ಭಾಗ 140
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೧೪೧ ಮಹಾಭಾರತ
ಅಗ್ನಿದೇವನ ಮಾತುಗಳನ್ನು ಆಲಿಸುತ್ತಿದ್ದ ಅರ್ಜುನ “ಸಹಾಯ ಮಾಡಬಹುದಿತ್ತು, ಆದರೆ ನಾವೀಗ ಸಮರ್ಥ ರಥ, ಧನುರ್ಬಾಣಗಳಿಲ್ಲದೆ ಬರಿಗೈಯಲ್ಲಿ ಬಂದಿದ್ದೇವೆ. ಏನು ಮಾಡೋಣ. ಸಮಯಾವಕಾಶದ ಅಂತರದಲ್ಲಿ ನಿಮ್ಮ ಬೇಡಿಕೆ ಈಡೇರಿಸಬಹುದಾದರೆ ನಿಮ್ಮ ಆಶಯಕ್ಕೆ ನಾವು ಒದಗಬಹುದಿತ್ತು ” ಎಂದು ಹೇಳುತ್ತಾ ಶ್ರೀ ಕೃಷ್ಣನತ್ತ ನೋಡಿದನು. ಅವನ ಅಭಿಮತವೂ ಅದೇ ಎಂಬಂತೆ ಶ್ರೀಕೃಷ್ಣನೂ “ಹೌದು” ಎನ್ನುತ್ತಾ ತಲೆಯಾಡಿಸಿದನು. ಕೇಳಿಸಿಕೊಂಡ ಅಗ್ನಿದೇವ ಆ ಕೂಡಲೆ ವರುಣನನ್ನು ಧ್ಯಾನಿಸತೊಡಗಿದನು. ಯಮುನಾ ನದಿ ಮಧ್ಯದಿಂದ ಭವ್ಯವಾದ ರಥವೊಂದು ಶ್ವೇತಾಶ್ವಗಳಿಂದ ಬಂಧಿಸಲ್ಪಟ್ಟು, ಧನುರ್ಬಾಣ, ದಿವ್ಯಾಯುಧಗಳನ್ನು ತುಂಬಿಕೊಂಡು ಮೇಲೆದ್ದು ಸುಸಜ್ಜಿತವಾಗಿ ತೀರದಲ್ಲಿ ನಿಂತಿತು. ರಥವನ್ನು ತೋರಿಸುತ್ತಾ ಅಗ್ನಿದೇವ ಹೇಳತೊಡಗಿದ, “ಅರ್ಜುನಾ – ಇದೋ ದಿವ್ಯ ರಥ ಸಿದ್ದವಾಗಿದೆ. ಇದು ಸಾಮಾನ್ಯ ರಥವಲ್ಲ. ನೀರು, ಬೆಂಕಿ, ಯಾವುದೇ ಆಯುಧಗಳಿಂದ ಈ ರಥಕ್ಕೇನೂ ಮಾಡಲಾಗದು. ಈ ರಥವನ್ನು ವಿಶ್ವಕರ್ಮನು ಅತ್ಯಂತ ಕೌಶಲ್ಯದಿಂದ ನಿರ್ಮಿಸಿದ್ದಾನೆ. ರಥಕ್ಕೆ ಕಟ್ಟಿದ ಅಶ್ವಗಳೂ ದಿವ್ಯ
ಶ್ವೇತಾಶ್ವಗಳೂ ಅವಧ್ಯವಾದವುಗಳಾಗಿದ್ದು ಬಳಲಲಾರವು, ಬೀಳಲಾರವು, ನೋಯಲಾರವು. ಯಾರ – ಯಾವ ಆಯುಧ, ಶಸ್ತ್ರಗಳೂ ಇವುಗಳನ್ನು ಗಾಯಗೊಳಿಸಲಾರವು. ಈ ರಥದಂತೆಯೇ ತುರಗಗಳೂ ಅಭೇದ್ಯವಾಗಿದ್ದು ಮನೋಗಮನ ವೇಗ ಹೊಂದಿವೆ. ರಥದಲ್ಲಿರುವ ಈ ಧನುಸ್ಸು ‘ಗಾಂಡೀವ’ ಎಂಬ ಹೆಸರಿನಿಂದ ಪ್ರಖ್ಯಾತವಾಗಿದೆ. ಈ ಧನುಸ್ಸೂ ಅಧಮ್ಯ ಶಕ್ತಿಹೊಂದಿದ್ದು ಜಯ – ಯಶಪ್ರದವಾಗಿದೆ. ಈ ಗಾಂಡೀವ ಇಂದ್ರನ ‘ವಜ್ರಾಯುಧ’, ಮಹಾವಿಷ್ಣುವಿನ ಧನುಸ್ಸಾದ ‘ಶಾರ್ಙ್ಗ’, ಮಹಾರುದ್ರನ ‘ಪಿನಾಕ’ ಗಳಿಗೆ ಸಮಾನವಾಗಿದೆ. ಇದೋ ಇವು ಎರಡು ಅಕ್ಷಯ ಬತ್ತಳಿಕೆಗಳು, ಎಷ್ಟು ಬಾಣಗಳನ್ನು ಸೆಳೆದು ಪ್ರಯೋಗಿಸಿದರೂ ಕ್ಷಯವಾಗದ – ಬರಿದಾಗದ ವಿಶೇಷ ತೂಣಿರಗಳಿವು. ಕೈ ಬೆರಳುಗಳಿಗೆ ಈ ಕವಚ ಧರಿಸಿ ಎರಡೂ ಬತ್ತಳಿಕೆಗಳನ್ನು ಎಡ – ಬಲ ಭುಜಗಳಿಗೆ ಬಿಗಿದು ಕಟ್ಟಿಕೋ. ಬಾಲ್ಯದಿಂದಲೇ ಕಲಿತು ನಿಪುಣನಾದ ನೀನು ಸವ್ಯಾಪಸವ್ಯವಾಗಿ ಬಾಣ ಪ್ರಯೋಗಿಸಬಲ್ಲ ವೀರನೇ ಹೌದು. ಹಿಂದೆ ಸೋಮನು ಇದೇ ರಥವೇರಿ, ಇದೇ ಧನುರ್ಬಾಣಗಳಿಂದ ದಾನವರನ್ನೆದುರಿಸಿ ನಾಶ ಮಾಡಿದ್ದನು. ಈಗ ನೀನು ಗಾಂಡೀವ ಹಿಡಿದು, ಅಕ್ಷಯ ತೂಣಿರ ಬಿಗಿದು ಯುದ್ದ ಸನ್ನದ್ದನಾದರೆ ನಿನ್ನನ್ನು ಗೆಲ್ಲಬಲ್ಲವರು ಮೂರು ಲೋಕಗಳಲ್ಲಿ ಯಾರೂ ಇರಲಾರರು. ಹೀಗೆ ವೈಶಿಷ್ಟ್ಯಗಳನ್ನು ವಿವರಿಸಿ ವಿಶೇಷ ಯುದ್ದ ವಸ್ತುಗಳನ್ನು ಶ್ರೀ ಕೃಷ್ಣನ ಸಮ್ಮುಖದಲ್ಲಿ ಅರ್ಜುನನಿಗೆ ಒಪ್ಪಿಸಿದನು. ಅರ್ಜುನನು ಧನುರ್ಧರನಾಗಿ ಸಿದ್ದನಾದನು. ಧನುಸ್ಸಿಗೆ ಹೆದೆಯೇರಿಸಿ ಸೆಳೆದು ಮಿಡಿದ ಟೇಂಕಾರ ಭೂಮ್ಯಾಕಾಶಗಳನ್ನು ವ್ಯಾಪಿಸಿತು. ಕೃಷ್ಣಾರ್ಜುನರು ಜತೆಯಾಗಿ ಅಗ್ನಿಗೆ ವಂದಿಸಿ, ಖಾಂಡವ ವನವನ್ನು ಆಹುತಿಯಾಗಿ ಕೈಗೊಳ್ಳಲು ವಿನಂತಿಸಿದರು.
ಆ ಕ್ಷಣದಲ್ಲೇ ಕೃಷ್ಣಾರ್ಜುನರಿದ್ದ ಭಾಗದಿಂದ ಅಗ್ನಿ ಹೊತ್ತಿ ಉರಿಯಲಾರಂಭಿಸಿತು.
ಮುಂದುವರಿಯುವುದು…