ಭಾಗ – 192
ಭರತೇಶ್ ಎಕ್ಕಾರ್

ಶಬರ ರೂಪದ ಶಂಕರನಿಗೂ ತಪಸ್ವಿ ಅರ್ಜುನನಿಗೂ ಯುದ್ದ ಆರಂಭವಾಗುತ್ತಿದೆ. ಸತ್ತು ಬಿದ್ದ ಹಂದಿಯಾದ ರಕ್ಕಸ ಮೂಕಾಸುರನ ಹೆಣ ಕೇವಲ ನೆಪವಾಗಿ ಈ ಸಂಘರ್ಷಕ್ಕೆ ಕಾರಣವಾಗಿದೆ. ಇಬ್ಬರೂ ಸಮರ ಸನ್ನದ್ಧರಾದರು. ಅರ್ಜುನನ ಅಕ್ಷಯ ತೂಣಿರ ಎಡ ಬಲ ಭುಜಗಳಿಗೆ ಬಿಗಿದಾಯಿತು. ಎರಡೂ ಕೈಗಳಿಂದಲೂ ಶರ ಪ್ರಯೋಗಿಸಬಲ್ಲ ಸವ್ಯಸಾಚಿ ಗಾಂಡೀವವನ್ನೆತ್ತಿದ್ದಾನೆ. ಇತ್ತ ಕಿರಾತೇಶ್ವರನೂ ಪಿನಾಕವನ್ನೆತ್ತಿ ನರನಾದ ಪಾರ್ಥನ ಅಂಬುಗಳನ್ನು ಖಂಡಿಸಿ ತುಂಡರಿಸಲು ಸಿದ್ಧನಾಗಿದ್ದಾನೆ.
ಧನುಷ್ಟೇಂಕಾರವನ್ನು ಮಾಡಿ ವ್ಯಾಧನಾಯಕನನ್ನೇ ಗುರಿಯಾಗಿಸಿ ಶರಪ್ರಯೋಗಿಸಿದ್ದಾನೆ ಅರ್ಜುನ. ಪಥ ಮಧ್ಯ ಕ್ರಮಿಸುವಷ್ಟರಲ್ಲಿ ಶರಗಳನ್ನು ತುಂಡರಿಸಿದ್ದಾನೆ ಶಬರ ಶಂಕರ. ಸರ ಸರನೆ ಬಂದವು ಅರ್ಜುನನ ತೀಕ್ಷ್ಣ ಸರಳುಗಳು… ಬಂದ ವೇಗದಲ್ಲೇ ತುಂಡರಿಸಲ್ಪಡುತ್ತಿವೆ ಅಂಬುಗಳು ಹರ ಶಂಭುವಿನ ಪ್ರತ್ಯಸ್ತ್ರಗಳಿಂದ. ಅರೇ! ಕೇವಲ ಕಾಡ ಕಿರಾತನಲ್ಲಿ ಇಷ್ಟೊಂದು ನೈಪುಣ್ಯತೆಯೆ? ನಿಬ್ಬೆರಗಾದ ಕೌಂತೇಯ! ಇನ್ನು ತಡ ಮಾಡುವುದು ಸಲ್ಲದು ಎಂದು ಸುದೀರ್ಘ ಬವರ ನೀಡಿದ ಪೃಥುನಂದನ ಅಕ್ಷಯಾಸ್ತ್ರವನ್ನೇ ಅಭಿಮಂತ್ರಿಸಿ ಶಬರೇಶ್ವರನತ್ತ ಪ್ರಯೋಗಿಸಿದನು. ಒಂದಾಗಿದ್ದ ಶರ ಅರೆಕ್ಷಣದಲ್ಲಿ ನೂರು, ಸಾವಿರ, ಲಕ್ಷ ಶರಗಳಾಗಿ ಗುರಿಯತ್ತ ಮುತ್ತಿದರೆ, ಅಬ್ಬಬ್ಬಾ ಏನಾಶ್ಚರ್ಯ ಪ್ರತಿಯೊಂದು ಸರಳುಗಳೂ ಕಿರಾತನಿಂದ ಕತ್ತರಿಸಲ್ಪಟ್ಟಿವೆ. ಇಲ್ಲಿ ನಡೆಯುತ್ತಿರುವ ಯುದ್ದ ವೈಖರಿಯಲ್ಲೊಂದು ವಿಶೇಷವಿತ್ತು. ಅರ್ಜುನ ನೇರವಾಗಿ ಶಬರನನ್ನೇ ಗುರಿಯಾಗಿಸಿ ಹೋರಾಡುತ್ತಿದ್ದರೆ, ಶಂಕರ ದೇವ ಮಾತ್ರ ಅರ್ಜುನನ ಶರಗಳನ್ನಷ್ಟೇ ಛೇದಿಸುವಲ್ಲಿ ನಿರತನಾಗಿದ್ದಾನೆ. ಅರ್ಜುನನ ಒಂದು