28.8 C
Udupi
Thursday, March 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 399

ಭರತೇಶ ಶೆಟ್ಟಿ, ಎಕ್ಕಾರ್

ಸಂಚಿಕೆ ೩೯೯ ಮಹಾಭಾರತ

ದುರ್ಯೋಧನನು ಸೇನಾಪತಿ ಕರ್ಣನೊಂದಿಗೆ ಏಕಾಂತದಲ್ಲಿ ಆಪ್ತ ಸಮಾಲೋಚನೆ ನಿರತನಾದನು . ಕರ್ಣನು ತನ್ನ ಶಕ್ತ ಅಶಕ್ತ ಸಾಧಕ ಬಾಧಕಗಳನ್ನು ವಿವರಿಸುತ್ತಾ “ಮಿತ್ರ ಸುಯೋಧನಾ ನಿನ್ನ ಪಾಲಿಗೆ ಗೆಲುವಾಗಬೇಕಾದರೆ ಸದ್ಯಕ್ಕೆ ನಮಗುಳಿದಿರುವ ಒಂದು ಮಾರ್ಗೋಪಾಯವಿದೆ. ಮಾದ್ರಾದೀಶ ಶಲ್ಯ ಉತ್ಕೃಷ್ಟ ಸಾರಥಿ. ಆತನ ಸಾರಥ್ಯ ನನಗೊದಗಿದರೆ ವಾಸುದೇವ ಕೃಷ್ಣನ ಸೂತತ್ವದಲ್ಲಿ ಪಾರ್ಥ ತೋರುವ ವಿಕ್ರಮಕ್ಕಿಂತಲೂ ಮಿಗಿಲಾದ ಸಾಹಸ ತೋರಿ ಪಾಂಡವ ಸೇನೆಯ ವಿಧ್ವಂಸಗೈದು ತೋರುವೆ” ಎಂದನು.
ಅದಕ್ಕೊಪ್ಪಿದ ಕೌರವ ಸಭೆಗೆ ಬಂದನು.

ಕರ್ಣ ಈ ರೀತಿ ಕೌರವನಲ್ಲಿ ಕೇಳಿಕೊಂಡುದುದರ ಹಿಂದೆ ಸಕಾರಣವೂ ಇದೆ. ಬಾಲಕನಾಗಿದ್ದ ಧನುರ್ವಿದ್ಯೆ ಕಲಿಯುವ ತುಡಿತದಿಂದ ಗುರುದ್ರೋಣರ ಆಶ್ರಮದಲ್ಲಿ ವಿದ್ಯಾರ್ಥಿಯಾಗಿ ಸೇರಿದರೂ, ವರ್ಣಾಶ್ರಮ ಧರ್ಮ ಪಾಲಿತವಾಗಿದ್ದ ಆ ಕಾಲಘಟ್ಟದಲ್ಲಿ ಕೇವಲ ಸೂತವೃತ್ತಿಗೆ ಪರ್ಯಾಪ್ತವಾಗುವಷ್ಟನ್ನು ಬೋಧಿಸಲ್ಪಟ್ಟಿತ್ತು. ಅಲ್ಲಿಂದ ತನ್ನ ವೃತ್ತಿ ವಿದ್ಯೆಯಾದ ಸಾರಥ್ಯದ ವ್ಯಾಪ್ತಿಯನ್ನು ಮೀರಿದ ಪ್ರವೃತ್ತಿಯಾದ ಧನುರ್ವೇದಿಯಾಗಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಬೆಂಬತ್ತಿ ಸೂಕ್ತ ಗುರುವಿನ ಆಶ್ರಯ ಬಯಸಿದ್ದ ಕರ್ಣ. ಆ ಕಾಲಕ್ಕೆ ಕ್ಷಾತ್ರ ಕುಲ ನಾಶಕನಾಗಿ ಕ್ಷತ್ರಿಯ ಕುಲ ವಿರೋಧಿ ಎಂಬಂತೆ ಕಾಣಿಸಿಕೊಂಡಿದ್ದ ಪರಶುರಾಮರ ಬಳಿ ವಟು ವೇಷಧಾರಿಯಾಗಿ ಹೋಗಿ ಸೇರಿದ್ದನು. ತಾನು ಕ್ಷತ್ರಿಯನಲ್ಲ ಎಂಬ ಕಾರಣಕ್ಕೆ ದ್ರೋಣರಿಂದ ಮಿತವಾದ ಶಿಕ್ಷಣ ಪಡೆದಿದ್ದ ಕರ್ಣ, ಕ್ಷತ್ರಿಯನಲ್ಲದ ತಾನು ಬ್ರಾಹ್ಮಣ ವಟುವೆಂದು ಭಾರ್ಗವರ ಆಶ್ರಮ ಸೇರಿ, ಪ್ರಿಯ ಶಿಷ್ಯನಾಗಿದ್ದುಕೊಂಡು, ಸೇವೆಗೈದು ಧನುರ್ಧರ ಸಮರ್ಥ ಬಿಲ್ವಿದ್ಯಾ ಪಾರಂಗತನಾದನು. ಆದರೊಂದು ದಿನ ಭೋಜನ ವಿರಾಮ ಸಮಯ ಕರ್ಣನ ಉರುವನ್ನು (ತೊಡೆಯನ್ನು) ತಲೆ ದಿಂಬಾಗಿಸಿ ವಿಶ್ರಾಂತರಾಗಿದ್ದ ಭಾರ್ಗವರು ನಿದಿರೆಗೆ ಜಾರಿದ್ದರು. ಚಾಮರ ಬೀಸುತ್ತಾ, ಗುರು ಸೇವಕನಾಗಿದ್ದ ಕರ್ಣನ ತೊಡೆ ಸಂದಿಗೆ ನುಸುಳಿದ ವಜ್ರದುಂಬಿಯೊಂದು ಕಚ್ಚಿ ಕೊರೆಯತೊಡಗಿತು. ಕೊರೆತದ ತೀವ್ರತೆ ಎಷ್ಟಿತ್ತೆಂದರೆ ಮಾಂಸ ಖಂಡಗಳನ್ನು ಕತ್ತರಿಸುತ್ತಾ ರಕ್ತದ ಓಕುಳಿ ಹರಿಯುವಂತೆ ಮಾಡಿತು ಆ ಭೀಕರ ಭ್ರಮರ. ತಾನು ನೋವಿನಿಂದ ಅಲುಗಿ, ಮಿಸುಕಾಡಿದರೆ ಎಲ್ಲಿ ಗುರುಗಳ ನಿದ್ರಾಭಂಗವಾಗುವುದೊ ಎಂದು ಅಸದಳ ವೇದನೆಯನ್ನು ಸಹಿಸಿ ಕಿಂಚಿತ್ ಅಲುಗಾಡದೆ ಧೃಡವಾಗಿ ಕುಳಿತಿದ್ದನು ಕರ್ಣ. ಆತನ ಗುರುಭಕ್ತಿ ಮೆಚ್ಚುವಂತಹುದು. ಯಾವಾಗ ಹರಿದಿಳಿದ ರಕ್ತ ಗುರು ಜಮದಗ್ನಿ ಪುತ್ರ ಭಾರ್ಗವರ ಮೈಸೋಕಿತೊ! ಆ ಕ್ಷಣಾರ್ಧದಲ್ಲಿ ಇದು ಕ್ಷಾತ್ರ ರಕ್ತವೆಂದು ಅರಿಯುವಲ್ಲಿ ಅವರಿಗೆ ಬೇರೆ ವಿಮರ್ಷೆಯೆ ಬೇಕಾಗಿರಲಿಲ್ಲ. ಕಾರಣ ಇಪ್ಪತ್ತೊಂದು ಬಾರಿ ಆರ್ಯಾವರ್ತ ಪ್ರದಕ್ಷಿಣೆಗೈದು ಕ್ಷತ್ರಿಯರ ರಕ್ತದೋಕುಳಿ ಹರಿಸಿ ಮಿಂದೆದ್ದು ಬಂದ, ತನ್ನ ಪರಶುವನ್ನು ರುಧಿರಾಭಿಷೇಚನಗೊಳಿಸಿದ್ದ ಮಹಾ ವಿಕ್ರಮಿಯಲ್ಲವೆ? ಆ ಕ್ಷಣದಲ್ಲೂ ವಿವೇಚನೆಗೆ ತೊಡಗಿದ ಗುರುಗಳು ಓರ್ವ ವಟು ಈ ಮಟ್ಟದ ಶಾರೀರಿಕ ಕ್ಷಮತೆ ತೋರಲು ಸಾಧ್ಯವಿಲ್ಲ. ದುಂಬಿಯ ಕಡಿತ ಕೊರೆತಗಳನ್ನು ಸೈರಿಸಿ ಅಲುಗದೆ ಕುಳಿತಿರಲು ಕ್ಷತ್ರಿಯನಲ್ಲದವನಿಗೆ ಅಸಾಧ್ಯ ವಿಚಾರ. ನನ್ನ ಪ್ರಿಯ ಶಿಷ್ಯ ವಂಚನೆ ಮಾಡಿ ವಿದ್ಯೆ ಕಲಿತನೆ? ಈ ರೀತಿ ಅಸತ್ಯ ಮಾರ್ಗದಿಂದ ಕಲಿತ ವಿದ್ಯೆ ಅಗತ್ಯ ಕಾಲದಲ್ಲಿ ಮರೆತು ಹೋಗಲಿ ಎಂದು ಉಗ್ರರಾಗಿ ಶಪಿಸಿ ಬಿಟ್ಟರು.

ಕರ್ಣನಿಗೆ ಒಂದೆಡೆ ದುಂಬಿಯ ಕೊರೆತದಿಂದಾದ ನೋವಿನ ಯಾತನೆ, ಅದರ ಮೇಲೆ ಗುರುಗಳ ಶಾಪ ವಾಕ್ಯ! ಅತ್ತು ಗೋಗರೆದು ತನ್ನ ಅಸಹಾಯಕ ಸ್ಥಿತಿ, ವಿದ್ಯೆ ಕಲಿಯುವ ಅಚಲವಾದ ಆಸೆ, ತಾನು ಸೂತ ಕುಲದವನಾದ ಕಾರಣ ವಿದ್ಯಾ ಪ್ರಾಪ್ತಿಗಾದ ತೊಡಕು, ಈ ರೀತಿ ಗುರುಗಳ ಬಳಿ ಬರಬೇಕಾದ ಕಾರಣ ಎಲ್ಲವನ್ನೂ ವಿವರಿಸಿ ಹೇಳಿ ಗುರುಗಳ ಪಾದ ಮೂಲಕ್ಕೆರಗಿ ತನ್ನಿಂದಾದ ಅಪಚಾರಕ್ಕಾಗಿ ಕ್ಷಮೆ ನೀಡಿ ಪೊರೆಯಬೇಕೆಂದು ಪ್ರಾರ್ಥಿಸತೊಡಗಿದನು.

ಗುರುಗಳ ಮನಸ್ಸು ಕರ್ಣನ ಅಸಹಾಯಕತೆಗಾಗಿ ಮರುಗಿತು. ಮುನಿದು ನುಡಿದ ಶಾಪ ವಾಕ್ಯ ಸುಳ್ಳಾಗದು, ಆದರೆ ಸರ್ವ ಸಮರ್ಥ ಸಾರಥಿಯಾದ ಶಲ್ಯನ ಸಾರಥ್ಯ ನಿನಗೊದಗಿದ ದಿನ ನೀನು ಅಜೇಯನಾಗುವೆ ಎಂದು ಪರಿಮಾರ್ಜನೆಯ ದಾರಿ ತೋರಿದರು. ಮಾತ್ರವಲ್ಲ ಅಸಾಮಾನ್ಯವಾದ “ಕಾಲಪೃಷ್ಟ” ಎಂಬ ಹೆಸರಿನ ದಿವ್ಯ ಧನುಸ್ಸನ್ನೂ ಕರ್ಣನಿಗಿತ್ತರು. ಈ ಒಂದು ಘಟಿತ ಘಟನೆಯ ಸ್ಮರಣೆ ಮಾಡಿಕೊಂಡು ಮಹಾರಥಿ ಕರ್ಣ ಕೌರವನಲ್ಲಿ ಶಲ್ಯನನ್ನು ಸಾರಥಿಯಾಗಿ ಒದಗಿಸಲು ಬೇಡಿಕೊಂಡಿದ್ದಾನೆ.

