
ಬೆಂಗಳೂರು: ವಿಶೇಷ ತನಿಖಾ ತಂಡವು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಗುರುವಾರವಷ್ಟೇ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಬಳಿ 3.62 ಕೋಟಿ ರು. ನಗದನ್ನು ಎಸ್‌ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದು ಇದೀಗ ಆತನ ಆಪ್ತನ ಬಳಿ ಮತ್ತೆ 30 ಲಕ್ಷ ರು. ನಗದು ಜಪ್ತಿ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಎಸ್‌ಐಟಿ ಈವರೆಗೆ ಒಟ್ಟು 12.13 ಕೋಟಿ ರು. ನಗದು ಜಪ್ತಿ ಮಾಡಿದ್ದು ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಸಂಬಂಧ ಎಸ್ಐಟಿ ಅಧಿಕಾರಿಗಳು ಈಗಾಗಲೇ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಹೈದರಾಬಾದ್ ಗ್ಯಾಂಗ್ ಪ್ರಮುಖ ಪಾತ್ರ ವಹಿಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಈಗಾಗಲೇ ಎಸ್‌ಐಟಿ ಅಧಿಕಾರಿಗಳು ಈ ಹೈದರಾಬಾದ್ ಗ್ಯಾಂಗ್‌ನ ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ, ಚಂದ್ರಮೋಹನ್, ಜಗದೀಶ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ಹಣ ವರ್ಗಾವಣೆ ಮೂಲಗಳು ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಈ ಹೈದರಾಬಾದ್ ಗ್ಯಾಂಗ್ ಬಳಿಯೇ 8.21 ಕೋಟಿ ರು. ನಗದು ಪತ್ತೆಯಾಗಿದ್ದು, ಈಗಾಗಲೇ ಜಪ್ತಿ ಮಾಡಲಾಗಿದೆ.
ನಕಲಿ ಖಾತೆಗಳಿಂದ ಹೈದರಾಬಾದ್, ಬೆಂಗಳೂರಿನ ಮದ್ಯದಂಗಡಿ, ಚಿನ್ನಾಭರಣ ಮಾರಾಟ ಮಳಿಗೆಗಳು, ಬಾರ್‌ಗಳು ಸೇರಿದಂತೆ ನೂರಕ್ಕೂ ಅಧಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ಬಳಿಕ ಆರೋಪಿಗಳು ಈ ಹಣವನ್ನು ಡ್ರಾ ಮಾಡಿ ಮಾಡಿಕೊಂಡಿರುವುದು ತನಿಖೆಯ ಮುಖಾಂತರ ಬೆಳಕಿಗೆ ಬಂದಿದೆ.