ಭಾಗ 270
ಭರತೇಶ ಶೆಟ್ಟಿ, ಎಕ್ಕಾರ್

ಧರ್ಮರಾಯನ ಮಾತು ಆಲಿಸುತ್ತಾ ವಿರಾಟರಾಜನಿಗೆ ಪಾಂಡವರು ಎಂತಹ ಉನ್ನತ ಯೋಗ್ಯತಾವಂತರು ಎಂದು ಅರ್ಥವಾಯಿತು. “ಚಕ್ರವರ್ತಿ ಧರ್ಮರಾಯಾ, ನೀವು ಧರ್ಮಪಾಲಕರು, ಪುಣ್ಯವಂತರು, ಭಾಗ್ಯಶಾಲಿಗಳೂ ಆಗಿರುವ ಕಾರಣದಿಂದಲೆ ಅಜ್ಞಾತವಾಸವನ್ನು ಯಾರಿಗೂ ಜ್ಞಾತವಾಗದಂತೆ ಪೂರ್ಣಗೊಳಿಸಿದ್ದೀರಿ. ಈಗ ನಿಮ್ಮ ಕಷ್ಟಕಾಲ ಮುಗಿದಾಗಿದೆ. ದಕ್ಷಿಣ ದಿಕ್ಕಿನಲ್ಲಿ ನಾನು ಭೀಮಸೇನನಿಂದಾಗಿ ಗೆದ್ದೆ. ಉತ್ತರದಿಕ್ಕಿನಲ್ಲಿ ನನ್ನ ಮಗ ಅರ್ಜುನನಿಂದ ರಕ್ಷಿತನಾಗಿ ಮರಳಿ ಬಂದಿದ್ದಾನೆ. ಮತ್ಸ್ಯದೇಶದಲ್ಲಿ ನೀನೆ ಸಾಮ್ರಾಟನಾಗಿ ಹೇಗೆ ಬೇಕೊ ಹಾಗಿರಬಹುದು. ಈ ವರೆಗೆ ನೀವು ನಮಗರಿಯದಂತೆ ಸೇವೆ ಮಾಡಿದ್ದೀರಿ. ಆ ಋಣ ತೀರಿಸಲಾಗದ್ದು. ಅದಕ್ಕೆ ಪ್ರತಿಯಾಗಿ ಇಂದಿನಿಂದ ನಿಮ್ಮ ಸೇವೆ ಮಾಡುವ ಭಾಗ್ಯ ನಮಗೆ ಕರುಣಿಸಬೇಕು. ಇನ್ನೂ ಒಂದು ಮಹದಾಸೆಯಿದೆ, ನನ್ನ ಮಗಳಾದ ಉತ್ತರೆಯನ್ನು ನಿಮ್ಮೆಲ್ಲರ ಸಮ್ಮತಿಯಿದ್ದರೆ ಅರ್ಜುನನಿಗಿತ್ತು ವಿವಾಹ ಮಾಡಿಸುವ ಆಸೆಯಿದೆ. ಮಹಾತ್ಮರಾದ ನಿಮ್ಮೊಂದಿಗೆ ಸಂಬಂಧ ಬೆಳೆಸುವ ಯೋಗವನ್ನು ನಮಗೆ ಒದಗಿಸಿಕೊಡಬೇಕಾಗಿ ಬೇಡುತ್ತಿದ್ದೇನೆ” ಎಂದನು.
