
ಹೊಸದಿಲ್ಲಿ: ವರದಕ್ಷಿಣೆ ಕಿರುಕುಳ ಪ್ರಕರಣಗಳ ಹೆಚ್ಚಳದ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಮದುವೆಯಾದ ಬಳಿಕ ಪತ್ನಿ ಮತ್ತು ಆಕೆಯ ಕುಟುಂಬವನ್ನು ಏಕೆ ಅವಮಾನಿಸಲಾಗುತ್ತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಛತ್ತೀಸ್ಗಢದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಮೇಲಿನ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು.
ವಧು ಮತ್ತು ಆಕೆಯ ಕುಟುಂಬದ ಮೇಲೆ ಆರ್ಥಿಕ ಒತ್ತಡ ಹೇರುವುದು ಹಾಗೂ ಹಣಕ್ಕಾಗಿ ಕಿರುಕುಳ ನೀಡುವುದು ಸಮಾಜದಲ್ಲಿ ಮುಂದುವರಿಯಬಾರದು. ಇಂತಹ ಘಟನೆಗಳ ವಿರುದ್ಧ ಕಠಿಣ ಸಂದೇಶ ಹೋಗಬೇಕಿದೆ ಎಂದು ಎಂದು ನ್ಯಾಯಮೂರ್ತಿ ನಾಗರತ್ನ ಅಭಿಪ್ರಾಯಪಟ್ಟರು.
ವಿದ್ಯಾವಂತ ಕುಟುಂಬಗಳಲ್ಲಿಯೂ ವರದಕ್ಷಿಣೆ ಕಿರುಕುಳದಂತಹ ಪ್ರವೃತ್ತಿ ಕಂಡುಬರುತ್ತಿರುವುದು ಆತಂಕಕಾರಿ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಆತಂಕ ವ್ಯಕ್ತಪಡಿಸಿದರು.




























