ಭಾಗ – 191
ಭರತೇಶ್ ಎಕ್ಕಾರ್

ಸಂಚಿಕೆ ೧೯೨ ಮಹಾಭಾರತ
ಹೀಗೆ ಕೈಲಾಸದಿಂದ ಇಳಿಯುತ್ತಾ ಸಾಗಿದ ಶಂಕರನ ಶಬರ ಪಡೆ ಬೇಟೆಗೆ ತೊಡಗಿ ಸಾಗುತ್ತಾ ಬರುತ್ತಿತ್ತು. ಆಗ ರಕ್ಕಸ ಮೂಕಾಸುರನು ಪೊದೆಯೆಡೆಯಿಂದ ಪ್ರಾಣರಕ್ಷಣೆಗಾಗಿ ಓಡತೊಡಗಿದನು. ಬೆಂಬತ್ತಿ ಬಂದ ಕಿರಾತರು ಮೂಕಾಸುರನನ್ನು ಹಿಂಬಾಲಿಸಿ ಬೆನ್ನಟ್ಟಿದರು. ಹಾಗೆ ಸಾಗಿದ ಓಟದಲ್ಲಿ ಹಂದಿ ಶರವೇಗದಲ್ಲಿ ಧಾವಿಸುತ್ತಾ ಇಂದ್ರಕೀಲಕ ಬಂದು ಮುಟ್ಟಿತು. ಶಂಕರನು ತನ್ನ ಧನುಸ್ಸು ಪಿನಾಕವನ್ನೆತ್ತಿ ಶರ ಸಂಧಾನ ಮಾಡಿ ಮುಂಚೂಣಿಯಲ್ಲಿದ್ದು ಸೂಕರ ರೂಪಿನ ಮೂಕಾಸುರನನ್ನು ಗುರಿಯಾಗಿಸಿ ಬೆನ್ನಟ್ಟಿ ಬರುತ್ತಿದ್ದನು. ಕಿರಾತ ಪಡೆ ದಶ ದಿಕ್ಕುಗಳೂ ಪ್ರತಿಧ್ವನಿಸುವಂತೆ ಬೊಬ್ಬಿಡುತ್ತಾ ಅನುಸರಿಸಿ ಸಾಗಿ ಬರುತ್ತಿದೆ.
ತಪೋ ಮಗ್ನನಾಗಿದ್ದ ಅರ್ಜುನ ಈ ಗದ್ದಲದಿಂದ ಬಹಿರ್ಮುಖನಾದನು. ಕಣ್ತೆರೆದು ನೋಡಿದರೆ ದೂರದಲ್ಲಿ ಅರ್ಜುನತ್ತ ಅತಿವೇಗದಿಂದ ಧಾವಿಸಿ ಬರುವ ರಕ್ಕಸ ಹಂದಿ ಕಂಡಿತು. ತಕ್ಷಣ ತನ್ನ ಗಾಂಡೀವಕ್ಕೆ ಹೆದೆಯೇರಿಸಿ ಹಂದಿಯನ್ನು ಗುರಿಯಾಗಿಸಿದನು. ಈಗ ಒಂದೆಡೆ ಶಿವದೇವನ ಪಿನಾಕದಿಂದ ಶರ ಸಂಧಾನವಾಗಿದೆ, ಇತ್ತ ಅರ್ಜುನನ ಗಾಂಡೀವದಿಂದಲೂ ಅದೇ ಹಂದಿ ಲಕ್ಷ್ಯವಾಗಿದೆ. ಅಂದರೆ ಇಬ್ಬರ ಬಾಣಗಳಿಗೂ ಗುರಿ ಒಂದು ವರಾಹ ರೂಪಿನ ಮೂಕಾಸುರ. ಏನು ಸುಯೋಗವಲ್ಲವೇ? ಸಹಸ್ರಕವಚನ ನಿಗ್ರಹಕ್ಕಾಗಿ ಸಹಸ್ರ ಸಂವತ್ಸರ ಕಾಲ ತಪಗೈದ ನಾರಾಯಣ ಅಂಶ ನರನೊಂದೆಡೆಯಾದರೆ ಸಾಕ್ಷಾತ್ ಪರಮೇಶ್ವರ ಇನ್ನೊಂದೆಡೆ. ಸೆಳೆದ ವಾಘೆಯಿಂದ ಸರ್ರನೆ ಚಿಮ್ಮಿದ ಶರಗಳೆರಡು ಬಂದು ಚುಚ್ಚಿ ಶರೀರ ಹೊಕ್ಕ ರಭಸಕ್ಕೆ ಬಿದ್ದ ಹಂದಿಗೆ ಅಲುಗಾಡಲೂ ಅವಕಾಶವಿಲ್ಲ, ಹತಪ್ರಾಣವಾಗಿ ಬಿದ್ದಿತು.
