Home Blog ಮಹಾಭಾರತ

ಮಹಾಭಾರತ

0

ಭಾಗ 443

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೪೪೩ ಮಹಾಭಾರತ

ಇತ್ತ ಹಸ್ತಿನಾವತಿಯಲ್ಲಿ ಧೃತರಾಷ್ಟ್ರನ ಸ್ಥಿತಿ ಹೇಳತೀರದು. ಯುದ್ದಕ್ಕೆ ಮೊದಲೇ ಸೋಲೊಪ್ಪಿಕೊಂಡವನಂತೆ ತನ್ನ ಒಬ್ಬ ಮಗನೂ ಇಂದು ಹತಪ್ರಾಣನಾಗುತ್ತಾನೆ ಎಂದು ನಿರ್ಣಯಿಸಿ ಪ್ರಲಾಪ ನಿರತನಾಗಿದ್ದಾನೆ. “ಸಂಜಯಾ, ಯಾಕಾದರು ನಾನು ಇನ್ನೂ ಬದುಕಿದ್ದೇನೆ. ಜೀವಿತದಲ್ಲಿ ಗೈದಿರುವ ಪಾತಕಗಳ ಕರ್ಮಗಳ ಫಲ ಅನುಭವಿಸುವಾಗ ಮನುಷ್ಯನಿಗೆ ಅಸಹನೀಯ ವೇದನೆಗಳು ಒದಗುತ್ತವೆಯಂತೆ. ರೋಗ, ವೈಕಲ್ಯ, ಯಾತನೆ, ವಿಯೋಗಗಳಾಗಿ ಜೀವನದಲ್ಲಿ ಬಂದು ವಿಮೋಚನೆಗೊಳ್ಳುತ್ತದೆ. ಸುಕೃತ ಪುಣ್ಯಫಲವಿದ್ದರೆ ಅವು ಸಾಧನೆ, ಸೌಕರ್ಯ, ಸಂಪತ್ತು, ಸನ್ಮಾನ ಸೌಭಾಗ್ಯಗಳಾಗಿ ಬಂದು ಬದುಕಿನಲ್ಲಿ ಸುಖಪ್ರದವಾಗುತ್ತದೆ. ಕಷ್ಟಗಳ ಸರಮಾಲೆ ಜೀವನದಲ್ಲಿ ಬಂದು ನೋವನ್ನಿತ್ತಾಗ ಸಹಿಸಿಕೊಂಡು ಕರ್ಮಫಲದ ಹೊರೆ ಜೀರ್ಣವಾಗಿ ಸದ್ಗತಿಯ ಹಾದಿ ಮುಕ್ತಗೊಳ್ಳುತ್ತಿದೆ ಎಂದು ಸಂತೋಷಪಡಬೇಕು. ಹಾಗೆಯೇ ಸತ್ಕೀರ್ತಿ ಸಾಧನೆಯಾದಾಗ ಸತ್ಕರ್ಮದ ಫಲ ನಷ್ಟವಾಗುತ್ತಿದೆ, ಮತ್ತಷ್ಟು ಸುಫಲ ಸಂಪಾದನೆ ಮಾಡುವ ಪ್ರಯತ್ನ ನಿರತರಾಗಬೇಕು ಎಂದು ಶಾಸ್ತ್ರ ಖಚಿತ ಸಂದೇಶ. ಆದರೆ ಜನ್ಮತಃ ಹುಟ್ಟು ಕುರುಡನಾಗಿ ಹುಟ್ಟಿದ ನಾನು ಹುಟ್ಟಿನಿಂದ ಪಾಪ ಕರ್ಮ ಹೊತ್ತು ತಂದಿದ್ದೇನೆ. ಮಕ್ಕಳಿಲ್ಲ ಎಂಬ ಕೊರಗು ಮನತುಂಬಿದರೂ, ಕಾಲ ಕೂಡಿ ಬಂದಾಗ ನೂರೊಂದು ಮಕ್ಕಳು ಮನೆ ತುಂಬಿದರು. ಮುಖ ನೋಡಬೇಕೆಂಬ ಆಸೆ ಆದರೂ ನೋಡುವ ಭಾಗ್ಯ ನನಗಿರಲಿಲ್ಲ. ಆಗ ಭಗವಂತ ಕೇಳಿಸುವ ಕಿವಿಗಳನ್ನಾದರೂ ದಯಪಾಲಿಸಿದ್ದಾನಲ್ಲ ಎಂದು ಸಂತೃಪ್ತನಾಗಿ ಮುದ್ದು ಮಕ್ಕಳ ಸ್ವರ ಕೇಳುತ್ತಿದ್ದೆ. ಈಗ ಆ ಭಗವಂತ ನಿಷ್ಕರುಣಿಯಾಗಿ ಕೇಳಿಸುವ ಕಿವಿಗಳನ್ನು ಯಾಕೆ ಕೊಟ್ಟನೋ ಎಂಬ ಪರಿತಾಪ ನನಗುಂಟಾಗುತ್ತಿದೆ. ನನ್ನ ಮಕ್ಕಳ ಮರಣ ವಾರ್ತೆ ಕೇಳಲು ನನಗೆ ಭಗವಂತ ಹಾಗೆ ಮಾಡಿದನೋ? ಸಂಜಯಾ ನಾನೇನು ಅಂತಹ ಪಾತಕಗಳನ್ನು ಮಾಡಿ ಜನಿಸಿದ್ದೇನೆ ಹೇಳು? ಯಾಕಿಷ್ಟು ಅಸಹನೀಯ ವೇದನೆ ನನ್ನ ಬದುಕಿನಲ್ಲಿ ನನಗೆ ಪ್ರಾಪ್ತವಾಗುತ್ತಿದೆ? ಸಂಜಯಾ… ಸಂಜಯಾ… ನನ್ನ ಮಗ ದುರ್ಯೋಧನ ಏನು ಮಾಡುತ್ತಿದ್ದಾನೆ? ಅಸಹಾಯಕ ವೀರನಾಗಿ, ಏಕಾಂಗಿಯಾಗಿರುವ ಆತನ ಮೇಲೆ ಆ ಕೃಷ್ಣನಿಗೂ ಕರುಣೆ ಮೂಡುತ್ತಿಲ್ಲವೇ? ಧರ್ಮಾತ್ಮನಾದ ಯುಧಿಷ್ಟಿರನೂ ಕ್ಷಮಿಸಲಾರನೇ? ಅಯ್ಯೋ ವಿಧಿಯೇ ನನ್ನ ಮಗನ ರಕ್ಷಣೆಗೆ ಯಾರನ್ನಾದರು ಒದಗಿಸಲಾರೆಯಾ? ಹೇಳು ಸಂಜಯ ಅಲ್ಲೇನಾಗುತ್ತಿದೆ?”
ಧೃತರಾಷ್ಟ್ರನ ಅವಸರ ಆತಂಕವನ್ನು ತಣಿಸಲು ಸಂಜಯ ಕುರುಕ್ಷೇತ್ರದ ಪ್ರತ್ಯಕ್ಷ ಆಗುಹೋಗುಗಳನ್ನು ವಿವರಿಸತೊಡಗಿದನು.

