31.4 C
Udupi
Tuesday, May 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ -190

ಭರತೇಶ್ ಶೆಟ್ಟಿ, ಎಕ್ಕಾರ್

ಮೊದಲಾಗಿ ಅರ್ಜುನ ಕಾರ್ಯ ಸಾಧನೆಗಾಗಿ ಗುರು ಹಿರಿಯರನ್ನೂ, ಭಗವಾನ್ ವ್ಯಾಸರನ್ನೂ ಮನಸ್ಸಿನಿಂದಲೇ ಸ್ಮರಿಸಿ ವಂದಿಸಿದನು. ವಂಶದ ಹಿರಿಯರನ್ನು, ಇಂದ್ರನನ್ನು, ಶ್ರೀ ಕೃಷ್ಣನನ್ನು ಅನುಗ್ರಹಕ್ಕಾಗಿ ಶಿವಪರಮಾತ್ಮನನ್ನು ಧ್ಯಾನಿಸಿ ನಮಸ್ಕರಿಸಿದನು.

ತನ್ನ ಮನಸ್ಸನ್ನು ವಿಚಲಿತಗೊಳಿಸ ಬಹುದಾದ ಕೆಟ್ಟ ಘಟನೆಯ ನೆನಪುಗಳನ್ನು, ಸಿಹಿ ನೆನಪಿನ ಕ್ಷಣಗಳನ್ನೂಲು ಸ್ಮರಣೆಗೆ ತಂದು ಕೊಂಡು ಅವುಗಳನ್ನು ಮನಸ್ಸಿನಿಂದ ದೂರಗೊಳಿಸಿ ಚಿತ್ತ ಚಾಂಚಲ್ಯದಿಂದ ಮುಕ್ತನಾದನು. ಈ ಸೂತ್ರ ಅಳವಡಿಕೆಯಲ್ಲಿ ಕೆಲ ದಿನಗಳು ಕಳೆದು ಹೋದವು. ಒಮ್ಮೆ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದ ಬಳಿಕ ಧ್ಯಾನ ಮಗ್ನನಾದನು. ತುಸು ಹೊತ್ತು ಧ್ಯಾನ ಮಾಡಿದ ಬಳಿಕ ವಿಮುಖನಾಗುತಿದ್ದನು. ಬಿಡದೆ ತೊಡಗಿ ಅರ್ಧ ದಿನ, ದಿನಪೂರ್ತಿ ಹೀಗೆ ತಪ ಸಾಧಿಸುತ್ತಾ ಹೋಗುತ್ತಿದ್ದನು. ದಿನಕ್ಕೊಮ್ಮೆ ಆಹಾರ ಮತ್ತೆ ಕೆಲದಿನಗಳಿಗೊಮ್ಮೆ ಏನಾದರು ಮಿತ ಆಹಾರ ಸೇವನೆ ಅಭ್ಯಾಸವಾಯಿತು. ಮತ್ತೆ ಕೇವಲ ತುಸು ನೀರು ಸೇವನೆ, ಮತ್ತಷ್ಟು ಸಾಧಿಸುತ್ತಾ ಕೇವಲ ಗಾಳಿಯನ್ನಷ್ಟೇ ಆಹಾರವಾಗಿಸಿ ತಪಸ್ಸನ್ನಾಚರಿಸಲು ತೊಡಗಿದನು. ಹೀಗೆ ಮುಂದುವರಿಯುವಾಗ ಯಾವಾಗಲೋ ಒಮ್ಮೆ ಬಹಿರ್ಮುಖನಾಗುತ್ತಿದ್ದನು. ಕ್ರಮೇಣ ವೇದವ್ಯಾಸ ಪ್ರಣೀತ ಶಿವ ಮಂತ್ರ ಪಠಿಸುತ್ತಾ ಪೂರ್ಣ ತಪೋಮಗ್ನನಾಗಿ ಅಂತರ್ಮುಖಿಯಾದನು. ಶಿವಾನುಗ್ರಹ ಪ್ರಾಪ್ತಿಯ ಸಾಧನೆಗಾಗಿ ತಪೋ ಮಗ್ನತೆಯ ತೀವ್ರತೆ ಏರುತ್ತಿದಂತೆ ವಾತಾವರಣದ ಬಿಸಿ ಏರತೊಡಗಿತು. ಏರಿದ ತಾಪ ಉರಿಯಾಯಿತು. ಇಂದ್ರಕೀಲಕದಲ್ಲಿ ವಾಸವಾಗಿದ್ದ ಋಷಿ ಮುನಿಗಳಿಗೂ ಸುಡುವ ಜ್ವಾಲೆಯನ್ನು ತಡೆಯಲಾಗದೆ ಕಾರಣವರಸಿ ಬಂದಾಗ ಅರ್ಜುನನ ತಪಸ್ಸಿನಿಂದಾಗಿ ಈ ಪರಿಣಾಮ ಉತ್ಪತ್ತಿಯಾಗಿದೆ ಎಂಬ ಸತ್ಯ ತಿಳಿಯಿತು. ಲೋಕ ಕಲ್ಯಾಣಾರ್ಥವಾಗಿ ವಿರಚಿಸುತ್ತಿರುವ ತಪಸ್ಸಿಗೆ ಶಿವಕಾರುಣ್ಯ ಪ್ರಾಪ್ತಿಯಾಗಲಿ ಎಂದು ಋಷಿ ಮುನಿಗಳೂ ಹಾರೈಸಿ ಶಿವಧ್ಯಾನ ನಿರತರಾದರು. ಅರ್ಜುನನ ತಪಸ್ಸು ಉಗ್ರವಾಗುತ್ತಾ ಹೋದಂತೆ ಉಗ್ರ ಉರಿ ಜ್ವಾಲೆ ವಿಪರೀತವಾಗಿ ತಡೆಯಲಾಗದ ಸ್ಥಿತಿ ನಿರ್ಮಾಣವಾಗ ತೊಡಗಿತು. ಆ ಸಂದರ್ಭ ಇನ್ನು ಸಹಿಸಲು ಸಾಧ್ಯವಿಲ್ಲ ಎಂದರಿತ ಮಹರ್ಷಿಗಳು ತಮ್ಮ ತಪಃಶಕ್ತಿಯಿಂದ ಕೈಲಾಸವೇರಿ ಶಿವಪರಮಾತ್ಮನನ್ನು ಪ್ರಾರ್ಥಿಸಿದರು. ಪ್ರಸನ್ನನಾದ ಮಹಾದೇವನಲ್ಲಿ ಅರ್ಜುನನ ತಪಸ್ಸಿನ ವಿಚಾರ ಮತ್ತು ಉದ್ದೇಶವನ್ನು ವಿವರಿಸಿ ಆತನಿಗೆ ಒಲಿದು ಹರಸುವಂತೆ ಬೇಡಿಕೊಂಡರು. ಹಾಗೆ ಮಾಡದೆ ಹೋದರೆ ಅರ್ಜುನನ ತಪೋ ಜ್ವಾಲೆಯಿಂದ ಇಂದ್ರಕೀಲಕವೆ ಹೊತ್ತಿ ಉರಿದೀತು. ನಮ್ಮೆಲ್ಲರ ರಕ್ಷಣೆ ಭಕ್ತರಕ್ಷಕ – ಪರಮಾತ್ಮನಾದ ಆದ ನಿನ್ನಿಂದ ಮಾತ್ರ ಸಾಧ್ಯ ಎಂದು ಮೊರೆ ಹೋದರು. ಆಗ ಮಹಾದೇವ ಪರಮೇಶ್ವರ “ಭಯಗೊಳ್ಳದಿರಿ, ಅರ್ಜುನನ ಸಾಧನೆಯ ಪರಿಪೂರ್ಣತೆ ಹಾಗೂ ಆತನ ಪರಿಣತಿಯನ್ನು ಪರೀಕ್ಷಿಸಿ ಸಕಾಲ ಒದಗಿ ಬಂದಾಗ ಯೋಗ್ಯ ಅನುಗ್ರಹ ಪ್ರಾಪ್ತವಾಗಲಿದೆ” ಎಂದು ಅಭಯವಿತ್ತು ಐಷಿಗಡಣವನ್ನು ಮಹಾದೇವ ಕಳುಹಿಸಿದನು.