ಕರ್ಣನ ಅಪೇಕ್ಷೆ ಮನ್ನಿಸಿ ಬಂದ ಕೌರವ, ಸಭಾಸದರನ್ನು ಉದ್ದೇಶಿಸಿ “ಉಪಸ್ಥಿತರಿರುವ ಮೈತ್ರೇಯರಿಗೂ, ಬಾಂಧವರಿಗೂ ವಂದನೆಗಳು. ನಿಜ ಮಿತ್ರರಾಗಿ ನಮ್ಮ ಪಕ್ಷ ದಿನಗಳೆಂದಂತೆ ಒಂದಲ್ಲ ಒಂದು ಕಾರಣದಿಂದ ಪರಾಭವ ಹೊಂದುತ್ತಿದ್ದರೂ, ಸ್ಥೈರ್ಯ ಕಳಕೊಳ್ಳದೆ, ಆಪತ್ತಿನ ಕಾಲದಲ್ಲೂ ಆಪ್ತ ಮಿತ್ರರಾಗಿ ನಿಂತು ಹೋರಾಡುತ್ತಿರುವ ನಿಮಗೆಲ್ಲ ಚಿರ ಋಣಿಯಾಗಿದ್ದೇನೆ. ಹದಿನಾರು ದಿನಗಳ ಯುದ್ದದಲ್ಲಿ ನಮ್ಮ ಪಾಲಿನ ಅಪ್ರತಿಮ ಶೌರ್ಯವಂತರಾದ ಆಚಾರ್ಯ ಭೀಷ್ಮ, ದ್ರೋಣ, ಭೂರಿಶ್ರವಸ, ಜಯದ್ರಥ, ತ್ರೈಗರ್ತ್ಯರು, ಶ್ರುತಾಯುಧ, ದೀರ್ಘಾಯು, ಭಗದತ್ತ ಸಹಿತ ಅಸಂಖ್ಯ ವೀರರ ಅಂತ್ಯಕ್ಕೆ ಕಾರಣವಾಯಿತು. ಇಷ್ಟಲ್ಲದೆ ನನ್ನ ಸಹೋದರರನೇಕರೂ ಮಡಿದಿದ್ದಾರೆ. ಹಾಗೆಂದು ನಮ್ಮ ಪಕ್ಷವೂ ಸಕ್ಷಮ ಹೋರಾಟವನ್ನು ನೀಡಿದೆ. ಅಭಿಮನ್ಯು, ವಿರಾಟ, ದ್ರುಪದ, ಘಟೋತ್ಕಚ, ಉತ್ತರಕುಮಾರಾದಿ ಪಾಂಡವ ಪಕ್ಷದ ವೀರರ ಮರಣಕ್ಕೆ ಕಾರಣರಾಗಿ ಸಾಹಸ ತೋರಿದ್ದೇವೆ. ಇನ್ನು ಮುಂದಿನ ಯುದ್ದಕ್ಕೆ ಅಮಿತವಾದ ನಮ್ಮ ಸೇನೆಯೂ ಮಿತವಾಗುತ್ತಾ ಬರುತ್ತಿದೆ. ಹಾಗೆಂದು ಅದ್ವಿತೀಯ ಪರಾಕ್ರಮಿಗಳು ನಮ್ಮ ಪಕ್ಷದಲ್ಲಿ ಇನ್ನೂ ಇದ್ದಾರೆ. ಗುರುಪುತ್ರ ಅಶ್ವತ್ಥಾಮ, ಕೃಪಾಚಾರ್ಯರು, ಶಲ್ಯ, ಕೃತವರ್ಮ, ಶಕುನಿ ಸಹಿತ ನಾವು ಕೌರವ ಸಹೋದರರೂ ಇದ್ದೇವೆ. ಯೋಜನಾಬದ್ದವಾದ ಉಪಾಯ ಯೋಚಿಸಿ ಹೋರಾಟಕ್ಕೆ ಸಿದ್ಧರಾದರೆ ಇನ್ನೂ ನಾವು ಯುದ್ದ ಗೆಲ್ಲಬಲ್ಲೆವು. ನಮಗಾಗಿ ಸಮರಾಂಗಣದಲ್ಲಿ ವೀರ ಮರಣವನ್ನಪ್ಪಿದ ನಮ್ಮವರಿಗೆ ಸಂತೃಪ್ತಿಯನ್ನು ಸಮರ್ಪಿಸುವ ಪೂರ್ಣ ಅವಕಾಶ ನಮ್ಮಲ್ಲಿದೆ” ಎಂದನು.