ಭೀಮ ದುರ್ಯೋಧನರು ಸಿದ್ಧರಾಗಿ ಗದಾಧಾರಿಗಳಾಗಿದ್ದಾರೆ. ಇವರಿಬ್ಬರ ಮಧ್ಯೆ ಗದಾಯುದ್ಧ ನಿರ್ಣಯವಾಗಿದೆ. ಇನ್ನೇನು ಘಾತ – ಪ್ರತಿಘಾತಗಳು ಆರಂಭವಾಗುತ್ತವೆ ಎಂಬ ಕೌತುಕದಲ್ಲಿ ಇದ್ದಾರೆ. ಅರೆ! ಅಲ್ಲಿಗೆ ಯಾರೋ ಬರುತ್ತಿದ್ದಾರಲ್ಲ? ತೀರ್ಥಯಾತ್ರೆ ಪೂರೈಸಿ ಮರಳಿ ಬಲರಾಮ ಬಂದು ಸೇರಿದ್ದಾರೆ. ಬಂಧುಕಲಹವನ್ನು ನೋಡಲಾರೆ, ತಮ್ಮ ಕೃಷ್ಣ ಮತ್ತು ತಾನು ಇಬ್ಭಾಗವಾಗಿ ಹೋರಾಡಲಾಗದು. ಏನಿದ್ದರೂ ನಾವಿಬ್ಬರೂ ಜೊತೆಯಾಗಿಯೇ ಇರುವವರು – ಇರಬೇಕಾದವರು ಎಂದು ನಿಶ್ಚಯಿಸಿ ಯಾತ್ರೆಗೆ ಹೊರಟಿದ್ದರು. ಅದೇ ಕಾರಣದಿಂದ ಕೃಷ್ಣನ ವೈರಿ ಪಕ್ಷವಾದ ಕೌರವರ ಪರ ವಹಿಸಲಾರೆ ಎಂದು ವಿಮುಖರಾಗಿದ್ದರೂ, ಪ್ರಭಾಸ ಕ್ಷೇತ್ರದಲ್ಲಿರುವಾಗ ಕುರುಕ್ಷೇತ್ರದ ವರ್ತಮಾನ ತಿಳಿದು ಅಲ್ಲಿಂದ ನೇರವಾಗಿ ಕುರುಕ್ಷೇತ್ರಕ್ಕೆ ಆಗಮಿಸಿದ್ದಾರೆ. ಈಗ ಬಂಧು ಕಲಹ ಅಂತಿಮ ಹಂತದಲ್ಲಿದೆ. ಕೊನೆಯದಾಗಿ ಕೌರವರಲ್ಲಿ ಉಳಿದ ದುರ್ಯೋಧನ ಗದಾಯುದ್ಧಕ್ಕೆ ಸನ್ನದ್ಧನಾಗಿದ್ದಾನೆ.

