ಭಾಗ 145
ಭರತೇಶ್ ಶೆಟ್ಟಿ ಎಕ್ಕಾರ್

ಖಾಂಡವ ವನ ಪ್ರದೇಶವೀಗ ನಳನಳಿಸುವ ನಗರವಾಗಿದೆ. ಸುಂದರ ಭವನ, ಅರಮನೆಗಳಿಂದ ಸುಸಜ್ಜಿತಗೊಂಡು ಧರ್ಮರಾಯ ಯುವರಾಜನಾಗಿ ಸಿಂಹಾಸನವೇರಿದ್ದಾನೆ. ದಿನ ಕಳೆಯುತ್ತಿದ್ದಂತೆ ದಶದಿಕ್ಕುಗಳಿಂದ ಜನರು ಧರ್ಮಜನ ಆಳ್ವಿಕೆಯನ್ನು ಒಪ್ಪಿ ಬಂದು ಆಶ್ರಯ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗುತ್ತಿರಲು ಪ್ರಜಾ ಪರಿವಾರವೂ ಸಮೃದ್ಧಗೊಳ್ಳುತ್ತ ಅಭಿವೃದ್ಧಿ ಕಾರ್ಯಗಳ ವ್ಯವಸ್ಥೆಯೂ ಸಾಗುತ್ತಿದೆ. ಹೀಗಿರಲು ಒಂದು ದಿನ ಓಲಗಸ್ಥನಾಗಿದ್ದ ಧರ್ಮರಾಯನ ಆಸ್ಥಾನಕ್ಕೆ ಮಹಿಮಾನ್ವಿತರಾದ ನಾರದರ ಆಗಮನವಾಯಿತು. ಸಹೋದರರ ಸಹಿತ ಧರ್ಮರಾಯನು ಮಹರ್ಷಿವರ್ಯನನ್ನು ಸ್ವಾಗತಿಸಿ ಪ್ರೀತ್ಯಾದರಗಳಿಂದ ಸತ್ಕರಿಸಿದರು. ಸಂತುಷ್ಟರಾಗಿ ಬ್ರಹ್ಮಮಾನಸ ಪುತ್ರ ಧರ್ಮರಾಯನ ರಾಜ್ಯದ ಕುಶಲೋಪಚರಿಯನ್ನು ಸೂಕ್ಷ್ಮವಾಗಿ ಪ್ರಶ್ನಿಸಿ, ವಿಚಾರಿಸಿ ಕೇಳಲಾರಂಭಿಸಿದರು. ಪ್ರಜೆಗಳು, ಕೃಷಿ, ಗೋ ಸಮೃದ್ಧಿ, ಯಾಗ ಹವನ ಹೋಮಗಳಾದಿಯಾಗಿ ಪುಣ್ಯಕಾರ್ಯಗಳು, ದಾನ ಧರ್ಮಾದಿಗಳು, ಋಷಿ ಪರಿವಾರದ ಕ್ಷೇಮ, ರಾಜ್ಯಭಾರ, ರಾಜತಾಂತ್ರಿಕ ನಡೆಗಳು, ಶತ್ರುಬಾಧೆ, ಹೀಗೆ ಸಮಸ್ತ ವಿಚಾರಗಳನ್ನೂ ಕೇಳುತ್ತಾ ಸಮಾಲೋಚಿಸಿ ವಿಮರ್ಶಿಸಿದರು. ಬಳಿಕ ಮಹರ್ಷಿ ತೃಪ್ತ ಮಾನಸರಾಗಿ “ಧರ್ಮರಾಯಾ, ವಾಸುದೇವನ ಕೃಪೆಯಿಂದ ನಿಮಗೆ ಶ್ರೀ ರಕ್ಷೆಯೂ, ಸಮೃದ್ಧಿಯೂ ಒದಗಿದೆ. ಮುಂದೆ ಧರ್ಮ ರಕ್ಷಣೆಯ ಬಹಳಷ್ಟು ಕಾರ್ಯಗಳು ನಿಮ್ಮಿಂದ ಆಗುವುದಕ್ಕಿದೆ” ಎಂದು ತನ್ನ ಅಭಿಪ್ರಾಯ ಪ್ರಕಟಿಸಿದರು.
