ಭಾಗ – 324
ಭರತೇಶ ಶೆಟ್ಟಿ, ಎಕ್ಕಾರ್

ಆಚಾರ್ಯ ದ್ರೋಣ ಬಳಿ ಬಂದು “ನೀವು ನಮಗೆ ಶಸ್ತ್ರ – ಶಾಸ್ತ್ರ ಜ್ಞಾನವಿತ್ತು ಬಾಳು ಬೆಳಗಿದ ಗುರುಗಳು. ನಾವೇನು ಮಾಡಬೇಕು ಈಗ ? ಅಪ್ಪಣೆ ನೀಡಿ ಗುರು ದೇವಾ! ಇಂದು ನೀವಿತ್ತ ವಿದ್ಯೆಯನ್ನು ನಿಮ್ಮ ಮೇಲೆ ಪ್ರಯೋಗ ಮಾಡಲು ಮುಂದಾದರೆ ಮರ್ಕಟ ಬುದ್ಧಿ ನಮ್ಮದಾಗುತ್ತದೆ. ನಿಮ್ಮಂತಹ ಪೂಜನೀಯರನ್ನು ವಿರೋಧಿಸಿದರೆ ನಮಗದು ಪಾತಕವಲ್ಲದೆ ಸಾಧಕವೇನು ಪ್ರಾಪ್ತವಾಗಲಿದೆ?” ಎಂದು ಕಂಬಣಿಗರೆಯುತ್ತಾ ಯುಧಿಷ್ಠಿರ ಕೇಳಿದನು.
“ಅಯ್ಯಾ ಧರ್ಮಾತ್ಮಾ! ಬ್ರಾಹ್ಮಣ ವರ್ಣೀಯನಾದ ನನಗೆ ಶಸ್ತ್ರ ವಿದ್ಯಾರ್ಜನೆ ಮಾಡಿ, ಅದನ್ನು ಅಧ್ಯಾಪನ ವೃತ್ತಿಗಾಗಿ ವಿನಿಯೋಗಿಸುವುದಕ್ಕೆ ಮಾತ್ರ ಬಳಸಬೇಕಾದ ನಿರ್ಬಂಧವಿದೆ. ಅನಿವಾರ್ಯ ಸಂದರ್ಭದಲ್ಲಿ ರಕ್ಷಣೆಗಾಗಿ ಆಯುಧ ಧರಿಸಬಹುದು ಹೊರತು ಈ ರೀತಿಯಲ್ಲಿ ಯುದ್ದದಲ್ಲಿ ಭಾಗಿಯಾಗುವುದು ನನ್ನ ಜಾತ ಕುಲಕ್ಕೆ ಅಧರ್ಮವೇ ಹೌದು. ತಿಳಿದೂ ಧರ್ಮ ಸಮ್ಮತವಲ್ಲದ ಪ್ರಕ್ರಿಯೆಯಲ್ಲಿ ಬೋಧಿಸಿದ ನಾನು ಸ್ವಯಂ ತೊಡಗುವಂತಾಗಿದೆ. ಶಸ್ತ್ರಾಭ್ಯಾಸದ ಅಮಿತ ಅಕಾಂಕ್ಷೆಗಳನ್ನು ಹೊಂದಿದ ವಿದ್ಯಾರ್ಥಿಯಾಗಿ ಬಹಳಷ್ಟನ್ನು ಕಲಿತುಕೊಂಡೆ. ಆಗ ಅದು ನನ್ನ ಯೋಗ್ಯತೆ ಎಂಬ ಸಮಾಧಾನ ನೀಡಿತ್ತಾದರೂ, ಈ ದಿನ ನನಗದು ದೌರ್ಭಾಗ್ಯವಾಗಿ ಗೋಚರಿಸುತ್ತಿದೆ. ಯಾಕೆಂದರೆ ಆ ಶ್ರೇಷ್ಟ ವಿದ್ಯೆಗಳು ಇಂದು ಪ್ರಯೋಗಿಸಲ್ಪಡುವ ಕಾರಣ ತೃಪ್ತಿದಾಯಕವಾಗಿಲ್ಲ. ಇರಲಿ ಬಹಳ ಅಧರ್ಮಗಳ ನಡುವೆ ನನ್ನದೂ ಒಂದು ಸೇರಿದಂತಾಯಿತು. ನಾನೂ ಅಧರ್ಮಿಯಾಗಲಿರುವೆ. ನಾನು ಕಲಿತ ವಿದ್ಯೆಯನ್ನು ದಾನಮಾಡಿ ನಿಮ್ಮಂತಹ ಶ್ರೇಷ್ಟ ಶಿಷ್ಯರನ್ನು ಸಂಪಾದಿಸಿದ ಸಂತೃಪ್ತಿ ನನಗಿತ್ತು. ಗುರುದಕ್ಷಿಣೆಯಾಗಿ ನನ್ನನ್ನು ನಿಂದಿಸಿದ ದ್ರುಪದನನ್ನು ಶಿಷ್ಯರಾದ ನಿಮ್ಮನ್ನು ಕಳುಹಿ ಸೋಲಿಸಿದೆ. ಅಲ್ಲಿಗೆ ಆ ಪ್ರಕರಣ ಮುಗಿಯಬೇಕಿತ್ತು. ಆ ಸಮಯದಲ್ಲಿ ನಾನೂ ಸನ್ಯಾಸ ಸ್ವೀಕರಿಸಿ ತಪೋವನ ಸೇರಿದ್ದರೆ ಒಳ್ಳೆಯದಿತ್ತು. ದ್ರುಪದ ಮಾತ್ರ ಬಿಡಲಿಲ್ಲ, ಸೇಡು ತೀರಿಸಲು ಯಜ್ಞಮುಖದಿಂದ ನನ್ನ ವಧೆಗಾಗಿ ಸಂಕಲ್ಪ ಮಾಡಿ ಪುತ್ರ ದೃಷ್ಟದ್ಯುಮ್ನನನ್ನು ಪಡೆದಿದ್ದಾನೆ. ದೇವತಾನುಗ್ರಹದ ಆ ದ್ರುಪದ ಪುತ್ರ ನನ್ನನ್ನು ನಿಗ್ರಹಿಸಿ, ದೇವತೆಗಳ ಅನುಗ್ರಹವನ್ನು ಸತ್ಯಗೊಳಿಸಬೇಕು. ಅದಕ್ಕೆ ಪೂರಕನಾಗಿ ನಾನೂ ವ್ಯವಹರಿಸಬೇಕೆಂಬುದು ನಿಯತಿಯ ನಿಯಮವಿತ್ತೋ ಏನೊ? ಹಾಗಾಗಿ ನಾನಿಂದು ಈ ರಣಕ್ಷೇತ್ರದಲ್ಲಿದ್ದೇನೆ. ನನ್ನ ಶಿಷ್ಯರು ಹಸ್ತಿನಾವತಿಯ ಅತ್ಯುತ್ಕೃಷ್ಟ ರಾಜರಾಗಿ, ಲೋಕೋತ್ತರ ವೀರ ಪುರುಷರಾಗಿ ಮೆರೆಯುವುದನ್ನು ಕಾಣಬೇಕೆಂಬ ಅಪೇಕ್ಷೆಯಿಂದ ಚಂದ್ರವಂಶದ ರಾಜಾಶ್ರಯದಲ್ಲಿ ಉಳಿದುಕೊಂಡೆ. ನನ್ನ ವಿಶ್ವಾಸ – ಬಯಕೆ ಎರಡೂ ಕೈಗೂಡದೆ, ಶಿಷ್ಯರಿಂದ ವ್ಯತಿರಿಕ್ತವಾಗಿ ವಿಮುಖ ಪಥದಲ್ಲಿ ಸಾಗಿ ಸರ್ವನಾಶಕ್ಕೆ ನಾಂದಿಯಾಗಿದೆ. ಈಗ ಧೃತರಾಷ್ಟ್ರನ ಅನ್ನದ ಋಣಿಯಾಗಿ, ಅದನ್ನು ತೀರಿಸಲು ರಣಾಂಗಣದವರೆಗೂ ಬರುವಂತಾಗಿದೆ. ನಿಮ್ಮಂತೆಯೆ ಶಿಷ್ಯನಾಗಿದ್ದು, ನನ್ನಿಂದಲೆ ಶಸ್ತ್ರ ಶಾಸ್ತ್ರಾಭ್ಯಾಸ ಪ್ರವೀಣನಾದ ದೃಷ್ಟದ್ಯುಮ್ನ ನನ್ನ ಸಂಹಾರ ಮಾಡುವ ಕ್ಷಣದವರೆಗೆ ನಾನಿರಬೇಕಲ್ಲವೆ? ನಂದಿ ಹೋಗುವ ಜ್ಯೋತಿ ಅಂತಿಮ ಕ್ಷಣದಲ್ಲೊಮ್ಮೆ ಪ್ರಜ್ವಲಿಸಿ ಆರಿ ಹೋಗುವಂತೆ ಹೋರಾಡುವುದಕ್ಕೆ ಮಾತ್ರ ಬಾಕಿಯಿದೆ. ಈ ನಿಮ್ಮ ಗುರುವಿಗೆ ವಯಸ್ಸೂ ಬಹಳ ಆಗಿದೆ – ಅವಸಾನ ಕಾಲವೂ ಸಮೀಪಿಸಿದೆ. ಅದಕ್ಕೆ ತಕ್ಕಂತಹ ವ್ಯವಸ್ಥೆಯನ್ನೂ ದುರ್ಯೋಧನ ಸಿದ್ಧಪಡಿಸಿದ್ದಾನೆ. ಭೀಷ್ಮಾಚಾರ್ಯರ ಜೊತೆಯಲ್ಲಿ ವಿದುರಾದಿ ಆಸ್ಥಾನ ಪ್ರಮುಖರೆಲ್ಲ ಸೇರಿ ನಮಗೆ ಸಾಧ್ಯವಿರುವಷ್ಟು ಬುದ್ಧಿ ಹೇಳುವ ಪ್ರಯತ್ನ ಮಾಡಿದೆವು. ಆದರೇನು ಪ್ರಯೋಜನ – ಯುದ್ಧವೆ ನಿರ್ಣಯಿಸಲ್ಪಟ್ಟಿತು. ನೀನು ಖಿನ್ನ ಮನಸ್ಕನಾಗುವ ಅಗತ್ಯವಿಲ್ಲ. ನನ್ನ ಅಂತ್ಯ ಹೇಗಾಗಬೇಕೆಂಬ ನಿರ್ಣಯವಿದೆಯೊ, ಅದು ಮೊದಲೆ ನಿರ್ಧರಿಸಲ್ಪಟ್ಟಿದೆ. ಈಗ ಸೂಕ್ತ ವೇದಿಕೆ ಒದಗಿದೆ. ಆಗಬೇಕಾದದ್ದು ಎಲ್ಲವೂ ಆಗುತ್ತಾ ಹೋಗುತ್ತಿರುತ್ತದೆ. ನಾವೆಲ್ಲರೂ ನಮ್ಮ ಕರ್ಮವನ್ನು ನಿಷ್ಟೆಯಿಂದ ಮಾಡುವುದಷ್ಟೆ ಉಳಿದಿರುವುದು. ವಾಸುದೇವ ಕೃಷ್ಣನ ಶ್ರೀ ರಕ್ಷೆ ನನ್ನ ಪ್ರಿಯ ಶಿಷ್ಯರು ಪಾಂಡವರಾದ ನಿಮಗಿದೆ. ನೀನೇನು ಮಾಡಿದ್ದರೂ ಅದು ಧರ್ಮವೇ ಆಗಿದೆ. ಈಗಲೂ ನಿನ್ನ ಧರ್ಮವನ್ನಷ್ಟೆ ನೀನು ಮಾಡು. ಶ್ರೇಯಸ್ಸಾಗಲಿ ನಿಮಗೆ” ಎಂದು ಹರಸಿ ಕಳುಹಿಸಿದರು ಗುರು ದ್ರೋಣಾಚಾರ್ಯ.
ಮುಂದುವರಿದು ಧರ್ಮರಾಯ ಕುರುಸೇನೆಯ ಮಧ್ಯ ಭಾಗದತ್ತ ಸಾಗುತ್ತಾ, ಗುರು ಕೃಪಾಚಾರ್ಯ, ಮಾವ ಶಲ್ಯಾದಿಗಳಿಗೂ ವಂದಿಸಿ ಆಶೀರ್ವಾದ ಬೇಡಿದನು. ಈ ಸಮಯವನ್ನು ಬಳಸಿ ಶಕುನಿಯ ತಂತ್ರದಂತೆ ನಿರಾಯುಧನಾದ ಧರ್ಮರಾಯನನ್ನು ಸೆರೆ ಹಿಡಿಯುವ ತಂತ್ರ ರೂಪಿಸಿ ಅದಕ್ಕೆ ಮುಂದಾದರು. ಧರ್ಮರಾಯ ಬಂಧಿತನಾದರೆ ಯುದ್ಧ ಕೌರವರು ಗೆದ್ದಂತೆ. ಕುತ್ಸಿತ ಬುದ್ಧಿಯ ಕುತಂತ್ರಿ ನರಿಗಳ ದುರಾಲೋಚನೆ ಮತ್ತು ಆ ಕುರಿತಾದ ನಡೆಯನ್ನು ಭೀಷ್ಮರು ಗಮನಿಸುತ್ತಿದ್ದರು. ಅಂತಹವರ ಚಲನವಲನ – ಸಂಜ್ಞೆಗಳ ಸಂವಹನದಿಂದಲೆ ಏನಾಗುತ್ತಿದೆ ಎಂದು ಅರ್ಥೈಸಿಕೊಂಡ ಭೀಷ್ಮಾಚಾರ್ಯರು “ಕುರುಕ್ಷೇತ್ರದಲ್ಲಿ ನಡೆಯಲಿರುವುದು ಧರ್ಮಯುದ್ದ. ಯಾರೇ ಆಗಲಿ ಅತಿಕ್ರಮಿಸಿ ಅಧರ್ಮಕ್ಕೆ ಮುಂದಾದರೆ ನನ್ನಿಂದ ಅತ್ಯುಗ್ರವಾಗಿ ದಂಡಿಸಲ್ಪಡುತ್ತೀರಿ. ನಾನಿರುವವರೆಗೆ ಅಧರ್ಮಕ್ಕೆ ಅವಕಾಶವೀಯಲಾರೆ” ಎಂದು ಗುಡುಗಿದರು.
