ಭಾಗ -42
ಭರತೇಶ್ ಶೆಟ್ಟಿ, ಎಕ್ಕಾರ್

ಶರ ಸಂಧಾನಗೊಂಡ ಮಾತ್ರಕ್ಕೆ ಲೋಕ ಲೋಕಗಳು ಕಂಪಿಸಲಾರಂಭಿಸಿದೆ ಭೂಮಂಡಲ. ಇಕ್ಕೆಲಗಳಿಂದಲೂ ಕಿಡಿ ಕಾರಲಾರಂಭಿಸಿವೆ ಮಂತ್ರಾಸ್ತ್ರಗಳು. ಪ್ರಳಯಾಂತಕರಾಗಿ ಗೋಚರಿಸುತ್ತಿದ್ದಾರೆ ಗುರುಶಿಷ್ಯರು.
ಪರಶುರಾಮರು ಉಗ್ರರಾಗಿ ಉಸುರಿದರು. ಇಪ್ಪತ್ತೊಂದು ಬಾರಿ ಭೂ ಪ್ರದಕ್ಷಿಣೆಗೈದು ದುಷ್ಟ ಕ್ಷತ್ರಿಯರ ದರ್ಪವಡಗಿಸಿ ಭೂಭಾರ ಇಳುಹಿದ ನನ್ನ ಶಕ್ತಿ ಗೊತ್ತಲ್ಲವೇ ನಿನಗೆ? ಎಂದಾಗ ಹೌದು ಗುರುಗಳೇ ಪರಶುರಾಮರ ಪರಾಕ್ರಮ ಸ್ಪಷ್ಟವಾಗಿ ಗೊತ್ತಿದೆ. ಆದರೆ ಆ ಕಾಲದಲ್ಲಿ ನಾನಿದ್ದರೆ ನಿಮ್ಮ ಕ್ಷಾತ್ರಮೇಧದ ಪ್ರದಕ್ಷಿಣೆ ತಡೆದು ಕೊಲೆಪಾತಕ ದೋಷದಿಂದ ನಿಮ್ಮನ್ನು ರಕ್ಷಿಸುತ್ತಿದ್ದೆನೋ ಏನೋ. ಅಥವಾ ಅಧರ್ಮ ಪಥದಲ್ಲಿ ಸಾಗುತ್ತಿದ್ದ ಕಾರ್ತವೀರ್ಯನನ್ನು ನಾನೇ ದಂಡಿಸಿ ಶಿಕ್ಷಿಸಿ ಬಿಡುತ್ತಿದ್ದೆ ಎಂದು ಪ್ರತ್ಯುತ್ತರ ನೀಡಿದನು. ಶಿಷ್ಯನ ನುಡಿಗೆ ಕೋಪಾವಿಷ್ಟರಾದ ಜಮದಗ್ನಿ ಜಾತ ಭಾರ್ಗವರು ವಿಧ್ವಂಸಕ ಶರ ಪ್ರಯೋಗಿಸಿಯೇ ಬಿಟ್ಟರು ಎಂಬ ರೀತಿ ಹೆದೆಯನ್ನು ಸೆಳೆದಾಗ…. ಅಶರೀರವಾಣಿಯಾಯಿತು “ನೀವಿಬ್ಬರೂ ಅತುಲ ವಿಕ್ರಮಿಗಳು, ಸರಿ ಸಮಾನರಿದ್ದೀರಿ. ಸತ್ ಶಿಷ್ಯನಲ್ಲಿ ಸೋಲೊಪ್ಪಿಕೊಳ್ಳುವುದು ಗುರುವಿಗೆ ಭೂಷಣ. ಸರ್ವನಾಶ ಮಾಡಬಲ್ಲ ಮಂತ್ರಾಸ್ತ್ರಗಳು ಲೋಕದ ರಕ್ಷಣೆಗಾಗಿ ಈಗ ಉಪಶಮಿಸಲ್ಪಡಲಿ. ನೀವೀರ್ವರು ಸೆಣಸಿದರೆ ಸೃಷ್ಟಿ ಸರ್ವನಾಶವಾದೀತೇ ಹೊರತು ಜಯಾಪಜಯ ನಿರ್ಣಯವಾಗದು.” ಆಲಿಸಿದ ಇಬ್ಬರೂ ಮಂತ್ರಪೂತ ಶರಗಳನ್ನು ಉಪಸಂಹಾರ ಮಾಡಿದರು.