ಆ ನಂತರ ನಾರದರು ಮಯ ನಿರ್ಮಿತ ಭವನವನ್ನು ವೀಕ್ಷಿಸುತ್ತಾ ಅದರ ಕುರಿತಾಗಿ ವರ್ಣಿಸುತ್ತಾ ಅದ್ಭುತ ಸೌಂದರ್ಯವನ್ನು ಮೆಚ್ಚಿ ಕೊಂಡಾಡಿದರು. ಹೀಗೆ ಪಾಂಡವರ ಕ್ಷೇಮ ವಾರ್ತೆ ತಿಳಿದುಕೊಂಡು, ಪ್ರಾಪ್ತಿಸಿಕೊಂಡ ಸಮೃದ್ಧಿಗೆ ಸಂತೋಷ ವ್ಯಕ್ತಪಡಿಸಿದರು. ಇದೆಲ್ಲ ಆದ ಬಳಿಕ ನಾರದ ಮಹರ್ಷಿ ತಮ್ಮ ಅಭಿಪ್ರಾಯ ಪ್ರಕಟಿಸುತ್ತಾ “ಧರ್ಮರಾಯಾ, ನಿಮ್ಮ ಸಂಚಿತ ಪುಣ್ಯಬಲದಿಂದ ಇಷ್ಟೆಲ್ಲ ಸೌಕರ್ಯ, ಸೌಭಾಗ್ಯ ಪ್ರಾಪ್ತವಾಗಿದೆ. ಅನೇಕ ರೀತಿಯ ಪುಣ್ಯಕಾರ್ಯಗಳಿಂದ ಹೊಂದಿದ ಸತ್ಫಲ ಸ್ವರೂಪವಾಗಿ ಅನರ್ಘ್ಯವಾದ ರಾಜ ವೈಭೋಗ, ವೈಭವ ಸಿದ್ಧಿಯಾಗಿದೆ. ಆದರೆ ನಿಮ್ಮ ತಂದೆ ಪಾಂಡು ಚಕ್ರವರ್ತಿಯಾಗಿ ಮೆರೆದಿದ್ದನಾದರೂ ಆತನಿಗೆ ಇಂತಹ ಯೋಗ ಭಾಗ್ಯಗಳು ಪ್ರಾಪ್ತವಾಗಿರಲಿಲ್ಲ” ಎಂದರು.
ಇದನ್ನು ಕೇಳಿ ಧರ್ಮರಾಯನು ತಟ್ಟನೆ ಸೂಕ್ಷ್ಮವನ್ನು ಅರಿತು ತನ್ನ ತಂದೆಯ ವಿಚಾರ ವಿಮರ್ಶಿಸತೊಡಗಿದನು. “ಪೂಜ್ಯರೆ ನೀವು ಸಕಲ ಲೋಕ ಸಂಚಾರ ಮಾಡುವವರು. ದಿವ್ಯ ಜ್ಞಾನಿಗಳಾದ ನಿಮ್ಮಲ್ಲಿ ನಮ್ಮ ತಂದೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಜಾಗೃತವಾಗಿದೆ. ನಮ್ಮ ಪಿತ ಮಹಾಶಯರಾದ ಪಾಂಡು ಚಕ್ರವರ್ತಿಯವರಿಗೆ ಮರಣ ಪ್ರಾಪ್ತವಾಗಿದೆ. ಈಗ ಅವರು ಸ್ವರ್ಗಸ್ಥರಾಗಿ ಇರುವರೇ? ಅವರಿಗಲ್ಲಿ ಸದ್ಗತಿ ಪ್ರಾಪ್ತವಾಗಿದೆಯಲ್ಲವೇ” ಎಂದು ಕೇಳಿದನು. ಆಗ ನಾರದರು ಒಮ್ಮೆ ಮೌನಕ್ಕೆ ಶರಣಾದರಾದರೂ, ನಿಧಾನವಾಗಿ ಮಾತಿಗೆ ತೊಡಗುತ್ತಾ “ಇಲ್ಲ, ನಿಮ್ಮ ತಂದೆಗೆ ಇನ್ನೂ ಸದ್ಗತಿ ಪ್ರಾಪ್ತವಾಗಿಲ್ಲ” ಎಂದು