
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ವಾಸವಾಗಿರುವ ರಾಧಮ್ಮ ಮತ್ತು ಮುತ್ತುಸ್ವಾಮಿ ದಂಪತಿಯ ಮನೆಯನ್ನು ಇಂದು (ನ.13) ಏಕಾಏಕಿ ಧ್ವಂಸಗೊಳಿಸಲಾಗಿದ್ದು ಇದರಿಂದ ಕಂಗಾಲು ಆಗಿರುವ ದಂಪತಿ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಮೂಲತಃ ದಂಪತಿ ಚಿತ್ರದುರ್ಗ ಜಿಲ್ಲೆಯವರಾಗಿದ್ದು ದಂಪತಿ ಕೂಲಿ ಕೆಲಸ ನಿಮಿತ್ಯ ಕಡಬ ತಾಲೂಕಿನ ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಆಗಮಿಸಿ, ಇಲ್ಲೇ ವಾಸಗಿದ್ದಾರೆ. ಕೌಕ್ರಾಡಿ ಗ್ರಾಮದ ಕಾವಿನಬಾಗಿಲು ಎಂಬಲ್ಲಿ ಸರ್ಕಾರಿ ಜಾಗದ ಸರ್ವೇ ನಂಬರ್ 123/1 ರಲ್ಲಿ ಕಳೆದ 6 ವರ್ಷಗಳಿಂದ ವಾಸಿಸುತ್ತಿದ್ದಾರೆ.
ದಂಪತಿಗೆ ಯಾವುದೆ ಪಿತ್ರಾರ್ಜಿತ ಆಸ್ತಿ ಇಲ್ಲ. ಆದ್ದರಿಂದ ಸರ್ಕಾರಿ ಜಾಗ 123/1 ರಲ್ಲಿನ ಕಾಪಿನಬಾಗಿಲು ಎಂಬಲ್ಲಿ ವಾಸವಾಗಿದ್ದಾರೆ. ದಂಪತಿ ನಿತ್ಯ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಬೆಳ್ತಂಗಡಿ ತಾಲೂಕಿನ ಅಶೋಕ್ ಆಚಾರ್ಯ ಎಂಬವರು ವೃದ್ಧ ದಂಪತಿ ಸರ್ಕಾರಿ ಜಾಗದಲ್ಲಿ ಇದ್ದಾರೆ ಎಂಬ ಕಾರಣಕ್ಕಾಗಿ ಇವರನ್ನು ಒಕ್ಕಲೆಬ್ಬಿಸುವ ಸಲುವಾಗಿ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದಾರೆ. ಸರ್ಕಾರಿ ಜಾಗ ಖಾಲಿ ಮಾಡುವಂತೆ ಸೂಚನೆ ನೀಡಿದ್ದು ಕಳೆದ ಫೆಬ್ರವರಿಯಲ್ಲೇ ಮನೆ ತೆರವಿಗೆ ಅಧಿಕಾರಿಗಳು ಮುಂದಾಗಿದ್ದರು. ಆದರೆ, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ತಣ್ಣಗಾಗಿತ್ತು.
ಆದರೆ, ಇದೀಗ ಅಧಿಕಾರಿಗಳು ಮನೆಯ ವಸ್ತುಗಳನ್ನು ಹೊರಗೆ ಎಸೆದು ಏಕಾಏಕಿ ಮನೆ ದ್ವಂಸ ಮಾಡಿದ್ದಾರೆ. ವೃದ್ಧ ದಂಪತಿ ಕಣ್ಣೀರು ಹಾಕಿದರೂ, ಕರಗದ ಅಧಿಕಾರಿಗಳು ಮನೆ ತೆರವುಗೊಳಿಸಿದ್ದಾರೆ. ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ಆರ್ ಐ ಪೃಥ್ವಿರಾಜ್, ಉಪ್ಪಿನಂಗಡಿ ಪೊಲೀಸರ ನೇತೃತ್ವದಲ್ಲಿ ಮನೆ ತೆರವು ಮಾಡಲಾಗಿದ್ದು ಹೀಗಾಗಿ, ವೃದ್ಧ ದಂಪತಿ “ಒಂದು ನಮಗೆ ಈ ಸರ್ಕಾರಿ ಜಾಗದಲ್ಲಿ ನಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ. ಅಥವಾ ಅದಕ್ಕೆ ಸಾಧ್ಯವಿಲ್ಲ ಎಂಬುವುದಾದರೆ ದಯಮಾಡಿ ವೃದ್ಧರಾದ ನಮಗೆ ದಯಾಮರಣ ಅಥವಾ ಇನ್ನಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಿ” ಎಂದು ರಾಷ್ಟ್ರಪತಿಯವರಿಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದಾರೆ.








