ಆಗ ಶಕುನಿ “ವತ್ಸಾ ಕೌರವಾ! ನೀನು ಯೋಚಿಸಿರುವ ಮಹತ್ವದ ಯೋಜನೆ ಏನು? ತಿಳಿಸು. ಈಗಲೂ ಅದು ಸಮರ್ಥ ಉಪಾಯವಾಗಿದ್ದರೆ ನಮ್ಮ ಉತ್ಸಾಹ ಇಮ್ಮಡಿಯಾಗಲಿದೆ” ಎಂದನು.

ಆಗ ಕೌರವ ಮಾದ್ರಾದೀಶ ಶಲ್ಯ ಭೂಪತಿಯನ್ನು ಸಂಭೋದಿಸಿ “ಮಹಾರಥಿ ಶಲ್ಯ ಭೂಪತಿಗಳೇ, ನೀವು ಆರ್ಯಾವರ್ತದ ಮಹೋನ್ನತ ಮಲ್ಲಬಲರಲ್ಲಿ ಓರ್ವರು. ಮಾತ್ರವಲ್ಲ ಬಹುಮುಖಿ ಸಮರ ಕುಶಲಿಗರು. ನೀವಿರುತ್ತಾ ನಮಗೆ ಜಯದ ಆಶಯ ಕುಗ್ಗಲಾರದು. ಗದಾಯುದ್ಧ ನಿಪುಣರೂ, ಸಕಲ ಶಸ್ತ್ರ ಪಾರಂಗತರೂ ಆಗಿದ್ದೀರಿ. ಮಾತ್ರವಲ್ಲ ಸಮರ್ಥ ಸಾರಥಿಯೂ ಹೌದು. ಅರ್ಜುನ ನಮ್ಮೆದುರು ಸಾಹಸಿಯಾಗಿ ಈ ಮಟ್ಟದಲ್ಲಿ ಮೆರೆಯುವಲ್ಲಿ ಆತ ಅತಿ ಮಹಾರಥ ಹೌದಾದರೂ ಆತನ ಸಾರಥಿಯಾದ ಕೃಷ್ಣನ ಕೊಡುಗೆಯೂ ಬಹಳಷ್ಟಿದೆ. ವೇದ್ಯ ವಿಚಾರವೇನೆಂದರೆ ಓರ್ವ ಮಹಾರಥಿ ಪೂರ್ಣಬಲನಾಗಬೇಕಾದರೆ ಸಮರ್ಥ ಸಾರಥಿ ಅತ್ಯಗತ್ಯ. ಹಾಗಾಗಿ ನೀವು ನಮ್ಮ ಪಕ್ಷದ ಮೇಲೆ ಅಭಿಮಾನವಿಟ್ಟು ಜಯಕ್ಕಾಗಿ ಯೋಚಿಸಿರುವ ಯೋಜನೆಯಂತೆ ನಮ್ಮ ಸೇನಾಪತಿ ಕರ್ಣನ ರಥದ ಸಾರಥ್ಯ ಪೀಠದಲ್ಲಿ ಸ್ಥಿತರಾಗಬೇಕು. ಅರ್ಜುನನಿಗೆ ಕರ್ಣ ಸಮದಂಡಿಯಾಗಿ ಹೋರಾಡಬೇಕಾದರೆ ಕೃಷ್ಣನಿಗೆ ಸಮತುಲ್ಯವಾದ ಸಾರಥ್ಯ ಕರ್ಣನಿಗೆ ನಿಮ್ಮಿಂದ ಪ್ರಾಪ್ತವಾಗಬೇಕು. ಸಮಸ್ತ ಕುರು ಸೇನೆಯ ಪರವಾಗಿ ನಿಮ್ಮಲ್ಲಿ ಪ್ರಾರ್ಥಿಸುತ್ತಿದ್ದೇನೆ. ಅನ್ಯಥಾ ಭಾವಿಸದೆ, ನೀವು ಒಪ್ಪಿ ಈ ಕಾರ್ಯಕ್ಕೆ ಮನ ಮಾಡಬೇಕು” ಎಂದು ಪ್ರಾರ್ಥಿಸಿದನು.

