ಭಾಗ 45
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೪೫ ಮಹಾಭಾರತ
ಕುಂತಿ ತುದಿಗಾಲಲ್ಲಿ ನಿಂತು, ಕುತ್ತಿಗೆಯನ್ನು ಎತ್ತರಿಸಿ – ಕಣ್ರೆಪ್ಪೆಗಳನ್ನು ಎತ್ತಿ ನೋಡಬಹುದಾಸಂಬಂಧ ಪ್ರಯತ್ನಿಸಿ ನೋಡುತ್ತಿದ್ದಳು. ಕರುಳು ಕಿತ್ತು ಬಂದಂತೆ ಆದ ವೇದನೆಗೆ ಹಿಗ್ಗಿದ ಕೊರಳ ಸೆರೆಗಳು, ಮರುಗಿ ಕರಗಿದ ಮಾತೃ ಅಂತಃಕರಣ ಜಳ ಜಳನೆ ಇಳಿದ ಕಣ್ಣೀರಧಾರೆಯಾಗಿ ಹರಿದು ತೊಟ್ಟಿಕ್ಕುತ್ತಾ ನೇರವಾಗಿ ಗಂಗೆಯನ್ನು ಸೇರಿ ತೇಲಿಹೋದ ಮಗುವನ್ನು ಅರಸಿ ಹೊರಟಂತಿತ್ತು. ಬಾಲೆ ಕುಂತಿಯ ಕುತೂಹಲದ ಪ್ರಯೋಗದಿಂದ ಮಗುವೂ ಹುಟ್ಟಿತ್ತು. ಅಷ್ಟೇ ವೇಗವಾಗಿ ಅಗಲಿಕೆಯ ಯಾತನೆಯನ್ನೂ ಒದಗಿಸಿಬಿಟ್ಟಿತ್ತು. ಪ್ರಬುದ್ಧೆಯಾಗಿ ಮುನಿಯ ಸೇವೆ ಮಾಡಿ ಪಡೆದ ಮಂತ್ರ, ಅಪ್ರಬುದ್ಧ ಮನಸಿನ ಕಾತರದ ಕಾರಣ ಪ್ರಯೋಗಿಸಲ್ಪಟ್ಟು, ಮಗು ಹುಟ್ಟಿ, ಮತ್ತೆ ಜವಾಬ್ದಾರಿಯುತಳಾಗಿ ಚಿಂತಿಸಿ, ಮಗುವನ್ನು ತೇಲಿ ಬಿಟ್ಟ ಪರಿಣಾಮ ವಿಯೋಗದ ನೋವನ್ನೇ ನೀಡಿತು. ಮಗುವಿನ ಜೀವನ ಯೋಗವನ್ನೇ ದಿಕ್ಕುತಪ್ಪಿಸಿತು. ಹೀಗೆ ಯೋಚಿಸುತ್ತಾ ಅತಿಭಾರ ಹೃದಯವನ್ನು ಹೊತ್ತು ಹೆತ್ತ ತಾಯಿ ಅರಮನೆ ಸೇರಿದಳು.