ಧರ್ಮರಾಯ ಅರ್ಜುನನತ್ತ ತಿರುಗಿ ಆತನ ಅಭಿಪ್ರಾಯ ಏನೆಂದು ಮುಖಭಾವದಲ್ಲಿಯೆ ಪ್ರಶ್ನಿಸಿದನು. ವಿರಾಟನನ್ನು ಉದ್ದೇಶಿಸಿ ಅರ್ಜುನ “ಮಹಾರಾಜಾ, ನನಗೆ ಹೆಣ್ಣು ಮಕ್ಕಳಿಲ್ಲ. ಉತ್ತರೆಯನ್ನು ನನ್ನ ಮಗಳೆಂದು ಭಾವಿಸಿ ತಂದೆಯ ಸ್ಥಾನದಲ್ಲಿದ್ದು ಆಕೆಯ ಜೊತೆ ಸಮಯ ಕಳೆದಿದ್ದೇನೆ. ಆಕೆಗೂ ನಾನು ಗುರುವಾಗಿಯೂ, ಬಂಧುವೂ ಆಗಿ ಕ್ಷೇಮಕರ ಸ್ಥಿತಿಯಿದ್ದ ಕಾರಣ ಎಷ್ಟೋ ಬಾರಿ ಏಕಾಂತದಲ್ಲಿ ನನ್ನ ಜೊತೆಗಿದ್ದು ಶಿಷ್ಯೆಯಾಗಿ ವಿದ್ಯೆ ಕಲಿತುಕೊಂಡಿದ್ದಾಳೆ. ಇಂತಹ ಅನನ್ಯ ಸಂಬಂಧವನ್ನು ಬದಲಾಯಿಸಲಾಗದು. ಹಾಗಾಗಿ ನನ್ನ ಮಗ ಅಭಿಮನ್ಯುವಿಗೆ ಈಕೆಯನ್ನು ವಿವಾಹ ಮಾಡುವ ಮೂಲಕ ನನ್ನ ಸೊಸೆಯಾಗಿ ಸ್ವೀಕರಿಸುವೆ. ಅಭಿಮನ್ಯು ನನಗೆ ಪುತ್ರನೂ, ವಾಸುದೇವ ಕೃಷ್ಣನಿಗೆ ಅಳಿಯನೂ ಹೌದು. ಆತ ನಮ್ಮಿಬ್ಬರಿಂದಲೂ ಶಸ್ತ್ರ – ಶಾಸ್ತ್ರ ವಿದ್ಯೆಗಳನ್ನು ಕಲಿತು ಪ್ರಾವಿಣ್ಯತೆಯನ್ನು ಹೊಂದಿದ್ದಾನೆ. ಉತ್ತರೆ ಸೊಸೆಯಾದರೂ ನನಗೆ ಪುತ್ರಿಯಾಗಿಯೆ ಬೆಳೆಯಲಿದ್ದಾಳೆ” ಎಂದನು.
ವಿರಾಟನಿಗೆ ಅತ್ಯಾನಂದವಾಯಿತು “ಧರ್ಮರಾಯಾ! ನಿಮ್ಮಂತಹ ಧರ್ಮಾತ್ಮರಲ್ಲಿ ಮಾತ್ರ ಇಂತಹ ಸದ್ಗುಣ ಇರಲು ಸಾಧ್ಯ. ಆಗಲಿ ಅರ್ಜುನ ನಿಮ್ಮ ಅಪೇಕ್ಷೆಯಂತೆಯೆ ನಡೆಯಲಿ. ಶುಭಕಾರ್ಯವನ್ನು ಆದಷ್ಟು ಶೀಘ್ರವಾಗಿ ನೆರವೇರಿಸಿ ನಮ್ಮನ್ನು ಉದ್ದರಿಸಬೇಕು” ಎಂದು ವಿನಂತಿ ಮಾಡಿದನು.
ಅರ್ಜುನ ವಿರಾಟರ ಸಂವಾದ ಕೇಳಿ ಧರ್ಮಜನಿಗೂ, ದ್ರೌಪದಿಗೂ, ಸಂತಸವಾಯಿತು. ವಿರಾಟನ ವಿನಂತಿಯಂತೆ ಅಲ್ಲಿಯೆ ಉಳಿದುಕೊಳ್ಳಲು ಧರ್ಮರಾಯ ಸಮ್ಮತಿಸಲಿಲ್ಲ. “ಅನಿವಾರ್ಯತೆಗಾಗಿ ಇಲ್ಲಿದ್ದೆವು, ಇನ್ನೂ ಇಲ್ಲಿ ವಾಸ್ತವ್ಯ ಮುಂದುವರಿಸುವುದು ಸರಿಯಲ್ಲ” ಎಂಬ ವಿಚಾರ ತಿಳಿಸಿದನು.
