31.4 C
Udupi
Tuesday, May 5, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 99

ಭರತೇಶ್ ಶೆಟ್ಟಿ, ಎಕ್ಕಾರ್

ಹಿಡಿಂಬೆ ನಿಂತು ಭೀಮನನ್ನೇ ಅವಲೋಕಿಸತೊಡಗಿದಳು. ಸುಧೃಡವಾದ ದೇಹ, ನೀಳ ಕಾಯ, ಬಲಯುತ ಬಾಹುಗಳು, ವಿಶಾಲ ಎದೆ, ಗಂಭೀರವಾದ ಮುಖ ಮುದ್ರೆ ಹೀಗೆ ಹಿಡಿಂಬೆ ಓರ್ವಳು ರಕ್ಕಸಿಯಾದರೂ ಹರೆಯದ ಹೆಣ್ಣಾಗಿ, ಪ್ರಾಯ ಸಹಜ ಗುಣದಿಂದ ಓರ್ವ ಪುರುಷನ ಸೌಂದರ್ಯಕ್ಕೆ ಇದೇ ಮೊದಲಬಾರಿಗೆ ಮನಸೋತಳು. ಬಂದಿರುವುದು ಕೊಂದು ತಿನ್ನಲು ಆಹಾರ ಅರಸಿ, ಈಗ ಯೋಚನೆ ಮಗ್ಗಲು ಬದಲಿಸಿ ಬಯಸಿರುವುದು ಈ ಭೀಮಸೇನನ ಅರಸಿಯಾಗುವುದಕ್ಕೆ. ಮೆಲ್ಲ ಮೆಲ್ಲನೆ ನಾಚುತ್ತಾ, ಸ್ತ್ರೀ ಸ್ವಭಾವ ಮಿಳಿತ ಲಜ್ಜೆ ಮೈತಳೆಯಿತು. ಏನೋ ಒಂದು ರೀತಿಯ ಭಾವ ಸಂಚಲನವಾಗುತ್ತಿದೆ. ಅಣ್ಣ ಹಿಡಿಂಬಾಸುರನ ಆಜ್ಞೆಯೂ ಮರೆತು ಹೋಗಿದೆ. ಭೀಮನ ಮುಂಭಾಗದಲ್ಲಿ ಬಂದು ಗಮನ ಸೆಳೆಯುವ ಯತ್ನ – ಪ್ರಯತ್ನ ಮಾಡುತ್ತಿದ್ದಾಳೆ.

ಭೀಮ ಮಾತ್ರ ತನ್ನದೇ ಆದ ಯೋಚನೆಗಳಲ್ಲಿ ಮುಳುಗಿ ಹೋಗಿದ್ದಾನೆ. ಹಿಡಿಂಬೆ ಮತ್ತೂ ಮುಂದುವರಿದು ಸನಿಹದಲ್ಲಿ ನಿಂತು ಸದ್ದು ಮಾಡಿದಾಗ ಎಚ್ಚೆತ್ತ ಭೀಮ ಈಕೆಯನ್ನು ನೋಡಿದನು. ಕೈ ಮುಗಿದು ನಿಂತ ಹೆಣ್ಣನ್ನು ನೋಡಿ ಯಾರು ನೀನು? ಏನಾಗಬೇಕು ಎಂದು ವಿಚಾರಿಸಿದಾಗ ಆಕೆ ಸತ್ಯವಚನೆಯಾಗಿ ಎಲ್ಲಾ ವಿಚಾರಗಳನ್ನು ಇದ್ದ ಹಾಗೆ ಹೇಳಿದಳು. “ಅಣ್ಣನ ಆದೇಶದಂತೆ ನರವಾಸನೆಯ ಬೆಂಬತ್ತಿ ಬಂದು ಕೊಂದು ತಿನ್ನುವ ಉದ್ದೇಶದಿಂದ ಬಂದವಳು ನಾನು. ಆದರೆ, ನಿನ್ನನ್ನು ಕಂಡ ನಾನು ಮನಸೋತವಳಿದ್ದೇನೆ. ನನ್ನನ್ನು ನೀನು ಮದುವೆಯಾಗುವೆಯಾ? ನಿನಗೆ ನಿಷ್ಠಳಾಗಿ ಬದುಕುವೆ. ಆಜ್ಞಾನುವರ್ತಿಯಾಗಿ ಸಹಕರಿಸುವೆ.” ಹೀಗೆ ನೇರವಾಗಿ ಮನದಿಂಗಿತ ಕೇಳಿಯೇ ಬಿಟ್ಟಳು. ರಕ್ಕಸಿಯಲ್ಲವೇ ಧೈರ್ಯ ಸ್ವಲ್ಪ ಹೆಚ್ಚೇ ಇತ್ತು ಎನ್ನಬಹುದು.