ಹೇಳಿದರು. ದೇವ ಋಷಿ ನಾರದರ ಮಾತು ಕೇಳಿ ಧರ್ಮರಾಯನ ಗೊಂದಲ ಇನ್ನಷ್ಟು ಹೆಚ್ಚಿತು, ಆತಂಕಗೊಂಡು ಯೋಚಿಸತೊಡಗಿದನು. ನಾರದರನ್ನು ಉದ್ದೇಶಿಸಿ “ಪೂಜ್ಯರೇ, ನಮ್ಮ ಪಿತನ ಮರಣದ ಬಳಿಕ ಋಷಿಗಳು ಜೊತೆಯಾಗಿದ್ದು, ವಂಶದ ಹಿರಿಯರಾದ ಭೀಷ್ಮಾಚಾರ್ಯರು, ಗುರುಗಳಾದ ದ್ರೋಣಾಚಾರ್ಯ, ಕೃಪಾಚಾರ್ಯರು, ಮಹಾರಾಜನೂ ನಮಗೆ ದೊಡ್ಡಪ್ಪನೂ ಆಗಿರುವ ಧೃತರಾಷ್ಟ್ರ, ರಾಜಮಾತೆ ಸತ್ಯವತಿದೇವಿ, ಸಮಸ್ತ ರಾಜಪರಿವಾರ, ಪ್ರಜಾಕೋಟಿ ಜೊತೆ ಸೇರಿ ಹಸ್ತಿನೆಯಲ್ಲಿ ಮೃತರಾದ ನಮ್ಮ ಪಿತನ ಸದ್ಗತಿಗಾಗಿ ಮರಣೋತ್ತರ ಕರ್ಮಗಳೆಲ್ಲಾ ನಡೆದಿವೆ. ಏನೆಲ್ಲ ವಿಧಿ ವಿಧಾನಗಳು ನೆರವೇರಬೇಕಿತ್ತೋ ಅದೆಲ್ಲವನ್ನೂ ವಿರಚಿಸಿ, ಯಥೇಚ್ಚ ದಾನ ಧರ್ಮಗಳನ್ನು ನೀಡಲಾಗಿತ್ತು. ಇದೆಲ್ಲವನ್ನು ನಮ್ಮ ತಂದೆಯವರಾದ ಪಾಂಡು ಚಕ್ರವರ್ತಿಯವರ ಸದ್ಗತಿಗಾಗಿ ಪೂರೈಸಲಾಗಿದೆ. ಈ ಸಂದರ್ಭ ತಾಯಿ ಕುಂತಿ ದೇವಿಯವರ ಜೊತೆ ಮಕ್ಕಳಾದ ನಾವು ಇದ್ದು ತರ್ಪಣಾದಿಗಳನ್ನು ಸಮರ್ಪಿಸಿದ್ದೇವೆ. ಹಾಗಿದ್ದೂ ನಮ್ಮ ತಂದೆಯವರಿಗೆ ಸ್ವರ್ಗಸುಖವಿಲ್ಲವೆಂದು ನೀವು ಹೇಳುತ್ತಿರುವಿರಿ. ಹಾಗಾಗಲು ಕಾರಣವೇನು? ಮಾತ್ರವಲ್ಲ ಅವರಿಗೆ ಸದ್ಗತಿ ಪ್ರಾಪ್ತವಾಗಬೇಕಾದರೆ ಏನು ಮಾಡಬೇಕು? ಪುತ್ರರಾದ ನಾವು ಬದುಕಿದ್ದು, ನಮ್ಮ ತಂದೆಗೆ ಸದ್ಗತಿ ಒದಗಿಸಬೇಕಾದುದು ನಮಗೆ ಕರ್ತವ್ಯ. ಈಗ ನಮ್ಮ ತಂದೆಯವರಿಗೆ ಯಾವ ಸ್ಥಿತಿ ಒದಗಿದೆ? ಆ ಗತಿಯಿಂದ ಮುಕ್ತಿ ಪಡೆದು ಸದ್ಗತಿ ಹೊಂದಲು ಏನು ಮಾಡಬೇಕು?” ಎಂದು ವ್ಯಥೆಗೊಳಗಾಗಿ ಪರಿಹಾರ ಮಾರ್ಗ ತಿಳಿಯ ಬಯಸಿದನು.
ಮುಂದುವರಿಯುವುದು..