ಈ ವಿನಂತಿಯನ್ನು ಕೇಳುತ್ತಿದ್ದಂತೆಯೆ ಶಲ್ಯನ ರೋಮ ರೋಮವೂ ರೋಷದ ಪ್ರತೀಕ ಎಂಬಂತೆ ಸೆಟೆದು ನಿಂತವು. “ಕೌರವಾ! ನಾನು ಸಾರಥ್ಯ ವಹಿಸುವುದಿದ್ದರೆ ಕಿರೀಟಿ ಅರ್ಜುನನ ರಥದ ಸಾರಥಿಯಾಗಿ ಎಂದು ಬಯಸಿದ್ದು ನಿಜ. ಹಾಗೆಂದು ಪಾಂಡವ ಪಕ್ಷ ಸೇರುವುದಕ್ಕಾಗಿ ಬಂದಿದ್ದವನು. ಆದರೆ ನೀನು ತೋರಿದ ವಂಚನೆಗೆ ವಶನಾಗಿ ಈಗ ನಿನ್ನ ಪಕ್ಷದಲ್ಲಿ ಹೋರಾಡಬೇಕಾಗಿ ಬಂದಿರುವುದು ನನ್ನ ಬಾಳಿನ ದೌರ್ಭಾಗ್ಯ. ಅದನ್ನು ಬಿಡು, ಅದು ಆಗಿ ಹೋದ ವಿಚಾರ. ಆದರೆ
ವಿವೇಚನೆ ಮರೆತು ನೀನು ವ್ಯವಹರಿಸಕೂಡದು. ನನ್ನ ಬಗ್ಗೆ ನಿನಗೆ ಪೂರ್ಣ ವಿಚಾರ ತಿಳಿದಿದೆ ತಾನೇ? ನಾನು ರಾಜರ್ಷಿಗಳ ಕುಲಸಂಜಾತ. ಪಟ್ಟಾಭಿಷಿಕ್ತ ಸ್ವತಂತ್ರ ಮಹಾರಾಜ. ಅಕ್ಷೋಹಿಣಿಪತಿಯೂ ದಕ್ಷ ಸೇನಾಧಿಪತಿ ಯೋಗ್ಯನೂ ಆಗಿದ್ದು, ಮಹಾರಥನೆಂಬ ಖ್ಯಾತಿಯೂ ನನಗೆ ಇದೆ. ಮಲ್ಲಯುದ್ಧ, ಗದಾಯುದ್ಧ, ಧನುರ್ವೇದ, ಕತ್ತಿವರಸೆ ಹೀಗೆ ಎಲ್ಲಾ ರಣತಂತ್ರ ವಿದ್ಯಾ ಸಂಪನ್ನನೂ ಆಗಿರುವೆ. ರಥಕಲ್ಪ, ಅಶ್ವ ಹೃದಯ ಕಲಿತಿರುವ ಸಾರಥ್ಯ ಮಾತ್ರ ನನ್ನ ವ್ಯಾಪ್ತಿಯಲ್ಲ ಎಂದು ಮೊದಲು ತಿಳಿದುಕೊಳ್ಳಬೇಕು. ನನ್ನ ರಥದ ಸೂತ ವೃತ್ತಿ ಮಾಡಬೇಕಾದ ವರ್ಣೀಯ ಈ ಕರ್ಣ. ಮಾತ್ರವಲ್ಲ ಆತ ನಿನ್ನ ಅಧೀನನಾಗಿರುವ ಅಧಿರಾಜ. ನಿನ್ನಿಂದ ದಾನ ರೂಪದಲ್ಲಿ ಪಡೆದ ಅಂಗದೇಶದ ಸಾಮಂತರಾಜ ಸದೃಶನಾದವನ ರಥದ ಸೂತ ನಾನಾಗಬೇಕೇ? ಮಾದ್ರದೇಶದ ಸಾಮ್ರಾಜ್ಯಕ್ಕೆ ಮಹಾರಾಜನಾದ ನನ್ನ ಯೋಗ್ಯತೆ ಏನು? ಆ ಕರ್ಣನ ಯೋಗ್ಯತೆ ಎಷ್ಟು ಎಂಬ ಕನಿಷ್ಟ ಕಲ್ಪನೆಯೂ ಇಲ್ಲದೆ ನೀನು ವ್ಯವಹರಿಸುತ್ತಿರುವೆ. ನನಗೂ ಸ್ವ ಪ್ರತಿಷ್ಟೆಯಿದೆ. ಪ್ರತಿಷ್ಟಿತ ವ್ಯಕ್ತಿಯಾಗಿ ಶತ್ರು ಸೈನ್ಯದ ಸಂಹಾರ ಸಮರ್ಥನಾದ ನಾನು ನಿನ್ನ ಸ್ವಾರ್ಥಕ್ಕೆ ಬಲಿಯಾಗಿ ಅಪಮಾನಿತಲಾಗಲು ಸಿದ್ಧನಿಲ್ಲ. ಒಬ್ಬ ಸೂತನ ಮಗನ ರಥದ ಸಾರಥಿಯಾಗಲಾರೆ. ಅಸಾಧ್ಯವಾದುದನ್ನು ನನ್ನಿಂದ ಯಾವ ಕಾಲಕ್ಕೂ ಅಪೇಕ್ಷಿಸಬೇಡ. ಮಾತ್ರವಲ್ಲ ಕುರು ಸೇನೆಗೆ ಸೇನಾಪತಿಯಾಗುವ ಸರ್ವ ಸಾಮರ್ಥ್ಯವಿರುವ ನನ್ನನ್ನು ಈ ರೀತಿ ಅವಮಾನಿಸಿ ನನ್ನ ತೇಜೋವಧೆಗೈದ ಕಾರಣಕ್ಕಾಗಿ ಇಲ್ಲಿಂದ ಮುಂದೆ ನಿನ್ನ ಪಕ್ಷಪಾತಿಯಾಗಿ ಯುದ್ಧವನ್ನೂ ಮಾಡಲಾರೆ. ನನ್ನ ಸೇನಾಸಹಿತನಾಗಿ ಮಾದ್ರಾದೇಶಕ್ಕೆ ಹೊರಡಲು ಸಿದ್ಧನಾಗುತ್ತೇನೆ” ಎಂದು ನುಡಿದು ತನ್ನ ಆಸನದಿಂದೆದ್ದು ಶಲ್ಯ ಸಭಾತ್ಯಾಗ ಮಾಡಿ ಸರಸರನೆ ಹೊರಟನು.

ಎದ್ದು ಓಡಿ ಬಂದ ಕೌರವ ಶಲ್ಯನನ್ನು ಓಲೈಸಿ ಸಂತೈಸತೊಡಗಿದ್ದಾನೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page