ಬಾಣವೂ ಗುರಿ ತಲುಪುತ್ತಿಲ್ಲ. ಬದಲಾಗಿ ಕತ್ತರಿಸಲ್ಪಟ್ಟು ತುಂಡಾಗಿ ಹಾರಿ ಬಿದ್ದು ರಾಶಿಯಾಗಿದೆ. ಎಂದೂ ಮುಗಿಯದ ಅರ್ಜುನನ ಅಕ್ಷಯ ಬತ್ತಳಿಕೆ ಇಂದು ಬತ್ತಿ ಖಾಲಿಯಾಗುತ್ತಿದೆ. ಎಡ – ಬಲ ಕೈ ಬದಲಿಸಿ ಎರಡೂ ತೂಣಿರಗಳಿಂದಲೂ ದಿವ್ಯಾಸ್ತ್ರಗಳನ್ನೆಳೆದು ಮಂತ್ರಪೂರಿತವಾಗಿ ಎಸೆಯುತ್ತಿದ್ದಾನೆ. ಫಲಪ್ರದವಾಗುತ್ತಿಲ್ಲ, ಕಾರಣ ಪಾರ್ಥ ಅಂದುಕೊಂಡಂತೆ ಎದುರಿರುವಾತ ಕೇವಲ ಕಿರಾತನಲ್ಲ. ಇನ್ನು ಈ ಅತಿಮಾನುಷ ಶಕ್ತಿ ಮಣಿಸ ಬೇಕಾದರೆ ಸಾಮಾನ್ಯ ಯುದ್ದ ಸಾಕಾಗದು ಎಂದರ್ಥೈಸಿ ಮಂತ್ರಾಸ್ತ್ರಗಳನ್ನು ಪ್ರಯೋಗಿಸಿದನು. ಮಿಂಚು ಗುಡುಗುಗಳಂತೆ ಅಸ್ತ್ರ ಪ್ರತ್ಯಸ್ತ್ರಗಳು ನಭೋ ಮಂಡಲದಲ್ಲಿ ಘರ್ಷಿಸುತ್ತಾ ಸ್ಪೋಟಗೊಳ್ಳುತ್ತಿವೆ. ಅಬ್ಬಬ್ಬಾ !!! ಅರ್ಜುನನ ಧನುರ್ವಿದ್ಯಾ ಪ್ರಾವಿಣ್ಯತೆಯೇ!!! ಅಸದಳ ವಿಕ್ರಮಿ ಎಂದು ಶಿವನೆ ಮನಸ್ಸಲ್ಲಿ ಮೆಚ್ಚುತ್ತಿದ್ದಾನೆ. ರಣ ಕೌಶಲ, ವೇಗ, ಚಾಣಾಕ್ಷ ಪ್ರಯೋಗ, ತೀಕ್ಷ್ಣತೆ ಎಂತಹವರನ್ನೂ ಕಂಗೆಡಿಸುವಂತಿದೆ. ಆದರೂ ಪರಿಣಾಮ ಬದಲಾಗುತ್ತಿಲ್ಲ. ಮಹಾದೇವನ ಮುಂದೆ ಸಾಗೀತೇ? ಕ್ಷಯವಾಯಿತು ಆತನ ತೂಣಿರ. ಶರಗಳೇ ಇಲ್ಲವಾಗಿದೆ ಈಗ. ಆದರೂ ಸೋಲೊಪ್ಪದೆ ಸೊಂಟದಲ್ಲಿದ್ದ ಕರವಾಲವನ್ನೆತ್ತಿ ಬೀಸುತ್ತಾ ಸಾಗಿದ. ಎಡಗೈಯಿಂದಲೇ ಅರ್ಜುನನ ಘಾತವನ್ನು ತಡೆದು, ಸೆಳೆದುಬಿಟ್ಟನು ಕಿರಾತ. ಖಡ್ಗವೂ ಈಗ ಶಂಕರಾಧೀನವಾಯಿತು. ಶಿವಗಣ ಕೂಟದವರೆಲ್ಲಾ ಆಸಕ್ತಿಯಿಂದ ಅರ್ಜುನನ ವಿಕ್ರಮ, ಛಲ, ಶೌರ್ಯ, ಸ್ಥೈರ್ಯವನ್ನು ನೋಡಿ ಮೆಚ್ಚಿ ಸಂತುಷ್ಟರಾಗುತ್ತಿದ್ದಾರೆ. ನಿಜವಾಗಿಯೂ ಈತ ವೀರಾಧಿವೀರನೇ ಹೌದೆಂಬಂತೆ ಸಂತಸಗೊಂಡು ನಗು ಮುಖದಿಂದ ಪರಾಕ್ರಮಕ್ಕೆ ತಲೆದೂಗುತ್ತಿದ್ದಾರೆ. ಅವರು ಸಂತಸದ ನಗು ಮೂದಲಿಕೆಯೆಂಬಂತೆ ಭಾಸವಾಯಿತು ಪಾರ್ಥನಿಗೆ.
