32.5 C
Udupi
Saturday, April 18, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 492

ಭರತೇಶ ಶೆಟ್ಟಿ, ಎಕ್ಕಾರು

ಅಜ್ಜಾ ಭೀಷ್ಮಾಚಾರ್ಯರ ಜ್ಞಾನ ವಿಶೇಷ ಬಲದಿಂದ ತನ್ನ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದ ಧರ್ಮರಾಯನ ಮನಸ್ಸು ವಿಶಾಲ ಚಿಂತನೆಗೆ ತೆರೆದುಕೊಂಡಿತು. “ಅಜ್ಜಾ! ಈ ಸೃಷ್ಟಿಯು ಹೇಗಾಯಿತು? ಸೃಷ್ಟಿಯನ್ನು ಸರ್ವನಾಶ ಮಾಡಬಲ್ಲ ಪ್ರಳಯ ಹೇಗಾಗುತ್ತದೆ? ನನಗೆ ತಿಳಿಯಪಡಿಸಬಹುದೆ?” ಎಂದು ಕೇಳಿದನು.

ಆಗ ಪಿತಾಮಹ ತನ್ನ ಮೊಮ್ಮಗನ ಬುದ್ಧಿಬಲವನ್ನು ಮೆಚ್ಚಿಕೊಳ್ಳುತ್ತಾ “ವತ್ಸಾ! ನೀನು ಕೇಳಿದ ಜಿಜ್ಞಾಸೆ ಈ ಹಿಂದೆಯೂ ನಡೆದಿತ್ತು. ಹಿಂದೆ ಮನು ಮಹರ್ಷಿಗೂ, ದೇವಗುರು ಬ್ರಹಸ್ಪತಿಗೂ ಈ ಕುರಿತಾಗಿ ಸಂವಾದ ನಡೆದಿತ್ತು. ಅಂದಿನ ವಿಚಾರ ಮಂಥನವನ್ನು ಕೇಳಿ ತಿಳಿದಿದ್ದೇನೆ. ಅದರ ಸಾರವನ್ನು ನಿನ್ನ ಕೌತುಕ ನಿವಾರಣೆಗಾಗಿ ಹೇಳುತ್ತೇನೆ ಕೇಳು.

ಯಾವುದು ಕ್ಷಯ ರಹಿತವಾಗಿದೆಯೊ ಅದು ಅಕ್ಷಯ ಅಥವಾ ” ಅಕ್ಷರ” ವು. ಆ ಅಕ್ಷರದಿಂದಲೆ ಆಕಾಶವು ಹುಟ್ಟಿಕೊಂಡಿತು. ಮುಂದುವರಿದು ಆಕಾಶದ ವ್ಯೋಮದಲ್ಲಿ ವಾಯುವೂ, ವಾಯುವಿನಿಂದ ತೇಜಸ್ಸೂ, ತೇಜಸ್ಸಿನಿಂದ ನೀರೂ, ನೀರಿನಿಂದ ಪೃಥ್ವಿಯೂ ಹುಟ್ಟಿಕೊಂಡವು. ಈ ಪಂಚಭೂತಗಳು ಮೂಲ ಸೃಷ್ಟಿಗೆ ಆಧಾರ ಧಾತುಗಳು. ಇವೆಲ್ಲವುಗಳನ್ನು ಅವಲಂಬಿಸಿಕೊಂಡು ಕ್ಷಯವಾಗುವ ಜಗತ್ತಿನ ಚರಾಚರ ವಸ್ತುಗಳೆಲ್ಲವೂ ಹುಟ್ಟಿಕೊಂಡವು. ಈ ಪ್ರಕ್ರಿಯೆ ಸೃಷ್ಟಿ.

ಪ್ರಳಯಕಾಲದಲ್ಲಿ ಪೂರ್ಣ ಜ್ಞಾನವಿಲ್ಲದೆ ವಿವೇಚಿಸಿದರೆ ಸರ್ವನಾಶವಾದಂತೆ ಭಾಸವಾಗುತ್ತದೆ. ಆದರೆ ಯಥಾರ್ಥದಲ್ಲಿ ಅಕ್ಷರದಿಂದ ಹುಟ್ಟಿಕೊಂಡವುಗಳೆಲ್ಲ ಮರಳಿ ಮೂಲವಾದ ಅಕ್ಷರಕ್ಕೆ ಹಿಂದಿರುಗಿ ಸೇರುತ್ತವೆ. ಆಕಾಶದಿಂದಲೂ ಬೃಹತ್ತಾದ ಅಕ್ಷರವೇ “ಪರ”. ಯೋಗ ಸಾಧಕರಾದವರು ಯಾರಿದ್ದಾರೊ ಅವರು ಈ ಪ್ರಳಯ ಕಾಲದಲ್ಲಿ ಆಕಾಶ ತತ್ವವನ್ನೂ ದಾಟಿ “ಪರ” ದಲ್ಲಿ ಐಕ್ಯ ಹೊಂದುತ್ತಾರೆ.