ಗಂಗಾನದಿಯಲ್ಲಿ ತೇಲಿಹೋಗುತ್ತಿದ್ದ ಮಗು ನೀರಿನಲ್ಲಿ ಮುಳುಗಿ ಅಸುನೀಗಿ ಹೆಣವಾಗಿ ಮತ್ತೆ ತೇಲಬೇಕಾದದ್ದು ಸ್ವಾಭಾವಿಕ ಪ್ರಕ್ರಿಯೆ. ಆದರೆ ಈ ಮಗುವನ್ನು ವ್ಯೋಮದಲ್ಲಿ ಪಿತ ಭಾನು ಕಾಪಿಟ್ಟು ಕಾದನೋ ಏನೋ! ಕ್ಷೇಮವಾಗಿ ದಡ ಸೇರಿತು. ಅಧಿರಥನೆಂಬ ಒಬ್ಬ ಪುಣ್ಯಾತ್ಮ ನೋಡಿದನು. ಈ ಅಧಿರಥನೂ ಚಂದ್ರವಂಶದ ಕೊಂಡಿ. ಯಯಾತಿಯ ಮಗ ‘ಅನು’ ಎಂಬವನ ಪೀಳಿಗೆಯಲ್ಲಿ ಹತ್ತೊಂಬತ್ತನೆಯ ತಲೆಮಾರಿನವನ ಮಗನು. ಆದರೆ ಇವನಿಗಿಂತ ಐದು ತಲೆಮಾರಿನ ಹಿಂದೆ ಈ ಕುಟುಂಬಕ್ಕೆ ಸೂತ (ಸಾರಥಿ ಕೆಲಸ ಮಾಡುವ) ಜಾತಿಯ ಸಂಬಂಧವಾದುದರಿಂದ ಮತ್ತಿನ ಪೀಳಿಗೆ ಸೂತ ಜಾತಿಯೆಂದೇ ಪರಿಗಣಿಸಲ್ಪಟ್ಟಿತು. ಅದೇ ಸಂಸ್ಕಾರ – ವೃತ್ತಿಯಲ್ಲಿ ಪೀಳಿಗೆ ಬೆಳೆಯುತ್ತಿದ್ದರಿಂದ ಅಧಿಕೃತವಾಗಿ ಸೂತರೇ ಆಗಿ ಹೋದರು.
ಈ ಅಧಿರಥನು ಸೂರ್ಯೋಪಾಸನೆ ಪೂರೈಸಿ ಕೈಮುಗಿದಾದ ಮೇಲೆ ನದಿಯನ್ನು ನೋಡಿದಾಗ ತೇಲಿಬರುವ ಮಗು ಕಾಣಿಸಿತು. ಸೂರ್ಯನ ಪ್ರೇರಣೆಯೋ ಏನೋ, ತನ್ನ ಭಕ್ತನಿಗೆ ಕಾಣಿಸಿ ಪುತ್ರನ ರಕ್ಷಿಸಿ ಸಲಹುವ ವ್ಯವಸ್ಥೆ ಮಾಡಿಸಿದಂತಿತ್ತು. ನೀರಿನಲ್ಲಿ ತೇಲುತ್ತಿದ್ದ ಮಗುವನ್ನು ಎತ್ತಿ ನೋಡಿದರೆ ಸುಕ್ಷೇಮವಾಗಿ ತೊಟ್ಟಿಲಲ್ಲಿ ಮಲಗಿದ್ದ ಮಗುವಂತೆ ಆರಾಮವಾಗಿತ್ತು. ಗಂಗೆ ಬೋರ್ಗರೆದು ಹರಿಯುವವಳಾದರೂ ಈ ಮಗುವಿಗೆ ಒಂದು ತೊಟ್ಟೂ ನೀರು ಸೋಕದಂತೆ ತೇಲಿಸಿ ತಂದಿದ್ದಾಳೋ ಎಂಬಂತ್ತಿತ್ತು. ಮುದ್ದು ಮುದ್ದಾದ ಮಗು, ಲವಲವಿಕೆ, ಬಣ್ಣ, ಕಂಗಳ ಹೊಳಪು, ತೇಜಸ್ಸು – ವರ್ಚಸ್ಸು ನೋಡುವಾಗ ಅಧಿರಥ ಅರೆ ಕ್ಷಣ ಮೈ ಮರೆತ. ಎಚ್ಚೆತ್ತು ಒಮ್ಮೆಗೆ ಯೋಚಿಸಿದ ಮಗು ಹೇಗೆ ನೀರಿಗೆ ಬಿದ್ದಿರಬಹುದು? ತಾಯಿಯೂ ಮಗುವೂ ಜೊತೆಗೆ ಬಿದ್ದು ಅದೃಷ್ಟವಶಾತ್ ಮಗು ರಕ್ಷಿಸಲ್ಪಟ್ಟಿತೋ ಎಂದು ಭ್ರಮಿಸಿ ನದಿಯುದ್ದಗಲಕ್ಕೂ ತನ್ನವರಿಂದ ಮಗುವಿನ ತಾಯಿಗಾಗಿ ಹುಡುಕಾಡಿಸಿದ. ಅಯ್ಯೋ ತಾಯಿ ಪ್ರವಾಹಕ್ಕೆ ಕೊಚ್ಚಿ ಹೋಗಿರಬಹುದೇನೋ ಎಂದು ಭಾವಿಸಿ ಮಗುವನ್ನು ಮನೆಗೆ ತಂದು ತನ್ನ ಪತ್ನಿ “ರಾಧೆ” ಯ ಕೈಗಿತ್ತು ವೃತ್ತಾಂತ ವಿವರಿಸಿದ. ಮಗುವಿನ ಮುಖ ಕಾಣುತ್ತಿದ್ದಂತೆ ಹೆಣ್ತನ ಜಾಗೃತವಾಯಿತು. ಮುದ್ದಾಡಿದಳು ರಾಧೆ. ಶರೀರದಲ್ಲೇನೋ ಸಂಚಲನ ಮೂಡಿದಂತಾಯಿತು. ಆಕೆಯ ಎದೆಯಲ್ಲಿ ಸ್ತನ್ಯ ಕ್ಷೀರ ಉಕ್ಕಿ ಬಂತು. ವಾತ್ಸಲ್ಯದಿಂದ ಮಗುವಿಗೆ ಉಣಿಸಿದಳು. ಸಾಕ್ಷಾತ್ ತಾಯಿಯೇ ಆಗಿ ತನ್ನ ಹತ್ತು ಮಕ್ಕಳೊಂದಿಗೆ ಈ ಮಗುವನ್ನೂ ಸಾಕಿ ಸಲಹತೊಡಗಿದಳು.
ಅಧಿರಥ ಈ ಮಗುವನ್ನು ಕಳೆದುಕೊಂಡು ರೋಧಿಸುವ ಹೆತ್ತವರಾರಾದರೂ ಇದ್ದಾರೋ ಎಂದು ತಾನು ಹುಡುಕುತ್ತಲೇ ಇದ್ದ. ಕೆಲ ದಿನಗಳಾದರೂ ಎಲ್ಲೂ ತನ್ನ ಗಮನಕ್ಕೆ ಅಂತಹ ವಿಚಾರ ಸಿಗದೆ ಹುಡುಕಾಟ ನಿಲ್ಲಿಸಿದ. ಬೆಳೆಯುತ್ತಿದ್ದ ಮಗುವಿಗೆ ಸೂಕ್ತ ಸಮಯದಲ್ಲಿ ಜಾತಕರ್ಮಾದಿ ವಿಧಿ ಪೂರೈಸಿ ವಸುಸೇನ ಎಂಬ ನಾಮಧೇಯವಿರಿಸಿದ. ಪ್ರಾಪ್ತ ವಯಸ್ಸಿನಲ್ಲಿ ವಿದ್ಯಾಭ್ಯಾಸ, ವೃತ್ತಿ ಶಿಕ್ಷಣ ನೀಡಿ ಪಾಲಿಸಿದ. ಬಲು ಜಾಣ, ತೀಕ್ಷ್ಣಮತಿಯಾದ ವಸುಸೇನ ಬುದ್ದಿವಂತನಾಗಿದ್ದು ಕೌಶಲ್ಯಪೂರ್ಣ ವಿದ್ಯಾರ್ಥಿಯಾಗಿದ್ದ. ರಾಧೆ ತಾಯಿಯಾದ ಕಾರಣ ರಾಧೇಯ ಎಂದೂ, ಕಿವಿಯಲ್ಲಿ ವಿಶೇಷ ಕರ್ಣ ಕುಂಡಲಗಳಿದ್ದ ಕಾರಣ ಕರ್ಣ ಎಂಬ ಹೆಸರಿನಿಂದಲೂ ಕರೆಯಿಸಿಕೊಳ್ಳುತ್ತಿದ್ದ. ತನ್ನ ವಿದ್ಯಾಭ್ಯಾಸದ ಜೊತೆ ಬಿಲ್ವಿದ್ಯೆಯಲ್ಲಿ ವಿಶೇಷ ಒಲವೂ, ಆಸಕ್ತಿಯೂ, ನೈಪುಣ್ಯತೆಯನ್ನೂ ತಳೆಯುತ್ತಾ ಬೆಳೆಯುತ್ತಿದ್ದ.