ಈರ್ವರೂ ಆಯುಧಗಳನ್ನು ಬದಿಗಿರಿಸಿದರು. ಪರಶುರಾಮರು ತೆರೆದ ತನ್ನ ಅಜಾನುಬಾಹುಗಳಿಂದ ಶಿಷ್ಯೋತ್ತಮನನ್ನು ಬರಸೆಳೆದು ತಬ್ಬಿಕೊಂಡು ಸಮಾನರೆಂದು ಒಪ್ಪಿ ತೋರಿಸಿದರು. ಆದರೂ ಭೀಷ್ಮರು ತಕ್ಷಣ ತೋಳತೆಕ್ಕೆಯಿಂದ ಜಾರಿ ಗುರುಚರಣಗಳಿಗೆ ತನ್ನ ಶಿರಬಾಗಿಸಿ ವಂದಿಸಿ ಗುರುಗಳೇ ಶ್ರೇಷ್ಟರು ಎಂದು ಸನ್ನಡತೆಯಿಂದ ಪ್ರಕಟಿಸಿದರು. ಭಾವುಕರಾದ ಪರಶುರಾಮರ ಕಂಬನಿಗಳು ಕಣ್ಣಂಚಿಂದ ಜಾರಿ ಹನಿ ಹನಿಗಳಾಗಿ ಭೀಷ್ಮನ ಶಿರದ ಮೇಲೆ ಮಂತ್ರಾಕ್ಷತೆಯ ಸೇಸೆಯಂತೆ ಉದುರಿದವು. ಗುರುಗಳ ಕರಗಳು ಶಿಷ್ಯನ ಶಿರವನ್ನು ನೇವರಿಸಿ ದಿವ್ಯಾಶೀರ್ವಾದ ಮಾಡಿದವು. ಹರ್ಷ ಉದ್ಘಾರದಿಂದ ಹೇಳಿದರು ಕಡೆಗೂ ಧರ್ಮವೇ ಗೆದ್ದಿತು. ಮುಂದೆಯೂ ಧರ್ಮವೇ ಗೆಲ್ಲುವುದು. ನಿಟ್ಟುಸಿರೆಳೆದು ಬಿಟ್ಟು ಅಂಬೆಯನ್ನು ಕರೆದು ಇನ್ನು ನಾನು ಮಾಡಲೇನೂ ಉಳಿದಿಲ್ಲ. ಭೀಷ್ಮನ ನಡೆ ಧರ್ಮಯುತವಾಗಿದೆಯೆಂದು ಸಾಬೀತಾಗಿದೆ ಎಂದು ಹೇಳಿ ಋಷಿಗಳ ಜೊತೆ ಹೊರಟೇ ಹೋದರು. ರೋಷಾಗ್ನಿ ಅಂಬೆಯ ಅಂತರಂಗದಿಂದ ಪ್ರಜ್ವಲಿಸಿತು. “ಯಾರ ಸಹಾಯವೂ ಬೇಡವೆನಗೆ. ಸ್ವಯಂ ಸಾಧನೆಯಿಂದ ಕಾಲಾಂತರದಲ್ಲಾದರೂ ನಾನೇ ನಿನ್ನನ್ನು ಅಂತ್ಯಗೊಳಿಸುತ್ತೇನೆ”. ಎಂದು ಪ್ರತಿಜ್ಞೆಗೈದು ದಿಕ್ಕು ದೆಸೆಯಿಲ್ಲದ ಅಲೆಮಾರಿಯಂತೆ ಎತ್ತಲೋ ಹೊರಟು ಹೋದಳು. ಭೀಷ್ಮರು ಹಸ್ತಿನಾವತಿಯ ಅರಮನೆ ಸೇರಿದರು.