ಇತ್ತ ದ್ವೈತವನದಲ್ಲಿ ಧರ್ಮರಾಯ, ಧೌಮ್ಯರು, ದ್ರೌಪದಿ, ಭೀಮ, ನಕುಲ ಸಹದೇವಾದಿಗಳು ಅರ್ಜುನನ ತಪಃ ಸಾಧನೆ ಶೀಘ್ರವಾಗುವಂತಾಗಲಿ ಎಂದು ನಿರಂತರ ಪ್ರಾರ್ಥಿಸುತ್ತಿದ್ದರು. ವರ್ಷಗಳು ಕಳೆಯುತ್ತಿದ್ದಂತೆ ಅರ್ಜುನನ ತಪಸ್ಸು ಇನ್ನೂ ತೀಕ್ಷ್ಣಗೊಳ್ಳುತ್ತಿದೆ.

ಹೀಗಿರಲು ಒಂದು ದಿನ ಕೈಲಾಸದ ತಪ್ಪಲಿನ ಆಶ್ರಮವಾಸಿ ಋಷಿಗಳೆಲ್ಲಾ ಶಿವ ದರುಶನಕ್ಕಾಗಿ ಸಂಪ್ರಾರ್ಥಿಸತೊಡಗಿದರು. ಸಾಕ್ಷಾತ್ಕಾರಗೊಂಡ ದೇವ ಅವರೆಲ್ಲರ ಅಳಲು ಏನೆಂದು ಕೇಳಿದನು. ಆಗ ಅವರು “ದೇವಾ, ನಮ್ಮ ಕೈಲಾಸದ ತಪ್ಪಲಿನಲ್ಲಿ ರಕ್ಕಸನ ಬಾಧೆ ಆರಂಭವಾಗಿದೆ. ಇದರಿಂದ ಕೈಲಾಸ ಪರ್ವತದಲ್ಲಿ ಆಶ್ರಮವಾಸಿಗಳಾಗಿರುವ ನಮಗೂ ಆಶ್ಚರ್ಯ ಮೂಡಿಸಿದೆ. ದೇವನಾದ ನಿನ್ನ ರಕ್ಷಣೆಯಲ್ಲಿರುವ ನಮಗೆ ತೊಂದರೆ ಬರಲು ಸಾಧ್ಯವೆ? ಆದರೆ ವಿಶೇಷವೆಂಬಂತೆ ದೈತ್ಯ ಹಂದಿಯೊಂದು ನಮಗೆಲ್ಲಾ ಉಪಟಳ ನೀಡುತ್ತಿದೆ. ಸಾಮಾನ್ಯ ಹಂದಿ ಎಂದು ಭಾವಿಸಿದರೆ, ಅದು ಆ ರೂಪದಲ್ಲಿರುವ ರಾಕ್ಷಸನ ದುಷ್ಕೃತ್ಯ. ಮೂಕನೆಂಬ ರಕ್ಕಸ ಹಂದಿಯ ರೂಪದಲ್ಲಿದ್ದು ನಮಗೆಲ್ಲರಿಗೂ ಬಾಧೆ ನೀಡುತ್ತಿದ್ದಾನೆ. ಆತನನ್ನು ನಿಯಂತ್ರಿಸುವಲ್ಲಿ ತಪಃಸ್ಶಕ್ತಿಯುಳ್ಳ ನಾವೆಲ್ಲರು ಅಸಮರ್ಥರಾಗಿದ್ದೇವೆ. ಮಹಾದೇವ ನೀನೇ ನಮ್ಮನ್ನು ರಕ್ಷಿಸಬೇಕು” ಎಂದು ಬೇಡಿಕೊಂಡರು.

ಮಹಾದೇವ ಸದಾಶಿವ ಅರೆಕ್ಷಣ ಯೋಚಿಸಿದನು. ಅರ್ಜುನನ ಭಕ್ತಿಗೆ ಅನುಗ್ರಹ, ಹಾಗೆಯೇ ದುಷ್ಟ ರಕ್ಕಸ ಮೂಕಾಸುರನಿಗೆ ನಿಗ್ರಹ ರೂಪದ ಅನುಗ್ರಹ ಮಾಡುವ ಕಾಲ ಕೂಡಿ ಬಂದಿದೆ ಎಂದು ತೀರ್ಮಾನಿಸಿದನು. ಆರ್ತರಾಗಿ ಬಂದ ಋಷಿಗಳಿಗೆ ಅಭಯವಾಕ್ಯ ಪ್ರಧಾನ ಮಾಡಿ ಅವರನ್ನು ಧೈರ್ಯಸ್ಥರಾಗಿ ಇರುವಂತೆ ಹೇಳಿ ಕಳುಹಿಸಿದನು. ಬಳಿಕ ಸತಿ ಗಿರಿಜೆಯನ್ನು ಕರೆದು ಅವರಿಬ್ಬರು ಕಿರಾತ ರೂಪ ತಾಳಿದರು. ಸಹಾಯಕ ಕಿರಾತ ಪಡೆಯಾಗಿ ನಂದಿ, ಗಣಪತಿ, ಷಣ್ಮುಗ, ಶಿವಗಣ, ಪ್ರಮಥರೆಲ್ಲರೂ ರೂಪಾಂತರಗೊಂಡರು. ಬೇಡರ ಆಯುಧಗಳನ್ನು ಧರಿಸಿ ಸನ್ನದ್ಧರಾಗಿ ಸೂಕರ ರೂಪಿನ ಮೂಕನ ಬೇಟೆಯ ನೆಪದಿಂದ, ಅರ್ಜುನನ್ನು ಅನುಗ್ರಹಿಸುವುದಕ್ಕೆ ಪೂರಕವಾಗಿ ಕೈರಾತಲೀಲೆ ತೋರುತ್ತಾ ಮಹಾದೇವ ತನ್ನ ಬಳಗ ಸಹಿತನಾಗಿ ಕೈಲಾಸದಿಂದ ಇಳಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page