ಅರ್ಜುನ ನೋಡುತ್ತಿದ್ದಂತೆ ಬೇಡರ ವೇಷದಲ್ಲಿದ್ದ ಶಿವ ಪ್ರಮಥರಿಬ್ಬರು ಬಂದು ತಮ್ಮ ಬೇಟೆಯನ್ನೆತ್ತಿ ಒಯ್ಯಲು ಬಂದರು. ಆಗ ಅರ್ಜುನ ಅವರನ್ನು ತಡೆದು ನಿಲ್ಲಿಸಿದನು. ಕಾರಣ, ತಾನು ಹೊಡೆದುರುಳಿಸಿದ ಹಂದಿಯಾಗಿತ್ತು. ತನಗದು ಬೇಕಾಗಿಲ್ಲ. ಆದರೆ ಅನುಮತಿ ಕೇಳಿ, ಮರ್ಯಾದೆ ನೀಡಿ ಸಂಸ್ಕಾರದಿಂದ ಒಯ್ಯಬೇಕಿತ್ತು ಎನ್ನುವ ಅಪೇಕ್ಷೆ ಅರ್ಜುನನದ್ದು.
ಅನತಿ ದೂರದಲ್ಲಿದ್ದ ಶಬರ ಶಿವ ಶಿವೆಯರು ಮುಖ ಮುಖ ನೋಡಿ ನಸುನಕ್ಕರು. ಮಹಾದೇವ ಶಿವ ಮುಂದೆ ಬಂದು ಅರ್ಜುನತ್ತ ನೋಡಿಯೂ ಅಲಕ್ಷಿಸಿ ಹಂದಿಯನ್ನೆತ್ತಿ ತರಲು ತಮ್ಮ ಸಹಚರರಿಗೆ ಆಜ್ಞೆ ಮಾಡಿದನು. ಆಗ ಅರ್ಜುನ ಆಕ್ಷೇಪಿಸಿದನು. “ನಾನು ಹೊಡೆದುರುಳಿಸಿದ ಹಂದಿಯ ಮೇಲೆ ನನಗೆ ಪೂರ್ಣಾಧಿಕಾರವಿದೆ. ಅದು ನನಗೆ ಸೇರಿದ್ದು” ಎಂದು ಅಧಿಕಾರಯುತವಾಗಿ ನುಡಿದು ತಡೆದನು.
ಇದನ್ನೆಲ್ಲಾ ಗಮನಿಸಿದ ಶಿವ ಪರಮಾತ್ಮ “ನಿನ್ನನ್ನು ನೋಡಿದರೆ ತಪಸ್ವಿಯಂತೆ ಕಾಣುತ್ತಿರುವೆ. ನೀನು ಬಾಣ ಹೊಡೆದಿರಲೂ ಬಹುದು. ಆದರೂ ಈ ಹಂದಿಯನ್ನು ಬೇಟೆಯಾಡಲೆಂದೆ ಅಟ್ಟಿಸಿಕೊಂಡು ಬಂದವರು ನಾವು. ನಮ್ಮ ಉದ್ದೇಶವೆ ಈ ಹಂದಿಯ ಬೇಟೆ – ಆ ಕಾರಣದಿಂದಲೆ ಶರ ಪ್ರಯೋಗಿಸಿ ಕೊಂದಿದ್ದೇವೆ. ನಿನ್ನ ಉದ್ದೇಶ ತಪಸ್ಸು. ಈ ಹಂದಿ ನೀನಿದ್ದಲ್ಲಿಗೆ ಓಡಿ ಬಂದ ಕಾರಣ ಸ್ವರಕ್ಷಣೆಯ ಕಾರಣದಿಂದ ನೀನು ಹೊಡೆದಿರಬಹುದು. ನಿನ್ನ ಉದ್ದೇಶ ಬೇಟೆಯೂ ಅಲ್ಲ, ಈ ಪ್ರಾಣಿ ನಿನ್ನ ಆಹಾರವೂ ಅಲ್ಲ, ನಿನಗಿದರ ಮೃತ ಶರೀರದಿಂದ ಯಾವ ಉಪಯೋಗವೂ ಇಲ್ಲ. ಹಾಗೆ ಕೊಳೆತು ವಾಸನೆ ಬರುವಂತಾದೀತು. ನಾವು ಹಾಗಲ್ಲ, ಇದು ನಮ್ಮ ಆಹಾರ, ನಮಗೆ ಉಪಯೋಗವಿದೆ. ಅನಗತ್ಯ ವಸ್ತುವಿನ ಮೇಲೆ ವೃಥಾ ಚರ್ಚೆಗಿಳಿಯಬೇಡ. ಈ ಹಂದಿಯಿಂದ ನಿನಗೆ ತೊಂದರೆ ಆದೀತೆಂದು ನೀನು ಬಾಣ ಪ್ರಯೋಗ ಮಾಡಿದ್ದು ಹೌದಾದರೆ ಅದೀಗ ಸತ್ತಿದೆ. ಇನ್ನು ನೀನು ಭಯಪಡುವ ಅಗತ್ಯವಿಲ್ಲ. ಹೋಗಿ ನಿನ್ನ ಕೆಲಸವೇನು ತಪಸ್ಸಲ್ಲವೆ ಅದರಲ್ಲಿ ಮುಂದುವರಿಯಬಹುದು” ಎಂದು ಹೇಳಿದನು.
