನಿಮ್ಮಲ್ಲಿ ಹೇಳಿಕೊಳ್ಳಲು ಅನುಮತಿ ನೀಡುವಿರಾ?” ಎಂದು ಪ್ರಾರ್ಥಿಸಿದಳು.
ಸುಧನ್ವ ಮಾತ್ರ ಚಂಚಲ ಚಿತ್ತನಾಗಿದ್ದಾನೆ. ಮಡದಿಯ ಬಗ್ಗೆ ಮಮತೆ, ಪ್ರೀತಿ ಇದ್ದರೂ, ಇಂದಿನ ಈ ಕ್ಷಣ ಕ್ಷತ್ರಿಯನಾಗಿ ಆತನ ತನು ಮನಗಳೆರಡೂ ಯೋಧರ ಬಿಡಾರದತ್ತ ಸೆಳೆಯಲ್ಪಡುತ್ತಿದೆ. ಆದರೂ ತನ್ನ ಮನದನ್ನೆ ಏನೋ ಕೇಳ ಬಯಸಿದ್ದಾಳೆ, ಆಕೆಗೆ ಸದುತ್ತರ ನೀಡಿ ಶೀಘ್ರವಾಗಿ ಸೇನಾ ನಿವೇಶನದತ್ತ ಹೋಗಬೇಕು ಎಂದು ತೀರ್ಮಾನಿಸಿ “ಪ್ರಭಾವತಿ! ನೀನು ಏನೇ ಮಾಡುವುದಿದ್ದರೂ ಆ ಕುರಿತಾಗಿ ಸಂಪೂರ್ಣ ವಿವೇಚನೆ ಮಾಡಿ ಮುಂದುವರಿಯುವವಳು ಎಂದು ನನಗೆ ತಿಳಿದಿದೆ. ಈಗಲೂ ಏನೋ ಹೇಳ ಬಯಸಿರುವೆ ಎಂದರೆ ಅದರ ಕುರಿತಾಗಿಯೂ ವರ್ತುಲಾಕೃತಿಯಲ್ಲಿ ಉಚಿತಾನುಚಿತಗಳನ್ನು ತರ್ಕಿಸಿ ಬಳಿಕ ಕೇಳ ಬಯಸಿರುವೆ ಎಂದು ನಂಬಿದ್ದೇನೆ. ಏನು ಹೇಳುವುದಿದ್ದರೂ ಅದನ್ನು ವಿಳಂಬಿಸದೆ ಬಿನ್ನವಿಸಿಕೋ” ಎಂದು ತನ್ನ ಕದನ ಕಾತರವನ್ನು ಪರೋಕ್ಷವಾಗಿ ನುಡಿಯಲ್ಲಿ ಸೂಚ್ಯವಾಗಿ ಮಂಡಿಸಿ ಅವಕಾಶ ನೀಡಿದನು.
ಪ್ರಭಾವತಿ ಕಾಲಹರಣವನ್ನು ಬಯಸಿದವಳಲ್ಲ. ಪತಿಯೊಂದಿಗೆ ಕಾಲಕಳೆಯುವುದು ಆಕೆಗೆ ಸದಾ ಹಿತಕಾರ್ಯ ಹೌದಾದರೂ ಈ ಹೊತ್ತು ಅಗತ್ಯ ವಿಚಾರ ಪ್ರಸ್ತಾಪಿಸಲು ಸಿದ್ಧಳಾಗಿ “ಯುವರಾಜರಾದ ತಾವು ನನ್ನ ಮಾವನಾಗಿರುವ ಮಹಾರಾಜರಿಗೆ ಸತ್ಪುತ್ರನಾಗಿ ಸದಾ ಧರ್ಮಯುಕ್ತವಾದುದನ್ನು ಮಾಡುವಾಗ ಯಾವ ಕಾಲದಲ್ಲಿಯೂ ಹಿಂದುಳಿದವರಲ್ಲ. ದೈವ ಭಕ್ತರಾದ ನಾವು ಎಲ್ಲಾ ಘಟನೆಗೂ ದೇವರು ಪ್ರೇರಕ ಎಂದು ನಂಬುವವರು. ಹಾಗೆಯೇ, ಏನಾದರೂ ಅದು ದೈವೇಚ್ಚೆಯಿಂದ ಆಗಿ ಹೋಯಿತು ಎಂದು ಒಪ್ಪಿಕೊಳ್ಳುವವರಲ್ಲವೆ? ಸ್ವಾಮೀ! ನಾವಿಬ್ಬರೂ ಗುರು ಹಿರಿಯರ ಸಮಕ್ಷ ಪಾಣಿಗ್ರಹಣ ಮುಖೇನ ಸತಿಪತಿಗಳಾಗಿ ಗ್ರಹಸ್ಥಾಶ್ರಮ ಪ್ರವೇಶಿಸಿದವರು. ಆ ಭಗವಂತನ ಕೃಪೆಯಿಂದ ನಮ್ಮ ಸಾಂಸಾರಿಕ ಬದುಕು ಅನ್ಯೋನ್ಯವಾಗಿ ಸಾಗುತ್ತಿದೆ. ದಂಪತಿಗಳಾದ ನಮಗೆ ದಾಂಪತ್ಯದ ಫಲಸ್ವರೂಪವಾಗಿ ಈ ತನಕ ಸಂತಾನ ಭಾಗ್ಯವಾಗಿಲ್ಲ. ನೀವು ಗ್ರಹಸ್ಥನಾಗಿರುವಿರುವಿರಿ, ನಿಮ್ಮ ಧರ್ಮಪತ್ನಿಯಾದ ನನ್ನಿಂದ ಸಂತಾನವನ್ನು ಹೊಂದಿ ಆ ಮುಖೇನ ಪಿತೃಋಣದಿಂದ ಮುಕ್ತರಾಗಬೇಕಾದುದು ನಿಮಗೂ ಧರ್ಮ. ಹಾಗೆಯೆ ಹೆಣ್ಣಾದ ನಾನು ತಾಯಿಯಾಗಿ ಧನ್ಯತೆಯನ್ನು ಹೊಂದುವುದು ಹೆಣ್ತನದ ಸಾರ್ಥಕತೆಗೆ ಅಗತ್ಯವಲ್ಲವೆ? ಪುರುಷನಾಗಿ ನೀವು ವಂಶವನ್ನು ಬೆಳೆಸದೆ ಹೋದರೆ ನಿಮ್ಮ ಜನ್ಮವೂ ನಿರರ್ಥಕವಾಗುತ್ತದೆ. ಪತಿದೇವಾ! ನಾವಿಬ್ಬರೂ ತಾರುಣ್ಯದ ಹೊಸ್ತಿಲಲ್ಲಿ ಇರುವವರು. ಸಾಂಸಾರಿಕ ಜೀವನ, ದಾಂಪತ್ಯ ಸುಖ, ಕೌಟುಂಬಿಕ ಜವಾಬ್ದಾರಿ ಹೊತ್ತು ಸಂತಾನ ಪಡೆದು ಪಾಲಿಸಿ ಪೋಷಿಸಿ ಬದುಕುವ ಕನಸು ಹೊತ್ತವರು. ಹಾಗೆಂದು ನಾವು ಅವಿವೇಕಿಗಳಲ್ಲ ಎಂಬುವುದೂ ಅಷ್ಟೇ ಸತ್ಯ. ನಾಳೆ ಸಾಗುವುದು ಕೇವಲ ಒಂದು ಕದನವಲ್ಲ, ಅದು ಸಮರ ಎಂಬ ನಿಖರ ವಿಚಾರ ನನಗೂ ಗೊತ್ತಿದೆ. ಮರಣ ಸಹಿತವಾದದ್ದು ಸಮರವಲ್ಲವೆ? ಹಾಗಾಗಿ ಸಂಭವನೀಯ ಪರಿಣಾಮ ಊಹಿಸಿಕೊಂಡು ಅದರ ಕುರಿತಾಗಿ ಜಾಗೃತರಾಗಿ ಪ್ರವರ್ತಿಸುವುದು