ಅಣ್ಣ ಬಲಭದ್ರನನ್ನು ನೋಡಿ ಶ್ರೀ ಕೃಷ್ಣನಿಗೆ ಸಂತೋಷವಾಯಿತು. ಓಡಿ ಬಂದು ಪಾಂಡವರ ಸಹಿತನಾಗಿ ವಂದಿಸಿ ಕುಶಲೋಪರಿ ವಿಚಾರಿಸಿದನು. ಏಕಾಂಗಿ ವೀರನಾಗಿ ನಿಂತಿದ್ದ ಕೌರವನೂ ತನ್ನ ಗುರುವಿಗೆ ನಮಿಸಿದನು.

ಬಲಭದ್ರ ದೇವ ತಿರುಗಿ ಒಂದು ಸುತ್ತು ಎಲ್ಲರನ್ನೂ ನೋಡಿದರೆ ದುರ್ಯೋಧನ ಒಬ್ಬ ಮಾತ್ರ ಉಳಿದಿದ್ದಾನೆ. ಪಾಂಡವ ಪಕ್ಷದ ದೃಷ್ಟದ್ಯುಮ್ನ, ಸಾತ್ಯಕಿ, ಕೃಷ್ಣ ಸಹಿತ ಪಾಂಡವರೂ, ಮಿತ ಸೇನೆಯೂ ಸುರಕ್ಷಿತವಾಗಿ ಇದ್ದಾರೆ. ಆಶ್ಚರ್ಯವಾಯಿತು ಬಲರಾಮನಿಗೆ, ತನ್ನೊಳಗೆ ತರ್ಕಿಸತೊಡಗಿದ – “ಕಾಳಭೈರವ ಸದೃಶ, ಪುರುಷ ಸಂಕುಲಕ್ಕೆ ಅಜೇಯರಾದ ಭೀಷ್ಮಾಚಾರ್ಯ, ಶಾಪಾದಪಿ ಶರಾದಪಿ ಗುರು ದ್ರೋಣ, ವೀರಾಗ್ರಣಿ ಕರ್ಣ ಸಹಿತ ಅಮಿತ ಸಂಖ್ಯೆಯ ವೀರಾಧಿವೀರರು, ಕೌರವರು, ಹನ್ನೊಂದು ಅಕ್ಷೋಹಿಣಿ ಸೇನೆ ಇದ್ಯಾವುದೂ ಈಗ ಉಳಿದಿಲ್ಲ. “ಮಮ ಪ್ರಾಣಾಹಿಃ ಪಾಂಡವಃ” ಎನ್ನುತ್ತಿದ್ದ ಕೃಷ್ಣ ಆತನ ಪಂಚಪ್ರಾಣ ಸಮರಾದ ಪಾಂಡವರೈವರ ಜೊತೆ ಬಳಗಸಹಿತನಾಗಿ ಇದ್ದಾನೆ. ಏನಿದು! ಹೇಗೆ ಸಾಧ್ಯವಾಗಿದೆ?” ಹೀಗೆ ಯೋಚಿಸುತ್ತಾ ಕೃಷ್ಣನತ್ತ ತಿರುಗಿ, “ಕೃಷ್ಣಾ! ಏನಿದು ದುರ್ಯೋಧನನ್ನುಳಿದು ಕೌರವರ್ಯಾರೂ ಉಳಿದಿಲ್ಲ. ಪಾಂಡವರೈವರೂ ಸುರಕ್ಷಿತರಾಗಿದ್ದಾರೆ. ಇದು ಹೇಗೆ ಸಾಧ್ಯವಾಯಿತು?” ಎಂದು ಪ್ರಶ್ನಿಸಿದನು.