ಕೂಡಲೆ ಉತ್ತರಕುಮಾರ “ಉಪಪ್ಲಾವ್ಯ” ಎಂಬ ಮತ್ಸ್ಯ ದೇಶದ ಭಾಗವೆ ಆಗಿರುವ ಪಟ್ಟಣದಲ್ಲಿ ಪಾಂಡವರ ವಾಸಕ್ಕೆ ಅರಮನೆ, ಹಾಗು ಸಕಲ ವ್ಯವಸ್ಥೆಗಳನ್ನೂ ಮಾಡಿಸಿ, ತಾನು ಮುಂದಾಗಿ ಪಾಂಡವರನ್ನು ಅಲ್ಲಿಗೆ ಕರೆತಂದನು.
ಪಾಂಡವರು ಉಪಪ್ಲಾವ್ಯದಲ್ಲಿರುವ ಸುದ್ಧಿ ತಿಳಿದ ಕಾಶೀರಾಜ, ಪಾಂಚಾಲಾಧಿಪ ದ್ರುಪದ, ದೃಷ್ಟದ್ಯುಮ್ನ, ಶೈಬ್ಯ ಮುಂತಾದವರೆಲ್ಲಾ ತಮ್ಮ ಸೈನ್ಯಗಳೊಂದಿಗೆ ಬಂದು ಪಾಂಡವರನ್ನು ಕಂಡು ಸಂತಸಗೊಂಡರು. ಇತ್ತ ದ್ವಾರಕೆಯಿಂದ ಇಂದ್ರಸೇನ ಮತ್ತು, ಸಾರಥಿಗಳು ಸೇರಿ ಪಾಂಡವರ ರಥ ವಾಹನಗಳನ್ನೆಲ್ಲಾ ಉಪಪ್ಲಾವ್ಯಕ್ಕೆ ತಂದರು. ಪೂಜ್ಯರಾದ ಧೌಮ್ಯರು ತಮ್ಮ ಶಿಷ್ಯ ವೃಂದದೊಂದಿಗೆ ಮತ್ತೆ ಬಂದು ಪಾಂಡವರನ್ನು ಆಶೀರ್ವದಿಸಿ ಜೊತೆಯಾದರು. ಮತ್ಸ್ಯದೇಶದಿಂದ ವಿರಾಟನೂ ಸಪರಿವಾರ ಸಮೇತನಾಗಿ ಉತ್ತರೆಯ ಜೊತೆ ಬಂದನು. ಶ್ರೀ ಕೃಷ್ಣ, ಬಲರಾಮ, ಕೃತವರ್ಮ, ಸಾತ್ಯಕಿ, ಅಕ್ರೂರ, ಸಾಂಬ ಮುಂತಾಭತೀರ್ಮಾನವಾಗದೆಮತ್ತುಮತ್ತು ಸುಭದ್ರೆಯೂ ಉಪಪ್ಲಾವ್ಯಕ್ಕೆ ಆಗಮಿಸಿದರು. ದ್ವಾರಕೆಯಿಂದ ಇವರೆಲ್ಲಾ ಬರುವಾಗ ಹತ್ತು ಸಹಸ್ರ ಆನೆ, ಒಂದು ಲಕ್ಷ ಕುದುರೆ, ಒಂದು ಅರ್ಬುದ ರಥಗಳು, ಪದಾತಿ ಬಲ ಎಲ್ಲವೂ ಜೊತೆಯಲ್ಲಿ ತರಲ್ಪಟ್ಟಿತ್ತು. ಶ್ರೀ ಕೃಷ್ಣ ಪಾಂಡವರೆಲ್ಲರಿಗೂ ವಸ್ತ್ರ, ರತ್ನಾಭರಣ, ಪೋಷಾಕುಗಳನ್ನೆಲ್ಲ ಉಡುಗೊರೆಯಾಗಿ ನೀಡಿದನು.
ವಿವಿಧ ವಾದ್ಯ – ವಾದನಗಳು, ನೃತ್ಯ ವೈವಿಧ್ಯಗಳು ಮೇಳೈಸಿ ‘ಅಭಿಮನ್ಯು – ಉತ್ತರೆ’ಯರ ವಿವಾಹ ಮಹಾ ಉತ್ಸವದಂತೆ ಜರಗಿತು. ಬಹುವಿಧ, ಪೇಯ, ಖಾದ್ಯ, ಭಕ್ಷ್ಯ, ಭೋಜ್ಯಗಳಿಂದೊಡಗೂಡಿದ ಉತ್ಕೃಷ್ಟ ಔತಣ ಸತ್ಕಾರವೂ ನಡೆಯಿತು.
