
ಪುಣೆ: ಲೋಹಗಢ್ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಮುಖ ಆರೋಪಿ ಸಿಯಾ ಗೋಯಲ್ ಪೊಲೀಸರ ಮುಂದೆ ಆಘಾತಕಾರಿ ಮಾಹಿತಿ ನೀಡಿದ್ದಾಳೆ. ಪ್ರೇಮಿ ಚೇತನ್ ಚೌಧರಿ ಜೊತೆ ಬದುಕಲು ಕುಟುಂಬವನ್ನು ಎದುರಿಸುವುದಕ್ಕಿಂತ ಭಾವಿ ಪತಿಯನ್ನು ಸಾಯಿಸುವುದೇ ಸುಲಭ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ಕೇತನ್ ಮತ್ತು ಸಿಯಾ ಕುಟುಂಬಗಳ ಒಪ್ಪಿಗೆಯೊಂದಿಗೆ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ನಡೆದಿತ್ತು. ಉದಯಪುರದಲ್ಲಿ ಅದ್ಧೂರಿ ಮದುವೆ ಸಿದ್ಧತೆಗಳು ನಡೆದಿದ್ದರೂ, ಸಿಯಾ ಕಳೆದ 7-8 ತಿಂಗಳಿನಿಂದ ಚೇತನ್ ಜೊತೆ ಪ್ರೀತಿಯಲ್ಲಿ ಇದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಮದುವೆಯನ್ನು ತಪ್ಪಿಸಲು ಸಿಯಾ ಮತ್ತು ಚೇತನ್ ಸೇರಿ ಸಂಚು ರೂಪಿಸಿದ್ದರೆಂದು ಪೊಲೀಸರು ಶಂಕಿಸಿದ್ದಾರೆ. ಜೂನ್ 18ರಂದು ಟ್ರೆಕ್ಕಿಂಗ್ ವೇಳೆ ಕೇತನ್ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದಾನೆ ಎಂದು ಸಿಯಾ ಮೊದಲಿಗೆ ಹೇಳಿದ್ದಳು.
ಆದರೆ ತನಿಖೆಯಲ್ಲಿ ಸಿಯಾ ಮತ್ತು ಚೇತನ್ ನಡುವೆ ಕಳೆದ ಆರು ತಿಂಗಳಲ್ಲಿ 4,400ಕ್ಕೂ ಹೆಚ್ಚು ಕರೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಮುಖ ಮುಚ್ಚಿಕೊಂಡು ಹಿಂಬಾಲಿಸುತ್ತಿದ್ದ ವ್ಯಕ್ತಿ ಚೇತನ್ ಎಂಬುದು ಪತ್ತೆಯಾಗಿದೆ.
ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದು, ಲಭ್ಯವಿರುವ ಡಿಜಿಟಲ್ ಸಾಕ್ಷ್ಯಾಧಾರಗಳು ಇಬ್ಬರು ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಸೂಚಿಸುತ್ತಿವೆ ಎಂದು ಪುಣೆ ಗ್ರಾಮಾಂತರ ಪೋಲಿಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ತಿಳಿಸಿದ್ದಾರೆ.


