ವಿಹಿತ ಎಂದು ನನಗನ್ನಿಸುತ್ತಿದೆ. ಪತಿದೇವಾ, ನಿಮ್ಮನ್ನು ಯುದ್ಧಕ್ಕೆ ಹೋಗದಂತೆ ತಡೆಯುವ ಹೇಡಿ ಅಥವಾ ಸ್ವಾರ್ಥಿ ನಾನಲ್ಲ. ವೀರವನಿತೆಯಾಗಿ ಕ್ಷಾತ್ರಯಾನಿಯಾಗಿ ಧೈರ್ಯ ಸ್ಥೈರ್ಯವನ್ನು ನಾನೂ ಮೈಗೂಡಿಸಿಕೊಂಡಿದ್ದೇನೆ. ಹಾಗೆಂದು ವಿವೇಕವೂ ಜಾಗೃತವಾಗಿ ನನ್ನನ್ನು ಎಚ್ಚರಿಸುತ್ತಿದೆ. ಮಿಂಚಿ ಹೋದ ಕಾಲ, ಶಿಂಜಿನಿಯಿಂದ ಚಿಮ್ಮಿ ಹಾರಿದ ಬಾಣದಂತೆ ಮರಳಿ ಬಾರದು. ಹಾಗಾಗಿ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ನನಗೆ ಜವಾಬ್ದಾರಿಯಾಗಿದೆ. ನನ್ನ ಕೈಹಿಡಿದ ಗಂಡ ನೀವು, ಸದಾ ನಿಮ್ಮ ಶ್ರೇಯಸ್ಸನ್ನು ಬಯಸುವವಳು ನಾನು. ಈಗಲೂ ನಾನು ನಿಮ್ಮ ಶ್ರೇಯೋಭಿಲಾಷಿನಿಯಾಗಿ ಕೇಳಿಕೊಳ್ಳುತ್ತಿದ್ದೇನೆ. ಸ್ವಾಮೀ… ನನ್ನ ಬೇಡಿಕೆಯನ್ನು ಅನ್ಯಥಾ ಭಾವಿಸಬಾರದು. ಪತಿದೇವಾ! ನಾಳಿನ ಸೂರ್ಯೋದಯದಿಂದ ಮಹಾಸಂಗ್ರಾಮ ಸಾಗಲಿದೆ. ಈಗ ನಮ್ಮ ಬಳಿ ಉಳಿದಿರುವುದು ಇಂದಿನ ಒಂದು ರಾತ್ರಿ ಮಾತ್ರ. ನೀವು ಈ ಸಮಯ ನನ್ನ ಜೊತೆಗಿದ್ದು, ಅರುಣೋದಯಕ್ಕೂ ಮೊದಲು ಎದ್ದು ಸೇನಾ ಬಿಡಾರ ಸೇರಿಕೊಳ್ಳಿ. ಆ ಬಳಿಕ ನಾನು ನಮ್ಮ ದೇವರಾದ ಶ್ರೀಹರಿಯ ಧ್ಯಾನ ನಿರತಳಾಗಿ ನಿಮಗೆ ಶ್ರೀರಕ್ಷೆಯನ್ನು ಬೇಡುತ್ತಿರುತ್ತೇನೆ. ಖಂಡಿತವಾಗಿಯೂ ನಿಮ್ಮನ್ನು ತಡೆಯುವ, ನಿಮ್ಮ ರಣೋತ್ಸಾಹ ಕ್ಷೀಣಗೊಳಿಸುವ ಯಾವ ಕಾರ್ಯವನ್ನೂ ನಾನು ಮಾಡಲಾರೆ. ನಿಮಗೆ ಪೂರಕಳೂ, ಪ್ರೇರಕಳೂ ಆಗಿ ಮನಸಾಕ್ಷಿಯಾಗಿ ಸಹಕರಿಸುತ್ತೇನೆ. ಆದರೆ ಇಂದಿನ ಈ ಒಂದು ರಾತ್ರಿ ನನ್ನ ಜೊತೆಗಿದ್ದು ನಮಗೆ ಸಂತಾನ ಭಾಗ್ಯ ಪ್ರಾಪ್ತವಾಗುವಂತಹ ಕಾರ್ಯ ನೀವು ಮಾಡಬೇಕು. ಕಾಕತಾಳೀಯವೊ ಎಂಬಂತೆ ಇಂದಿಗೆ ಋತುಮತಿಯಾಗಿ ಹದಿನಾರು ದಿನಗಳು ಸಂದು ನಾನು ಫಲವತಿಯಾಗಿದ್ದೇನೆ. ಸ್ವಾಮಿ, ಶಾರೀರಿಕ ಸುಖಕ್ಕಾಗಿ, ಅಥವಾ ಕಾಮತೃಷೆಯ ನಿವಾರಣೆಗಾಗಿ ನಿಮ್ಮಲ್ಲಿ ಈ ಬೇಡಿಕೆಯಲ್ಲ. ನಮ್ಮ ಚಂಪಕಾವತಿಯ ಯುವರಾಣಿಯಾಗಿ ಅಂತಹ ಜವಾಬ್ದಾರಿಯುತ ನೆಲೆಯಲ್ಲಿ ನಿಂತು ಸರ್ವ ತ್ಯಾಗಕ್ಕೂ ಸಿದ್ಧಳಾಗಿ, ಧೈರ್ಯಸ್ಥಳಾಗಿ ನನ್ನ ಪತಿದೇವನ ಚರಣಕಮಲದಲ್ಲಿ ಪ್ರಾರ್ಥಿಸುತ್ತಿದ್ದೇನೆ. ನಿಮಗೂ ನನ್ನ ಮೇಲೆ ಪೂರ್ಣ ನಂಬಿಕೆ, ವಿಶ್ವಾಸವಿದೆ. ಆದರೂ ನಮ್ಮ ದೇವರಾದ ಶ್ರೀಕೃಷ್ಣನನ್ನು ಪ್ರಮಾಣೀಕರಿಸಿ ಹೇಳುತ್ತೇನೆ, ನನ್ನ ಈ ಬೇಡಿಕೆ ನಮ್ಮ ವಂಶದ ಸದ್ಗತಿಗಾಗಿ, ಪುರದ ಹಿತಕ್ಕಾಗಿ, ಪಿತೃಋಣ ಮುಕ್ತಿಗಾಗಿ, ನಿಮ್ಮ ಶ್ರೇಯಸ್ಸಿಗಾಗಿ ಹೊರತು ನನ್ನ ಸ್ವಾರ್ಥಕ್ಕಾಗಿ ಅಲ್ಲ ಪ್ರಭೂ….” ಎಂದು ಸುಧನ್ವನ ಎರಡೂ ಪಾದಗಳನ್ನು ಹಿಡಿದು ಶಿರಬಾಗಿ ಕಣ್ಣಂಚಿನಲ್ಲಿ ತೊಟ್ಟಿಕ್ಕಿದ ಕಂಬನಿಗಳನ್ನು ಒರೆಸುತ್ತಾ ಬೇಡಿದಳು.
ಸುಧನ್ವನಿಗೀಗ ದ್ವಂದ್ವ ಭಾವ. ಒಂದೆಡೆ ಕರ್ತವ್ಯದ ಕರೆ, ಮತ್ತೊಂದೆಡೆ ಸಂಸಾರದ ಹೊಣೆ. ಎರಡೂ ಸಮತೂಕದಲ್ಲಿ ಹಿಡಿದಿಟ್ಟಿದೆ. ಯುಕ್ತಾಯುಕ್ತದ ಬಗ್ಗೆ ತನ್ನೊಳಗೆ ತರ್ಕಿಸುತ್ತಾ ಅರೆಕ್ಷಣ ಮೌನಿಯಾಗಿ ಸ್ಥಂಭೀಭೂತನಾಗಿ ನಿಂತು ಬಿಟ್ಟಿದ್ದಾನೆ.
ಮುಂದುವರಿಯುವುದು…






















