ಭಾಗ 144
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೪೮ ಮಹಾಭಾರತ
“ಧರ್ಮರಾಯ ನೀನೇನು ಆತಂಕಕ್ಕೊಳಗಾಗಬೇಡ. ಯಮಲೋಕದಲ್ಲಿ ನಾಲ್ಕು ದಿಕ್ಕಿಗೆ ನಾಲ್ಕು ಸಭೆಗಳಿವೆ. ಪಾಪಿಗಳ ಕುರಿತಾದ ವಿಚಾರ- ತೀರ್ಮಾನ ತೆಂಕುದಿಕ್ಕಿನ ಸಭೆಯಲ್ಲಿ ನಡೆಯುತ್ತದೆ. ಯಮಧರ್ಮನು ಅಲ್ಲಿ ವಿಕಾರ ಸ್ವರೂಪನಾಗಿ ಕಿನಾಶ ಎಂಬ ಹೆಸರಿನಿಂದ ಭಯಂಕರ ಮೂರ್ತಿಯಾಗಿ ಉಪಸ್ಥಿತನಾಗುತ್ತಾನೆ. ಉತ್ತರ ದಿಕ್ಕಿನ ಸಭೆಯಲ್ಲಿ ದಾನಶೀಲರಾದ ಪುಣ್ಯವಂತರೊಡನೆ ಸೌಮ್ಯಮೂರ್ತಿಯಾಗಿ ಧರ್ಮರಾಜ ಎಂಬ ನಾಮದಿಂದ ವಿರಾಜಮಾನನಾಗುತ್ತಾನೆ. “ಪೂರ್ವ ದಿಕ್ಕಿನ ಸಭೆಯಲ್ಲಿ ಸತ್ಕರ್ಮ ನಿರತರಾದ ಸತ್ಪುರುಷರ ಜೊತೆ ಕಾರುಣ್ಯ ಮೂರ್ತಿಯಾಗಿ ಕಾಲ ಎಂಬ ಹೆಸರಿಂದ ರಾರಾಜಿಸುತ್ತಾನೆ. ಪಶ್ಚಿಮ ದಿಕ್ಕಿನ ಸಭೆಯಲ್ಲಿ ದೈವಭಕ್ತ, ಪುಣ್ಯಾತ್ಮ, ಧರ್ಮಾತ್ಮರೊಂದಿಗೆ ದರ್ಶನಕಾರನಾಗಿ ವಿವಸ್ವಂತ ಎಂಬ ಹೆಸರಿನಿಂದ ರಂಜಿಸುತ್ತಾನೆ. ನಿಮ್ಮ ತಂದೆ ಯಮಲೋಕದಲ್ಲಿದ್ದರೂ ಪಶ್ಚಿಮ ದಿಕ್ಕಿನ ಸಭೆಯಲ್ಲಿರುವುದನ್ನು ನಾನು ಕಂಡಿದ್ದೇನೆ. ಕಂಡ ಬಳಿಕ ಆತನನ್ನು ಮಾತನಾಡಿಸಿದ್ದೇನೆ. ಯಮಲೋಕದಲ್ಲಿದ್ದರೂ ಆತನ ಸುಸ್ಥಿತಿಗೆ ಕಾರಣ ಸದ್ಧರ್ಮದಿಂದ ರಾಜ್ಯಭಾರ ಮಾಡಿರುವುದಾಗಿದೆ. ಯಜ್ಞ ಯಾಗಾದಿಗಳ ಕಡೆಗೆ ಹೆಚ್ಚಿನ ಮಹತ್ವ ನೀಡದಿದ್ದುದೂ ಮತ್ತು ಶಾಪಗ್ರಸ್ಥನಾಗಿ ಮರಣ ಹೊಂದಿರುವುದೂ ಸ್ವರ್ಗ ಪ್ರಾಪ್ತವಾಗದಂತೆ ತಡೆದಿದೆ.
