32.5 C
Udupi
Wednesday, April 30, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 146

ಭರತೇಶ್ ಶೆಟ್ಟಿ ,ಏಕ್ಕಾರ್

ಸಂಚಿಕೆ ೧೪೭ ಮಹಾಭಾರತ

ಧರ್ಮರಾಯನ ಜಿಜ್ಞಾಸೆ ಪೂರ್ವಕವಾಗಿ ಕೇಳಿದ ಪ್ರಶ್ನೆಗೆ ಸವಿವರವಾಗಿ ಉತ್ತರ ನೀಡುತ್ತಾ ನಾರದರು “ಧರ್ಮರಾಯ, ಓರ್ವ ಉತ್ತಮನಾದ ರಾಜನ ಆಳ್ವಿಕೆಯಲ್ಲಿ ನಾಲ್ಕು ವರ್ಣದ ಜನರೂ ಸುಖವನ್ನು ಪಡೆಯುತ್ತಿರಬೇಕು. ಹಾಗಾಗದಿದ್ದರೆ ರಾಜನಿಗೆ ಸುಖವಿರುವುದಿಲ್ಲ. ರಾಜನ ಮನಸ್ಸಿಗೂ ಶಾಂತಿ ಸಿಗಲಾರದು. ರಾಜನ ಬೊಕ್ಕಸ ತುಂಬಿದ್ದರೂ, ರಾಜಾದಾಯವು ಸಕ್ರಮವಾಗಿ ಭಂಡಾರ ಸೇರುತ್ತಿದೆಯೇ ಎಂಬ ನಿಯಂತ್ರಣ ಹೊಂದಿರಬೇಕು. ಸಂಗ್ರಹವಾದ ಭಂಡಾರ ನಿಧಿಯನ್ನು ದಾನ, ಧರ್ಮ, ಪ್ರಜಾಹಿತಕ್ಕೆ ವಿನಿಯೋಗಿಸಬೇಕು. ಅಧಿಕಾರಿಗಳು ಸಂತುಷ್ಟರಾಗಿರುವಂತೆ ನೋಡಿಕೊಳ್ಳಬೇಕು. ಸಂಧಿ, ನಿಗ್ರಹ, ಯಾನ, ಆಸನ, ದ್ವೈಧೀಭಾವ, ಸಮಾಶ್ರಯ ಗಳೆಂಬ ರಾಜನೀತಿಯ ಆರು ಗಣಗಳೊಡನೆ – ಸಾಮ, ದಾನ, ಭೇದ, ದಂಡ, ಮಂತ್ರ, ಔಷಧ, ಮಾಯೆ ಗಳೆಂಬ ಸಪ್ತೋಪಾಯಗಳನ್ನು ಯುಕ್ತವಾದ ರೀತಿಯಲ್ಲಿ ಉಪಯೋಗಿಸುತ್ತಿರಬೇಕು. ಶತ್ರು, ಮಿತ್ರ, ಉದಾಸೀನ ರೆಂಬ ಮೂರು ವರ್ಗದ ಜನರನ್ನು ಗುರುತಿಸಿ, ಅವರ ಬಗ್ಗೆ ಅವರ ನಿಲುಮೆಯರಿತು ಬಹಳ ಎಚ್ಚರದಿಂದಿರಬೇಕು. ಗುಪ್ತಾಚಾರ ಬಲ, ಮೂಲ ಬಲ, ಪಾರ್ಷ್ಣಿ ಬಲ – ಇವುಗಳು ಸುಭದ್ರವೂ ಬಲಯುತವೂ ಆಗಿರಬೇಕು. ಇವುಗಳಿಷ್ಟನ್ನು ಸಮರ್ಥವಾಗಿ ನಿಭಾಯಿಸಿದರೆ ರಾಜನ ಸಾಮರ್ಥ್ಯಕ್ಕೆ ಯಾವ ರೀತಿಯ ಕುಂದು ಕೊರತೆಯೂ ಬರದು”.

ರಾಜನೀತಿ ಶಾಸ್ತ್ರದ ಕುರಿತು ಸೂಕ್ಷ್ಮಗಳನ್ನು ವಿವರಿಸಿದ ಬಳಿಕ ನಾರದರು ಪಾಂಡು ಚಕ್ರವರ್ತಿಯ ಕುರಿತು ಹೇಳತೊಡಗಿದರು- ” ಧರ್ಮರಾಜಾ, ಪ್ರಜೆಗಳನ್ನು ಮಕ್ಕಳಂತೆ ಪ್ರೀತಿಸಿ, ಪೋಷಿಸಿ, ಪಾಲಿಸುವ ರಾಜ ಅವರಿಗೆ ರಾಜ್ಯದೊಳಗೆ ಸುಭದ್ರತೆಯನ್ನು ಒದಗಿಸಬೇಕು. ಅವರ ಜ್ಞಾನ ಸಂಪಾದನೆ, ಗೋ, ಸ್ತ್ರೀ, ಸಂಪತ್ತಿನ ರಕ್ಷಣೆ ಖಾತ್ರಿ ಪಡೆಸಬೇಕು. ಋಷಿ, ಬ್ರಾಹ್ಮಣ ವರ್ಗಕ್ಕೆ ಬೇಕಾದ ವ್ಯವಸ್ಥೆ ಸುರಕ್ಷೆಯಿರಬೇಕು. ಇಷ್ಟು ಕರ್ತವ್ಯಗಳನ್ನು ಪೂರೈಸಿದರೆ ಸತ್ಕರ್ಮ ಫಲ ಪ್ರಾಪ್ತವಾಗುವುದು. ಇಷ್ಟೆಲ್ಲಾ ಮಾಡಿದರೂ ಸ್ವರ್ಗ ಪ್ರಾಪ್ತಿಗಾಗಿ ತಪಸ್ಸು, ಯಜ್ಞ, ದಾನ ಮುಂತಾದವುಗಳನ್ನು ಮಾಡಿದ ಪುಣ್ಯ ಫಲ ಸಂಪಾದನೆ, ಅಥವಾ ಧರ್ಮ ಯುದ್ಧದಲ್ಲಿ ಆಯುಧದ ಹತಿಗೆ ಮೈಯೊಡ್ಡಿ ದೇಹತ್ಯಾಗ ಮಾಡಿದ ಫಲದಿಂದ ಮಾತ್ರ ಕ್ಷತ್ರಿಯನಾದವನಿಗೆ ಸ್ವರ್ಗಭಾಗ್ಯ ಪ್ರಾಪ್ತಿಯಾಗುವುದು. ನಾನು ಕಾರ್ಯ ಕಾರಣದಿಂದ ಸ್ವರ್ಗಕ್ಕೆ ಹೋದ ಸಂದರ್ಭ ನಿಮ್ಮ ತಂದೆಯಾದ ಪಾಂಡು ಚಕ್ರವರ್ತಿಯನ್ನು ಕಾಣದೆ ಎಲ್ಲಿರುವನೆಂಬ ಸಂದೇಹದಿಂದ ಹುಡುಕಿ ತಿಳಿದಾಗ ಯಮಲೋಕದಲ್ಲಿರುವ ಸಂಗತಿ ಗೊತ್ತಾಯಿತು. ಸ್ವರ್ಗದ ಸ್ಥಾನಮಾನಗಳು ಪ್ರಾಪ್ತವಾಗಿರದೆ ಇದ್ದುದನ್ನು ಕಂಡು ನಾನೇ ಗೊಂದಲಕ್ಕೊಳಗಾಗಿದ್ದೆ. ಪರಿಹಾರಕ್ಕಾಗಿ ಕಾರಣ ತಿಳಿಯಲು ವಿಷಯ ಸಂಗ್ರಹ ಮಾಡಿದಾಗ, ನಿಮ್ಮ ತಂದೆಯಾದ ಪಾಂಡು ಚಕ್ರವರ್ತಿ ರಾಜನಾಗಿ ಎಲ್ಲಾ ಕರ್ತವ್ಯ ಮಾಡಿ ಸತ್ಕರ್ಮ ಫಲ ಹೊಂದಿದ್ದರೂ, ಅನೇಕ ಯಜ್ಞ ಮಾಡಿದ ಅತಿಶಯವಾದ ಪುಣ್ಯ ಬಲವನ್ನಾಗಲಿ, ವೀರ ಮರಣವನ್ನಾಗಲಿ ಪಡೆದಿರಲಿಲ್ಲ. ಪಾಂಡು ಚಕ್ರವರ್ತಿಯ ಅಂತ್ಯ ಕಿಂದಮರ ಶಾಪವಾಕ್ಯ ಹೇತುವಾಗಿ ಸಂಭವಿಸಿತ್ತು. ಹಾಗಾಗಿ ನರಕ ಲೋಕ ಪ್ರಾಪ್ತವಾಗಿದೆ” ಎಂದರು.

ದುಃಖತಪ್ತನಾದ ಧರ್ಮರಾಯ, “ನಮ್ಮ ತಂದೆಗೆ ನರಕಲೋಕ ಪ್ರಾಪ್ತವಾಗಿದೆಯೆ? ಸ್ವರ್ಗ ಸುಖದ ಭಾಗ್ಯದಿಂದ ಬಾಹಿರರಾದರೆ? ಪಿತನಿಗೆ ಸದ್ಗತಿ ಒದಗಿಸದ ಮಕ್ಕಳು ನಾವಾಗಿ ಹೋದೆವು!” ಎಂದು ಬಹುವಾಗಿ ದುಃಖಕ್ಕೊಳಗಾಗಿ ಮರಗತೊಡಗಿದನು.

ಸಂತೈಸುತ್ತಾ ನಾರದ ಮಹರ್ಷಿ “ನರಕಲೋಕ ಎಂದ ಕೂಡಲೇ ಖಿನ್ನ ಮನಸ್ಕನಾಗಬೇಡ” ಎನ್ನುತ್ತಾ, ಯಮಲೋಕದ ವಿಚಾರ ವಿವರಿಸತೊಡಗಿದರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page