
ಬೆಂಗಳೂರು: ಕೇಂದ್ರ ಸರ್ಕಾರ 2008ರಲ್ಲಿ ಭಾರತದಲ್ಲಿ ನೆಲೆಸಿರುವ ವಿದೇಶಿ ಕಾರ್ಮಿಕರನ್ನು ನೌಕರರ ಭವಿಷ್ಯ ನಿಧಿ ಮತ್ತು ನೌಕರರ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಿ ಜಾರಿಗೊಳಿಸಿದ್ದ ತಿದ್ದುಪಡಿ ಕಾನೂನು ಅಸಂವಿಧಾನಿಕ ಎಂದು ಹೈಕೋರ್ಟ್ ಆದೇಶಿಸಿದೆ. ನ್ಯಾಯಮೂರ್ತಿ ಕೆ.ಎಸ್. ಹೇಮ ಲೇಖಾ ಅವರ ಪೀಠವು ಸ್ಟೋನ್ ಹಿಲ್ ಎಜುಕೇಷನ್ ಫೌಂಡೇಷನ್ ಸೇರಿದಂತೆ ಹಲವು ಸಂಸ್ಥೆಗಳು ತಿದ್ದುಪಡಿ ಕಾನೂನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ಮಾಡಿ ತಿದ್ದುಪಡಿ ಕಾನೂನನ್ನು ರದ್ದುಗೊಳಿಸಿದೆ.
ಕೇಂದ್ರ ಸರ್ಕಾರ ಯಾವುದೇ ವೇತನ ಮಿತಿ ಇಲ್ಲದೆ ವಿದೇಶಿ ಕಾರ್ಮಿಕರನ್ನು ಇಪಿಎಫ್ ಮತ್ತು ಇಪಿ ವ್ಯಾಪ್ತಿಗೆ ಒಳಪಡಿಸಲು ಕಾಯ್ದೆಗೆ ತಿದ್ದುಪಡಿ ಮಾಡಿ 2008ರ ಅ.1ರಿಂದ ಜಾರಿಗೆ ಬರುವಂತೆ ಮಾಡಿದೆ. ಭಾರತದಿಂದ ಹೊರದೇಶಕ್ಕೆ ಸೇವೆಯ ಮೇಲೆ ನಿಯೋಜಿಸುವ ಉದ್ಯೋಗಿಗಳಿಗೆ ಅನುಕೂಲವಾಗು ಉದ್ದೇಶದಿಂದ ಕಾಯ್ದೆಗಳನ್ನು ರೂಪಿಸಲಾಗಿದೆ. ಆ ದೇಶದಲ್ಲಿ ಅಭದ್ರತೆ ಉಂಟಾಗದಿರಲೆಂದು ಕಾಯ್ದೆ ರೂಪಿಸಲಾಗಿದೆ.
ಆದರೆ, ಭಾರತೀಯ ಕಾರ್ಮಿಕರಿಗೆ ಪ್ರತಿ ತಿಂಗಳ 15 ಸಾವಿರ ವೇತನ ಮಿತಿಯಿದೆ. ಆದರೆ, ವಿದೇಶಿ ಕಾರ್ಮಿಕರಿಗೆ ಮಿತಿ ಹೇರದಿರುವುದು ಸರಿಯಲ್ಲ, ಇಪಿಎಫ್ ಮತ್ತು ಎಂಪಿ ಕಾಯ್ದೆಯನ್ನು ಕಡಿಮೆ ವೇತನ ಪಡೆಯುವವರಿಗೆ ನಿವೃತ್ತಿಯ ಬಳಿಕ ಅನುಕೂಲ ಕಲ್ಪಿಸಲು ರೂಪಿಸಲಾಗಿದೆಯೇ ವಿನಃ ತಿಂಗಳಿಗೆ ಲಕ್ಷಾಂತರ ರೂಪಾಯಿ ವೇತನ ಪಡೆಯುವವರಿಗೆ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಕೇಂದ್ರವು 2008ರಲ್ಲಿ ಅಂತಾರಾಷ್ಟ್ರೀಯ ಉದ್ಯೋಗಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನೌಕರರ ಭವಿಷ್ಯ ನಿಧಿ (ಇಪಿಎಫ್) ಮತ್ತು ನೌಕರರ ಪಿಂಚಣಿ (ಇಪಿ) ಕಾಯ್ದೆಗೆ ತಿದ್ದುಪಡಿ ತಂದಿತ್ತು. ವಿದೇಶಿ ಕಾರ್ಮಿಕರಿಗೆ ವೇತನ ಮಿತಿ ಇಲ್ಲದೆ ಇಪಿ ಮತ್ತು ಇಪಿಎಫ್ ಸೌಲಭ್ಯ ಪಡೆಯಲು ಅವಕಾಶ ಮಾಡಿಕೊಟ್ಟಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರ ಸಂಸ್ಥೆಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಇದೀಗ ಈ ಆದೇಶ ಹೊರಡಿಸಿದೆ.