ಇತ್ತ ಕುಂತಿ ನದಿ ತೀರಕ್ಕೆ ಬಂದು ಏಕಾಂತ ಬಯಸಿ ಮೌನಿಯಾಗಿ ಕಾಲ ಕಳೆಯುವುದು, ಕಣ್ಣೀರು ಸುರಿಸುವುದು. ಯಾರಾದರೂ ನೋಡಿ ಕೇಳಿದರೆ ನಕ್ಕು ಏನಿಲ್ಲವೆಂದು ನಟಿಸುವುದು ಇತ್ಯಾದಿಗಳನ್ನು ಮಾಡುತ್ತಿದ್ದಳು.ಇದೆಲ್ಲವನ್ನೂ ಗಮನಿಸಿದ ಕುಂತಿಭೋಜ ಮಗಳಿಗೆ ಮದುವೆ ಮಾಡಿಸಬೇಕು. ಆಕೆಯ ಮನದ ಕಾಮನೆಗಳು ಈ ರೀತಿ ವ್ಯವಹರಿಸಲು ಕಾರಣವಿರಬಹುದೆಂದು ಭಾವಿಸಿದ. ಹಾಗೆಯೇ ತನ್ನ ಮಗಳಿಗೆ ವರಾನ್ವೇಷಣೆಗೈಯಲು ತೀರ್ಮಾನಿಸಿದ. ಈ ವಿಚಾರ ಬ್ರಾಹ್ಮಣೋತ್ತಮರಿಂದ ಅರಿತ ಭೀಷ್ಮ ಕುಂತಿಯ ಗುಣನಡತೆಯ, ರೂಪ ಲಾವಣ್ಯದ ವಿಷಯ ತಿಳಿದು ಮೆಚ್ಚಿದ. ರಾಜಮಾತೆ ಸತ್ಯವತಿಗೆ ತಿಳಿಸಿ, ನಂತರ ವಿಧಿವತ್ತಾಗಿ ಪಾಂಡು – ಕುಂತಿ ಯರ ವಿವಾಹ ಅದ್ದೂರಿಯಿಂದ ನಡೆಸಲ್ಪಟ್ಟಿತು. ಹಸ್ತಿನಾವತಿಯ ಮಹಾರಾಣಿಯಾದಳು ಕುಂತಿ.