ಇದೆಲ್ಲವನ್ನೂ ನಾರದರಿಂದ ಕೇಳಿ ತಿಳಿದ ಧರ್ಮರಾಯ, “ಪೂಜ್ಯರೆ, ನಮ್ಮ ತಂದೆಗೆ ಈ ಸ್ಥಿತಿ ಸ್ಥಿರವೇ? ಸದ್ಗತಿಯಾಗಿ ಸ್ವರ್ಗ ಸುಖದ ಪ್ರಾಪ್ತಿ ಸಾಧ್ಯವಿಲ್ಲವೇ? ಮಕ್ಕಳಾದ ನಾವು ಏನು ಮಾಡಬಹುದು? ಪರಿಹಾರವೇನಾದರೂ ಇದ್ದರೆ ಖಂಡಿತಾ ನಾವು ಸಿದ್ದರಿದ್ದೇವೆ” ಎಂದನು. ಆಗ ನಾರದರು “ಧರ್ಮರಾಯಾ, ಯಾಗ ಯಜ್ಞಾದಿಗಳಿಂದ ದೇವತೆಗಳು ಸಂತೃಪ್ತರಾಗುತ್ತಾರೆ. ಸಂಚಿತ ಪುಣ್ಯ ಫಲವನ್ನು ಸತ್ಸಂಕಲ್ಪದಿಂದ ದಾನ ಮಾಡಿದರೆ ಸುಪ್ರೀತರಾಗಿ ದೇವತೆಗಳಿಂದ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಕ್ಷಾತ್ರ ಕುಲ ಸಂಜಾತರಾದ ನೀವು ಕ್ಷತ್ರಿಯೋಚಿತವಾದ ರಾಜಸೂಯ ಎಂಬ ಯಾಗವನ್ನು ವಿದ್ಯುಕ್ತವಾಗಿ ಪೂರೈಸಿ ಆ ಪುಣ್ಯ ಫಲವನ್ನು ತ್ಯಾಗ ಮಾಡಿ ತಂದೆಗೆ ಸದ್ಗತಿ ಹೊಂದಿಸಬಹುದು” ಎಂದರು. ನಾರದರಿತ್ತ ಪರಿಹಾರ ಉಪಾಯದಿಂದ ಸಮಾಧಾನಗೊಂಡ ಧರ್ಮರಾಯನು “ಆಗೆಯೇ ಆಗಲಿ. ಸಕಾಲದಲ್ಲಿ ಮಾರ್ಗದರ್ಶನ ನೀಡಿ ನಮ್ಮ ಕುಲೋದ್ದಾರಕ ಗುರುವಾಗಿ ನಮ್ಮ ಪಾಲಿಗೆ ಒದಗಿ ಸಂಕಷ್ಟ ಪರಿಹಾರದ ಮಾರ್ಗ ಸೂಚಿಸಿದ ನಿಮಗೆ ಅನಂತ ಕೃತಜ್ಞತೆಗಳು. ನಿಮ್ಮ ಸೂಚನೆಯಂತೆ ನಾವು ಯಾಗಕ್ಕೆ ಮುಂದಾಗುತ್ತೇವೆ, ಆಶೀರ್ವಾದ ಮಾಡಿ” ಎಂದು ಬೇಡಿ ಅಪ್ಪಣೆ ಪಡೆದನು. “ಸನ್ಮಂಗಲವಾಗಲಿ” ಎಂದು ಹರಸಿ ನಾರದರು ಹೊರಟು ಹೋದರು.
ಧರ್ಮರಾಯ ತನ್ನ ಸಹೋದರರನ್ನೊಡಗೂಡಿಕೊಂಡು ಪೂಜ್ಯರಾದ ಧೌಮ್ಯ ಮಹರ್ಷಿಗಳ ಜೊತೆ ಈ ಯಾಗದ ಕುರಿತಾಗಿ ಸಮಾಲೋಚನೆ ಮಾಡಿದನು. ಶ್ರೀ ಕೃಷ್ಣನೂ ಈ ಮಹತ್ಕಾರ್ಯಕ್ಕೆ ಬೇಕೆಂದು ಆಮಂತ್ರಿಸಿ ಕರೆಯಿಸಿಕೊಳ್ಳಲು ಇಂದ್ರಸೇನನೆಂಬ ದೂತನನ್ನು ಕಳುಹಿಸಿಕೊಟ್ಟರು. ದೂತನು ಪಾಂಡವರಿತ್ತ ಓಲೆ ಜೊತೆಗೆ ಕಾಣಿಕೆ ಸಮರ್ಪಿಸಿ, ಇಂದ್ರಪ್ರಸ್ಥಕ್ಕೆ ದಯಮಾಡಿಸಬೇಕಂತೆ ಎಂಬ ಸಂದೇಶವನ್ನು ಕೃಷ್ಣನಿಗೆ ತಿಳಿಯಪಡಿಸಿದನು. ಶ್ರೀಕೃಷ್ಣನೂ ಒಪ್ಪಿ ಬರುವುದಾಗಿ ಸಮ್ಮತಿಸಿದನು.