ಈ ಅದ್ಧೂರಿಯ ವಿವಾಹ ನಡೆದರೂ ಪಾಂಡವರ ಮನದಲ್ಲಿ ಒಂದು ಪಶ್ಚಾತ್ತಾಪವೂ, ಬೇಸರವೂ ಹಾಗೇ ಉಳಿದಿತ್ತು. ಕಾರಣ ಮೊಮ್ಮಗನ ಮದುವೆ ನೋಡುವ ಆಸೆ ಅಜ್ಜಿ ಕುಂತಿ ಮಾತೆಗಿತ್ತು. ಆದರೆ
ರಾಜಮಾತೆ ಕುಂತಿ ಹಸ್ತಿನಾವತಿಯ ವಿದುರನ ಮನೆಯಲ್ಲಿದ್ದಾರೆ. ಅಲ್ಲಿಗೆ ಸುದ್ದಿ ಕಳುಹಿಸಿದರೆ ದೊಡ್ಡಪ್ಪ ಧೃತರಾಷ್ಟ್ರ, ಪಿತಾಮಹ ಭೀಷ್ಮಾಚಾರ್ಯ, ಕೌರವರೆಲ್ಲರನ್ನೂ ಆಮಂತ್ರಿಸ ಬೇಕು. ಈಗ ವ್ಯಾಜ್ಯ ತೀರ್ಮಾನವಾಗದೆ ಇರುವ ಸಮಯದಲ್ಲಿ, ಗೋಗ್ರಹಣ ಕಾರಣದಿಂದ ಸಮರವೂ ನಡೆದು ಸೋತ ಸಿಟ್ಟು ಅವರ ಮನದಿಂದ ಇನ್ನೂ ಶಾಂತವಾಗಿರದು. ಹಾಗಾಗಿ ಅವರನ್ನು ಆಮಂತ್ರಿಸಿದರೆ ಮತ್ತೆ ಆಪತ್ತನ್ನು ನಿಮಂತ್ರಿಸಿಕೊಂಡಂತೆ ಆದೀತೆಂದು ಅಲ್ಲಿಗೆ ಸುದ್ಧಿ ಕಳುಹಿಸದೆ ಉಳಿಯಬೇಕಾಯ್ತು. ಪರಿಣಾಮ ಮಾತೆ ಕುಂತಿ ಈ ಕಲ್ಯಾಣ ಕಾರ್ಯದಿಂದ ಹೊರಗುಳಿಯುವಂತಾಯ್ತು. ಶುಭಕಾರ್ಯ ನಿರ್ವಿಘ್ನವಾಗಿ ನೆರವೇರಿದ ಸಂತೃಪ್ತಿಯೊಳಗೆ ಕುಂತಿ ಮಾತೆಯ ನೆನಪು ಪಾಂಡವರ ಮನದಲ್ಲಿತ್ತು.
ದ್ಯೂತ ನಡೆದ ದಿನದಿಂದ ಹದಿಮೂರು ವರ್ಷ ಕಾಲ ವನವಾಸ – ಗುಪ್ತವಾಸವನ್ನು ಭಗವದ್ ಅನುಗ್ರಹದಿಂದ ಪೂರೈಸಿ ಈಗ ಪಾರ್ಥ ಪುತ್ರನ ಕಲ್ಯಾಣದೊಂದಿಗೆ ಶುಭಪ್ರದವಾಗಿದೆ. ಉಪಪ್ಲಾವ್ಯದಲ್ಲಿ ಬಂಧು ಬಾಂಧವರು, ಗುರು ಧೌಮ್ಯರನ್ನೂ ಸೇರಿಸಿ ಶ್ರೀಕೃಷ್ಣನ ಉಪಸ್ಥಿತಿಯಲ್ಲಿ ಮುಂದಣ ಭವಿಷ್ಯದ ನಡೆ ಹೇಗೆ ಎಂಬ ಸಮಾಲೋಚನೆ ಮತ್ತು ನಿರೀಕ್ಷೆಯಲ್ಲಿದ್ದಾರೆ.
ಮುಂದುವರಿಯುವುದು…



















