ಭಾಗ 141
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೪೨ ಮಹಾಭಾರತ
ಅರೆ ಕ್ಷಣದಲ್ಲಿ ಅಗ್ನಿ ತನ್ನ ಕೆನ್ನಾಲಿಗೆ ಚಾಚುತ್ತ ಜ್ವಾಲೆಯಾಗಿ ಹಬ್ಬಿ ಖಾಂಡವ ವನವನ್ನು ದಹಿಸಲಾರಂಭಗೊಂಡಿತು. ಕೃಷ್ಣಾರ್ಜುನರು ಬಾಣಗಳ ಶರ ಪಂಜರವನ್ನು ಚಪ್ಪರದಂತೆ ನಿರ್ಮಿಸಿ ಯಾವ ಪ್ರಾಣಿ ಪಕ್ಷಿ ಜಂತುಗಳೂ ವನದಿಂದ ಹೊರಹೋಗದಂತೆ ತಡೆದರು. ಕ್ರಿಮಿ ಕೀಟಗಳಿಂದ ಹಿಡಿದು ಬಲಾನ್ವಿತ ಪ್ರಾಣಿ ಪಕ್ಷಿಗಳವರೆಗೆ, ಹುಲ್ಲಿನಿಂದ ಹೆಮ್ಮರದವರೆಗೆ ಸಮಗ್ರವಾಗಿ ಖಾಂಡವ ವನಾಂತರ್ಗತ ಸಮಸ್ತ ವಸ್ತುಗಳೂ ಅಗ್ನಿಗಾಹುತಿಯಾಗತೊಡಗಿದವು.
ಒಮ್ಮಿಂದೊಮ್ಮೆಲೇ ಕಾರ್ಮೋಡ ಕವಿದು ಸಿಡಿಲಬ್ಬರದೊಂದಿಗೆ ಧಾರಕಾರ ಮಳೆ ಸುರಿಯತೊಡಗಿತು. ಆ ಕೂಡಲೇ ಕೃಷ್ಣಾರ್ಜುನರು ಶರ ವರ್ಷಗರೆದು ಅಂತರ ಅಂತರಗಳಲ್ಲಿ ಪದರ ಪದರದೋಪಾದಿಯಲ್ಲಿ ಚಪ್ಪರದಂತೆ ಮೇಲ್ಛಾವಣಿ ನಿರ್ಮಿಸಿ ಒಂದು ಹನಿ ನೀರೂ ಒಳಗಿಳಿಯದಂತೆ ಮಾಡಿದರು. ಎಷ್ಟು ಮಳೆ ಸುರಿದರೂ ಅಗ್ನಿಯ ಸ್ವಾಹ ಕಾರ್ಯ ನಿರಾತಂಕವಾಗಿತ್ತು. ಕಣ್ಣೆವೆ ಮುಚ್ಚದೆ ಕೃಷ್ಣಾರ್ಜುನರು ರಥವನ್ನು ಖಾಂಡವ ವನದ ಸುತ್ತೋಡಿಸುತ್ತಾ ಸರಿಸೃಪ, ಪ್ರಾಣಿ, ಪಕ್ಷಿ ಚಲನಶೀಲ ಯಾವ ಜಂತುವೂ ಹೊರ ನುಸುಳದಂತೆ ಕಾವಲಾಗಿ ನಿಂತಿದ್ದಾರೆ.