ಮನುಷ್ಯರಿಗೆ ಈ ವಿದ್ಯಮಾನವನ್ನು ಹೋಲಿಸಿ ವಿವರಿಸುವುದಾದರೆ ಕಿವಿ, ಚರ್ಮ, ಕಣ್ಣು, ನಾಲಗೆ, ಮೂಗು ಪಂಚೇಂದ್ರಿಯಗಳಾಗಿವೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ, ಗ್ರಂಥಗಳನ್ನು ಗ್ರಹಿಸುವಲ್ಲಿ ಇವು ಶಕ್ತವಾಗಿ ಸಹಕರಿಸುತ್ತವೆ. ಆದರೆ ಇವುಗಳಿಗೂ ಮೂಲಧಾತುವಾದ ಆಧ್ಯಾತ್ಮ ಇದೆಯೆಂದು ಅರಿಯದವರು ಅದೇನೆಂದು ತಿಳಿಯಲಾರರು. ಈ ಪಂಚೇಂದ್ರಿಯಗಳು ಎಲ್ಲಿಯವರೆಗೆ ಸುಸ್ಥಿತಿಯಲ್ಲಿ ಇರುತ್ತದೊ ಅಲ್ಲಿಯವರೆಗೆ ಸೃಷ್ಟಿ ಗೋಚರಿಸಿ ಅನುಭವಕ್ಕೆ ಬರುತ್ತಿರುತ್ತದೆ. ಯಾವಾಗ ಪಂಚಭೂತಗಳಂತೆ ಪಂಚೇಂದ್ರಿಯಗಳೂ ಮೂಲ ಪರ ಸೇರಿದಂತೆ ಆಧ್ಯಾತ್ಮದ ವಶವಾಗಲು ಮರಳುತ್ತವೊ ಆಗ ಪ್ರಳಯ ಸ್ವರೂಪದ ಅಂತ್ಯವಾಗುತ್ತದೆ.

ದೀಪವೊಂದು ಉರಿಯುತ್ತಿದ್ದರೆ ತನ್ನ ಸುತ್ತಲಿರುವುದನ್ನೆಲ್ಲಾ ತನ್ನ ಪ್ರಭಾ ಶಕ್ತಿಯಿಂದ ಗೋಚರಿಸುವಂತೆ ಮಾಡುತ್ತದೊ, ಹಾಗೆಯೇ ತತ್ಸಮಾನ ರೀತಿಯಲ್ಲಿ ಜ್ಞಾನವೂ ಈ ಅಗೋಚರ ವಿಚಾರವನ್ನು ಗೋಚರಿಸುವಂತೆ ಮಾಡುತ್ತದೆ. ಆತ್ಮನಿಗೆ ಜ್ಞಾನಯುಕ್ತವಾದ ಬೆಳಕಿದ್ದಂತೆ ಇಂದ್ರಿಯಗಳು ಕೆಲಸ ಮಾಡುತ್ತವೆ. ಅರಸನಾದ ನಿನ್ನಂತವರಿಗೆ ನಿಷ್ಟಾವಂತನೂ, ಸುಜ್ಞಾನಿಯೂ ಆದ ಮಂತ್ರಿಯು ಈ ಕಾರ್ಯ ಮಾಡುತ್ತಾನೆ.

ಒಂದು ಸೌದೆಯನ್ನು ಸೀಳಿದರೆ ಉರಿಯಾಗಲಿ, ಹೊಗೆಯಾಗಲಿ, ಅಗ್ನಿಯಾಗಲಿ ಗೋಚರಿಸದು. ಅದೇ ಸೌದೆಯ ತುಂಡು ಅರಣಿಯಾಗಿ ತಿಕ್ಕಲ್ಪಟ್ಟಾಗ ಅಗ್ನಿ ಸೃಷ್ಟಿಯಾಗುತ್ತದೆ. ಹಾಗೆಯೆ ವಿವೇಕಿಯಾದವನು ಮರದ ತುಂಡನ್ನು ಉಜ್ಜಿ ಬಿಸಿಯೇರುವಂತೆ ಮಾಡಿ ಅಗ್ನಿ ಉತ್ಪನ್ನ ಮಾಡುವ ತೆರನಾಗಿ ಯೋಗಸಾಧನೆಗೆ ತನ್ನನ್ನೊಡ್ಡಿ ತನ್ನ ಶರೀರದಲ್ಲಿ ಇಂದ್ರಿಯಾತೀತವಾದ ಆತ್ಮವನ್ನು ಕಾಣುತ್ತಾನೆ. ಹಾಗೆಂದು ಪ್ರಯತ್ನಿಸದೆ ಆತ್ಮನನ್ನು ಕಾಣಲಾಗದು. ಆದರೆ ಆತ್ಮ ಮಾತ್ರ ಎಲ್ಲವನ್ನೂ ನೋಡಬಲ್ಲುದು. ಕರ್ಮಗಳೂ ಅದನ್ನನುಸರಿಸಿ ಹೋಗುತ್ತವೆ. ತಿಳಿಯುವ ಪ್ರಯತ್ನ ಮಾಡುವವರ ಬುದ್ಧಿಗೆ ಮಾತ್ರ ಈ ಸತ್ಯ ಅರಿವಾಗುತ್ತದೆ.

ಗಹನವಾದ ವಿಚಾರ ಆಗಿರುವ ಕಾರಣ ಅರ್ಥೈಸುವಲ್ಲಿ ಸ್ವಲ್ಪ ಕಷ್ಟವಾದರೂ ಸೃಷ್ಟಿ ಮತ್ತು ಪ್ರಳಯ ಎಂಬ ಪ್ರಕ್ರಿಯೆಗಳ ರಹಸ್ಯ ಇದಾಗಿದೆ. ಪ್ರತಿಯೊಂದು ಆರಂಭ ಮತ್ತು ಅಂತ್ಯವೂ ಈ ಪ್ರಕ್ರಿಯೆಯ ರೀತಿಯಲ್ಲಿ ಸಾಗುವುದು ಜಗತ್ತಿನ ಕೌತುಕಗಳಲ್ಲಿ ಸೇರಿ ಹೋಗಿದೆ. ಪ್ರಯತ್ನ ಮತ್ತು ಸಾಧನೆಯಿಂದ ಮಾತ್ರ ಈ ವಿಚಾರದ ಬಗ್ಗೆ ಸ್ಪಷ್ಟತೆಯನ್ನು ಕಾಣಬಹುದು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page