ಅರ್ಜುನ ಅರೆ ಕ್ಷಣ ವಿಚಲಿತನಾಗಿ, ಕ್ರೋಧಾವೇಶಕ್ಕೊಳಗಾದ. ಆಯುಧಗಳಿಲ್ಲದಿದ್ದರೇನಂತೆ? ಮಲ್ಲಯುದ್ದಕ್ಕೆ ಮುಂದಾದ. ಕ್ಷತ್ರಿಯಾಗ್ರಣಿಯಲ್ಲವೇ? ತನುವಲ್ಲಿ ಉಸಿರಿರುವವರೆಗೆ ಆತನ ಮನ ಯುದ್ದದಿಂದ ವಿಮುಖವಾದೀತೆ? ಮಲ್ಲಯುದ್ದದಲ್ಲಿ ತೊಡಗಿ ಕಿರಾತನನ್ನು ಎಳೆದಾಡಿ ಹೊಯ್ದಾಡಿ ಮಲ್ಲಯುದ್ದದ ಪಟ್ಟುಗಳನ್ನು ಕ್ರಮದಂತೆ ಚಲಿಸಿ ಹಿಡಿತಕ್ಕೆ ಯತ್ನಿಸಿದರೂ ಜಾರಿಕೊಳ್ಳುತ್ತಿದ್ದಾನೆ ಶಬರೇಶ್ವರ. ಶಿವನಿಗೋ ಅರ್ಜುನನ ಸಾಹಸ ಪರೀಕ್ಷಿಸುವ ಕುತೂಹಲ. ಭಕ್ತನ ಬಲವೆಷ್ಟಿದೆ ಎಂದು ಪರಿಕಿಸುವ ಕೌತುಕವೋ ಎಂಬಂತೆ ಸಾಗಿತು ಬಹಳಷ್ಟು ಹೊತ್ತು ಮಲ್ಲಯುದ್ದ. ಕಡೆಗೆ ಅರ್ಜುನನ ಎರಡೂ ಕೈಗಳೂ ಕಿರಾತನಿಂದ ಬಂಧಿಸಲ್ಪಟ್ಟು ಹಿಂದಕ್ಕೆ ಕಟ್ಟಲ್ಪಟ್ಟವು. ನಡು ಹಿಡಿದು ಎತ್ತಿ ಎಸೆದಾಗ ಬಿದ್ದು ಅರ್ಜುನ ಮೂರ್ಚಿತನಾಗಿ ಬಿದ್ದನು. ರಕ್ತ ಹರಿದಿಳಿಯತೊಡಗಿತು. ಗಿರಿಜೆ ತನ್ನ ಪತಿ ಪರಮೇಶ್ವರನತ್ತ ಮುನಿಸಿನಿಂದ ನೋಡಿ ನಿಂತು, ಏಳದೇ ಇದ್ದ ಅರ್ಜುನನ್ನು ಉಪಚರಿಸಲು ಮುಂದೆ ಬಂದಳು. ಅಷ್ಟರಲ್ಲಿ ಚೇತರಿಸಿಕೊಂಡ ಅರ್ಜುನ ಮತ್ತೆ ಅತ್ಯುಗ್ರನಾದನು. ತನ್ನ ಗಾಂಡೀವವನ್ನು ಎತ್ತಿ ಬೀಸಿ ಶಿವನ ನಡು ಹಣೆಗೆ ಅಪ್ಪಳಿಸಿದನು. ಪಾರ್ಥಾಘಾತದಿಂದ ಮಹಾದೇವನ ಹಣೆಯೊಡೆಯಿತು. ಚಿರ್ರನೆ ಚಿಮ್ಮಿತು ರಕ್ತ. ಧಾವಿಸಿ ಬಂದ ಗಿರಿಜೆ ರುದ್ರನ ಬಳಿ ಬಂದು ಶಾಂತಿ ಶಾಂತಿ ಶಾಂತಿ… ಎನ್ನುತ್ತಾ, ಹಣೆಯ ಗಾಯವನ್ನೊತ್ತಿ ಹಿಡಿದಳು. ದೇವಾ! ನಮ್ಮ ಭಕ್ತನಲ್ಲವೇ ಅರ್ಜುನ. ಪರೀಕ್ಷೆಗೆ ಮುಂದಾದ ನಾವೇ ಈಗ ಪರೀಕ್ಷೆಗೊಳಗಾಗಬಾರದು. ಶಾಂತರಾಗಿ ಸೈರಿಸಿಕೊಳ್ಳಿ ಎಂದು ರುದ್ರನನ್ನು ಶಾಂತಗೊಳಿಸತೊಡಗಿದಳು.
ಮುಂದುವರಿಯುವುದು…





