ಮಾದ್ರಾ ದೇಶದ ರಾಜ “ಋತಾಯನ” ಎಂಬಾತ ಹಸ್ತಿನೆಯ ಮೈತ್ರಿ ರಾಜನಾಗಿದ್ದ. ಮಿತ್ರದೇಶದ ಮೇಲೆ ಬಲಾಢ್ಯರಾದ ವೈರಿಗಳ ಆಕ್ರಮಣವಾಗುವ ವರ್ತಮಾನ ಹಸ್ತಿನೆಗೆ ಗೂಢಾಚಾರರಿಂದ ತಿಳಿಯಿತು. ತಕ್ಷಣ ಪಾಂಡು ನವ ವಿವಾಹಿತನಾಗಿದ್ದರೂ ತನ್ನ ಕರ್ತವ್ಯವೆಂದು ಯುದ್ಧ ಸನ್ನದ್ಧನಾಗಿ ಮಾದ್ರಾ ದೇಶದ ಸಹಾಯಕ್ಕೆ ಹೊರಟು ನಿಂತನು. ಆಗ ಭೀಷ್ಮಾಚಾರ್ಯರು ಸೇನಾಪತಿಯಾದ ತಾನಿರುವಾಗ ಮದುಮಗನಾದ ನೀನು ಹೋಗಬೇಕಾದ ಅಗತ್ಯವಿಲ್ಲವೆಂದು ಸಿದ್ಧರಾದರು. ಆದರೆ ಪಾಂಡು ತಾನು ಕರ್ತವ್ಯ ಚ್ಯುತನಾಗಬಾರದು ಎಂದೂ, ರಾಜಕಾರಣದಲ್ಲಿ ಹಿಂದುಳಿಯುವುದು ಯುಕ್ತವಲ್ಲವೆಂದು ತಾನೇ ಹೊರಟನು. ಹಾಗೆ ಹೋದವನು ಮಾದ್ರಾ ದೇಶದ ಮೇಲೆ ದಂಡೆತ್ತಿ ಬಂದ ಸೇನೆಯನ್ನು ಸೋಲಿಸಿದನು. ಮಾದ್ರಾಧೀಶ ಋತಾಯನನಿಗೆ ಪಾಂಡು ಮಹಾರಾಜನ ಉಪಕಾರ ಮಹದಾನಂದ ಉಂಟು ಮಾಡಿತು. ತನ್ನ ಮುದ್ದಿನ ಮಗಳು ಲೋಕ ಸುಂದರಿ ಎಂದು ಖ್ಯಾತಿ ಹೊಂದಿದ್ದ ಮಾದ್ರಿ ಯನ್ನು ಸಹಾಯದ ದ್ಯೋತಕ ಸ್ಮರಣೆಯಾಗಿ, ಮೈತ್ರಿ ಸಂಬಂಧ ಬಲಪಡಿಸುವ ಉದ್ದೇಶದಿಂದ ಪಾಂಡುವಿಗೆ ವಿವಾಹ ಮಾಡಿಸಿದರು. ಯುದ್ಧಕ್ಕೆ ಹೋಗಿದ್ದ ಪಾಂಡು ಬರುವಾಗ ಮತ್ತೊಬ್ಬಳು ಪತ್ನಿಯೊಡನೆ ಮರಳಿ ಹಸ್ತಿನೆಗೆ ಬಂದನು. ಕುಂತಿ – ಮಾದ್ರಿಯರು ಹಸ್ತಿನೆಯ ಚಂದ್ರವಂಶದ ಯುವರಾಣಿಯರಾದರು.
ಭೀಷ್ಮಾಚಾರ್ಯರ ದಕ್ಷ ಶಿಕ್ಷಣದಲ್ಲಿ ಪಳಗಿ ಹಸ್ತಿನೆಯ ಮಹಾರಾಜನೂ ಆಗಿದ್ದ ಪಾಂಡುವಿಗೆ ಮಾದ್ರಾ ದೇಶದಿಂದ ಮರಳಿ ಬಂದ ಬಳಿಕ ದಿಗ್ವಿಜಯ ಮಾಡಬೇಕೆಂಬ ಉತ್ಸಾಹ ಮೂಡಿತು. ಸಮರ್ಥ ಆಳ್ವಿಕೆ, ಪ್ರಜಾಪಾಲನೆಯಿಂದ ಹೆಸರು ಗಳಿಸಿದ್ದ ಪಾಂಡುವಿನ ಅಪೇಕ್ಷೆಗೆ ಭೀಷ್ಮರ ಒಪ್ಪಿಗೆಯೂ ಸಿಕ್ಕಿತು. ಸಮರ್ಥ ಸೇನೆಯೊಂದಿಗೆ ಪಾಂಡು ದಿಗ್ವಿಜಯಕ್ಕೆ ಹೊರಟನು..
ಮುಂದುವರಿಯುವುದು….