ಖಾಂಡವ ವನದಲ್ಲಿ ವಾಸವಾಗಿದ್ದ ತಕ್ಷಕನು ಮೊದಲೇ ಕಾರಣಾಂತರದಿಂದ ಹೊರಹೋಗಿದ್ದ. ಆತನ ಮಡದಿ ಮತ್ತು ಮಗನಾದ ಅಶ್ವಸೇನ ಅಗ್ನಿ ಜ್ವಾಲೆ ತಾಳಲಾರದೆ ಹೊರಹೋಗುವ ಯೋಜನೆ ರೂಪಿಸುತ್ತಿದ್ದಾರೆ. ವಯಸ್ಸಾದ ತಾಯಿಯಲ್ಲಿ ಅಶ್ವಸೇನ ಹೇಳಿದ – ಅಮ್ಮಾ ನೀನು ನನ್ನ ಬಾಲದಿಂದ ತೊಡಗಿ ಮಧ್ಯದವರೆಗೆ ನುಂಗಿಕೋ. ಗಗನ ಮಾರ್ಗದಲ್ಲಿ ಹಾರಿ ನಿನ್ನನ್ನು ಹೊತ್ತುಕೊಂಡು ಹೊರಗೆ ಹಾರಿ ಹೋಗಿ ಪ್ರಾಣ ಉಳಿಸುವೆ. ಹಾಗೆಯೇ ಹಾರಿ ಶರ ಪಂಜರದ ಕೋಟೆಗಳೊಳಗಿಂದ ನುಸುಳಿ ಎತ್ತರಕ್ಕೇರುತ್ತಿದ್ದಂತೆ ಅರ್ಜುನ ನೋಡಿದ. ಕೂಡಲೆ ತೀಕ್ಷ್ಣ ಶರ ಪ್ರಯೋಗಿಸಿದನು. ಪರಿಣಾಮ ಅಶ್ವಸೇನನ ನಡು ತುಂಡಾಗಿ ತಾಯಿ ಸಮೇತ ಅಗ್ನಿಗಾಹುತಿಯಾಯ್ತು. ಅರ್ಧ ಶರೀರ ಹಿಡಿದು ಅಶ್ವಸೇನ ಹೊರ ಜಾರಿ ಹಾರಿ ಹೋದನು. ಇದನ್ನು ಕಂಡ ಕೃಷ್ಣಾರ್ಜುನರು “ನಿನಗೆ ಲೋಕದಲ್ಲಿ ಪ್ರತಿಷ್ಠೆಯೇ ಇಲ್ಲದೆ ಹೋಗಲಿ” ಎಂದು ಶಪಿಸಿದರು.
ಅದೇ ಕಾನನದೊಳಗೆ ಮಾಯಾವಿ ರಾಕ್ಷಸ ಶಿಲ್ಪಿ “ಮಯ” ನೂ ವಾಸವಾಗಿದ್ದ. ಜಾಣ್ಮೆಯಿಂದ ಪಾರಾಗುವ ಯತ್ನದಲ್ಲಿದ್ದಾಗ ಕೃಷ್ಣಾರ್ಜುನರು ಗಮನಿಸಿ ಆತನನ್ನು ದಂಡಿಸತೊಡಗಿದರು. ತಪ್ಪಿಸಿ ಹೊರ ಹೋಗಲು ದಾರಿ ಕಾಣದಾದ ಆತ ಆರ್ತನಾಗಿ ಶರಣಾಗತಿಯಿಂದ ಪ್ರಾಣಭಿಕ್ಷೆ ಬೇಡಿಕೊಳ್ಳತೊಡಗಿದನು. ಅರ್ಜುನನ ಆಶಯದಂತೆ ಶರಣಾರ್ಥಿಯನ್ನು ಕೃಷ್ಣನು ಅನುಗ್ರಹಿಸಿ ಅಭಯ ನೀಡಿ ರಕ್ಷಿಸಿದರು.
ಹಿಂದೆ ‘ಮಂದಪಾಲ’ನೆಂಬ ಋಷಿಯು ಮಹಾ ತಪಸ್ವಿಯಾಗಿ ಅದ್ಬುತ ಜ್ಞಾನ ಸಂಪತ್ತನ್ನು ಪ್ರಾಪ್ತಿಸಿಕೊಂಡಿದ್ದನು. ಕಾಲಾಂತರದಲ್ಲಿ ಇಹಲೋಕ ಯಾತ್ರೆ ಮುಗಿಸಿದಾಗ ಪಿತೃಲೋಕದಲ್ಲಿ ಆತನಿಗೆ ಸದ್ಗತಿ ದೊರೆಯಲಿಲ್ಲ. ಪಿತೃದೇವತೆಗಳನ್ನು ಪ್ರಾರ್ಥಿಸಿ ತನ್ನ ಈ ದುರ್ಗತಿಗೆ ಕಾರಣವೇನೆಂದು ಕೇಳಿದಾಗ – ನೀನು ಬ್ರಹ್ಮಚರ್ಯ, ಅಧ್ಯಯನ, ಜ್ಞಾನಾರ್ಜನೆಯಿಂದ ಋಷಿ ಋಣ ಮುಕ್ತನಾಗಿರುವೆ. ಯಜ್ಞ ಯಾಗಾದಿಗಳನ್ನು ನೆರವೇರಿಸಿ ಆಹುತಿ ನೀಡಿ ದೇವ ಋಣ ಮುಕ್ತನಾಗಿದ್ದರೂ, ಭೂಜಾತನಾಗಿದ್ದ ನಿನಗೆ ‘ಪುತ್’ ಎಂಬ ನರಕ ಪ್ರಾಪ್ತವಾಗಿದೆ. ಈ ಬಾಧೆಯಿಂದ ಪರಿಹರಿಸಿಕೊಳ್ಳಲು ನೀನು ಪುತ್ರ ಸಂತಾನ ಪಡೆಯಬೇಕಿತ್ತು. ನಿನ್ನಿಂದಾಗಿ ನಿನ್ನ ಪಿತೃಗಳಿಗೂ ಬಾಧೆಯಾಗಲಿದೆ. ಹಾಗಾಗಿ ಈ ದುರ್ಗತಿ ಎಂದು ತಿಳಿಸಿದರು. ಅದಕ್ಕಾಗಿ ನೀನು ಮತ್ತೆ ಜನ್ಮ ತಳೆದು ಹುಟ್ಟಿ ಸಂತಾನವನ್ನು ಹೊಂದಿ, ಋಣಮುಕ್ತನಾಗಿ ಬಂದರೆ ಸದ್ಗತಿ ಪಡೆಯಬಹುದು ಎಂದರು. ಅದರಂತೆ ಮಂದಪಾಲನು ‘ಶಾಂರ್ಙ್ಗಕ‘ ಎಂಬ ಹೆಸರಿನ ಒಂದು ಪಕ್ಷಿ ಜಾತಿಯಲ್ಲಿ ಹುಟ್ಟಿದನು. ಅವನು ವಯೋ ಪ್ರಬುದ್ದನಾಗಿ ಜರಿತಾ ಎಂಬ ಹೆಣ್ಣು ಹಕ್ಕಿಯೊಂದಿಗೆ ಅನುರಕ್ತನಾದನು. ಪರಿಣಾಮ ನಾಲ್ಕು ಮೊಟ್ಟೆಗಳನ್ನಿಟ್ಟಿತು ಹೆಣ್ಣು ಹಕ್ಕಿ. ಸಂಚಿತ ಪುಣ್ಯ ವಿಶೇಷ ಬಲದಿಂದ ಪೂರ್ವ ಸ್ಮರಣೆಯಿದ್ದ ‘ಶಾರ್ಙ್ಗಕ’ ತನ್ನ ಸಂಸಾರದ ಈ ನಾಲ್ಕು ಮೊಟ್ಟೆಗಳನ್ನು ಅವಲೋಕಿಸಿ ಮೊದಲು ಒಡೆಯುವ ಮೊಟ್ಟೆಯಲ್ಲಿ ಹಿರಿಯವನಾಗಿ ‘ಜರತಾರಿ’ ಎಂಬ ಮಗ ಜನಿಸಿ ನಮ್ಮ ಕುಲಕ್ಕೆ ಆಧಾರ ಪುರುಷನಾಗಿ ಹುಟ್ಟುವನು. ಎರಡನೆಯವನಾಗಿ ‘ಸಾರಿಸೃಕ್ವ’ ಪಿತೃ ವಂಶೋದ್ಧಾರಕನಾಗಿ ಹುಟ್ಟುವನು. ಮೂರನೆಯ ‘ಸ್ತಂಭ ಮಿತ್ರ’ ನು ಮಹಾ ತಪಸ್ವಿಯಾಗುವನು. ಕಿರಿಯವನಾದವನು ‘ದ್ರೋಣ’ ಅತಿಶಯವಾದ ಬ್ರಹ್ಮ ಜ್ಞಾನವನ್ನು ಹೊಂದುವನು. ಇವರ ಈ ಸಂಸಾರ ಖಾಂಡವ ವನದಲ್ಲಿ ವಾಸವಾಗಿತ್ತು. ಶಾರ್ಙ್ಗಕನು ಮಡದಿ, ಮೊಟ್ಟೆಗಳನ್ನು ಬಿಟ್ಟು ‘ಲಪಿತೆ’ ಎಂಬ ಇನ್ನೊಂದು ಪಕ್ಷಿಯೊಂದಿಗೆ ಸಂಸಾರಿಯಾಗಿ ಖಾಂಡವ ವನದ ಹೊರಗೆ ವಾಸವಾಗಿದ್ದನು. ಈಗ ಖಾಂಡವವನ ಅಗ್ನಿಗಾಹುತಿಯಾದ ವಿಚಾರ ತಿಳಿದು ಓಡಿ ಬಂದನು. ವನದೊಳಗೆ ಹೋಗುವಂತಿಲ್ಲ. ಒಳಗೆ ಮೊಟ್ಟೆಯೊಡೆದು ಹುಟ್ಟಿದ ನಾಲ್ಕು ಮರಿಗಳೊಂದಿಗೆ ತಾಯಿ ಜರಿತಾ ಅಗ್ನಿ ಜ್ವಾಲೆಯ ಮಧ್ಯೆ ಇದ್ದಾರೆ.
ಮುಂದುವರಿಯುವುದು…