ಅಂಬೆ ಅಲೆದಾಡಿ ‘ಶೈಖಾವತ್ಯ’ ಎಂಬ ಋಷಿಯ ಆಶ್ರಮದಲ್ಲಿ ಆಶ್ರಯಿತಳಾಗಿ, ದಿವ್ಯೋಪದೇಶದಿಂದ ರುದ್ರಮಂತ್ರ ಬೋದಿತಳಾದಳು. ಘೋರ ತಪಸ್ಸನ್ನು ಕೈಗೊಂಡಳು. ಹೀಗೆ ಅತ್ಯಮೋಘ ಸಾಧನೆಯ ತಪಸ್ಸಿನ ಫಲರೂಪವಾಗಿ ಹೆಣ್ಣಾಗಿ ಹುಟ್ಟಿ ಗಂಡಾಗಿ ಭೀಷ್ಮನನ್ನು ಸಂಹರಿಸು ಎಂದು ಮಹಾರುದ್ರನಿಂದ ಅನುಗ್ರಹಿತಳಾದಳು. ಬಳಿಕ ಅಂಬೆ ಇನ್ನು ಬದುಕಿ ಕಾಲಹರಣ ಮಾಡುವುದು ಬೇಡ. ಗುರಿ ಸಾಧನೆಗಾಗಿ ಕಾರಣಜನ್ಮವೆತ್ತುವ ಅವಸರದಿಂದ ತನ್ನ ಆಶಯ ನೆನೆಯುತ್ತಾ ದೇಹತ್ಯಾಗ ಮಾಡಿದಳು. ಅಂಬೆಯ ಈ ವರದಾನ ಪ್ರಾಪ್ತಿಗೆ ಆಶ್ರಮ ಋಷಿಗಳು ಸಾಕ್ಷಿಯಾಗಿದ್ದರು. ಗುಪ್ತ ವಿಚಾರಗಳೇ ಹಾಗಲ್ಲವೇ? ಯಾರಿಗೂ ಹೇಳಬೇಡ ಎಂಬ ಮೌಖಿಕ ಸಂವಹನೆಯಿಂದ ಸುದ್ದಿ ವ್ಯಾಪಕವಾಗಿ ಪಸರಿಸುತ್ತದೆಯಲ್ಲವೇ? ಹಾಗೇ ಭೀಷ್ಮನಲ್ಲಿವರೆಗೂ ಬಂದು ಮುಟ್ಟಿತು. ಗಂಭೀರವಾಗಿ ಚಿಂತಿಸದ ಭೀಷ್ಮ, ಎಂದಾದರೊಂದು ದಿನ ಸಾಯಲೇಬೇಕಲ್ಲವೇ? ಅದಕ್ಕೀಗ ವ್ಯಥೆಯೇಕೆ ಎಂದು ಕಾಲಗರ್ಭದಲ್ಲಿ ಆಗಲಿಕ್ಕಿರುವುದು ಆಗಿ ಹೋಗಲಿ ಎಂದು ಸ್ಥಿತಪ್ರಜ್ಞರಾದರು.
