ಭಾಗ 136
ಭರತೇಶ್ ಶೆಟ್ಟಿ ,ಎಕ್ಕಾರ್
ಸಂಚಿಕೆ ೧೩೭ ಮಹಾಭಾರತ
ಸುಭದ್ರಾರ್ಜುನರು ಉತ್ತಮವಾದ ರಥವನ್ನೇರಿ ಹೊರಟು, ಅನೇಕ ಪಟ್ಟಣಗಳನ್ನು, ನದಿ ಪರ್ವತಗಳನ್ನೂ ದಾಟುತ್ತಾ, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ್ತಾ, ಋಷ್ಯಾಶ್ರಮಗಳಿಗೆ ಭೇಟಿಯಿತ್ತು ಆಶೀರ್ವಾದ ಪಡೆಯುತ್ತಾ ಪ್ರಯಾಣ ಮುಂದುವರಿದು ಇಂದ್ರಪ್ರಸ್ಥದ ಸನಿಹ ತಲುಪಿದರು.
ದ್ವಾರಕೆಯಿಂದ ಕಳುಹಲ್ಪಟ್ಟ ರಥವನ್ನು ಪುರದ ಹೊರವಲಯದಲ್ಲಿ ನಿಲ್ಲಿಸಿ, ಸುಭದ್ರೆಯನ್ನು ಕೈ ಹಿಡಿದು ಕರೆದುಕೊಂಡು ಊರ ಒಳಗೆ ಹೋದನು. ಸಾಗುತ್ತಾ ಪಾರ್ಥ ಪ್ರಜಾರಂಜಕನಾಗಿ ದನಗಳನ್ನು ಮೇಯಿಸುತ್ತಿದ್ದ ಗೋಪಾಲಕರನ್ನು ಕರೆದು ಕ್ಷೇಮ ಸಮಾಚಾರ ವಿಚಾರಿಸಿದನು. ಬಳಿಕ ಕೆಲವು ಹಿರಿ ಕಿರಿಯ ಹರೆಯದ ಗೊಲ್ಲತಿಯರನ್ನು ಕರೆದು ಸುಭದ್ರೆಯ ಜತೆಯಾಗಿಸಿದನು. ಇಂದ್ರಪ್ರಸ್ಥದ ಅರಮನೆಗೆ ಮಾರುವೇಷ ಧರಿಸಿ ಗೋಪಾಲಕರ ಗೊಲ್ಲತಿಯಾಗಿಸಿ ಕರೆದೊಯ್ದು ತಲುಪಿಸುವ ವ್ಯವಸ್ಥೆ ಸಿದ್ಧ ಪಡಿಸಿದನು. ಇಷ್ಟಾದ ಬಳಿಕ ಸುಭದ್ರೆಗೆ ನೀತಿಯ ಕಿವಿ ಮಾತುಗಳನ್ನು ಹೇಳತೊಡಗಿದನು. “ಹೇ ಸುಭದ್ರೆ, ಗೊಲ್ಲತಿಯ ವೇಷದಲ್ಲಿ ನೀನು ಅತಿ ಜಾಗರೂಕಳಾಗಿ ಇಂದ್ರಪ್ರಸ್ಥ ಸೇರಬೇಕು. ಸೂಕ್ಷ್ಮಮತಿ, ಸಮಯಪ್ರಜ್ಞೆ ನಿನ್ನ ನಡತೆಯಲ್ಲಿರಬೇಕು. ಇಂದ್ರಪ್ರಸ್ಥ ಸೇರಿ ಮೊದಲು ನನ್ನಮ್ಮ ಕುಂತಿದೇವಿಯನ್ನು ಕಾಣಬೇಕು. ಹೋದ ಕೂಡಲೆ ಪರಿಚಯ ಹೇಳಬೇಡ, ಸಾವಕಾಶದಿಂದ ಸಮಯ ನೋಡಿ ಯುಕ್ತಿಯಿಂದ ನಿನ್ನನ್ನು ಪರಿಚಯಿಸಿ, ವಿವಾಹ ವೃತ್ತಾಂತವನ್ನು ತಿಳಿಯಪಡಿಸು. ಪೂರ್ವ ಸಂಬಂಧದಲ್ಲಿ ಸೋದರತ್ತೆಯಾಗಿ ಪರಿಚಿತಳೆ ಆಗಿರುವ ಅವರ ಬಳಿ ಸಮಗ್ರ ವಿಚಾರ ತಿಳಿಸಿ ಆಶೀರ್ವಾದ ಪಡೆದುಕೊಳ್ಳಬೇಕು. ನಂತರ ಅಣ್ಣ ಧರ್ಮರಾಯನನ್ನು ಅಮ್ಮನ ಜೊತೆ ಭೇಟಿಯಾಗುವಿಯಂತೆ. ಬಳಿಕ ಸಹೋದರರಾದ ಭೀಮ, ನಕುಲ ಸಹದೇವರನ್ನೂ ಕಂಡು ಮಾತನಾಡಿಸು. ದ್ರೌಪದಿಯ ಜೊತೆ ಸಾವಧಾನದಿಂದ ವ್ಯವಹರಿಸು. ಆಕೆ ಒಮ್ಮೆ ನಿನ್ನನ್ನು ಸ್ವೀಕರಿಸಿದರೆ ಮತ್ಯಾವ ತೊಂದರೆಯೂ ಬಾರದು. ಅಣ್ಣ ಧರ್ಮರಾಯ ಮತ್ತು ಮಾತೆ ಕುಂತಿದೇವಿ ಇರುವಾಗ ಅಲ್ಲಿ ಯಾರಿಂದಲೂ ನಿನ್ನ ಮನಸ್ಸಿಗೆ ನೋವುಂಟಾಗಲಾರದು. ಒಂದೊಮ್ಮೆಗೆ ಅನಿರೀಕ್ಷಿತವಾಗಿ ಅಂತಹ ಸಂದರ್ಭ ಬಂದರೂ ನೀನೇ ಶಾಂತಚಿತ್ತಳಾಗಿದ್ದು ಸುಧಾರಿಸಿಕೊಂಡು ಹೋಗಬೇಕು.” ಹೀಗೆ ಮಾರ್ಗದರ್ಶನ ಮಾಡಿದನು ಅರ್ಜುನ.
ಗೊಲ್ಲರಕೇರಿ ಸೇರಿದ ಸುಭದ್ರೆ ತನ್ನ ವಸನ ಭೂಷಣಗಳನ್ನು ತೆಗೆದು ಗಂಟಾಗಿ ಕಟ್ಟಿಕೊಂಡಳು. ಬಳಿಕ ಗೊಲ್ಲತಿಯ ವೇಷ ಧರಿಸಲು ಕೆಂಪು ಸೀರೆಯನ್ನುಟ್ಟು, ಬೆಳ್ಳಿಯ ಕಡಗ, ಕಾಲಂದುಗೆ, ಮೂಗಿಗೆ ನತ್ತುಗಳನ್ನು ಧರಿಸಿ ಕೊರಳಿಗೆ ಮಣಿಸರಗಳನ್ನೂ ಪೋಣಿಸಿದಳು. ಹಣೆಗೆ ಹೆಬ್ಬೆಟ್ಟಿನ ಗಾತ್ರದ ದುಂಡು ಕುಂಕುಮದ ಬೊಟ್ಟನ್ನಿಟ್ಟು, ವಾಲಿಸಿ ತಲೆಬದಿಗೆ ಕೇಶದ ಸೂಡಿಯನ್ನು ಬಿಗಿದು ಸೆರಗನ್ನು ಸೆಳೆದು ಶಿರವನ್ನು ಆವರಿಸಿ ಎಳೆದು ಮುಚ್ಚಿಕೊಂಡಳು. ಕಚ್ಚೆಯನ್ನೂ ಬಿಗಿದುಕಟ್ಟಿ ಸಾಕ್ಷಾತ್ ಗೊಲ್ಲತಿಯೇ ಆಗಿ ತನ್ನ ವಸ್ತ್ರಾಭರಣಗಳ ಗಂಟನ್ನು ಬುಟ್ಟಿಯಲ್ಲಿಟ್ಟು ಹೊತ್ತುಕೊಂಡು ಗೊಲ್ಲತಿಯರ ಜೊತೆ ಹೊರಡಲು ಸನ್ನದ್ಧಳಾದಳು. ಮತ್ತೆ ಸುಭದ್ರೆಯನ್ನು ಕರೆದು ಸರ್ವ ವಿಚಾರದಲ್ಲೂ ಎಚ್ಚರವಾಗಿರು. ಮೈಮರೆತು ವ್ಯವಹರಿಸಬೇಡ. ಮಾತು, ಮೌನಗಳೆರಡನ್ನೂ ಅಗತ್ಯವಿರುವಂತೆ ಬಳಸಿಕೋ. ಹೆಜ್ಜೆ ಹೆಜ್ಜೆಗೂ ಜಾಗೃತೆ ಸದಾ ನಿನ್ನದಾಗಿರಲಿ” ಎಂದು ಎಚ್ಚರಿಸಿ, ಬೆನ್ನುತಟ್ಟಿದನು ಅರ್ಜುನ. ಗೊಲ್ಲತಿಯರನ್ನು ಕರೆದು “ಈಕೆಯನ್ನು ಅರಮನೆಗೆ ಸೇರಿಸುವ ಜವಾಬ್ದಾರಿ ಹೊಂದಿದ್ದೀರಿ. ಈ ಪ್ರದೇಶದ ಬಗ್ಗೆ ಗೊತ್ತಿರುವ ನೀವು ಸುಭದ್ರೆಯನ್ನು ನಿಮ್ಮ ಮಧ್ಯದಲ್ಲಿರಿಸಿ ನಡೆದು ಅರಮನೆಗೆ ಕ್ಷೇಮವಾಗಿ ತಲುಪಿಸಿ ಬನ್ನಿ”. ಹೀಗೆಲ್ಲಾ ಹೇಳಿ ” ನಾನು ಈಗ ಬರಲಾಗದು. ಕೆಲ ಮಾಸಗಳೊಗಾಗಿ ತೀರ್ಥಯಾತ್ರೆಯ ಅವಧಿ ಪೂರೈಸಿ ಬಳಿಕ ಬರುತ್ತೇನೆ” ಎಂದು ಹೇಳಿ ಹರಸಿ ಅವರನ್ನು ಕಳುಹಿಸಿ ಅರ್ಜುನ ತನ್ನ ಯಾತ್ರೆ ಮುಂದುವರಿಸಿದನು.
ಗೊಲ್ಲತಿಯರೊಂದಿಗೆ ಇಂದ್ರಪ್ರಸ್ಥ ಪುರ ಪ್ರವೇಶಿಸಿದಾಗ ಸುಭದ್ರೆಯೂ ಓರ್ವ ಸಾಮಾನ್ಯ ಗೊಲ್ಲತಿಯಂತೆಯೇ ಇದ್ದು ಯಾರ ಗಮನವನ್ನೂ ಸೆಳೆಯಲಿಲ್ಲ. ಅರಮನೆಯ ಸಾಮಿಪ್ಯ ತಲುಪಿ, ಅಲ್ಲಿನ ಜನ, ವ್ಯವಹಾರಗಳನ್ನೆಲ್ಲಾ ಸೂಕ್ಷ್ಮವಾಗಿ ಅವಲೋಕಿಸುತ್ತಾ, ಕುಂತಿದೇವಿಯ ಭೇಟಿಗಾಗಿ ಸೂಕ್ತ ಸಮಯದ ಅವಕಾಶಕ್ಕಾಗಿ ಕಾದು ಕುಳಿತಳು. ಅರಮನೆಯ ಪ್ರವೇಶ ದ್ವಾರದ ಬಳಿ ಏನೋ ಕಾರ್ಯ ಕಾರಣದಿಂದ ಕುಂತಿ ಬಂದಾಗ ಗುರುತಿಸಿ, ಸುಭದ್ರೆ ತಕ್ಷಣ ಬಳಿ ಸಾಗಿ ನಮಿಸಿದಳು. ಕುಂತಿ ಪ್ರತಿ ನಮಸ್ಕಾರ ನೀಡಿದಾಗ ಬಗ್ಗಿ ಆಕೆಯ ಪಾದಗಳನ್ನು ಸ್ಪರ್ಶಿಸಿ ಆಶೀರ್ವಾದ ಬೇಡಿದಳು. ಅಭ್ಯಾಸಬಲದಿಂದ “ದೀರ್ಘ ಸುಮಂಗಲೆಯಾಗು ವೀರ ಸುಕುಮಾರನ ಮಾತೆಯಾಗು” ಎಂದು ಹರಸಿದಳು. ಭುಜ ಹಿಡಿದೆತ್ತಿ ಸುಭದ್ರೆಯನ್ನು ನಿಲ್ಲಿಸಿದಾಗ
ಪಿಸು ಮಾತಿನಲ್ಲಿ “ಅತ್ತೆ ನಾನು ಸುಭದ್ರೆ, ದ್ವಾರಕೆಯಿಂದ ಬಂದಿರುವೆ” ಎಂದಳು. ಕುಂತಿಗೆ ಕೃಷ್ಣ ಕಳುಹಿಸಿದ್ದ ಓಲೆ, ಅರ್ಜುನನೊಂದಿಗಿನ ವಿವಾಹ ಪ್ರಸ್ತಾಪ ಸಂಗತಿ ಸ್ಮರಣೆಗೆ ಬಂದು ಆಕೆಯನ್ನು ಅಂತಃಪುರದತ್ತ ಕರೆದೊಯ್ದಳು. ವಿವಾಹ ವಿಚಾರದ ಪೂರ್ಣ ಕಥೆ, ಇಂದ್ರಪ್ರಸ್ಥದ ಹೊರವಲಯದವರೆಗೆ ಅರ್ಜುನನೇ ಕೈಹಿಡಿದು ಕರೆತಂದನು ಎಂದು ಸುಭದ್ರೆ ಹೇಳಿದಾಗ ಅರ್ಜುನನ ಬಗ್ಗೆಯೂ ಬಹುವಾಗಿ ವಿಚಾರಿಸಿದಳು. ಅಣ್ಣ ವಸುದೇವ, ದೇವಕಿ, ಯಶೋದೆಯರ ಕ್ಷೇಮ ಸಮಾಚಾರ, ಕೃಷ್ಣ ಬಲರಾಮ ರುಕ್ಮಿಣಿ, ರೇವತಿಯರ ಬಗ್ಗೆಯೂ ಕೇಳಿ ತಿಳಿದಳು. ಸುಭದ್ರೆಯನ್ನೊಮ್ಮೆ ಅಡಿಯಿಂದ ಮುಡಿಯವರೆಗೆ ನೋಡಿ ಆಕೆಯ ರೂಪ, ಲಾವಣ್ಯ, ಕೋಮಲತೆಯನ್ನು ಕಂಡು ಬಹುವಾಗಿ ಮೆಚ್ಚಿದಳು. ಹರ್ಷಿತಳಾಗಿ ಸುಭದ್ರೆಯ ಶಿರಸ್ಸನ್ನು ಪೂಸಿ ನೇವರಿಸಿ ಆಶೀರ್ವದಿಸಿದಳು.
ಮುಂದುವರಿಯುವುದು…