
ಇಸ್ಲಾಮಾಬಾದ್: ಪಾಕ್ ಆಡಳಿತ ವ್ಯವಸ್ಥೆ ಕುರಿತು ಮಾತನಾಡಿದ ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ ಪಾಕಿಸ್ತಾನ್ ಸಂಸದ ಸೈಯದ್ ಮುಸ್ತಫಾ ಕಮಾಲ್ ಭಾರತ ಚಂದ್ರನನ್ನು ತಲುಪಿದೆ, ಆದರೆ ನಮ್ಮ ಮಕ್ಕಳು ಇಲ್ಲಿ ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಭಾರತದ ಬೆಳವಣಿಗೆ ಶ್ಲಾಘಿಸುತ್ತಾ ಪಾಕ್ ದುರಾಡಳಿತದ ಬಗ್ಗೆ ಟೀಕೆ ಮಾಡಿದ ಸಂಸದ ಭಾರತವು ಚಂದ್ರನನ್ನು ತಲುಪಿದೆ ಎಂಬ ಸುದ್ದಿಯನ್ನು ನಾವು ಟಿವಿ ಪರದೆಗಳಲ್ಲಿ ನೋಡಿದ ಎರಡು ಸೆಕೆಂಡುಗಳ ನಂತರ ಕರಾಚಿಯಲ್ಲಿ ತೆರೆದ ಚರಂಡಿಗೆ ಬಿದ್ದು ಮಗು ಸಾವನ್ನಪ್ಪಿದೆ ಎಂಬ ಸುದ್ದಿ ಬರುತ್ತದೆ. ಕರಾಚಿಯಲ್ಲಿನ ಶುದ್ಧ ನೀರಿನ ಕೊರತೆಯನ್ನು ಉಲ್ಲೇಖಿಸಿ, ಕರಾಚಿಯು ಪಾಕಿಸ್ತಾನ ಆದಾಯದ ಎಂಜಿನ್ ಆಗಿದೆ. ದೇಶದಲ್ಲಿ ಎರಡು ಬಂದರುಗಳಿವೆ, ಎರಡೂ ಕರಾಚಿಯಲ್ಲಿವೆ. ಒಂದು ರೀತಿಯಲ್ಲಿ ಇದು ದೇಶದ ಹೆಬ್ಬಾಗಿಲು. ಆದರೆ ಕರಾಚಿಗೆ 15 ವರ್ಷಗಳಿಂದ ಶುದ್ಧ ನೀರು ಸಿಕ್ಕಿಲ್ಲ. ನೀರು ಬಂದಾಗಲೆಲ್ಲ ಟ್ಯಾಂಕರ್ ಮಾಫಿಯಾ ವಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಂಧ್ ಪ್ರಾಂತ್ಯದಲ್ಲಿ ಸುಮಾರು 70 ಲಕ್ಷ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ರಾಷ್ಟ್ರೀಯ ಮಟ್ಟದಲ್ಲಿ ಈ ಸಂಖ್ಯೆ ಸುಮಾರು 2.6 ಕೋಟಿಯಾಗಿದೆ. ಒಟ್ಟು 48
ಸಾವಿರ ಶಾಲೆಗಳಿವೆ. ಆದರೆ ಈ ಪೈಕಿ 11 ಸಾವಿರ ಶಾಲೆಗಳು ಖಾಲಿ ಇವೆ ಎಂದು ವರದಿ ತೋರಿಸುತ್ತದೆ. ದೇಶದಲ್ಲಿ 2.62 ಕೋಟಿ ಮಕ್ಕಳು ಶಾಲೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಪಾಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.