ಧರ್ಮರಾಯ ಹಿರಿಯರ ಆಶೀರ್ವಾದ ಪಡೆದು, ಭೀಷ್ಮರ ಆದೇಶದ ರಕ್ಷಣೆಯ ಬಲದಿಂದ ನಿರ್ಭಯನಾಗಿ ಕುರುಸೇನೆಯ ಮಧ್ಯಭಾಗದಿಂದ ಸುರಕ್ಷಿತವಾಗಿ ಹೊರ ಬಂದನು. ತನ್ನ ರಥವೇರಿ ಸನ್ನದ್ಧನಾಗಿ ಆಯುಧಧಾರಣೆ ಮಾಡಿದನು. ರಥವನ್ನು ಪಾಂಡವ ಸೇನೆಯ ಮುಂಭಾಗದಲ್ಲಿ ತಂದು ನಿಲ್ಲಿಸಿ, ಎರಡೂ ಕರಗಳನ್ನೆತ್ತಿ ಅಭಯ ಮುದ್ರೆಯೊಂದಿಗೆ “ಕೌರವ ಸೇನೆಯಲ್ಲಿರುವ ಯಾರಿಗಾದರೂ ಧರ್ಮದ ಬಗ್ಗೆ ನಿಷ್ಠೆ, ಅಭಿಮಾನ, ಗೌರವ, ಸದ್ಭಾವಗಳು ಏನಾದರೂ ಇದ್ದರೆ, ಶ್ರೀ ಕೃಷ್ಣನ ಬಗ್ಗೆ ಭಕ್ತಿಭಾವವಿದ್ದರೆ, ಪಾಂಡವ ಪಕ್ಷ ಸೇರಬೇಕೆಂಬ ಸ್ವ ಇಚ್ಚೆ ಇದ್ದರೆ ಮುಕ್ತ ಅವಕಾಶವಿದೆ. ಅಂತಹ ನೀವು ನಮ್ಮ ಪಕ್ಷಕ್ಕೆ ಬರಬಹುದು. ಹಾಗೆ ಬರುವವರಿಗೆ ಸಂಪೂರ್ಣ ರಕ್ಷಣೆ ಭದ್ರತೆ ಒದಗಿಸುತ್ತೇವೆ” ಎಂದು ಘೋಷಣೆ ಕೂಗಿದನು. ಆ ಸಂಧರ್ಭದಲ್ಲಿ ಕೌರವರಿಗೆ ಸೋದರ ಅಂದರೆ ಧೃತರಾಷ್ಟ್ರನಿಗೆ ದಾಸಿಯಲ್ಲಿ ಹುಟ್ಟಿದ ಪುತ್ರನಾದ ‘ಯುಯುತ್ಸು’ ಎಂಬವನು ಮುಂದೆ ಬಂದು “ನನ್ನ ಮನಸ್ಸು ಧರ್ಮವನ್ನು ಮೆಚ್ಚಿ ಅನುಸರಿಸುತ್ತದೆ. ನನಗೆ ಅಧರ್ಮ ಪಥದಲ್ಲಿ ಸಾಗುವ ಮನಸ್ಸಾಗದು” ಎಂದು ಹೇಳಿ ಯುಧಿಷ್ಟಿರನಿಗೆ ನಮಿಸಿ ಪಾಂಡವ ಪಕ್ಷ ಸೇರಿದನು.
ಇತ್ತ ಪಾಂಡವ ಪಕ್ಷದಲ್ಲಿ ಕೃಷ್ಣಾರ್ಜುನರ ರಥ ಆಕರ್ಷಿತವಾಗಿ ಕಂಗೊಳಿಸುತ್ತಾ ಮುಂದಕ್ಕೆ ಮಂದಗತಿಯಲ್ಲಿ ಚಲಿಸುತ್ತಾ ಬರುತ್ತಿದೆ…
ಮುಂದುವರಿಯುವುದು…








