ಹೀಗೆ ಹಿಡಿಂಬೆ ಕೇಳಿದಳಾದರೂ, ಭೀಮ ಜವಾಬ್ದಾರಿಯುತನಾಗಿ, “ಇಗೋ ನನ್ನ ತಾಯಿಯೂ, ಅಣ್ಣ ತಮ್ಮಂದಿರೂ ಮಲಗಿ ನಿದ್ರಿಸುತ್ತಿದ್ದಾರೆ. ಅವರನ್ನು ಈ ಗೊಂಡಾರಣ್ಯದಲ್ಲಿ ಬಿಟ್ಟು ನಿನ್ನ ಜೊತೆ ವಿಹರಿಸಲು ಬರುವವನು ನಾನಲ್ಲ. ನೀನು ಹೋಗಬಹುದು” ಎಂದನು. ಹಿಡಿಂಬೆ ಆತುರ ತೋರಿ ಅವರನ್ನು ಎಬ್ಬಿಸುವ ಎಂದಳು. ಭೀಮ ಅವಳ ಮುಖ ನೋಡುತ್ತಾ “ಅವರ ನಿದ್ರಾಭಂಗ ಮಾಡಲಾಗದು” ಎಂದನು. “ಅಯ್ಯೋ ಹಾಗಲ್ಲ ಇಲ್ಲಿ ತಡವಾದರೆ ನನ್ನ ಅಣ್ಣ ಬಂದಾನು. ಆತ ಬಂದರೆ ನಮಗೆಲ್ಲರಿಗೂ ಆಪತ್ತು ಖಂಡಿತ. ಹಾಗಾಗಿ ಮೊದಲು ಇವರನ್ನು ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ರಕ್ಷಿಸೋಣ” ಎಂದಳು. ಆಗ ಭೀಮಸೇನನಿಗೆ ಸಿಟ್ಟು ಬಂತು. “ನೀನೂ ನಿನ್ನಣ್ಣನೂ ಜತೆಯಾಗಿ ಬನ್ನಿ. ಸಾಧ್ಯವಾದರೆ ಭಕ್ಷಿಸಲು ಪ್ರಯತ್ನಿಸಿ. ನಿಮಗಿಬ್ಬರಿಗೂ ತಕ್ಕ ಶಾಸ್ತಿ ಮಾಡುವಷ್ಟು ಭುಜಬಲ ನನ್ನಲ್ಲಿದೆ” ಎಂದು ಭುಜ ತಾಡನ ಮಾಡಿದ.

ಅಷ್ಟಾಗುತ್ತಲೇ ಘೋರ ರಾಕ್ಷಸ ಹಿಡಿಂಬಾಸುರ ಬಂದೇ ಬಿಟ್ಟನು. ಹಿಡಿಂಬೆ ಪ್ರಣಯಾರ್ತೆಯಾಗಿ ವರ್ತಿಸುವುದನ್ನು ಗಮನಿಸಿದ ಆತನ ಕೋಪ ಉಕ್ಕೇರಿತು. “ನಿನ್ನಲ್ಲಿ ಹೇಳಿ ಕಳುಹಿಸಿರುವುದೇನನ್ನು? ಬಂದು ಮಾಡುತ್ತಿರುವುದೇನು” ಎಂದು ಏರಿದ ಸಿಟ್ಟಿನಿಂದ ಆಕೆಯನ್ನು ದಂಡಿಸಲು ಮುಂದಾದನು. ಭೀಮ ತಡೆದು “ಇಲ್ಲಿ ನನ್ನ ಮುಂದೆ ಒಂದು ಹೆಣ್ಣನ್ನು ಶಿಕ್ಷಿಸಲು ಬಿಡಲಾರೆ” ಎಂದನು. “ಅರೆ! ಈಗಾಗಲೇ ನೀನೂ ಅವಳ ಪಕ್ಷ ಸೇರಿಕೊಂಡೆಯಾ? ನಿನ್ನನ್ನೂ ಬಿಡಲಾರೆ” ಎಂದನು ಹಿಡಿಂಬಾಸುರ. “ಹೇ ರಾಕ್ಷಸನೇ! ನನಗೆ ಪಕ್ಷವಿಲ್ಲ. ರಾಜವಂಶದ ಧರ್ಮ, ಹೆಣ್ಣಿನ ಮೇಲೆ ಅತಿಕ್ರಮಣವಾಗದಂತೆ ಕಾಪಾಡುವುದು. ಸ್ತ್ರೀ ರಕ್ಷಣೆ ಪಾಲಿಸುವ ಜವಾಬ್ದಾರಿಯಿಂದ ಹೇಳಿರುವೆ. ಎಚ್ಚರವಿರಲಿ” ಎಂಬ ಭೀಮನ ಪ್ರತ್ಯುತ್ತರಕ್ಕೆ, ಹಿಡಿಂಬ ಮುಷ್ಟಿಗಟ್ಟಿ ಕೈಯಲ್ಲೆ ಉತ್ತರಿಸಲು ಮುಂದಾಗಿ ಓಡಿ ಬಂದಾಗ ಬಗ್ಗಿ ರಕ್ಕಸನ ನಡು ಸೊಂಟ ಹಿಡಿದು ಹೆಗಲೇರಿಸಿ ಓಡ ತೊಡಗಿದ. ಕಾರಣ ಮಲಗಿದವರಿಗೆ ಇವರ ಕಾದಾಟದಿಂದ ನಿದ್ರೆಗೆ ಬಾಧೆಯಾಗದಿರಲಿ ಎಂಬ ಪ್ರಜ್ಞೆ ಜಾಗೃತವಾಗಿತ್ತು. ವೇಗವಾಗಿ ಓಡುತ್ತಾ ತುಸು ದೂರ ಸಾಗಿ ಎರಡೂ ಕೈಗಳಿಂದ ರಕ್ಕಸನನ್ನು ಎತ್ತಿ ಶತಗಜತ್ರಾಣಿ ಎಸೆದೇ ಬಿಟ್ಟ. ಎಸೆತಕ್ಕೆ ಹತ್ತಾರು ಮಾರು ದೂರದಲ್ಲಿ ದೊಪ್ಪನೆ ಬಿದ್ದು ಬಿಟ್ಟ. ಬಿದ್ದ ಹಿಡಿಂಬನಿಗೂ ಈತನ ಬಲದ ಅಧಿಕತೆ ಅರಿವಾಯಿತು. ಅಷ್ಟೇ ವೇಗದಲ್ಲಿ ಎದ್ದು ಮೈಯ ಶಕ್ತಿಯನ್ನೆಲ್ಲಾ ಒಗ್ಗೂಡಿಸಿ ಭೀಮನ ಜೊತೆ ಸೆಣಸತೊಡಗಿದ. ಹಿಡಿಂಬನೂ ಅಸಾಮಾನ್ಯ ಬಲಯುತನೇ ಹೌದು. ಯಾರಿಗೂ ಮಣಿಸಲಾಗದೆ ಅಜೇಯನಾಗಿದ್ದ ರಕ್ಕಸ. ಗುದ್ದಾಟ, ಆರ್ಭಟ, ಬಿದ್ದೇಳುವ ಸದ್ದುಗಳಿಗೆ ಎಚ್ಚೆತ್ತ ಪಾಂಡವರೂ ಕುಂತಿಯೂ ಭೀಮನನ್ನು ಹುಡುಕುತ್ತಾ ಓಡಿ ಬಂದಾಗ ಹೆಣ್ಣೊಬ್ಬಳು ನಿಂತಿದ್ದಾಳೆ. ಅವಳೂ ರಕ್ಕಸಿಯೇ ಆಗಿದ್ದರೂ, ಕುಂತಿ ಅವಳಿಂದ ಕೇಳಿ ವಿಷಯ ಎಲ್ಲಾ ತಿಳಿದುಕೊಂಡಳು. ಹಿಡಿಂಬೆ ಪೂರ್ಣ ಸತ್ಯ ಸಂಗತಿ ಅರುಹಿ ಕುಂತಿಯ ಪಾದಕ್ಕೆರಗಿ ನಮಿಸಿದಳು. ಹಿಡಿಂಬೆ ಮಾತಿನ ಓಗದಲ್ಲಿ “ಅಲ್ಲಿ ಹೊಡೆದಾಡುತ್ತಿರುವುದು ನನ್ನಣ್ಣ ಮತ್ತು ನಮ್ಮವರು” ಎಂದಳು. ಕುಂತಿ ತಟ್ಟನೆ ಯೋಚಿಸತೊಡಗಿದಳು. ನಮ್ಮವರೇ? ಭೀಮ ಇವಳಿಗೆ ನಮ್ಮವರಾದನೇ? ಎಂದು ನಗು ಬಂದರೂ ಭೀಮನಿಗೇನಾಯಿತೆಂಬಂತೆ ಕಾತರಳಾಗಿ ಅತ್ತ ನೋಡಿದಳು. ಪಾಂಡವರೂ ತದೇಕ ಚಿತ್ತದಿಂದ ನೋಡುತ್ತಿದ್ದಾರೆ. ಅರ್ಜುನ ಸೂಕ್ಷ್ಮವಾಗಿ ಭೀಮನ ಯುದ್ದ ಪರಿಕ್ರಮ ನೋಡಿ ಅರಿತುಕೊಂಡ ಅಣ್ಣ ಭೀಮಸೇನ ಹಿಡಿಂಬನ ಜೊತೆ ಸುಮ್ಮನೆ ಗುರು ಮಠದಲ್ಲಿ ಅಭ್ಯಾಸ ಮಾಡಿದಂತೆ ಆಡುತ್ತಿದ್ದಾನೆ. ಸಮಾಧಾನವೂ, ಅಣ್ಣನ ಚೇಷ್ಟೆಗೆ ನಗುವೂ ಬಂದು ಕರೆದು ಹೇಳಿದ “ಅಣ್ಣಾ ಆಯಾಸವಾದರೆ ಬಾ ಸ್ವಲ್ಪ ವಿಶ್ರಾಂತಿ ಮಾಡು. ನಾನು ಹೋರಾಡುವೆ.” ಕೇಳಿಸಿಕೊಂಡ ಭೀಮ “ಎಲಾ ನೀನೇಕೆ ಎದ್ದು ಬಿಟ್ಟೆ? ಸುಸ್ತಾಗಿ ಸೋತು ಮಲಗಿದವ? ಇರು ಈಗ ಮುಗಿಸುವೆ” ಎಂದು ಹೇಳಿ ಹೋರಾಡಿ ಬಳಲಿದ್ದ ಹಿಡಿಂಬನನ್ನು ಬಲವಾದ ಹೊಡೆತದಿಂದ ಬೀಳಿಸಿದನು. ಆತನ ಮರು ಘಾತ ರಕ್ಕಸನ ಎದೆಗುಂಡಿಗೆಗೆ ಗುರಿಯಾಗಿತ್ತು. ಹಿಡಿಂಬನ ಉಸಿರೇ ನಿಂತು ಹೋಯಿತು. ಮೈ ಕೊಡವುತ್ತಾ ಭೀಮನು ತಾಯಿ – ಸಹೋದರರತ್ತ ಬರುತ್ತಿರಬೇಕಾದರೆ, ಹಿಡಿಂಬೆ ಓಡುತ್ತಾ ಬಂದು ಭೀಮನ ಪಾದಗಳಿಗೆ ನಮಸ್ಕರಿಸಿದಳು. ಭೀಮ ಆಕೆಯನ್ನು ಗಣ್ಯಕ್ಕೆ ಪರಿಗಣಿಸದೆ ತನ್ನವರ ಬಳಿ ಬಂದನು. ಅರ್ಜುನ ಅಣ್ಣ ಭೀಮಸೇನನ ಮೈಯ ಧೂಳು ಒರೆಸಿದರೆ, ನಕುಲ ಸಹದೇವರು ಸೊಪ್ಪುಗಳನ್ನು ಹಿಚುಕಿ ರಸ ಸುರಿದು ಮೈಯ ಗಾಯಗಳಿಗೆ ಹಚ್ಚತೊಡಗಿದರು. ಆಗ ಹಿಡಿಂಬೆ ಧರ್ಮರಾಯನಿಗೂ ಕುಂತಿಗೂ ಕೈ ಮುಗಿದು ಅಂಗಲಾಚಿ ಬೇಡಿದಳು ” ನನ್ನನ್ನು ಅನಾಥಳಾಗಿಸಬೇಡಿ, ದಯೆತೋರಬೇಕು. ನಾನೀಗಾಗಲೇ ಇವರಿಗೆ ಮನಸೋತವಳಿದ್ದೇನೆ” ಎಂದು ಆರ್ತಳಾಗಿ ನಮಿಸಿ ನಿಂತಳು.

ಕುಂತಿ ಧರ್ಮರಾಯನತ್ತ ತಿರುಗಿ ಜೇಷ್ಠನಾಗಿ ಅಣ್ಣ ನೀನಿರುವಾಗ ತಮ್ಮನಿಗೆ ಮೊದಲು ಮದುವೆ ಮಾಡಿಸಬಹುದೇ ಎಂದು ಕೇಳಿದಳು.
ಧರ್ಮರಾಯ ವಿವೇಚಿಸಿ ಉತ್ತರಿಸಿದ, “ಅಮ್ಮಾ ಕ್ಷತ್ರಿಯರಾದ ನಮಗೆ ಇದರಿಂದ ತೊಡಕೇನಿಲ್ಲ. ಅಣ್ಣನ ಒಪ್ಪಿಗೆಯಿದ್ದರೆ ತಮ್ಮ ಮೊದಲು ಮದುವೆಯಾಗಬಹುದು. ಇಲ್ಲದಿದ್ದರೆ ಪರಿವೇತ್ತ ಎಂಬ ದೋಷ ಬರುತ್ತದೆ. ಯಾವುದಕ್ಕೂ ಈಕೆಯನ್ನು ಭೀಮ ಒಪ್ಪಿದ್ದಾನೆಯೇ? ಆತನಿಗೆ ಒಪ್ಪಿಗೆಯಿದೆಯೇ ಕೇಳಬೇಕು. ಹಾಗೆಂದು ನನ್ನ ಸಹಮತವಿದೆ. ಮದುವೆ ಮಾಡಿಸಬಹುದು” ಎಂದು ಹೇಳಿದ. ಕೇಳಿಸಿಕೊಂಡ ಭೀಮ, ನೀವೆಲ್ಲರೂ ಸೇರಿ ನನ್ನನ್ನು ಈಕೆಗೆ ವಿವಾಹ ನಿಶ್ಚಯ ಮಾಡುವ ಮಾತುಕಥೆ ಮಾಡಿದ ಮೇಲೆ ನಾನು ಹೇಳಲೇನೂ ಉಳಿದಿಲ್ಲ. ನನಗೆ ಒಪ್ಪಿಗೆ ಎಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page