ಅರ್ಜುನನಿಗೆ ತಾನು ರಾಜ ವಂಶೀಯ, ಕ್ಷತ್ರೀಯ ವೀರ. ನನಗೆ ಶಬರನ ಬೋಧನೆಯ ನೀತಿಪಾಠವೇ? ಎಂದು ಭಾಸವಾಗಿ ಕ್ರೋಧನ್ಮತ್ತನಾದನಿ. “ಹೇ! ಕಾಡ ಕಿರಾತನೇ, ನಿನ್ನ ಬಾಣಕ್ಕೂ ಕ್ಷತ್ರಿಯ ವೀರನಾದ ನನ್ನ ಬಾಣಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಈಗ ನಾನು ತಪಸ್ವಿ ಹೌದಾದರೂ, ಮೂಲತಃ ಕ್ಷಾತ್ರ ಕುಲ ಸಂಜಾತ ವೀರನಾಗಿದ್ದೇನೆ. ನನ್ನಂತಹವನಿಗೆ ಒಬ್ಬ ಸಾಮಾನ್ಯ ಕಿರಾತನಿಂದ ವಿವೇಕ ವಿಚಾರದ ಪಾಠವೆ? ಏನು ನೀವು ಅಟ್ಟಿಸಿಕೊಂಡು ಓಡಿ ಬಂದಿರೆ? ನೀವು ಹಿಂದಿನಿಂದ ಓಡಿ ಬಂದಿದ್ದೀರಿ ಹೊರತು ಈ ಹಂದಿಯನ್ನು ಸಾಯಿಸಲಿಲ್ಲ. ಯಾವಾಗ ನನ್ನ ಎದುರಿಗೆ ಬಂತೋ, ನನ್ನ ಶರದ ಹತಿಯಿಂದ ಹತ್ಯೆಯಾಯಿತು. ಆ ನಂತರ ಮತ್ತೆ ಅದು ಅಲುಗಾಡಲಿಲ್ಲ. ಹಾಗಾಗಿ ಇದು ನನ್ನಿಂದ ಕೊಲ್ಲಲ್ಪಟ್ಟ ಮೃಗ ಎಂಬುವುದು ನಿಸ್ಸಂದೇಹ. ಬೇಕಿದ್ದರೆ ಕೊಡುತ್ತೇನೆ. ನನಗೆ ಇದು ಬೇಕಾಗಿಯೂ ಇಲ್ಲ. ಆದರೆ ವಿನಯಪೂರ್ವಕವಾಗಿ ಬೇಡಿ ಕೊಂಡುಹೋಗಿ. ಹಾಗೆಯೆ ನಿಮಗೊಂದು ಎಚ್ಚರಿಕೆಯ ಮಾತನ್ನೂ ಹೇಳುತ್ತೇನೆ ಕೇಳಿಸಿಕೊಳ್ಳಿ. ಈ ಪ್ರದೇಶ ತಪೊಭೂಮಿ, ಇಲ್ಲಿ ಈ ರೀತಿ ಬೊಬ್ಬೆ ಹಾಕುತ್ತಾ, ಅಶಾಂತಿಯೆಬ್ಬಿಸಿ ಬೇಟೆಯಾಡುವುದು ನಿಷಿದ್ಧ” ಎಂದನು.