ಇತ್ತ ಹಸ್ತಿನಾವತಿಯ ಮಹಾರಾಜ ವಿವಾಹಾನಂತರ ಭೋಗ ವಿಲಾಸಿಯಾಗಿ, ಪತ್ನಿದ್ವಯರ ಜೊತೆ ಅಂತಃಪುರವಾಸಿಯಾಗಿ ಹೋದ. ರಾಜಕಾರಣದತ್ತ ಅಲಕ್ಷ್ಯವಹಿಸಿ ಅಂಬಿಕೆ ಅಂಬಾಲಿಕೆಯರ ದೈಹಿಕ ಸುಖಭ್ರಾಂತನಾಗಿ ಮೈಮರೆತ. ಪತ್ನಿಯರ ಅಪೇಕ್ಷೆಯೂ ಅದೇ ಆಗಿದೆಯೋ ಎಂಬ ರೀತಿ ಸಹಕಾರವೂ ಸಿಗುತ್ತಿತ್ತು. ಸತ್ಯವತಿಗೂ ವಂಶೋದ್ಧಾರಕ ಸಂತಾನದ ಅಪೇಕ್ಷೆ ಇದ್ದ ಕಾರಣ ಮಗನ ವರ್ತನೆ ಮಿತಿ ಮೀರಿದರೂ ಸೈರಿಸುತ್ತಿದ್ದಳು. ಅತಿಯಾದರೆ ಅಮೃತವೂ ವಿಷವಾಗುತ್ತದೆಯಲ್ಲವೇ. ಚೈತನ್ಯ ಹೀನನಾಗಿ, ರೋಗಗ್ರಸ್ತನಾದ ವಿಚಿತ್ರವೀರ್ಯ. ಔಷಧೋಪಚಾರಗಳು ಪರಿಣಮಿಸದೆ ಮೃತ್ಯುದೇವತೆಯ ವಶನಾಗಿಯೇ ಬಿಟ್ಟ.
ಪುತ್ರ ವಿಯೋಗ ಮಾತೆ ಸತ್ಯವತಿಗೆ ಅಸದಳ ವೇದನೆಯನ್ನೂ, ತನ್ನ ಸ್ವಾರ್ಥ ಸಾಧನೆಗೆ ಚಂದ್ರವಂಶವೇ ಅಂತ್ಯಗೊಂಡಿತು ಎಂಬ ಪಾಪ ಪ್ರಜ್ಞೆ ಆಕೆಯನ್ನು ಪಶ್ಚಾತ್ತಾಪಕ್ಕೂ ತಳ್ಳಿತು. ಸಕಾಲದಲ್ಲಿ ಮಗನ ಅಂತ್ಯ ಸಂಸ್ಕಾರ, ಅಪರ ಕ್ರಿಯಾದಿ ಸದ್ಗತಿ ಕಾರ್ಯಗಳನ್ನು ಪೂರೈಸಿದರು. ರಾಜನಿಲ್ಲದ ರಾಜ್ಯ ಅರಾಜಕತೆಯ ಗೂಡಾಗಬಾರದು ಎಂದು ಭೀಷ್ಮರು ರಾಜಕಾರಣದ ಜವಾಬ್ದಾರಿಯನ್ನು ಸುಸೂತ್ರವಾಗಿ ನಿಭಾಯಿಸುತ್ತಿದ್ದರು.
ನಿಯತಿಯ ಕೈಗೊಂಬೆಯಾಗಿ ಹೀಗೆಯೇ ಆಗಬೇಕಿತ್ತೋ ಏನೋ! ಆಗಿ ಹೋಯಿತು. ಈಗ ತನ್ನ ಪುತ್ರರಿಬ್ಬರ ವಿಯೋಗಕ್ಕಿಂತಲೂ, ರಾಜಮಾತೆಯಾಗಿ ಚಂದ್ರವಂಶದ ಬೆಳವಣಿಗೆಯ ಬಗೆ ಹೇಗೆ ಎಂದು ಚಿಂತಿತಳಾದಳು ಸತ್ಯವತಿದೇವಿ. ಚಿಂತಿಸಿ ಫಲವಿಲ್ಲ ಎಂದು ಭೀಷ್ಮನನ್ನು ಕರೆದು, ಮಗನೇ ನಿನ್ನ ಮಹಾ ತ್ಯಾಗ ಫಲವಾಗಿ ನಾನು ಮಹಾರಾಣಿಯಾದೆ. ತಮ್ಮ ಸ್ವಹಿತಕ್ಕಾಗಿ ನನ್ನ ತಂದೆ ಮತ್ತು ನಾನು ನಿಷ್ಕರುಣಿಗಳಾಗಿ ಸಾಧಿಸಿ ಪಡೆದೆವಾದರೂ, ನಿನಗಾದ ಘೋರ ಅನ್ಯಾಯಕ್ಕೆ ತಕ್ಕ ಶಿಕ್ಷೆ ನಮಗಾಯಿತು. ಇನ್ನೂ ಕಾಲ ಮಿಂಚಿಲ್ಲ. “ಇದೋ ನಾನೇ ನಿನಗೆ ಆದೇಶ ನೀಡುತ್ತಿದ್ದೇನೆ, ನಿನ್ನ ಪ್ರತಿಜ್ಞೆ ಇನ್ನು ಅನಗತ್ಯ. ಅದನ್ನು ಕೈಬಿಟ್ಟು ನೀನು ಮದುವೆಯಾಗಿ ಚಂದ್ರವಂಶ ಬೆಳಗಬೇಕಾದ ಅನಿವಾರ್ಯತೆ ಬಂದೊದಗಿದೆ. ಸುಶೀಲೆ ರಾಜಕುಮಾರಿಯೋರ್ವಳನ್ನು ನೀನು ವರಿಸಲೇಬೇಕು, ಪರಿತ್ಯಜಿಸಿದ ಸಿಂಹಾಸನ ಏರಲೇಬೇಕು.” ಎಂದು ಹೇಳಿ ರಾಜತಾಂತ್ರಿಕ ನಡೆಗೆ ರಾಜಮಾತೆ ಮುಂದಾದಳು. ಭೀಷ್ಮ ನಯವಾಗಿ ತಿರಸ್ಕರಿಸಿ ಒತ್ತಾಯಕ್ಕೆ ಮಣಿಯದೆ, “ಮಾತೆ ದೇವವೃತನಾಗಿದ್ದ ನಾನು ಈ ಧರ್ಮವಾಕ್ಯದಿಂದಲೇ ಭೀಷ್ಮನಾಗಿದ್ದೇನೆ. ಮರಳಿ ದೇವವೃತನಾಗಲಾಗದು. ಅಧರ್ಮದ ಪಥ ಎನಗೆ ಅಹಿತ”. ಎಂದು ನುಡಿದನು.
ಏನು ಮಾಡುವುದೆಂದು ತೋಚದಾದ ಸತ್ಯವತಿ ಮರಳಿ ಭೀಷ್ಮನ ಸಹಾಯ ಯಾಚನೆಗೆ ಬಂದಳು. ಮಗನೇ ನಿನ್ನ ತಮ್ಮಂದಿರು ಹತ ಪ್ರಾಣರಾಗಿದ್ದಾರೆ. ಹಸ್ತಿನೆಯ ಸಿಂಹವಿಷ್ಟಿರ ಬರಿದಾಗಿದೆ. ನಮ್ಮ ವಂಶದ ಉದ್ದಾರಕ್ಕೆ ಸತ್ಸಂತಾನ ಬೇಕೇ ಬೇಕು. ಹಾಗಾಗಿ ಧರ್ಮ ಬದ್ಧವಾಗಿ ನಿಯೋಗ ಧರ್ಮದಿಂದ ನೀನು ನಿನ್ನ ತಮ್ಮ ವಿಚಿತ್ರವೀರ್ಯನ ಪತ್ನಿಯರನ್ನು ಸಂತಾನ ವೃದ್ಧಿಯ ಏಕಮಾತ್ರ ಉದ್ದೇಶದಿಂದ ಮಾತ್ರ ಕೂಡಿದರೆ ಅಧರ್ಮವಾಗದು. ದಯೆತೋರಿ ಆಗದು ಎನಬಾರದು… ಎಂದು ಆರ್ತಳಾಗಿ ಬೇಡಿದಳು.
ಮುಂದುವರಿಯುವುದು…..
✍🏻ಭರತೇಶ್ ಶೆಟ್ಟಿ ಎಕ್ಕಾರ್