
ಉಡುಪಿ: ಕಡಲು ತೀರ ಉಡುಪಿ ಜಿಲ್ಲೆಯಲ್ಲಿ ಬಿಟ್ಟು, ಬಿಡದೆ ವರುಣ ಆರ್ಭಟ ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಜಿಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್ಗೆ ಬೇಲಿ ಹಾಕಿ, ಬೀಚ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.
ಸುಮಾರು ಒಂದು ಕಿಲೋಮೀಟರ್ ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ತಡೆ ಬೇಲಿಯನ್ನು ಸದ್ಯಕ್ಕೆ ನಿರ್ಮಿಸಿ ಎಚ್ಚರಿಕೆಯ ಕೆಂಪು ಬಾವುಟ ಹಾಕಲಾಗಿದೆ. ಇದರ ಜೊತೆಗೆ ಆಯಕಟ್ಟಿನ ಜಾಗದಲ್ಲಿ ಬೀಚ್ ಪ್ರವೇಶ ನಿಷೇಧದ ಎಚ್ಚರಿಕೆ ಫಲಕಗಳನ್ನು ಕೂಡ ಅಳವಡಿಸಲಾಗಿದೆ. ಮಲ್ಪೆ ಬೀಚಿನಲ್ಲಿ ತರಬೇತಿ ಪಡೆದ ಜೀವ ರಕ್ಷಕರನ್ನ ನಿಯೋಜನೆ ಮಾಡಲಾಗಿದ್ದು ನಿರಂತರವಾಗಿ ಎಟಿಬಿ ಸ್ಯಾಂಡ್ ಬೈಕ್ ಮೂಲಕ ಬೀಚ್ನ್ನು ಗಸ್ತು ತಿರುಗುವ ಜೀವ ರಕ್ಷಕ ಪಡೆಯ ಸದಸ್ಯರು ಬೀಚ್ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಮುನ್ನೆಚ್ಚರಿಕೆಗಳನ್ನ ನೀಡುತ್ತಾ, ಅವರನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮುದ್ರ ಪ್ರಸಿದ್ಧಿ ಆಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈ ಬಲೆಯನ್ನು ದಾಟಿ ಹೋಗದಂತೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಆದರೆ ಇದರ ಅರಿವಿಲ್ಲದ ಹೊರ ಜಿಲ್ಲೆ ಮತ್ತು ಹೊರರಾಜ್ಯದ ಪ್ರವಾಸಿಗರು ಮಲ್ಪೆ ಬೀಚ್ಗೆ ಇನ್ನೂ ಕೂಡ ಭೇಟಿ ನೀಡುತ್ತಿದ್ದು ಬೀಚ್ನ ನೀರಿನಲ್ಲಿ ಆಟವಾಡಲು ಅವಕಾಶ ಸಿಗದೆ ಇರುವ ಹಿನ್ನೆಲೆಯಲ್ಲಿ ಬೇಸರದಿಂದ ಹಿಂದಿರುಗುತ್ತಿದ್ದಾರೆ. ಇನ್ನು ಕೆಲವು ಪ್ರವಾಸಿಗರು ಬೀಚ್ನ ಮರಳಿನ ಮೇಲೆ ಆಟವಾಡುತ್ತಾ, ವಿಡಿಯೋ ಚಿತ್ರಿಸಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡು ನಿರಾಸೆಯಿಂದ ವಾಪಸ್ ಹೋಗುತ್ತಿದ್ದಾರೆ.