ಕಿರಾತರೊಡೆಯ ನಸುನಗುತ್ತಾ, ಅಪಹಾಸ್ಯದ ಭಾವ ಪ್ರಕಟಿಸುತ್ತಾ “ಇದು ನಮ್ಮ ಪೂರ್ಣಾಧಿಕಾರದ ಪ್ರದೇಶ. ಇಲ್ಲಿ ಬೇಟೆಯಾಡಲು ನಮಗೆ ಯಾರ ಅಪ್ಪಣೆಯ ಅಗತ್ಯವೂ ಇಲ್ಲ. ಅದಿರಲಿ, ಹಂದಿ ಬೇಕಾದರೆ ನಿನ್ನಲ್ಲಿ ಬೇಡಬೇಕಾ ನಾವು? ಎಲಾ ತಪಸ್ವಿಯೇ, ನಿನ್ನಲ್ಲಿ ಜ್ಞಾನ, ವಿವೇಚನೆ ಇರಬಹುದೆಂದು ನಾವು ಮಾತಿನಿಂದ ಪರಿಹರಿಸಲು ಮನಮಾಡಿದೆವು. ಉದ್ದಟತನ ತೋರುವೆಯಾದರೆ ಬಲಪ್ರಯೋಗದಿಂದಲೆ ಪಡೆದುಕೊಳ್ಳುತ್ತೇವೆ. ವೃಥಾ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಬೇಡ” ಎಂದು ಶಬರ ರೂಪಿನ ಶಂಕರ ಅಕ್ರೋಶ ಪ್ರದರ್ಶಿಸಿದನು.
ಅರ್ಜುನನಿಗೂ ಅಸಹನೀಯ ಕೋಪ ನೆತ್ತಿಗೇರಿತು. ರಾಜನೂ, ಕ್ಷತ್ರಿಯನೂ ಆದ ನನಗೆ ಪಂಥಾಹ್ವಾನವೆ?. “ಎಲಾ ! ಕಾಡ ಬೇಡನೇ! ಯುದ್ದ ಕೌಶಲ ಪರಿಣತನಾದ ನನ್ನ ಕೈಯಲ್ಲಿ ಅನಗತ್ಯವಾಗಿ ಪೆಟ್ಟು ತಿಂದು ಸಾಯಬೇಡ. ಜಾಗ್ರತೆ…” ಎಂದು ಅಬ್ಬರಿಸಿದನು.
ಶಿವನು ಶಿವೆಯತ್ತ ನೋಡುತ್ತಾ ನಸುನಗೆ ಬೀರಿ, ಅರ್ಜುನನತ್ತ ನೋಡುತ್ತಾ ” ಈ ಪ್ರಕರಣ ಮಾತಿನಿಂದ ಸಂಧಾನವಾಗುವುದಿಲ್ಲ. ಸಾಹಸದಿಂದ ಸಾಧಿಸಿಯೆ ಸಿದ್ಧವಾಗಲಿ” ಎಂದು ಯುದ್ಧ ಸನ್ನದ್ಧನಾದನು. ಮೂಕ ದಾನವ ಸತ್ತು ಬಿದ್ದನಾದರೂ ಇಲ್ಲಿ ಅರ್ಜುನ – ಪರಮೇಶ್ವರರು ಕದನಾಕಾಂಕ್ಷಿಗಳಾಗಿ ಸಿದ್ದರಾಗಿದ್ದಾರೆ. ಒಂದೆಡೆ ಪಿನಾಕ, ಇನ್ನೊಂದೆಡೆ ಗಾಂಡೀವ. ಬಿಗಿದ ಹೆದೆಯನ್ನೆಳೆದು ಚಿಮ್ಮಿದ ಧನುಷ್ಟೇಂಕಾರ ದಿಗ್ದೆಸೆಗಳಲ್ಲೆಲ್ಲಾ ಪ್ರತಿಧ್ವನಿಸಿತು. ಶಿವಗಣ ಪ್ರಮಥರೂ, ಗಿರಿಜಾ ಮಾತೆಯೂ ಕುತೂಹಲಿಗರಾಗಿ ಅರ್ಜುನ – ಶಂಕರರ ಯುದ್ದ ವೈಖರಿ ನೋಡಲು ಕಾತರರಾಗಿದ್ದಾರೆ.
ಮುಂದುವರಿಯುವುದು…




