ಆದರೆ ಅದೇ ಸಮಯದಲ್ಲಿ ಸಾಲ್ವ ದೇಶಾಧಿಪ ದ್ವಾರಕೆಯ ಮೇಲೆ ದಂಡೆತ್ತಿ ಬರುತ್ತಿರುವ ವಿಚಾರ ಗುಪ್ತಚರರಿಂದ ತಿಳಿಯಿತು. ಮತ್ತೊಂದೆಡೆಯಿಂದ ಮಗಧ ದೇಶದಿಂದಲೂ ಒಂದು ವಾರ್ತೆ ಬಂತು. ಮಗಧ ದೇಶದ ರಾಜ ಜರಾಸಂಧ ಅನೇಕ ರಾಜ್ಯಗಳಿಗೆ ಆಕ್ರಮಣ ಮಾಡಿ ಅಲ್ಲಿನ ರಾಜಕುಮಾರರನ್ನು ಬಂಧಿಸಿ ಸೆರೆಯಲ್ಲಿಟ್ಟಿದ್ದನು. ಆತ ನಡೆಸುತ್ತಿರುವ ಭೈರವ ಯಾಗ ಕ್ಕೆ ಪೂರ್ಣಾಹುತಿಯಾಗಿ ಕೆಲದಿನಗಳಲ್ಲಿ ಈ ರಾಜಕುಮಾರರ ತಲೆಗಡಿಯಲಿದ್ದಾನೆ. ಸೆರೆಯಲ್ಲಿರುವ ರಾಜಪುತ್ರರು ಆರ್ತರಾಗಿ ಸರ್ವರ ರಕ್ಷಕ ಶ್ರೀ ಕೃಷ್ಣನನ್ನು ಧ್ಯಾನಿಸತೊಡಗಿದ್ದಾರೆ. ಅವರ ಅಳಲಿನ ಮೊರೆಯೂ ಕೃಷ್ಣನನ್ನು ಸೆಳೆಯುತ್ತಿದೆ. ಹೀಗೆ ಒಂದೆಡೆ ಸಾಲ್ವನ ಆಕ್ರಮಣ, ಮತ್ತೊಂದೆಡೆ ರಾಜಕುಮಾರರು ಆರ್ತರಾಗಿ ಭಕ್ತಿಯಿಂದ ಬೇಡುತ್ತಿರುವ ಪ್ರಾಣ ರಕ್ಷೆಯ ಪ್ರಾರ್ಥನೆ, ಇತ್ತ ಪಾಂಡವರ ಓಲೆ. ಮೂರು ದಿಕ್ಕಿನಿಂದ ಏಕಕಾಲದ ರಾಜತಾಂತ್ರಿಕ ವಿಚಾರಗಳು ಶ್ರೀ ಕೃಷ್ಣನನ್ನು ವ್ಯಸ್ಥಗೊಳಿಸಿವೆ. ಆದರೂ ಕ್ಷಿಪ್ರ ಪರಿಹಾರದ ಉಪಾಯಕ್ಕಾಗಿ ಅಣ್ಣ ಬಲರಾಮನ ಬಳಿ ಸಾಗಿದ ಶ್ರೀ ಕೃಷ್ಣ. ಸಾಲ್ವನ ಆಕ್ರಮಣವಾದರೆ ದ್ವಾರಕೆಯ ರಕ್ಷಣೆಗಾಗಿ ಯಾದವ ವೀರರ ಜೊತೆ ಸಿದ್ಧನಾಗಿರುವಂತೆ ಅಣ್ಣನಿಗೆ ಸೂಚಿಸಿದನು. ತಾನು ಧರ್ಮರಾಯನ ಕರೆಯಂತೆ ಇಂದ್ರಪ್ರಸ್ಥಕ್ಕೆ ತೆರಳಿ, ಅಲ್ಲಿಂದಲೇ ಮಗಧಾದಿಪ ಜರಾಸಂಧನ ಸೆರೆಯಲ್ಲಿರುವ ರಾಜಕುಮಾರರ ರಕ್ಷಣೆಯ ವ್ಯವಸ್ಥೆಯ ಬಗ್ಗೆ ಯೋಚಿಸುವೆ ಎಂಬುವುದಾಗಿ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಂಡು ಇಂದ್ರಪ್ರಸ್ಥದತ್ತ ಪಾಂಡವರನ್ನು ಕಾಣಲು ಹೊರಟನು.
ಮುಂದುವರಿಯುವುದು…