“ಅಣ್ಣದೇವಾ, ಪ್ರಾರಬ್ಧ ಕರ್ಮ ಕೌರವರ ನಾಶಕ್ಕೆ ಕಾರಣವಾಯಿತು. ಅಂತಹ ಕೌರವರನ್ನು ಬೆಂಬಲಿಸಿದ ಸುಜನ ದುರ್ಜನರೂ ಕರ್ಮಫಲದ ಪ್ರವಾಹದಲ್ಲಿ ಕೊಚ್ಚಿಹೋದರು. ಪ್ರಾರಬ್ದವನ್ನು ಮೀರಿ ನಿಲ್ಲಲು ಯಾರಿಗಾದರೂ ಸಾಧ್ಯವಿದೆಯೇ ಹೇಳು? ಹಾಗೆಂದು ಪಾಂಡವರು ಈಗಲೂ ಸಂಧಾನಕ್ಕೆ ಸಿದ್ದರಿದ್ದಾರೆ. ದುರ್ಯೋಧನನಿಗೆ ಬದುಕುವ ಬಯಕೆಯಿದ್ದರೆ ಖಂಡಿತಾ ಅವಕಾಶವಿದೆ. ಮಹಾರಾಜ ಧರ್ಮರಾಯ ಧರ್ಮ ಮೀರಲಾರ” ಎಂದನು.

ಆಗ ಬಲರಾಮದೇವ ಕೌರವನತ್ತ ತಿರುಗಿ “ಯಾಕೆ ಮತ್ತು ಹೇಗೆ ನಿನ್ನವರೆಲ್ಲರನ್ನೂ ಕಳಕೊಂಡೆ? ನಿನ್ನ ಅತಿಬಲಯುತ ಸೇನೆ ನಷ್ಟವಾದ ಬಗೆ ಹೇಗೆ?” ಎಂದು ಆಶ್ಚರ್ಯದಿಂದ ಕೇಳಿದನು.

ಆಗ ದುರ್ಯೋಧನ “ಗುರುವರ್ಯಾ! ನಾವೇನು ಯುದ್ಧ ಯೋಜನೆ, ರಣತಂತ್ರ ನಿಯೋಜಿಸಿದರೂ ಆ ಕೃಷ್ಣನಿಂದಾಗಿ ನಷ್ಟವಾಗುತ್ತಾ ಹೋಯಿತು. ಎಷ್ಟೊ ಸಂದರ್ಭದಲ್ಲಿ ಪಾಂಡವರು ಸಾವಿನ ಕದ ತಟ್ಟಿದರೂ ಶ್ರೀ ಕೃ಼ಷ್ಣನ ನಿರ್ದೇಶನ ಮತ್ತು ಸಹಕಾರದಿಂದಾಗಿ ಯಾವ ವಿಧದ ಅಪಾಯವೂ ಆಗದೆ ಬದುಕುಳಿದಿದ್ದಾರೆ. ನಮ್ಮ ಪಕ್ಷ ಈ ತೆರನಾಗಿ ಸಾಯುವುದಕ್ಕೆ ಆ ಕೃಷ್ಣ ಮೂಲ ಕಾರಣ ಗುರುಗಳೇ. ಸಂಧಾನ ಬಹಳ ಹಿಂದೆಯೇ ಮುಗಿದು ಹೋದ ಅಧ್ಯಾಯ. ನನ್ನವರು – ನಮ್ಮವರು ಎಲ್ಲರೂ ನಮ್ಮ ಪಕ್ಷಕ್ಕಾಗಿ ಬಲಿದಾನ ವಿತ್ತಿದ್ದಾರೆ. ಅವರೆಲ್ಲರ ಆತ್ಮ ಸಂತೃಪ್ತಿಗಾಗಿ ನಾನು ಈ ಪಾಂಡವರನ್ನು ಗೆದ್ದು ಕೊಲ್ಲಬೇಕು. ಅದಾಗದಿದ್ದರೆ ಹೋರಾಡುತ್ತಾ ಪ್ರಾಣವನ್ನಾದರೂ ಈ ಮಣ್ಣಿಗೆ ಸಮರ್ಪಿಸಬೇಕು. ಸಂಧಿಯ ಮಾತು ಇನ್ನು ಆಗುವ ವಿಚಾರವಲ್ಲ” ಎಂದು ಹೇಳಿದನು. ಮತ್ತೆ ಆ ಕೃಷ್ಣನ ಕಪಟತನ, ಕುತಂತ್ರದಿಂದ ನಮ್ಮವರನ್ನು ಕೊನೆಗಾಣಿಸಿದ ಎಂದು ದೂರುತ್ತಾ ದುರ್ಯೋಧನ ಕಣ್ಣೀರ್ಗರೆದನು.

ಬಲರಾಮ ಕೃಷ್ಣನತ್ತ ತಿರುಗಿ “ಸಾರಥ್ಯವಷ್ಟೇ ನನ್ನ ಕಾರ್ಯ, ಆಯುಧ ಧರಿಸಲಾರೆ, ಯುದ್ಧ ಮಾಡಲಾರೆ ಎಂದು ಘೋಷಿಸಿದ್ದ ನೀನು, ದುರ್ಯೋಧನ ದೂರುತ್ತಿರುವ ಪ್ರಕಾರ ಹೇಗೆ ಕೌರವ ಪಕ್ಷದ ನಾಶಕ್ಕೆ ಕಾರಣನಾದೆ?”

“ಅಗ್ರಜಾ, ನಾನು ಯಾರನ್ನೂ ಸಂಹರಿಸಲಿಲ್ಲ. ಯುದ್ಧವನ್ನೂ ಮಾಡಲಿಲ್ಲ. ಅರ್ಜುನನ ರಥಸಾರಥಿಯಾಗಿ, ನನ್ನ ಕರ್ತವ್ಯ ನಿಭಾಯಿಸಿದ್ದೇನೆ. ಹಾಗಿದ್ದರೆ ಕೌರವ ಪಕ್ಷ ನಿರ್ನಾಮ ಹೇಗಾಯಿತು ಎಂಬುವುದು ನಿನ್ನ ತರ್ಕ. ಅಣ್ಣಾ, ಧರ್ಮ ದ್ರೋಹವೆ ಪರೋಕ್ಷವಾಗಿ ನಿಂತು ಕುರು ಪಾಳಯದ ನಾಶಕ್ಕೆ ಹೇತುವಾಯಿತು. ಅಧರ್ಮಿಗಳನ್ನು ಯಾರಾದರು ನಾಶಗೊಳಿಸಬೇಕಾಗಿದೆಯೆ? ಧರ್ಮವೇ ಆ ರೀತಿ ಆಗುವಂತೆ ಪೂರಕವಾಗಿ ಸಹಕರಿಸುತ್ತದೆ ನಿನಗಿದು ತಿಳಿದಿದೆಯಲ್ಲವೇ?” ಎಂದು ವಿವರಿಸಿ ಹೇಳಿದನು.

ಬಲರಾಮ ಸಂದಿಗ್ಧತೆಗೆ ಸಿಲುಕಿದ, ಧರ್ಮರಾಯ ಸಂಧಾನಕ್ಕೆ ಈಗಲೂ ಸಿದ್ಧ ಎನ್ನುತ್ತಿದ್ದಾನೆ. ದುರ್ಯೋಧನ ನೋಡಿದರೆ ಮುರಿದ ಸಂಧಿ ಮತ್ತೆ ಬೆಸೆಯಲಾಗದು ಎಂದು ನಿಷ್ಠುರನಾಗಿ ಹೇಳುತ್ತಿದ್ದಾನೆ. ಹೀಗಿರಲು ನಾನೀಗ ಏನು ಮಾಡಲಿ! ಎಂದು ಬಲರಾಮದೇವ ದ್ವಂದ್ವಕ್ಕೆ ಸಿಲುಕಿದ್ದಾನೆ.

ಮುಂದುವರಿಯುವುದು…

LEAVE A REPLY

Please enter your comment!
Please enter your name here